[1] “ಇಗೋ, ನನ್ನ ದೂತನನ್ನು ಕಳುಹಿಸುತ್ತೇನೆ, ಆತನು ನನ್ನ ಮುಂದೆ ದಾರಿಯನ್ನು ಸರಿಮಾಡುವನು; ನೀವು ಹಂಬಲಿಸುವ ಕರ್ತನು ತನ್ನ ಆಲಯಕ್ಕೆ ಪಕ್ಕನೇ ಬರುವನು; ಆಹಾ, ನಿಮಗೆ ಇಷ್ಟನಾದ ಒಡಂಬಡಿಕೆಯ ದೂತನು ಬರುತ್ತಾನೆ” ಇದು ಸೇನಾಧೀಶ್ವರನಾದ ಯೆಹೋವನ ನುಡಿ.
[2] ಆತನು ಬರುವ ದಿನವನ್ನು ಯಾರು ತಾಳಾರು? ಆತನು ಕಾಣಿಸಿಕೊಳ್ಳುವಾಗ ಯಾರು ನಿಂತಾರು? ಆತನು ಅಕ್ಕಸಾಲಿಗನ ಬೆಂಕಿಗೂ, ಅಗಸನ ಸಾಬೂನಿಗೂ ಸಮಾನನಾಗಿದ್ದಾನೆ.
[3] ಬೆಳ್ಳಿಯನ್ನು ಶೋಧಿಸುವ ಅಕ್ಕಸಾಲಿಗನಂತೆ ಕುಳಿತು ಲೇವಿ ವಂಶದವರನ್ನು ಶೋಧಿಸಿ ಬೆಳ್ಳಿಬಂಗಾರಗಳನ್ನೋ ಎಂಬಂತೆ ಶುದ್ಧೀಕರಿಸುವನು; ಅವರು ಸದ್ಧರ್ಮಿಗಳಾಗಿ ಯೆಹೋವನಿಗೆ ನೈವೇದ್ಯಗಳನ್ನು ತಂದೊಪ್ಪಿಸುವರು.
[4] ಆಗ ಯೆಹೂದದ ಮತ್ತು ಯೆರೂಸಲೇಮಿನ ನೈವೇದ್ಯವು, ಪೂರ್ವದಿನಗಳಲ್ಲಿ ಪುರಾತನ ಕಾಲದಲ್ಲಿ ಯೆಹೋವನಿಗೆ ಮೆಚ್ಚಿಕೆಯಾದಂತೆ ಆಗಿರುವುದು.
[5] “ನಾನು ನ್ಯಾಯತೀರಿಸುವುದಕ್ಕೆ ನಿಮ್ಮ ಬಳಿಗೆ ಬರುವೆನು; ಮಾಟಗಾರನು, ವ್ಯಭಿಚಾರಿಯೂ, ಸುಳ್ಳುಸಾಕ್ಷಿ ಹೇಳುವವನು, ಕೂಲಿ ಹಿಡಿದು ಕೂಲಿಯವನನ್ನು ಮೋಸಪಡಿಸುವವನು, ವಿಧವೆಯರನ್ನು ಮತ್ತು ಅನಾಥರನ್ನೂ ಬಾಧಿಸುವವನು, ವಿದೇಶಿಯ ನ್ಯಾಯತಪ್ಪಿಸುವವನು ಅಂತು ನನಗೆ ಹೆದರದಿರುವ ಇವರೆಲ್ಲರಿಗೆ ವಿರುದ್ಧವಾಗಿ ನಾನು ಶೀಘ್ರವಾಗಿ ನ್ಯಾಯತೀರಿಸಿ ಸಾಕ್ಷಿಯಾಗಿರುವೆನು” ಇದು ಸೇನಾಧೀಶ್ವರನಾದ ಯೆಹೋವನ ನುಡಿ.
[6] “ಆದರೂ ಯೆಹೋವನಾದ ನಾನು ಮಾರ್ಪಟ್ಟಿಲ್ಲ. ಆದುದರಿಂದ ಯಾಕೋಬ ಸಂತತಿಯವರೇ ನೀವು ಅಳಿಯದೆ ಉಳಿದಿದ್ದೀರಿ.”
[7] “ನಿಮ್ಮ ಪೂರ್ವಿಕರ ಕಾಲದಿಂದಲೂ ನೀವು ನನ್ನ ವಿಧಿಗಳನ್ನು ಅನುಸರಿಸಿ ನಡೆಯಲ್ಲಿಲ್ಲ. ನನ್ನ ಕಡೆಗೆ ಪುನಃ ತಿರುಗಿರಿ; ತಿರುಗಿದರೆ, ನಾನು ನಿಮ್ಮ ಕಡೆಗೆ ಪುನಃ ತಿರುಗುವೆನು” ಇದು ಸೇನಾಧೀಶ್ವರನಾದ ಯೆಹೋವನ ನುಡಿ. “ಯಾವ ವಿಷಯದಲ್ಲಿ ತಿರುಗೋಣ?” ಎನ್ನುತ್ತೀರಿ.
[8] “ನರಮನುಷ್ಯನು ದೇವರಿಂದ ಕದ್ದುಕೊಳ್ಳಬಹುದೇ? ನೀವೋ ನನ್ನಿಂದ ಕದ್ದುಕೊಳ್ಳುತ್ತಿದ್ದೀರಿ. ‘ನಿನ್ನಿಂದ ಏನು ಕದ್ದುಕೊಂಡಿದ್ದೇವೆ?’ ಎಂದು ಕೇಳುತ್ತೀರೋ. ದಶಮಾಂಶವನ್ನು, ನನಗೋಸ್ಕರ ಪ್ರತ್ಯೇಕಿಸಬೇಕಾದ ಪದಾರ್ಥ, ಇವುಗಳನ್ನೇ.
[9] ನೀವು ಅಂದರೆ ಈ ಜನಾಂಗದವರೆಲ್ಲಾ ನನ್ನಿಂದ ಕದ್ದುಕೊಳ್ಳುವವರಾದ ಕಾರಣ ಶಾಪಗ್ರಸ್ತರಾಗಿದ್ದೀರಿ.
[10] ನನ್ನ ಆಲಯವು ಆಹಾರದ ಕೊರತೆಯಿಲ್ಲದಂತೆ ನೀವು ದಶಮಾಂಶವನ್ನು ಯಾವಾಗಲೂ ಭಂಡಾರಕ್ಕೆ ತೆಗೆದುಕೊಂಡು ಬನ್ನಿರಿ; ನಾನು ಪರಲೋಕದ ದ್ವಾರಗಳನ್ನು ತೆರೆದು ನಿಮ್ಮಲ್ಲಿ ಸ್ಥಳಹಿಡಿಯಲಾಗದಷ್ಟು ಸುವರಗಳನ್ನು ಸುರಿಯುವೆನೋ ಇಲ್ಲವೋ ಎಂದು ಯೆಹೋವನಾದ ನನ್ನನ್ನು ಹೀಗೆ ಪರೀಕ್ಷಿಸಿರಿ.
[11] ನುಂಗುವ ಹುಳವನ್ನು ನಾನು ನಿಮಗಾಗಿ ತಡೆಯುವೆನು. ಅದು ನಿಮ್ಮ ಭೂಮಿಯ ಫಲವನ್ನು ನಾಶಮಾಡದು; ನಿಮ್ಮ ದ್ರಾಕ್ಷಿಯಹಣ್ಣು ತೋಟದಲ್ಲಿ ಉದುರಿಹೋಗದು” ಇದು ಸೇನಾಧೀಶ್ವರನಾದ ಯೆಹೋವನ ನುಡಿ.
[12] “ಆಗ ಸಕಲ ಜನಾಂಗಗಳವರು ನಿಮ್ಮನ್ನು ಧನ್ಯರೆಂದು ಕೊಂಡಾಡುವರು; ನಿಮ್ಮ ದೇಶವು ಆನಂದವಾಗಿರುವುದು” ಇದು ಸೇನಾಧೀಶ್ವರನಾದ ಯೆಹೋವನ ನುಡಿ.
[13] “ನೀವು ನನಗೆ ವಿರುದ್ಧವಾಗಿ ಆಡಿದ ಮಾತುಗಳು ಬಹಳ ಕಠಿಣ” ಎಂದು ಯೆಹೋವನು ಅನ್ನುತ್ತಾನೆ. “ನಿನಗೆ ವಿರುದ್ಧವಾಗಿ ಏನು ಮಾಡಿದ್ದೇವೆ?” ಅನ್ನುತ್ತೀರಾ?
[14] ನೀವು “ದೇವರನ್ನು ಸೇವಿಸುವುದು ವ್ಯರ್ಥ; ನಾವು ಆತನ ನಿಯಮವನ್ನು ಅನುಸರಿಸಿ ಸೇನಾಧೀಶ್ವರನಾದ ಯೆಹೋವನ ಮುಂದೆ ದುಃಖದಿಂದ ವಿಕಾರಿಗಳಾಗಿ ನಡೆದುಕೊಂಡದ್ದರಿಂದ ಆದ ಲಾಭವೇನು?
[15] ಈಗ ಅಹಂಕಾರಿಗಳನ್ನು ಭಾಗ್ಯವಂತರೆಂದು ಕೊಂಡಾಡಬೇಕಾಗಿ ಬಂತು; ಹೌದು, ದುಷ್ಕರ್ಮಿಗಳು ಏಳಿಗೆಗೆ ಬಂದಿದ್ದಾರೆ, ದೇವರನ್ನು ಪರೀಕ್ಷಿಸಿದರೂ ಸುರಕ್ಷಿತರಾಗಿದ್ದಾರೆ” ಅಂದುಕೊಂಡಿದ್ದೀರಲ್ಲಾ.
[16] ಇಂಥಾ ಮಾತುಗಳನ್ನು ಕೇಳಿ ಯೆಹೋವನ ಭಕ್ತರು ಒಬ್ಬರಿಗೊಬ್ಬರು ಮಾತನಾಡಿಕೊಳ್ಳಲು, ಯೆಹೋವನು ಕಿವಿಗೊಟ್ಟು ಆಲಿಸಿ ಭಯಭಕ್ತಿಯಿಂದ ತನ್ನ ನಾಮ ಸ್ಮರಣೆ ಮಾಡುವವರ ಹೆಸರುಗಳನ್ನು ತನ್ನ ಮುಂದೆ ಜ್ಞಾಪಕದ ಪುಸ್ತಕದಲ್ಲಿ ಬರೆಯಿಸಿದನು.
[17] ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ನಾನು ಕಾರ್ಯಸಾಧಿಸುವ ದಿನದಲ್ಲಿ ಅವರು ನನಗೆ ಸ್ವಕೀಯ ಜನರಾಗಿರುವರು; ಒಬ್ಬನು ತನ್ನನ್ನು ಸೇವಿಸುವ ಸ್ವಂತ ಮಗನನ್ನು ಕರುಣಿಸುವಂತೆ ನಾನು ಅವರನ್ನು ಕರುಣಿಸುವೆನು” ಇದು ಸೇನಾಧೀಶ್ವರನಾದ ಯೆಹೋವನ ನುಡಿ.
[18] ಆಗ ಶಿಷ್ಟರಿಗೂ, ದುಷ್ಟರಿಗೂ, ದೇವರನ್ನು ಸೇವಿಸುವವರಿಗೂ, ಸೇವಿಸದೇ ಇರುವವರಿಗೂ ಇರುವ ವ್ಯತ್ಯಾಸವನ್ನು ಮತ್ತೆ ಕಾಣುವಿರಿ.