Skip to content
Opens in a new window
Listen to this chapter • 5:12

[1] ಆದರೆ ನಾನು ಹೇಳುವುದೇನಂದರೆ, ವಾರಸುದಾರನು, ತಾನು ಆಸ್ತಿಗೆಲ್ಲಾ ಒಡೆಯನಾಗಿದ್ದರೂ ಬಾಲಕನಾಗಿರುವ ತನಕ ದಾಸನಂತೆಯೇ ಇರುವನು.

[2] ತಂದೆಯು ಗೊತ್ತುಮಾಡಿದ ಸಮಯದವರೆಗೂ ಪಾಲಕರ ಮತ್ತು ಕಾರ್ಯನಿರ್ವಾಹಕರ ಅಧೀನದಲ್ಲಿರುವನು.

[3] ಹಾಗೆಯೇ ನಾವು ಸಹ ಬಾಲಕರಾಗಿದ್ದಾಗ ಲೋಕದ ಮೂಲತತ್ವಗಳಿಗೆ ಅಧೀನರಾಗಿದ್ದೆವು.

[4] ಆದರೆ ಸೂಕ್ತಸಮಯ ಬಂದಾಗ ದೇವರು ತನ್ನ ಮಗನನ್ನು ಕಳುಹಿಸಿಕೊಟ್ಟನು. ಧರ್ಮಶಾಸ್ತ್ರಕ್ಕೆ ಅಧೀನರಾದವರನ್ನು ಬಿಡಿಸಬೇಕೆಂತಲೂ, ಪುತ್ರರ ಬಾಧ್ಯತೆಯ ಪದವಿಯನ್ನು ನಮಗೆ ದೊರಕಿಸಿಕೊಡಬೇಕೆಂತಲೂ ಆತನು ಸ್ತ್ರೀಯಲ್ಲಿ ಹುಟ್ಟಿದವನಾಗಿಯೂ, ಧರ್ಮಶಾಸ್ತ್ರಾಧೀನನಾಗಿಯೂ ಬಂದನು.

[6] ನೀವು ಪುತ್ರರಾಗಿರುವುದರಿಂದ ದೇವರು, “ಅಪ್ಪಾ ತಂದೆಯೇ” ಎಂದು ಕೂಗುವ ತನ್ನ ಮಗನ ಆತ್ಮನನ್ನು ನಮ್ಮ ಹೃದಯಗಳಲ್ಲಿ ಕಳುಹಿಸಿಕೊಟ್ಟನು.

[7] ಹೀಗಿರುವಲ್ಲಿ ಇನ್ನು ನೀನು ಸೇವಕನಲ್ಲ, ಮಗನಾಗಿದ್ದೀ. ಮಗನೆಂದ ಮೇಲೆ ದೇವರ ಮೂಲಕ ವಾರಸುದಾರನು ಆಗಿದ್ದೀ.

[8] ಹಿಂದೆ ನೀವು ದೇವರನ್ನು ಅರಿಯದೆ, ಸ್ವಾಭಾವಿಕವಾಗಿ ದೇವರಲ್ಲದವರುಗಳಿಗೆ ದಾಸರಾಗಿದ್ದೀರಿ.

[9] ಈಗಲಾದರೋ ನೀವು ದೇವರನ್ನು ತಿಳಿದುಕೊಂಡಿದ್ದೀರಿ, ಅಥವಾ ದೇವರು ನಿಮ್ಮನ್ನು ತಿಳಿದುಕೊಂಡಿದ್ದಾನೆ. ಹೀಗಿರಲಾಗಿ ನೀವು ಬಲವಿಲ್ಲದ, ಕೆಲಸಕ್ಕೆ ಬಾರದ, ದರಿದ್ರವಾದ ಮೂಲತತ್ವಗಳಿಗೆ ಹಿಂತಿರುಗಿ ಅದಕ್ಕೆ ದಾಸರಾಗುವುದಕ್ಕೆ ಏಕೆ ಬಯಸುತ್ತೀರಿ?

[10] ನೀವು ಆಯಾ ದಿನಗಳನ್ನೂ, ತಿಂಗಳುಗಳನ್ನೂ, ಕಾಲಗಳನ್ನೂ, ಸಂವತ್ಸರಗಳನ್ನೂ ನಿಷ್ಠೆಯಿಂದ ಆಚರಿಸಿದ್ದೀರಿ.

[11] ನಾನು ನಿಮಗೋಸ್ಕರ ಪ್ರಯಾಸಪಟ್ಟದ್ದು ನಿಷ್ಫಲವಾಯಿತೋ ಏನೋ ಎಂದು ನಿಮ್ಮ ಕುರಿತು ಭಯಪಡುತ್ತೇನೆ.

[12] ಸಹೋದರರೇ, ನಾನು ನಿಮ್ಮಂತೆ ಆದಹಾಗೆ ನೀವು ನನ್ನಂತೆ ಹಾಗೆ ಆಗಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ನೀವು ನನಗೇನೂ ಅನ್ಯಾಯ ಮಾಡಲಿಲ್ಲ.

[13] ನಾನು ದೈಹಿಕವಾಗಿ ಅಸ್ವಸ್ಥನಾಗಿದ್ದುದರಿಂದ ನಿಮ್ಮಲ್ಲಿದ್ದು ಮೊದಲನೆಯ ಬಾರಿಗೆ ನಿಮಗೆ ಸುವಾರ್ತೆ ಸಾರಿದ್ದನ್ನು ನೀವು ಬಲ್ಲಿರಿ.

[14] ನನ್ನ ದೇಹಸ್ಥಿತಿಯಿಂದ ನಿಮಗೆ ಸಮಸ್ಯೆಗಳು ಬಂದಾಗ್ಯೂ ಕೂಡ, ನೀವು ನನ್ನನ್ನು ಹೀನೈಸಲಿಲ್ಲ, ತಿರಸ್ಕರಿಸಲಿಲ್ಲ. ನನ್ನನ್ನು ದೇವದೂತನಂತೆ, ಕ್ರಿಸ್ತ ಯೇಸುವಿನಂತೆ ಸೇರಿಸಿಕೊಂಡಿದ್ದೀರಿ.

[15] ಆಗ ನಮಗೆ ಶುಭವಾಯಿತೆಂದು ನೀವು ಅಂದುಕೊಂಡಿರಲ್ಲಾ, ಆ ನಿಮ್ಮ ಶುಭವು ಎಲ್ಲಿ ಹೋಯಿತು? ಸಾಧ್ಯವಾಗಿದ್ದರೆ ನಿಮ್ಮ ಕಣ್ಣುಗಳನ್ನಾದರೂ ಕಿತ್ತು ನನಗೆ ಕೊಡುತ್ತಿದ್ದಿರೆಂದು ನಿಮ್ಮನ್ನು ಕುರಿತು ಸಾಕ್ಷಿ ಹೇಳುತ್ತೇನೆ.

[16] ಹೀಗಿರಲಾಗಿ ನಾನು ನಿಮಗೆ ಸತ್ಯವನ್ನು ಹೇಳುವುದರಿಂದ ನಿಮಗೆ ಶತ್ರುವಾಗಿದ್ದೇನೋ?

[17] ಅವರು ನಿಮ್ಮನ್ನು ಮೆಚ್ಚಿಸುವುದಕ್ಕೆ ಆಸಕ್ತಿಯನ್ನು ತೋರಿಸುತ್ತಿರುವುದು ಒಳಿತಾಗಿ ಅಲ್ಲ, ನೀವು ಅವರಿಗೆ ಆಸಕ್ತಿಯನ್ನು ತೋರಿಸಬೇಕೆಂದು ಅವರು ನಿಮ್ಮನ್ನು ನನ್ನಿಂದ ಆಗಲಿಸುವುದಕ್ಕೆ ಬಯಸುತ್ತಿದ್ದಾರೆ.

[18] ನಾನು ನಿಮ್ಮ ಸಂಗಡ ಇರುವಾಗ ಮಾತ್ರವಲ್ಲದೆ ಯಾವಾಗಲೂ ಒಳ್ಳೆಯ ವಿಷಯಕ್ಕಾಗಿ ನೀವು ಆಸಕ್ತಿಯನ್ನು ತೋರಿಸುವುದು ಒಳ್ಳೆಯದೇ.

[19] ನನ್ನ ಪ್ರಿಯರಾದ ಮಕ್ಕಳೇ, ಕ್ರಿಸ್ತನ ಸಾರೂಪ್ಯವು ನಿಮ್ಮಲ್ಲಿ ಉಂಟಾಗುವ ತನಕ ನಾನು ನಿಮಗಾಗಿ ಪ್ರಸವವೇದನೆ ಪಡುತ್ತಿರುವೆನು.

[20] ನಿಮ್ಮ ವಿಷಯದಲ್ಲಿ ಏನು ಮಾಡಬೇಕೋ ನನಗೆ ತೋಚುತ್ತಿಲ್ಲ. ಬಹುಶಃ ನೇರವಾಗಿ ನಿಮ್ಮ ಬಳಿಗೆ ಬಂದು, ನಿಮ್ಮ ಮಧ್ಯದಲ್ಲೇ ಇದ್ದು ನನ್ನ ಮಾತಿನ ರೀತಿಯನ್ನು ಬದಲಾಯಿಸಿದ್ದರೆ ಚೆನ್ನಾಗಿರುತ್ತಿತ್ತೇನೋ!

[21] ಧರ್ಮಶಾಸ್ತ್ರಕ್ಕೆ ಅಧೀನರಾಗಿರುವುದಕ್ಕೆ ಬಯಸುವವರೇ, ಧರ್ಮಶಾಸ್ತ್ರವು ಏನು ಹೇಳುತ್ತದೆಂದು ನಿಮಗೆ ತಿಳಿದಿಲ್ಲವೋ? ನನಗೆ ತಿಳಿಯಪಡಿಸಿರಿ.

[22] ಅದರಲ್ಲಿ ಬರೆದಿರುವುದೇನಂದರೆ, ಅಬ್ರಹಾಮನಿಗೆ ಇಬ್ಬರು ಮಕ್ಕಳಿದ್ದರು. ಒಬ್ಬನು ದಾಸಿಯಲ್ಲಿ ಹುಟ್ಟಿದವನು, ಮತ್ತೊಬ್ಬನು ಸ್ವತಂತ್ರಳಾದವಳಲ್ಲಿ ಹುಟ್ಟಿದವನು.

[23] ದಾಸಿಯ ಮಗನು ಶರೀರಕ್ಕನುಸಾರವಾಗಿ ಹುಟ್ಟಿದವನು, ಸ್ವತಂತ್ರಳಾದವಳ ಮಗನಾದರೋ ವಾಗ್ದಾನದ ಮೂಲಕ ಹುಟ್ಟಿದವನು.

[24] ಈ ಸಂಗತಿಗಳು ಹೋಲಿಕೆಗಳಾಗಿವೆ. ಹೇಗೆಂದರೆ ಆ ಇಬ್ಬರು ಸ್ತ್ರೀಯರು ಎರಡು ಒಡಂಬಡಿಕೆಗಳೇ, ಒಂದು ಒಡಂಬಡಿಕೆಯು ಸೀನಾಯಿ ಪರ್ವತದಿಂದ ಉಂಟಾಗಿ ದಾಸತ್ವದಲ್ಲಿರಬೇಕಾದ ಮಕ್ಕಳನ್ನು ಹೆರುವಂಥದು, ಅದೇ ಹಾಗರಳು.

[25] ಹಾಗರಳು ಅಂದರೆ ಅರಬಸ್ಥಾನದಲ್ಲಿರುವ ಸೀನಾಯಿ ಪರ್ವತವನ್ನು ಸೂಚಿಸುವಂತಹದ್ದು ಈಗಿನ ಯೆರೂಸಲೇಮಿಗೆ ಎಂಬುವಳಿಗೆ ಹೋಲಿಕೆಯಾಗಿದ್ದಾಳೆ, ಏಕೆಂದರೆ ಆಕೆಯು ತನ್ನ ಮಕ್ಕಳೊಂದಿಗೆ ಈಗ ದಾಸತ್ವದಲ್ಲಿದ್ದಾಳೆ.

[26] ಆದರೆ ಮೇಲಣ ಯೆರೂಸಲೇಮ್ ಎಂಬವಳು ಸ್ವತಂತ್ರಳು, ಇವಳೇ ನಮಗೆ ತಾಯಿ.

[27] “ಹೆರದ ಬಂಜೆಯೇ, ಆನಂದಿಸು. ಪ್ರಸವವೇದನೆಯಿಲ್ಲದವಳೇ, ಹರ್ಷೋದ್ಗಾರಮಾಡು, ಗಂಡನುಳ್ಳವಳಿಗಿಂತ ಗಂಡಬಿಟ್ಟವಳಿಗೆ ಮಕ್ಕಳು ಹೆಚ್ಚು” ಎಂದು ಬರೆದಿದೆಯಲ್ಲಾ.

[28] ಸಹೋದರರೇ, ನಾವು ಇಸಾಕನಂತೆ ವಾಗ್ದಾನದ ಫಲವಾಗಿ ಹುಟ್ಟಿದ ಮಕ್ಕಳಾಗಿದ್ದೇವೆ.

[29] ಆದರೆ ಪೂರ್ವದಲ್ಲಿ ಶಾರೀರಿಕವಾಗಿ ಹುಟ್ಟಿದವನು, ದೇವರಾತ್ಮಬಲದಿಂದ ಹುಟ್ಟಿದವನನ್ನು ಹಿಂಸೆಪಡಿಸಿದಂತೆಯೇ ಈಗಲೂ ಆಗುತ್ತಿದೆ.

[30] ಆದರೆ ದೇವರ ವಾಕ್ಯವು ಏನು ಹೇಳುತ್ತದೆ? “ದಾಸಿಯನ್ನೂ ಅವಳ ಮಗನನ್ನೂ ಹೊರಗೆ ಹಾಕು. ದಾಸಿಯ ಮಗನು ಸ್ವತಂತ್ರಳ ಮಗನೊಂದಿಗೆ ಎಷ್ಟು ಮಾತ್ರಕ್ಕೂ ಬಾಧ್ಯಸ್ಥನಾಗಬಾರದು” ಎಂದು ಹೇಳುತ್ತದೆ.

[31] ಸಹೋದರರೇ, ನಾವು ದಾಸಿಯ ಮಕ್ಕಳಲ್ಲ, ಸ್ವತಂತ್ರಳಾದವಳ ಮಕ್ಕಳೇ ಎಂದು ತಿಳಿದುಕೊಳ್ಳಿರಿ.

ಗಲಾತ್ಯದವರಿಗೆ — Chapters