[1] ನನ್ನ ಸಹೋದರರೇ, ಮಹಿಮೆಯುಳ್ಳ ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟವರಾದ ನೀವು ಪಕ್ಷಪಾತಿಗಳಾಗಿರಬಾರದು.
[2] ಹೇಗೆಂದರೆ ಒಬ್ಬ ಮನುಷ್ಯನು ಚಿನ್ನದ ಉಂಗುರಗಳನ್ನು ಮತ್ತು ಉತ್ತಮವಾದ ವಸ್ತ್ರಗಳನ್ನೂ ಹಾಕಿಕೊಂಡು ನಿಮ್ಮ ಸಭೆಯೊಳಗೆ ಬಂದಾಗ ಮತ್ತು ಒಬ್ಬ ಬಡ ಮನುಷ್ಯನು ಕೊಳಕು ಬಟ್ಟೆಗಳನ್ನು ಧರಿಸಿಕೊಂಡು ಬಂದಾಗ,
[3] ನೀವು ಉತ್ತಮವಾದ ವಸ್ತ್ರಗಳನ್ನು ಧರಿಸಿಕೊಂಡು ಬಂದಿರುವವನನ್ನು ಗೌರವದಿಂದ ನೋಡಿ ಅವನಿಗೆ “ನೀವು ಇಲ್ಲಿ ಈ ಗೌರವ ಆಸನದಲ್ಲಿ ಕುಳಿತುಕೊಳ್ಳಿರಿ” ಎಂತಲೂ, ಆ ಬಡ ಮನುಷ್ಯನಿಗೆ “ನೀನು ಅಲ್ಲಿ ನಿಂತುಕೋ” ಇಲ್ಲವೇ “ಇಲ್ಲಿ ನನ್ನ ಕಾಲ್ಮಣೆಯ ಬಳಿ ಕುಳಿತುಕೋ” ಎಂತಲೂ ಹೇಳಿದರೆ,
[4] ನೀವು ನಿಮ್ಮ ನಿಮ್ಮಲ್ಲಿ ಭೇದಭಾವ ಮಾಡುವವರಾಗಿದ್ದು, ತಾರತಮ್ಯ ಆಲೋಚನೆಗಳಂತೆ ನಡೆಯುವ ನಿರ್ಧಾರ ಮಾಡುವವರಾಗಿರುತ್ತೀರಿ ಅಲ್ಲವೇ?
[5] ನನ್ನ ಪ್ರಿಯ ಸಹೋದರರೇ, ಕೇಳಿರಿ ದೇವರು ಈ ಲೋಕದಲ್ಲಿನ ಬಡವರನ್ನು ನಂಬಿಕೆಯಲ್ಲಿ ಐಶ್ವರ್ಯವಂತರನ್ನಾಗಿಯೂ, ತನ್ನನ್ನು ಪ್ರೀತಿಸುವವರಿಗೆ ತಾನು ವಾಗ್ದಾನ ಮಾಡಿದ ರಾಜ್ಯಕ್ಕೆ ಬಾಧ್ಯರಾಗಿಯೂ ಇರಬೇಕೆಂದು ಆರಿಸಿಕೊಳ್ಳಲಿಲ್ಲವೇ?
[6] ನೀವಾದರೋ ಬಡವರನ್ನು ಅವಮಾನಪಡಿಸಿದ್ದೀರಿ. ನಿಮ್ಮನ್ನು ಬಾಧಿಸಿ ನ್ಯಾಯಸ್ಥಾನದ ಮುಂದೆ ಎಳೆದುಕೊಂಡು ಹೋಗುವವರು ಐಶ್ವರ್ಯವಂತರಲ್ಲವೋ?
[7] ನೀವು ಕರೆಯಲ್ಪಟ್ಟ ಆ ಶ್ರೇಷ್ಠವಾದ ನಾಮವನ್ನು ದೂಷಿಸುವವರು ಅವರಲ್ಲವೋ?
[8] ಆದರೂ ಧರ್ಮಶಾಸ್ತ್ರಕ್ಕೆ ಸರಿಯಾಗಿ “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂಬ ರಾಜಾಜ್ಞೆಯನ್ನು ನೆರವೇರಿಸುವವರಾದರೆ, ನೀವು ಒಳ್ಳೆಯದನ್ನೇ ಮಾಡುವವರಾಗಿರುವಿರಿ.
[9] ಒಂದು ವೇಳೆ ಅದನ್ನು ಬಿಟ್ಟು ನೀವು ಪಕ್ಷಪಾತಿಗಳಾಗಿದ್ದರೆ ಪಾಪಮಾಡುವವರಾಗಿದ್ದು ಅಪರಾಧಿಗಳೆಂದು ಧರ್ಮಶಾಸ್ತ್ರದ ಪ್ರಕಾರ ತೀರ್ಮಾನಿಸಲ್ಪಡುತ್ತೀರಿ.
[10] ಏಕೆಂದರೆ ಯಾರಾದರೂ ಧರ್ಮಶಾಸ್ತ್ರವನ್ನೆಲ್ಲಾ ಕೈಕೊಂಡು ನಡೆದು ಅದರಲ್ಲಿ ಒಂದೇ ಒಂದು ವಿಷಯದಲ್ಲಿ ತಪ್ಪಿದರೆ ಅಂಥವರು ಎಲ್ಲಾ ವಿಷಯಗಳಲ್ಲಿಯೂ ಅಪರಾಧಿಯಾಗಿರುತ್ತಾರೆ.
[11] ಏಕೆಂದರೆ ವ್ಯಭಿಚಾರ ಮಾಡಬಾರದೆಂದು ಹೇಳಿದವನೇ ನರಹತ್ಯ ಮಾಡಬಾರದೆಂತಲೂ ಹೇಳಿದನು. ಆದಕಾರಣ ನೀನು ವ್ಯಭಿಚಾರಮಾಡದೆ ಇದ್ದರೂ ನರಹತ್ಯ ಮಾಡಿದರೆ ಧರ್ಮಶಾಸ್ತ್ರವನ್ನು ಮೀರಿದವನಾಗಿರುತ್ತಿ.
[12] ನೀವು ಬಿಡುಗಡೆಯನ್ನುಂಟು ಮಾಡುವ ಧರ್ಮಶಾಸ್ತ್ರದ ಪ್ರಕಾರ ತೀರ್ಪುಹೊಂದುವವರಿಗೆ ತಕ್ಕಂತೆ ಮಾತನಾಡಿರಿ ಮತ್ತು ವಿಧೇಯರಾಗಿರಿ.
[13] ಏಕೆಂದರೆ ಕರುಣೆ ತೋರಿಸದೆ ಇರುವವನಿಗೆ ನ್ಯಾಯತೀರ್ಪಿನಲ್ಲಿ ಕರುಣೆಯು ತೋರಿಸಲ್ಪಡುವುದಿಲ್ಲ. ಕರುಣೆಯು ನ್ಯಾಯತೀರ್ಪಿನ ಮೇಲೆ ಜಯ ಹೊಂದುತ್ತದೆ.
[14] ನನ್ನ ಸಹೋದರರೇ, ಒಬ್ಬನು ತನಗೆ ನಂಬಿಕೆಯುಂಟೆಂದು ಹೇಳಿಕೊಂಡು ತಕ್ಕ ಕ್ರಿಯೆಗಳಿಲ್ಲದವನಾಗಿದ್ದರೆ ಪ್ರಯೋಜನವೇನು? ಅಂಥ ನಂಬಿಕೆಯು ಅವನನ್ನು ರಕ್ಷಿಸುವುದೋ?
[15] ನಿಮ್ಮಲ್ಲಿ ಒಬ್ಬ ಸಹೋದರನಿಗೆ ಇಲ್ಲವೆ ಒಬ್ಬ ಸಹೋದರಿಗೆ ಉಡಲು ಬಟ್ಟೆಯೂ ಮತ್ತು ದಿನನಿತ್ಯದ ಆಹಾರವೂ ಅಗತ್ಯವಾಗಿರುವಾಗ,
[16] ನಿಮ್ಮಲ್ಲಿ ಒಬ್ಬನು ಅವರಿಗೆ ದೈಹಿಕ ಅವಶ್ಯಕತೆಗಳನ್ನು ಪೂರೈಸದೆ “ಸಮಾಧಾನದಿಂದ ಹೋಗಿರಿ, ಬೆಚ್ಚಗೆ ಬೆಂಕಿಕಾಯಿಸಿಕೊಳ್ಳಿ, ಹೊಟ್ಟೆ ತುಂಬಾ ಊಟಮಾಡಿ” ಎಂದು ಹೇಳಿದರೆ ಪ್ರಯೋಜನವೇನು?
[17] ಹಾಗೆಯೇ ಕ್ರಿಯೆಗಳಿಲ್ಲದ ನಂಬಿಕೆಯು ನಿರ್ಜೀವವಾದದು.
[18] ಆದರೂ ಒಬ್ಬನು; “ನಿನಗೆ ನಂಬಿಕೆಯುಂಟು ಮತ್ತು ನನಗೆ ಕ್ರಿಯೆಗಳುಂಟು” ನೀನು ಕ್ರಿಯೆಗಳಿಲ್ಲದೆ ನಿನ್ನ ನಂಬಿಕೆಯನ್ನು ನನಗೆ ತೋರಿಸು. ನಾನು ನನ್ನ ಕ್ರಿಯೆಗಳ ಮುಖಾಂತರ ನನ್ನ ನಂಬಿಕೆಯನ್ನು ತೋರಿಸುತ್ತೇನೆ ಎಂದು ಹೇಳುವನಲ್ಲವೇ.
[19] ದೇವರು ಒಬ್ಬನೇ ಎಂದು ನೀನು ನಂಬುತ್ತೀ; ಹಾಗೆ ನಂಬುವುದು ಸರಿ. ಆದರೆ ದೆವ್ವಗಳು ಸಹ ಹಾಗೆಯೇ ನಂಬಿ ಹೆದರಿ ನಡುಗುತ್ತವೆ.
[20] ಅವಿವೇಕಿಯೇ, ಕ್ರಿಯೆಗಳಿಲ್ಲದ ನಂಬಿಕೆಯು ವ್ಯರ್ಥವಾದದ್ದು ಎಂದು ನಿನಗೆ ಸಾಬಿತುಪಡಿಸಬೇಕೋ?
[21] ನಮ್ಮ ಪಿತೃವಾದ ಅಬ್ರಹಾಮನು ತನ್ನ ಮಗನಾದ ಇಸಾಕನನ್ನು ಯಜ್ಞವೇದಿಯ ಮೇಲೆ ಅರ್ಪಿಸಿದಾಗ ನೀತಿವಂತನೆಂಬ ನಿರ್ಣಯವನ್ನು ಹೊಂದಿದ್ದು ನಂಬಿಕೆಯ ಕ್ರಿಯೆಗಳಿಂದಲ್ಲವೇ?
[22] ಅವನ ನಂಬಿಕೆಯು ಕ್ರಿಯೆಗಳೊಂದಿಗೆ ಕಾರ್ಯಮಾಡಿತ್ತು ಮತ್ತು ಆ ಕ್ರಿಯೆಗಳಿಂದಲೇ ಅವನ ನಂಬಿಕೆಯ ಉದ್ದೇಶವು ನೆರವೇರಿತು ಎಂದು ಕಾಣುತ್ತೇವಲ್ಲಾ.
[23] “ಅಬ್ರಹಾಮನು ದೇವರನ್ನು ನಂಬಿದನು ಮತ್ತು ಆ ನಂಬಿಕೆ ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತು” ಎಂಬ ಧರ್ಮಶಾಸ್ತ್ರದ ಮಾತು ಹೀಗೆ ನೆರವೇರಿತು. ಆದ್ದರಿಂದ ಅಬ್ರಹಾಮನು ದೇವರ ಸ್ನೇಹಿತನೆಂದು ಕರೆಯಲ್ಪಟ್ಟನು.
[24] ಆದುದರಿಂದ ಮನುಷ್ಯನು, ಕ್ರಿಯೆಗಳಿಂದ ನೀತಿವಂತನೆಂದು ನಿರ್ಣಯಿಸಲ್ಪಡುತ್ತಾನೆ ಹೊರತು ಬರೀ ನಂಬಿಕೆಯಿಂದಲ್ಲ ಎಂದು ನೋಡುತ್ತೀರಿ.
[25] ಅದೇ ರೀತಿಯಾಗಿ ವೇಶ್ಯೆಯಾದ ರಾಹಾಬಳು ಗೂಢಚಾರರನ್ನು ತನ್ನ ಮನೆಯಲ್ಲಿ ಸೇರಿಸಿಕೊಂಡು, ಬೇರೆ ದಾರಿಯಿಂದ ಅವರನ್ನು ಕಳುಹಿಸಿದ ಕ್ರಿಯೆಗಳಿಂದಲೇ ನೀತಿವಂತಳೆಂಬ, ನಿರ್ಣಯವನ್ನು ಹೊಂದಿದಳಲ್ಲವೇ?
[26] ಆತ್ಮವಿಲ್ಲದ ದೇಹವು ಸತ್ತದ್ದಾಗಿರುವ ಪ್ರಕಾರವೇ ಕ್ರಿಯೆಗಳಿಲ್ಲದ ನಂಬಿಕೆಯೂ ಸತ್ತದ್ದಾಗಿದೆ.