[1] ನನ್ನ ಸಹೋದರರೇ, ಬೋಧಕರಾದ ನಮಗೆ ಕಠಿಣವಾದ ತೀರ್ಪು ಆಗುವುದೆಂದು ತಿಳಿದುಕೊಂಡು ಬಹಳ ಜನರು ಬೋಧಕರಾಗಬೇಡಿರಿ.
[2] ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುಮಾಡುವವರಾಗಿದ್ದಾರೆ. ಒಬ್ಬನು ಮಾತಿನಲ್ಲಿ ತಪ್ಪಿ ನಡೆಯದಿದ್ದರೆ ಅವನು ಸರ್ವಸುಗುಣವುಳ್ಳವನೂ ತನ್ನ ಇಡೀ ದೇಹವನ್ನೆಲ್ಲಾ ಸ್ವಾಧೀನಪಡಿಸಿಕೊಳ್ಳುವುದಕ್ಕೆ ಸಮರ್ಥನೂ ಆಗಿದ್ದಾನೆ.
[3] ಕುದುರೆಗಳು ನಮ್ಮ ಇಚ್ಚೆಯಂತೆ ನಡೆಯುವ ಹಾಗೆ ಅವುಗಳ ಬಾಯಿಗೆ ಕಡಿವಾಣ ಹಾಕುತ್ತೇವೆ. ಆಗ ಅವುಗಳ ದೇಹವನ್ನೆಲ್ಲಾ ನಮಗೆ ಬೇಕಾದ ಕಡೆಗೆ ತಿರುಗಿಸುವುದಕ್ಕೆ ಆಗುತ್ತದೆ.
[4] ಹಡಗುಗಳನ್ನು ಸಹ ಗಮನಿಸಿರಿ. ಅವು ಬಹು ದೊಡ್ಡವುಗಳಾಗಿದ್ದರೂ ಬಲವಾದ ಗಾಳಿಯಿಂದ ದಿಕ್ಕು ತಪ್ಪುತ್ತದೆ. ಆದರೂ ನಾವಿಕನು ಬಹಳ ಸಣ್ಣ ಚುಕ್ಕಾಣಿಯಿಂದ ಅವುಗಳನ್ನು ತಾನು ಹೋಗ ಬೇಕಾದ ಕಡೆಗೆ ತಿರುಗಿಸಿಕೊಳ್ಳುತ್ತಾನೆ.
[5] ಹಾಗೆಯೇ ನಾಲಿಗೆಯು ಕೂಡ ಚಿಕ್ಕ ಅಂಗವಾಗಿದ್ದರೂ ದೊಡ್ಡ ಕಾರ್ಯಗಳನ್ನು ಮಾಡುವ ಬಗ್ಗೆ ಕೊಚ್ಚಿಕೊಳ್ಳುತ್ತದೆ. ಬೆಂಕಿಯ ಸಣ್ಣ ಕಿಡಿ ದೊಡ್ಡ ಕಾಡನ್ನೂ ಸುಡುತ್ತದೆ.
[6] ನಾಲಿಗೆಯೂ ಸಹ ಬೆಂಕಿಯೇ. ನಾಲಿಗೆಯೂ ಅಧರ್ಮ ಲೋಕರೂಪವಾಗಿ ನಮ್ಮ ಅಂಗಗಳ ನಡುವೆ ಇಡಲ್ಪಟ್ಟಿದೆ. ಅದು ದೇಹವನ್ನೆಲ್ಲಾ ಕೆಡಿಸುತ್ತದೆ. ತಾನೇ ನರಕವೆಂಬ ಬೆಂಕಿ ಹೊತ್ತಿಸಿಕೊಳ್ಳುತ್ತಾ ಇಡೀ ಬಾಳಿಗೆ ಬೆಂಕಿ ಹಚ್ಚುತ್ತದೆ.
[7] ಸಕಲ ಜಾತಿಯ ಮೃಗ, ಪಕ್ಷಿ, ಹರಿದಾಡುವ ಜಂತು, ಜಲಚರಗಳನ್ನೂ ಮನುಷ್ಯರು ಹತೋಟಿಗೆ ತರುವುದುಂಟು ಮತ್ತು ತಂದದ್ದುಂಟು.
[8] ಆದರೆ ನಾಲಿಗೆಯನ್ನು ಯಾವ ಮಾನವನೂ ಹತೋಟಿಗೆ ತರಲಾರನು. ಅದು ಸುಮ್ಮನಿರಲಾರದ ಕೆಡುಕಾಗಿದೆ. ಮರಣಕರವಾದ ವಿಷದಿಂದ ತುಂಬಿದೆ.
[9] ಅದೇ ನಾಲಿಗೆಯಿಂದ ನಮ್ಮ ಕರ್ತನಾದ ತಂದೆಯನ್ನು ಕೊಂಡಾಡುತ್ತೇವೆ, ಅದುದರಿಂದಲೇ ದೇವರ ಹೋಲಿಕೆಗೆ ಸಮಾನವಾಗಿ ಸೃಷ್ಟಿಸಲ್ಪಟ್ಟ ಮನುಷ್ಯರನ್ನು ನಾವು ಶಪಿಸುತ್ತೇವೆ.
[10] ಅದೇ ಬಾಯಿಂದ ಸ್ತುತಿ ಮತ್ತು ಶಾಪ ಎರಡೂ ಬರುತ್ತವೆ. ನನ್ನ ಸಹೋದರರೇ,
[11] ಒಂದೇ ಬುಗ್ಗೆಯಿಂದ ಸಿಹಿ ನೀರು ಮತ್ತು ಕಹಿ ನೀರು ಎರಡು ಹೊರಡುವುದುಂಟೇ?
[12] ನನ್ನ ಸಹೋದರರೇ, ಅಂಜೂರದ ಮರವು ಎಣ್ಣೆ ಮರದ ಕಾಯಿ ಬಿಡುವುದೋ? ದ್ರಾಕ್ಷಿ ಬಳ್ಳಿಯಲ್ಲಿ ಅಂಜೂರದ ಹಣ್ಣು ಬಿಡುವುದೋ? ಹಾಗೆಯೇ ಉಪ್ಪುನೀರಿನ ಬುಗ್ಗೆಯಿಂದ ಸಿಹಿ ನೀರು ಬರುವುದಿಲ್ಲ.
[13] ನಿಮ್ಮಲ್ಲಿ ಜ್ಞಾನಿಯೂ, ಬುದ್ಧಿವಂತನೂ ಯಾರು? ಅಂಥವನು ಒಳ್ಳೆಯ ನಡತೆಯಿಂದ, ಜ್ಞಾನದ ಲಕ್ಷಣವಾದ ವಿನಯಶೀಲತೆಯ ಕ್ರಿಯೆಗಳಿಂದ ಅದನ್ನು ತೋರಿಸಲಿ.
[14] ಆದರೆ ತೀಕ್ಷ್ಣವಾದ ಮತ್ಸರವೂ, ಸ್ವಾರ್ಥಾಭಿಲಾಶೆಯೂ ನಿಮ್ಮ ಹೃದಯದೊಳಗೆ ಇರುವುದಾದರೆ ನೀವು ಸತ್ಯಕ್ಕೆ ವಿರೋಧವಾಗಿ ಸುಳ್ಳಾಡಿ ಹೊಗಳಿಕೊಳ್ಳಬೇಡಿರಿ.
[15] ಅದು ಮೇಲಿಂದ ಬಂದ ಜ್ಞಾನವಲ್ಲ. ಅದು ಭೂಸಂಬಂಧವಾದದ್ದು, ಲೌಕಿಕವಾದುದು, ದೆವ್ವಗಳಿಗೆ ಸಂಬಂಧಪಟ್ಟದ್ದು.
[16] ಮತ್ಸರವೂ, ಹಗೆತನವೂ ಇರುವ ಕಡೆ ಗೊಂದಲಗಳೂ, ಸಕಲ ವಿಧದ ನೀಚ ಕೃತ್ಯಗಳೂ ಇರುವವು.
[17] ಆದರೆ ಮೇಲಿಂದ ಬರುವ ಜ್ಞಾನವು ಮೊದಲು ಪರಿಶುದ್ಧವಾದದ್ದು ಆಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಸಂತೋಷವಾಗಿ ಒಪ್ಪಿಕೊಳ್ಳುವಂಥದ್ದು, ಕರುಣೆ ಮತ್ತು ಒಳ್ಳೆ ಫಲಗಳಿಂದ ತುಂಬಿರುವಂಥದ್ದು, ಪಕ್ಷಪಾತವಿಲ್ಲದ್ದು, ಪ್ರಾಮಾಣಿಕವಾದ್ದದು ಆಗಿದೆ.
[18] ಸಮಾಧಾನವನ್ನು ಉಂಟುಮಾಡುವವರು ಸಮಾಧಾನವೆಂಬ ಬೀಜವನ್ನು ಬಿತ್ತಿ ನೀತಿಯೆಂಬ ಫಲವನ್ನು ಕೊಯ್ಯುವರು.