Skip to content
Opens in a new window
Listen to this chapter • 3:49

[1] ಯೆಹೋವನು ಇಸ್ರಾಯೇಲರ ಕುರಿತು ಮಲಾಕಿಯ ಮೂಲಕ ನುಡಿದ ದೈವೋಕ್ತಿ.

[2] ಯೆಹೋವನು ಇಂತೆನ್ನುತ್ತಾನೆ, “ನಾನು ನಿಮ್ಮನ್ನು ಪ್ರೀತಿಸಿದ್ದೇನೆ.” ನೀವೋ “ಯಾವ ವಿಷಯದಲ್ಲಿ ನಮ್ಮನ್ನು ಪ್ರೀತಿಸಿದ್ದೀ?” ಅಂದುಕೊಳ್ಳುತ್ತೀರಲ್ಲಾ. ಏಸಾವನು ಯಾಕೋಬನ ಅಣ್ಣನಲ್ಲವೆ?

[3] “ಆದರೆ ನಾನು ಯಾಕೋಬನನ್ನು ಪ್ರೀತಿಸಿ, ಏಸಾವನನ್ನು ದ್ವೇಷಿಸಿ, ಅವನ ಬೆಟ್ಟಗಳನ್ನು ಹಾಳುಮಾಡಿ ಅವನ ಪಿತ್ರಾರ್ಜಿತ ಆಸ್ತಿಯನ್ನು ಕಾಡುನರಿಗಳ ಪಾಲುಮಾಡಿದ್ದೇನಷ್ಟೆ” ಇದು ಯೆಹೋವನ ನುಡಿ.

[4] ಹೀಗಿರಲು ಎದೋಮ್ಯರು, “ನಾವು ಹಾಳಾದೆವು, ಆದರೆ ಹಾಳುಪ್ರದೇಶಗಳನ್ನು ಮತ್ತೆ ಕಟ್ಟುವೆವು” ಅಂದುಕೊಂಡರೆ ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಅವರು ಕಟ್ಟಿದರೂ ನಾನು ಕೆಡವಿಹಾಕುವೆನು; ಅವರು ದುಷ್ಟ ಕೇಡಿಗರು, ಯೆಹೋವನ ನಿತ್ಯ ಕೋಪಕ್ಕೆ ಗುರಿಯಾದ ಜನರೂ ಅನ್ನಿಸಿಕೊಳ್ಳುವರು.

[5] ನೀವೇ ಇದನ್ನು ಕಣ್ಣಾರೆ ಕಂಡು ಯೆಹೋವನು ಇಸ್ರಾಯೇಲಿನ ಮೇರೆಯ ಆಚೆಯೂ, ‘ಮಹಾ ಮಹಿಮೆಯುಳ್ಳವನು’” ಅಂದುಕೊಳ್ಳುವಿರಿ.

[6] “ನನ್ನ ನಾಮವನ್ನು ಧಿಕ್ಕರಿಸುವ ಯಾಜಕರೇ, ಮಗನು ತಂದೆಗೆ ಸನ್ಮಾನ ಸಲ್ಲಿಸುತ್ತಾನಲ್ಲಾ, ಆಳು ಧಣಿಗೆ ಭಯಭಕ್ತಿ ತೋರಿಸುತ್ತಾನಷ್ಟೇ; ನಾನು ತಂದೆಯಾಗಿರಲು ನನಗೆ ಸಲ್ಲುವ ಸನ್ಮಾನವೆಲ್ಲಿ? ನಾನು ದಣಿಯಾಗಿರಲು ನನಗೆ ತೋರಿಸುವ ಭಯಭಕ್ತಿಯೆಲ್ಲಿ?” ಎಂದು ಸೇನಾಧೀಶ್ವರನಾದ ಯೆಹೋವನು ನಿಮಗೇ ನುಡಿಯುತ್ತಾನೆ. ಆದರೆ ನೀವು, “ಯಾವ ವಿಷಯದಲ್ಲಿ ನಿನ್ನ ನಾಮವನ್ನು ಧಿಕ್ಕರಿಸಿದ್ದೇವೆ?” ಅನ್ನುತ್ತೀರಿ.

[7] ನನ್ನ ಯಜ್ಞವೇದಿಯ ಮೇಲೆ ಅಶುದ್ಧ ಪದಾರ್ಥಗಳನ್ನು ಅರ್ಪಿಸುತ್ತೀರಲ್ಲಾ. “ಯಾವ ವಿಷಯದಲ್ಲಿ ಅಶುದ್ಧಗೊಳಿಸಿದ್ದೇವೆ?” ಅನ್ನುತ್ತೀರಿ. “ಯೆಹೋವನ ಮೇಜಿಗೆ ಘನತೆಯೇನಿದೆ?” ಎಂದು ನೀವು ಅಂದುಕೊಳ್ಳುವುದರಲ್ಲಿಯೇ ಇದೆ.

[8] ಕುರುಡಾದ ಪಶುವನ್ನು ಯಜ್ಞಕ್ಕೆ ಒಪ್ಪಿಸುವುದು ದೋಷವಲ್ಲವೆಂದು ನೆನಸುತ್ತೀರೋ? ಕುಂಟಾದದ್ದನ್ನೂ, ರೋಗದ ಪಶುವನ್ನೂ ಅರ್ಪಿಸುವುದು ದೋಷವಲ್ಲವೆಂದು ನಂಬುತ್ತೀರೋ? ಇಂಥದ್ದನ್ನು ನಿನ್ನ ದೇಶಾಧಿಪತಿಗೆ ಒಪ್ಪಿಸು; ನಿನಗೆ ಮೆಚ್ಚುಗೆ ವ್ಯಕ್ತಪಡಿಸುವನೋ? ನಿಮ್ಮ ಕೋರಿಕೆಯನ್ನು ನೆರವೇರಿಸುವನೋ? ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ,

[9] “ಹಾಗಾದರೆ ದೇವರ ದಯೆ ದೊರೆಯುವ ಹಾಗೆ ದೇವರನ್ನು ಬೇಡಿಕೊಳ್ಳಿರಿ; ಆಹಾ, ಇದೇ ನಿಮ್ಮ ಕೈಯ ಕಾಣಿಕೆ; ನಿಮ್ಮಲ್ಲಿ ಯಾರಿಗಾದರೂ ಆತನು ಪ್ರಸನ್ನನಾಗುವನೋ?” ಇದು ಸೇನಾಧೀಶ್ವರನಾದ ಯೆಹೋವನ ನುಡಿ.

[10] “ನನ್ನ ಯಜ್ಞವೇದಿಯ ಮೇಲೆ ಯಾರೂ ಬೆಂಕಿಯನ್ನು ವ್ಯರ್ಥವಾಗಿ ಉರಿಸದಂತೆ ನಿಮ್ಮಲ್ಲೊಬ್ಬನು ದೇವಾಲಯದ ಬಾಗಿಲುಗಳನ್ನು ಮುಚ್ಚಿಬಿಟ್ಟರೆ ಎಷ್ಟೋ ಒಳ್ಳೆಯದು! ನಾನು ನಿಮ್ಮನ್ನು ಮೆಚ್ಚೆನು, ನಿಮ್ಮ ಕೈಯಿಂದ ನೈವೇದ್ಯವನ್ನು ಸ್ವೀಕರಿಸೆನು” ಇದು ಸೇನಾಧೀಶ್ವರನಾದ ಯೆಹೋವನ ನುಡಿ.

[11] “ಸೂರ್ಯನು ಮೂಡುವ ದಿಕ್ಕಿನಿಂದ ಮುಳುಗುವ ದಿಕ್ಕಿನವರೆಗೂ ನನ್ನ ನಾಮವು ಅನ್ಯಜನಾಂಗಗಳಲ್ಲಿ ಘನವಾಗಿದೆ; ಒಂದೊಂದು ಸ್ಥಳದಲ್ಲಿಯೂ ನನ್ನ ನಾಮಕ್ಕೆ ಧೂಪವನ್ನು ಶುದ್ಧ ನೈವೇದ್ಯವನ್ನೂ ಅರ್ಪಿಸುತ್ತಾರೆ. ಹೌದು, ಅನ್ಯ ಜನಾಂಗಗಳಲ್ಲಿಯೇ ನನ್ನ ನಾಮವು ಬಹು ಮಾನ್ಯವಾಗಿದೆ.” ಇದು ಸೇನಾಧೀಶ್ವರನಾದ ಯೆಹೋವನ ನುಡಿ.

[12] ನೀವೋ, “ಯೆಹೋವನ ಮೇಜು ಅಶುದ್ಧ, ಅದರ ಮೇಲಣ ನೈವೇದ್ಯ ಅಸಹ್ಯ ಅಂದುಕೊಳ್ಳುವುದರಿಂದ ನನ್ನ ನಾಮವನ್ನು ಅಪಕೀರ್ತಿಗೆ ಗುರಿಮಾಡಿದ್ದೀರಿ.

[13] ಅಯ್ಯೋ, ಈ ಸೇವೆಯು ಎಷ್ಟೋ ಬೇಸರವೆಂದು ನೀವು ಅಂದುಕೊಂಡು ಅದನ್ನು ತಾತ್ಸಾರ ಮಾಡುತ್ತೀರಿ” ಇದು ಸೇನಾಧೀಶ್ವರನಾದ ಯೆಹೋವನ ನುಡಿ. “ಕಳವಾದ ಪಶುವನ್ನೂ, ಊನವಾದದ್ದನ್ನೂ, ರೋಗ ಹಿಡಿದ ಪ್ರಾಣಿಯನ್ನು ತಂದೊಪ್ಪಿಸುತ್ತೀರಿ. ನಾನು ನಿಮ್ಮ ಕೈಯಿಂದ ಸ್ವೀಕರಿಸುವುದಿಲ್ಲ” ಇದು ಯೆಹೋವನ ನುಡಿ.

[14] “ಒಬ್ಬನು ಹರಕೆ ಹೊತ್ತು ತನ್ನ ಹಿಂಡಿನಲ್ಲಿರುವ ಗಂಡುಪಶು ಹಾಗೂ ಕಳಂಕವಾದ ಪಶುವನ್ನು ಯೆಹೋವನಿಗೆ ಯಜ್ಞಮಾಡಿದರೆ ಆ ಮೋಸಗಾರನಿಗೆ ಶಾಪವು ತಟ್ಟಲಿ; ನಾನು ರಾಜಾಧಿರಾಜ, ನನ್ನ ನಾಮವು ಅನ್ಯಜನಾಂಗಗಳ ಭಯಭಕ್ತಿಗೆ ಪಾತ್ರವಾಗಿದೆ” ಇದು ಸೇನಾಧೀಶ್ವರನಾದ ಯೆಹೋವನ ನುಡಿ.

ಮಲಾಕಿಯನು — Chapters