Skip to content
Opens in a new window
Listen to this chapter • 5:37

[1] ಕ್ರಿಸ್ತನಿಂದ ಪ್ರೋತ್ಸಾಹ, ಪ್ರೀತಿಯ ಸಾಂತ್ವನ, ಪವಿತ್ರಾತ್ಮನ ಅನ್ಯೋನ್ಯತೆ, ಕಾರುಣ್ಯದಯಾರಸಗಳು ಉಂಟಾಗುವುದಾದರೆ,

[2] ನೀವೆಲ್ಲರು ಒಂದೇ ಮನಸ್ಸುವುಳ್ಳವರಾಗಿ, ಒಂದೇ ಪ್ರೀತಿಯುಳ್ಳವರಾಗಿ, ಅನ್ಯೋನ್ಯಭಾವವುಳ್ಳವರಾಗಿ ಹಾಗೂ ಒಂದೇ ಗುರಿಯಿಟ್ಟುಕೊಂಡವರಾಗಿ ನನ್ನ ಸಂತೋಷವನ್ನು ಪರಿಪೂರ್ಣಮಾಡಿರಿ.

[3] ಸ್ವಾರ್ಥದಿಂದಾಗಲಿ, ಒಣ ಹೆಮ್ಮೆಯಿಂದಾಗಲಿ ಯಾವುದನ್ನೂ ಮಾಡದೆ, ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ.

[4] ನಿಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ.

[5] ಕ್ರಿಸ್ತ ಯೇಸುವಿನಲ್ಲಿದ್ದಂಥ ಮನಸ್ಸು ನಿಮ್ಮಲ್ಲಿಯೂ ಇರಲಿ.

[6] ಆತನು ದೇವಸ್ವರೂಪನಾಗಿದ್ದರೂ, ದೇವರಿಗೆ ಸರಿಸಮಾನನಾಗಿರುವನೆಂಬ ಅಮೂಲ್ಯ ಪದವಿಯನ್ನು ಬಿಡಲೊಲ್ಲೆನು ಎಂದೆಣಿಸದೆ,

[7] ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡು ಮನುಷ್ಯರಿಗೆ ಸಮನಾದನು. ಮನುಷ್ಯನಾಕಾರದಲ್ಲಿ ಕಾಣಿಸಿಕೊಂಡನು.

[8] ಆತನು ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು.

[9] ಈ ಕಾರಣದಿಂದ ದೇವರು ಆತನನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿ, ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ.

[10] ಆದ್ದರಿಂದ ಸ್ವರ್ಗ ಮರ್ತ್ಯ ಪಾತಾಳಗಳಲ್ಲಿರುವವರೆಲ್ಲರೂ ಯೇಸುವಿನ ಹೆಸರಿನಲ್ಲಿ ಮೊಣಕಾಲೂರಿ ಅಡ್ಡಬಿದ್ದು,

[11] ತಂದೆಯಾದ ದೇವರ ಮಹಿಮೆಗಾಗಿ ಪ್ರತಿಯೊಂದು ನಾಲಿಗೆಯು ಯೇಸು ಕ್ರಿಸ್ತನನ್ನು ಕರ್ತನೆಂದು ಅರಿಕೆಮಾಡುವುದು.

[12] ಹೀಗಿರುವಲ್ಲಿ ನನ್ನ ಪ್ರಿಯರೇ, ನೀವು ನನ್ನ ಮಾತನ್ನು ಯಾವಾಗಲೂ ಅನುಸರಿಸಿದಂತೆ ಈಗಲೂ ಅನುಸರಿಸಿರಿ. ನಾನು ನಿಮ್ಮಲ್ಲಿರುವಾಗ ಮಾತ್ರವಲ್ಲದೆ, ನಾನಿಲ್ಲದಿರುವಾಗಲೂ ಬಹು ಹೆಚ್ಚಾಗಿ ಮನೋಭೀತಿಯಿಂದ ನಡುಗುವವರಾಗಿ ನಿಮ್ಮ ನಿಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳಿರಿ.

[13] ಯಾಕೆಂದರೆ ದೇವರೇ ತನ್ನ ಸುಚಿತ್ತವನ್ನು ನೆರವೇರಿಸಬೇಕೆಂದು ನಿಮ್ಮಲ್ಲಿ ಉದ್ದೇಶವನ್ನೂ ಮತ್ತು ಪ್ರಯತ್ನವನ್ನೂ ಉಂಟುಮಾಡುವವನಾಗಿದ್ದಾನೆ.

[14] ಗೊಣಗುಟ್ಟದೆಯೂ, ವಿವಾದಗಳಿಲ್ಲದೆಯೂ ಎಲ್ಲವನ್ನು ಮಾಡಿರಿ.

[15] ಹೀಗೆ ನೀವು ನಿರ್ದೋಷಿಗಳೂ ಹಾಗೂ ಯಥಾರ್ಥಮನಸ್ಸುಳ್ಳವರೂ ಆಗಿದ್ದು ವಕ್ರಬುದ್ಧಿಯುಳ್ಳ ಮೂರ್ಖ ಜಾತಿಯ ಮಧ್ಯದಲ್ಲಿ ದೇವರ ನಿಷ್ಕಳಂಕರಾದ ಮಕ್ಕಳಾಗಿರುವಿರಿ.

[16] ಇವರೊಳಗೆ ನೀವು ಸರ್ವರಿಗೂ ಜೀವದಾಯಕ ವಾಕ್ಯವನ್ನು ತೋರಿಸಿಕೊಡುವವರಾಗಿದ್ದು, ಲೋಕದೊಳಗೆ ಹೊಳೆಯುವ ನಕ್ಷತ್ರಗಳಂತೆ ಕಾಣಿಸುತ್ತೀರಿ. ನೀವು ಹೀಗೆ ನಡೆದರೆ ನಾನು ಸುವಾರ್ತೆಗಾಗಿ ಓಡಿದ ಓಟವು ವ್ಯರ್ಥವಲ್ಲ, ನಾನು ಪ್ರಯಾಸಪಟ್ಟದ್ದೂ ವ್ಯರ್ಥವಲ್ಲ ಎಂಬ ಹೊಗಳಿಕೆಯು ಕ್ರಿಸ್ತನ ದಿನದಲ್ಲಿ ನನಗೆ ಉಂಟಾಗುವುದು.

[17] ನಿಮ್ಮ ನಂಬಿಕೆಯೆಂಬ ಯಜ್ಞವನ್ನು ದೇವರಿಗರ್ಪಿಸುವ ಸೇವೆಯಲ್ಲಿ ನಾನೇ ಪಾನದ್ರವ್ಯವಾಗಿ ಅರ್ಪಿತವಾಗಬೇಕಾದರೂ ನನಗೆ ಸಂತೋಷವೇ, ನಿಮ್ಮೆಲ್ಲರೊಂದಿಗೂ ಸಂತೋಷ ಪಡುತ್ತೇನೆ.

[18] ಹಾಗೆಯೇ ನೀವೂ ಸಂತೋಷಿಸಿರಿ, ನನ್ನೊಂದಿಗೆ ಸಂತೋಷಪಡಿರಿ.

[19] ಆದರೆ ನಾನು ತಿಮೊಥೆಯನನ್ನು ಬೇಗನೆ ನಿಮ್ಮ ಬಳಿಗೆ ಕಳುಹಿಸಬೇಕೆಂದು ಕರ್ತನಾದ ಯೇಸುವಿನಲ್ಲಿ ನಿರೀಕ್ಷಿಸುತ್ತೇನೆ. ಅವನ ಮುಖಾಂತರ ನಿಮ್ಮ ಸಂಗತಿಗಳನ್ನು ತಿಳಿದು ನಾನೂ ಆದರಣೆ ಹೊಂದಿದೆನು.

[20] ಅವನ ಹಾಗೆ ನಿಮ್ಮ ಯೋಗಕ್ಷೇಮವನ್ನು ಕುರಿತು ಯಥಾರ್ಥವಾಗಿ ಚಿಂತಿಸುವವರು ನನ್ನ ಬಳಿಯಲ್ಲಿ ಬೇರೆ ಯಾರೂ ಇಲ್ಲ.

[21] ಎಲ್ಲರೂ ಸ್ವಕಾರ್ಯಗಳ ಮೇಲೆ ಮನಸ್ಸಿಡುತ್ತಾರೆಯೇ ಹೊರತು ಯೇಸು ಕ್ರಿಸ್ತನ ಕಾರ್ಯಗಳ ಮೇಲೆ ಮನಸ್ಸಿಡುವುದಿಲ್ಲ.

[22] ಆದರೆ ತಿಮೊಥೆಯನ ಯೋಗ್ಯತೆಯನ್ನು ನೀವು ತಿಳಿದುಕೊಂಡಿದ್ದೀರಿ. ಮಗನು ತಂದೆಗೆ ಹೇಗೋ ಹಾಗೆಯೇ ಅವನು ನನ್ನ ಜೊತೆಯಲ್ಲಿ ಸುವಾರ್ತಾಪ್ರಚಾರಕ್ಕಾಗಿ ಸೇವೆಮಾಡಿದನೆಂಬುದು ನಿಮಗೆ ಗೊತ್ತುಂಟು.

[23] ಆದ್ದರಿಂದ ನನ್ನ ವಿಷಯವು ಹೇಗಾಗುವುದೋ ಅದನ್ನು ತಿಳಿದ ಕೂಡಲೆ ಅವನನ್ನೇ ಕಳುಹಿಸುವುದಕ್ಕೆ ಬಯಸುತ್ತೇನೆ.

[24] ಇದಲ್ಲದೆ ನಾನು ಸಹ ಬೇಗನೆ ಬರುವೆನೆಂದು ಕರ್ತನಲ್ಲಿ ದೃಢವಾಗಿ ನಂಬಿದ್ದೇನೆ.

[25] ನನ್ನ ಕೊರತೆಯನ್ನು ನೀಗುವುದಕ್ಕೆ ನೀವು ಕಳುಹಿಸಿದಂಥ, ನನ್ನ ಸಹೋದರನೂ, ಜೊತೆಸೇವಕನೂ, ಸಹಸೇನಾನಿಯೂ ಆಗಿರುವಂಥ ಎಪಫ್ರೊದೀತನನ್ನು ನಿಮ್ಮ ಬಳಿಗೆ ಕಳುಹಿಸುವುದು ಅವಶ್ಯವೆಂದು ಭಾವಿಸಿದ್ದೇನೆ.

[26] ಅವನು ನಿಮ್ಮೆಲ್ಲರನ್ನು ಕುರಿತು ಹಂಬಲಿಸುತ್ತಿದ್ದನು ಮತ್ತು ತಾನು ಅಸ್ವಸ್ಥನಾಗಿದ್ದ ಸುದ್ದಿಯನ್ನು ನೀವು ಕೇಳಿದ್ದರಿಂದ ಅವನು ನೊಂದುಕೊಂಡನು.

[27] ಅವನು ರೋಗದಲ್ಲಿ ಬಿದ್ದು ಸಾಯುವ ಹಾಗಿದ್ದನೆಂಬುದು ನಿಜವೇ, ಆದರೆ ದೇವರು ಅವನನ್ನು ಕರುಣಿಸಿದನು. ಅವನನ್ನು ಮಾತ್ರವಲ್ಲದೆ ನನಗೆ ದುಃಖದ ಮೇಲೆ ದುಃಖವು ಬಾರದಂತೆ ನನ್ನನ್ನೂ ಕರುಣಿಸಿದನು.

[28] ಆದ್ದರಿಂದ ನೀವು ಅವನನ್ನು ನೋಡಿ ತಿರುಗಿ ಸಂತೋಷಪಡಬೇಕೆಂತಲೂ ನನ್ನ ದುಃಖ ಕಡಿಮೆಯಾಗಬೇಕೆಂತಲೂ ನಾನು ಅವನನ್ನು ಅತಿ ತವಕದಿಂದ ಕಳುಹಿಸಿದ್ದೇನೆ.

[29] ಹೀಗಿರಲಾಗಿ ನೀವೇ ನನಗೆ ಮಾಡಬೇಕೆಂದಿರುವ ಉಪಚಾರದಲ್ಲಿ ಕೊರತೆಯಾದದ್ದನ್ನು ತುಂಬುವುದಕ್ಕಾಗಿ ಅವನು ಜೀವದ ಆಸೆಯನ್ನು ತೊರೆದು ಕ್ರಿಸ್ತನ ಸೇವೆಯ ನಿಮಿತ್ತ ಸಾಯುವ ಸ್ಥಿತಿಯಲ್ಲಿದುದ್ದರಿಂದ ನೀವು ಅವನನ್ನು ಪೂರ್ಣ ಸಂತೋಷದಿಂದ ಕರ್ತನ ಹೆಸರಿನಲ್ಲಿ ಸೇರಿಸಿಕೊಳ್ಳಿರಿ. ಅಂಥವರನ್ನು ಮಾನ್ಯರೆಂದೆಣಿಸಿರಿ.

ಫಿಲಿಪ್ಪಿಯವರಿಗೆ — Chapters