Skip to content
Opens in a new window
Listen to this chapter • 4:19

[1] ಕ್ರಿಸ್ತನು ನಮ್ಮನ್ನು ಸ್ವತಂತ್ರರಾಗಿರಿಸಬೇಕೆಂದೇ ನಮಗೆ ಬಿಡುಗಡೆ ಮಾಡಿದನು. ಅದರಲ್ಲಿ ಸ್ಥಿರವಾಗಿ ನಿಲ್ಲಿರಿ, ದಾಸತ್ವದ ನೊಗದಲ್ಲಿ ತಿರುಗಿ ಸಿಕ್ಕಿಕೊಳ್ಳಬೇಡಿರಿ.

[2] ನೋಡಿರಿ, ಪೌಲನೆಂಬ ನಾನು ನಿಮಗೆ ಹೇಳುತ್ತೇನೆ, ನೀವು ಸುನ್ನತಿಮಾಡಿಸಿಕೊಂಡರೆ ಕ್ರಿಸ್ತನಿಂದ ನಿಮಗೆ ಏನೂ ಪ್ರಯೋಜನವಿಲ್ಲ.

[3] ಸುನ್ನತಿ ಮಾಡಿಸಿಕೊಳ್ಳುವ ಪ್ರತಿಯೊಬ್ಬನಿಗೆ, ನೀನು ಧರ್ಮಶಾಸ್ತ್ರದಲ್ಲಿ ಹೇಳಿರುವುದನ್ನೆಲ್ಲಾ ಮಾಡುವ ಹಂಗಿನಲ್ಲಿದ್ದೀ ಎಂದು ತಿರುಗಿ ಪ್ರಮಾಣವಾಗಿ ಹೇಳುತ್ತೇನೆ.

[4] ನಿಮ್ಮಲ್ಲಿ ಯಾರಾರು ಧರ್ಮಶಾಸ್ತ್ರದಿಂದ ನೀತಿವಂತರಾಗಬೇಕೆಂದು ಬಯಸಿದ್ದೀರೋ ಅವರು ಕ್ರಿಸ್ತನಿಂದ ಅಗಲಿಹೋದವರಾಗಿದ್ದೀರಿ. ಕೃಪೆಯಿಂದ ಬಿದ್ದಹೋದವರಾಗಿದ್ದೀರಿ.

[5] ನಾವಾದರೋ ದೇವರಾತ್ಮನ ಮೂಲಕ ನಂಬಿಕೆಯಿಂದ ನೀತಿವಂತರಾಗುತ್ತೇವೆಂಬುವ ನಿರೀಕ್ಷೆ ಸಫಲವಾಗುವುದೆಂದು ಎದುರುನೋಡುವವರಾಗಿದ್ದೇವೆ.

[6] ಕ್ರಿಸ್ತ ಯೇಸುವಿನಲ್ಲಿರುವವರಿಗೆ ಸುನ್ನತಿಯಾದರೂ ಆಗದಿದ್ದರೂ ಪ್ರಯೋಜನವಿಲ್ಲ, ಆದರೆ ಅವರಲ್ಲಿ ಪ್ರೀತಿಯಿಂದ ಹೊರಹೊಮ್ಮುವ ನಂಬಿಕೆಯೇ ಪ್ರಯೋಜನವಾಗಿದೆ.

[7] ಚೆನ್ನಾಗಿ ಓಡುತ್ತಾ ಇದ್ದೀರಿ. ಆದರೆ ನೀವು ಸತ್ಯವನ್ನು ಅನುಸರಿಸದಂತೆ ನಿಮ್ಮನ್ನು ತಡೆದವರು ಯಾರು?

[8] ಈ ಮನವೊಲಿಕೆಯು ನಿಮ್ಮನ್ನು ಕರೆದಾತನಿಂದ ಹುಟ್ಟಿದ್ದಲ್ಲ.

[9] ಸ್ವಲ್ಪ ಹುಳಿಯಿಂದ ಕಣಕವೆಲ್ಲಾ ಹುಳಿಯಾಗುವುದು.

[10] ನಿಮ್ಮಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗುವುದಿಲ್ಲವೆಂದು ಕರ್ತನಲ್ಲಿ ನಿಮ್ಮನ್ನು ಕುರಿತಾಗಿ ನನಗೆ ಭರವಸೆ ಉಂಟು. ನಿಮ್ಮಲ್ಲಿ ಬೇಧವನ್ನು ಹುಟ್ಟಿಸುವವನು ಯಾವನಾದರೂ ಸರಿಯೇ, ಅವನು ದಂಡನೆಯನ್ನು ಅನುಭವಿಸುವನು.

[11] ಸಹೋದರರೇ, ನಾನಾದರೋ ಸುನ್ನತಿಯಾಗಬೇಕೆಂದು ಇನ್ನೂ ಸಾರುವವನಾಗಿದ್ದರೆ ನನಗೆ ಹಿಂಸೆಯಾಗುವುದಾದರೂ ಯಾಕೆ? ಹಾಗಿದ್ದ ಪಕ್ಷದಲ್ಲಿ ಶಿಲುಬೆಯ ದೆಸೆಯಿಂದ ಉಂಟಾಗುವ ತೊಂದರೆಗಳು ನೀಗಿ ಹೋಯಿತಲ್ಲಾ?

[12] ನಿಮ್ಮನ್ನು ಕಳವಳಪಡಿಸುವವರು ತಮ್ಮನೇ ತಾವು ಅಂಗಚ್ಛೇದನೆಯನ್ನಾದರೂ ಮಾಡಿಕೊಂಡರೆ ಚೆನ್ನಾಗಿತ್ತು.

[13] ಸಹೋದರರೇ, ನೀವು ಸ್ವತಂತ್ರರಾಗಿರಬೇಕೆಂದು ದೇವರು ನಿಮ್ಮನ್ನು ಕರೆದನು. ಆದರೆ ನಿಮಗಿರುವ ಸ್ವಾತಂತ್ರ್ಯವನ್ನು ಶರೀರಾಧೀನ ಸ್ವಭಾವಕ್ಕೆ ಆಸ್ಪದವಾಗಿ ಬಳಸದೆ, ಪ್ರೀತಿಯಿಂದ ಒಬ್ಬರಿಗೊಬ್ಬರು ಸೇವೆ ಮಾಡಿರಿ.

[14] “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು” ಎಂಬ ಒಂದೇ ಮಾತಿನಲ್ಲಿ ಧರ್ಮಶಾಸ್ತ್ರವೆಲ್ಲಾ ಅಡಗಿದೆ.

[15] ಆದರೆ ನೀವು ಒಬ್ಬರನ್ನೊಬ್ಬರು ಕಚ್ಚಾಡಿ, ಹರಕೊಂಡು, ತಿನ್ನುವವರಾದರೆ ಒಬ್ಬರಿಂದೊಬ್ಬರು ನಾಶವಾದೀರಿ, ಎಚ್ಚರಿಕೆ.

[16] ನಾನು ಹೇಳುವುದೇನಂದರೆ ಪವಿತ್ರಾತ್ಮನನ್ನು ಅನುಸರಿಸಿ ನಡೆದುಕೊಳ್ಳಿರಿ, ಆಗ ನೀವು ಶರೀರಭಾವದ ಅಭಿಲಾಷೆಗಳನ್ನು ಎಷ್ಟು ಮಾತ್ರಕ್ಕೂ ನೆರವೇರಿಸುವುದಿಲ್ಲ.

[17] ಏಕೆಂದರೆ ಶರೀರಾಭಿಲಾಷೆಯೂ ಆತ್ಮನಿಗೆ ವಿರುದ್ಧವಾಗಿದೆ, ಆತ್ಮನ ಅಭಿಲಾಷೆಯು ಶರೀರಭಾವಕ್ಕೆ ವಿರುದ್ಧವಾಗಿದೆ. ನೀವು ಮಾಡಲಿಚ್ಚಿಸುವುದನ್ನು ಮಾಡದಂತೆ ಇವು ಒಂದಕ್ಕೊಂದು ಹೋರಾಡುತ್ತವೆ.

[18] ಆದರೆ ನೀವು ಆತ್ಮನಿಂದ ನಡಿಸಿಕೊಳ್ಳುವವರಾದರೆ ಧರ್ಮಶಾಸ್ತ್ರಕ್ಕೆ ಅಧೀನರಲ್ಲ.

[19] ಶರೀರಭಾವದ ಸ್ವಭಾವಗಳು ಪ್ರತ್ಯಕ್ಷವಾಗಿಯೇ ಇವೆ, ಅದು ಯಾವುವೆಂದರೆ, ಜಾರತ್ವ, ಬಂಡುತನ, ನಾಚಿಕೆಗೇಡಿತನ,

[20] ವಿಗ್ರಹಾರಾಧನೆ, ಮಾಟ, ಹಗೆತನ, ಜಗಳ, ಹೊಟ್ಟೆಕಿಚ್ಚು, ಸಿಟ್ಟು, ಪಕ್ಷಪಾತ, ಭಿನ್ನಮತ,

[21] ಮತ್ಸರ, ಕುಡುಕುತನ, ಗಲಭೆ, ಢಂಭಾಚಾರ ಇಂಥವುಗಳೇ. ಇಂಥ ಕಾರ್ಯಗಳನ್ನು ನಡಿಸುವವರು ದೇವರ ರಾಜ್ಯಕ್ಕೆ ಬಾಧ್ಯಸ್ಥರಾಗುವುದಿಲ್ಲವೆಂದು ನಾನು ಈ ಮೊದಲು ಹೇಳಿದಂತೆಯೇ ಈಗಲೂ ನಿಮ್ಮನ್ನು ಎಚ್ಚರಿಸುತ್ತೇನೆ.

[22] ಆದರೆ ದೇವರಾತ್ಮನಿಂದ ಉಂಟಾಗುವ ಫಲವೇನಂದರೆ, ಪ್ರೀತಿ, ಸಂತೋಷ, ಸಮಾಧಾನ, ದೀರ್ಘಶಾಂತಿ, ದಯೆ, ಪರೋಪಕಾರ, ನಂಬಿಕೆ,

[23] ಸಾಧುತ್ವ, ಶಮೆದಮೆ ಇಂಥವುಗಳೇ. ಇವುಗಳಿಗೆ ವಿರುದ್ಧವಾಗಿ ಯಾವ ಧರ್ಮಶಾಸ್ತ್ರವೂ ಇಲ್ಲ.

[24] ಕ್ರಿಸ್ತ ಯೇಸುವಿನಲ್ಲಿರುವವರು ತಮ್ಮ ಶರೀರಭಾವವನ್ನು ಅದರ ವಿಷಯಾಭಿಲಾಷೆ, ಸ್ವೇಚ್ಛಾಭಿಲಾಷೆಗಳ ಸಹಿತವಾಗಿ ಶಿಲುಬೆಗೆ ಹಾಕಿದವರಾಗಿದ್ದಾರೆ.

[25] ನಾವು ಆತ್ಮನಿಂದ ಜೀವಿಸುತ್ತಿರಲಾಗಿ ಆತ್ಮನನ್ನನುಸರಿಸಿ ನಡೆಯೋಣ.

[26] ಅಹಂಕಾರಿಗಳೂ, ಒಬ್ಬರನ್ನೊಬ್ಬರು ಕೆಣಕುವವರೂ, ಒಬ್ಬರ ಮೇಲೊಬ್ಬರು ಮತ್ಸರವುಳ್ಳವರೂ ಆಗದೆ ಇರೋಣ.

ಗಲಾತ್ಯದವರಿಗೆ — Chapters