Skip to content
Opens in a new window
Listen to this chapter • 5:27

[1] ಹದಿನಾಲ್ಕು ವರ್ಷಗಳ ನಂತರ ನಾನು ಬಾರ್ನಬನ ಜೊತೆಯಲ್ಲಿ ತೀತನನ್ನು ಸಹ ಕರೆದುಕೊಂಡು, ಮತ್ತೊಮ್ಮೆ ಯೆರೂಸಲೇಮಿಗೆ ಹೋದೆನು.

[2] ದೈವಪ್ರೇರಣೆಗೆ ಅನುಸಾರವಾಗಿ ಹೋಗಿ, ಅನ್ಯಜನರಲ್ಲಿ ನಾನು ಸಾರುವ ಸುವಾರ್ತೆಯು ಏನೆಂಬುದನ್ನು ಅಲ್ಲಿದ್ದ ಗಣ್ಯರಿಗೆ ಪ್ರತ್ಯೇಕವಾಗಿ ತಿಳಿಸಿದೆನು. ಏಕೆಂದರೆ ನಾನು ಸುವಾರ್ತೆಗಾಗಿ ಪಟ್ಟ ಶ್ರಮವಾಗಲಿ, ಈಗ ಪಡುತ್ತಿರುವ ಶ್ರಮವಾಗಲಿ ನಿಷ್ಫಲವಾಗಬಾರದೆಂದು ತಿಳಿಸಿದೆನು.

[3] ನನ್ನ ಜೊತೆಯಲ್ಲಿದ್ದ ತೀತನು ಗ್ರೀಕನಾಗಿದ್ದರೂ ಅವನಿಗೆ ಸುನ್ನತಿಯಾಗಬೇಕೆಂದು ಯಾರೂ ಒತ್ತಾಯಮಾಡಲಿಲ್ಲ.

[4] ಆದರೆ ರಹಸ್ಯವಾಗಿ ಒಳಗೆ ಬಂದಿದ್ದ ಸುಳ್ಳು ಸಹೋದರರು ನಮ್ಮನ್ನು ಧರ್ಮಶಾಸ್ತ್ರದ ದಾಸತ್ವದಲ್ಲಿ ಸಿಕ್ಕಿಸಬೇಕೆಂದು, ಕ್ರಿಸ್ತ ಯೇಸುವಿನಲ್ಲಿರುವ ನಮ್ಮ ಸ್ವಾತಂತ್ರ್ಯವನ್ನು ಗೂಢವಾಗಿ ವಿಚಾರಿಸಲು ಬಂದಿದ್ದರು.

[5] ಸುವಾರ್ತೆಯ ಸತ್ಯಾರ್ಥವು ನಿಮ್ಮಲ್ಲಿ ಸ್ಥಿರವಾಗಿರಬೇಕೆಂದು ನಾವು ಅವರ ಅಧೀನಕ್ಕೆ ಒಂದು ಗಳಿಗೆಯೂ ಒಳಪಡಲಿಲ್ಲ.

[6] ಆದರೆ ಗಣ್ಯವ್ಯಕ್ತಿಗಳಾಗಿದ್ದವರಿಂದ ನನಗೇನೂ ದೊರೆಯಲಿಲ್ಲ. ಅವರು ಹಿಂದಿನ ಕಾಲದಲ್ಲಿ ಎಂಥವರಾಗಿದ್ದರೋ ನನಗೆ ಲಕ್ಷ್ಯವಿಲ್ಲ. ದೇವರಿಗೆ ಮನುಷ್ಯರನ್ನು ಮೆಚ್ಚಿಸಬೇಕಾಗಿಲ್ಲ. ಗಣ್ಯವ್ಯಕ್ತಿಗಳೆಂದು ಎನಿಸಿಕೊಂಡವರು ನನಗೇನನ್ನೂ ತಿಳಿಸಿಕೊಡಲಿಲ್ಲ.

[7] ಆದರೆ ಸುನ್ನತಿಯಾದವರಿಗೆ ಸುವಾರ್ತೆಯನ್ನು ಸಾರುವ ಕೆಲಸವು ಹೇಗೆ ಪೇತ್ರನಿಗೆ ಕೊಡಲ್ಪಟ್ಟಿತೋ, ಹಾಗೆಯೇ ಅನ್ಯಜನರಿಗೆ ಅದನ್ನು ಸಾರುವ ಕಾರ್ಯವನ್ನು ನನಗೆ ಕೊಡಲ್ಪಟ್ಟಿತು.

[8] ಸುನ್ನತಿಯಾದವರಲ್ಲಿ ಅಪೊಸ್ತಲತನವನ್ನು ನಡೆಸುವುದಕ್ಕೋಸ್ಕರ ಪೇತ್ರನಿಗೆ ವಹಿಸಿಕೊಟ್ಟಂಥ ದೇವರು, ಸುನ್ನತಿಯಿಲ್ಲದವರಲ್ಲಿ ಅದನ್ನು ನಡೆಸುವುದಕ್ಕಾಗಿ ನನಗೆ ವಹಿಸಿದ್ದನು.

[9] ಸಭೆಯ ಸ್ತಂಭಗಳೆಂದು ಕರೆಸಿಕೊಂಡಿರುವ ಯಾಕೋಬ, ಕೇಫ, ಯೋಹಾನರು ದೇವರು ನನಗೆ ದಯಪಾಲಿಸಿರುವ ವರವನ್ನು ತಿಳಿದುಕೊಂಡು, ಅನ್ಯೋನ್ಯತೆಯನ್ನು ತೋರಿಸುವುದಕ್ಕಾಗಿ ನನಗೂ ಬಾರ್ನಬನಿಗೂ ಸಹಕಾರ ನೀಡಿ ಬಲಗೈ ಕೊಟ್ಟು, ನೀವು ಅನ್ಯಜನಗಳ ಬಳಿಗೆ ಹೋಗಿರಿ, ನಾವು ಸುನ್ನತಿಯವರ ಬಳಿಗೆ ಹೋಗುತ್ತೇವೆ ಅಂದರು.

[10] ಆದರೆ ನೀವು ನಮ್ಮಲ್ಲಿರುವ ಬಡವರನ್ನು ಮರೆಯಬಾರದೆಂಬ ಒಂದೇ ಸಂಗತಿಯನ್ನು ಬೇಡಿಕೊಂಡರು, ಹಾಗೆ ಮಾಡುವುದರಲ್ಲಿ ನಾನೂ ಆಸಕ್ತನಾಗಿದ್ದೆನು.

[11] ಕೇಫನು ಅಂತಿಯೋಕ್ಯಕ್ಕೆ ಬಂದಾಗ ಅವನಲ್ಲಿ ತಪ್ಪು ಕಾಣಿಸಿಕೊಂಡದ್ದರಿಂದ ನಾನು ಅವನನ್ನು ಮುಖಾಮುಖಿಯಾಗಿ ಖಂಡಿಸಿದೆನು.

[12] ಏಕೆಂದರೆ ಯಾಕೋಬನ ಕಡೆಯಿಂದ ಕೆಲವರು ಬರುವುದಕ್ಕೆ ಮೊದಲು ಅವನು ಅನ್ಯಜನರೊಂದಿಗೆ ಊಟ ಮಾಡುತ್ತಿದ್ದನು. ಅವರು ಬಂದ ಮೇಲೆ ಸುನ್ನತಿಯವರಾದ ಅವರಿಗೆ ಅವನು ಭಯಪಟ್ಟು, ಅನ್ಯಜನರನ್ನು ಬಿಟ್ಟು ತನ್ನನ್ನು ಪ್ರತ್ಯೇಕಿಸಿಕೊಂಡನು.

[13] ಇದಲ್ಲದೆ ಉಳಿದ ಯೆಹೂದ್ಯರೂ ಅವನೊಂದಿಗೆ ಸೇರಿ ಹಾಗೆಯೇ ಕಪಟತನದಿಂದ ವರ್ತಿಸಿದರು. ಹೀಗೆ ಬಾರ್ನಬನೂ ಅವರ ಕಪಟದ ಸೆಳವಿಗೆ ಬಿದ್ದನು.

[14] ಅವರು ಸುವಾರ್ತೆಯ ಸತ್ಯಾರ್ಥದ ಪ್ರಕಾರ ಸರಿಯಾಗಿ ನಡೆಯುತ್ತಿಲ್ಲವೆಂಬುದನ್ನು ನಾನು ಕಂಡಾಗ ಎಲ್ಲರ ಮುಂದೆ ಕೇಫನಿಗೆ ಹೇಳಿದ್ದೇನಂದರೆ, “ನೀನು ಯೆಹೂದ್ಯನಾಗಿದ್ದು ಯೆಹೂದ್ಯರಂತೆ ನಡೆಯದೆ ಅನ್ಯಜನರಂತೆ ಬದುಕಿ, ಅನ್ಯಜನರಿಗೆ, ನೀವು ಯೆಹೂದ್ಯರಂತೆ ನಡೆದುಕೊಳ್ಳಬೇಕೆಂದು ಒತ್ತಾಯಪಡಿಸಿ ಹೇಳುವುದಾದರೂ ಹೇಗೆ?”

[15] ನಾವಂತೂ ಜನ್ಮತ ಯೆಹೂದ್ಯರು “ಪಾಪಿಗಳೆನಿಸಿಕೊಂಡ ಅನ್ಯಜನರಲ್ಲ.”

[16] ಯಾವನಾದರೂ ಯೇಸು ಕ್ರಿಸ್ತನ ಮೇಲೆ ನಂಬಿಕೆ ಇಡುವುದರಿಂದಲೇ ಹೊರತು ಧರ್ಮಶಾಸ್ತ್ರದ ನೇಮನಿಷ್ಠೆಗಳನ್ನು ಅನುಸರಿಸುವುದರಿಂದ ನೀತಿವಂತನೆಂದು ನಿರ್ಣಯಿಸಲ್ಪಡುವುದಿಲ್ಲವೆಂಬುದು ನಮಗೆ ತಿಳಿದಿರುವುದರಿಂದ ನಾವು ಸಹ ಧರ್ಮಶಾಸ್ತ್ರದ ನೇಮನಿಷ್ಠೆಗಳನ್ನು ಬಿಟ್ಟು ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯಿಟ್ಟೆವು. ಏಕೆಂದರೆ ಯಾರೂ ಧರ್ಮಶಾಸ್ತ್ರದ ನೇಮನಿಷ್ಠೆಗಳನ್ನನುಸರಿಸಿ ನೀತಿವಂತನೆಂದು ನಿರ್ಣಯಿಸಲ್ಪಡುವುದಿಲ್ಲ.

[17] ಆದರೆ ನಾವು ಕ್ರಿಸ್ತನ ಮೂಲಕ ನೀತಿವಂತರೆಂಬ ನಿರ್ಣಯ ಹೊಂದುವುದಕ್ಕೆ ಪ್ರಯತ್ನಿಸುತ್ತಿರುವಾಗ, ನಾವೂ ಪಾಪಿಗಳಾಗಿ ತೋರಿಬಂದರೆ ಕ್ರಿಸ್ತನು ಪಾಪಕ್ಕೆ ಸಹಾಯಕನಾಗಿರುವನೋ? ಎಂದಿಗೂ ಇಲ್ಲ.

[18] ನಾನು ಕೆಡವಿದ್ದನ್ನೇ ತಿರುಗಿ ಕಟ್ಟಿದರೆ ನನ್ನನ್ನು ನಾನೇ ಅಪರಾಧಿ ಎಂದು ತೋರಿಸಿಕೊಳ್ಳುತ್ತೇನಲ್ಲಾ.

[19] ನಾನಂತೂ ದೇವರಿಗಾಗಿ ಜೀವಿಸುವುದಕ್ಕೋಸ್ಕರ ಧರ್ಮಶಾಸ್ತ್ರದ ಮೂಲಕವಾಗಿ ಧರ್ಮಶಾಸ್ತ್ರದ ಪಾಲಿಗೆ ಸತ್ತವನಾಗಿದ್ದೇನೆ.

[20] ನಾನು ಸಹ ಕ್ರಿಸ್ತನೊಂದಿಗೆ ಶಿಲುಬೆಗೆ ಹಾಕಿಸಿಕೊಂಡವನಾಗಿದ್ದೇನೆ, ಇನ್ನು ಜೀವಿಸುವವನು ನಾನಲ್ಲ, ಕ್ರಿಸ್ತನು ನನ್ನಲ್ಲಿ ಜೀವಿಸುತ್ತಾನೆ. ಈಗ ಶರೀರದಲ್ಲಿರುವ ನಾನು ಜೀವಿಸುವುದು ಹೇಗೆಂದರೆ ದೇವಕುಮಾರನ ಮೇಲಣ ನಂಬಿಕೆಯಿಂದಲೇ. ಆತನು ನನ್ನನ್ನು ಪ್ರೀತಿಸಿ ನನಗಾಗಿ ತನ್ನನ್ನು ಒಪ್ಪಿಸಿಕೊಟ್ಟನು.

[21] ನಾನು ದೇವರ ಕೃಪೆಯನ್ನು ತಿರಸ್ಕರಿಸುವುದಿಲ್ಲ. ಧರ್ಮಶಾಸ್ತ್ರದ ಮೂಲಕ ನೀತಿವಂತರಾಗಬಹುದಾದರೆ ಕ್ರಿಸ್ತನು ಮರಣಕ್ಕೀಡಾದುದು ನಿರರ್ಥಕವೇ ಸರಿ.

ಗಲಾತ್ಯದವರಿಗೆ — Chapters