Skip to content
Opens in a new window
Listen to this chapter • 4:15

[1] ಮನುಷ್ಯರಿಂದಾಗಲಿ ಮನುಷ್ಯರ ಮುಖಾಂತರದಿಂದಾಗಲಿ ಅಪೊಸ್ತಲನಾಗಿರದೆ ಯೇಸು ಕ್ರಿಸ್ತನ ಮುಖಾಂತರವೂ ಮತ್ತು ಆತನನ್ನು ಸತ್ತವರೊಳಗಿಂದ ಎಬ್ಬಿಸಿದ ತಂದೆಯಾದ ದೇವರಿಂದಲೂ ಅಪೊಸ್ತಲೋದ್ಯೋಗವನ್ನು ಹೊಂದಿದ ಪೌಲನೆಂಬ ನಾನು ಹಾಗೂ

[2] ನನ್ನ ಜೊತೆಯಲ್ಲಿರುವ ಎಲ್ಲಾ ಸಹೋದರರೂ ಗಲಾತ್ಯದಲ್ಲಿರುವ ಸಭೆಗಳಿಗೆ ಬರೆಯುವುದೇನೆಂದರೆ,

[3] ತಂದೆಯಾದ ದೇವರಿಂದಲೂ ನಮ್ಮ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಆಗಲಿ.

[4] ಆತನು ನಮ್ಮನ್ನು ಈಗಿನ ದುಷ್ಟ ಯುಗದಿಂದ ಬಿಡಿಸಬೇಕೆಂದು ನಮ್ಮ ತಂದೆಯಾದ ದೇವರ ಚಿತ್ತಕ್ಕನುಸಾರವಾಗಿ, ನಮ್ಮ ಪಾಪಗಳ ದೆಸೆಯಿಂದ ತನ್ನನ್ನು ಮರಣಕ್ಕೆ ಒಪ್ಪಿಸಿಕೊಟ್ಟನು.

[5] ದೇವರಿಗೆ ಯುಗಯುಗಾಂತರಗಳಲ್ಲಿಯೂ ಮಹಿಮೆಯಾಗಲಿ. ಆಮೆನ್.

[6] ಕ್ರಿಸ್ತನ ಕೃಪೆಯಿಂದ ನಿಮ್ಮನ್ನು ಕರೆದಾತನನ್ನು ಬಿಟ್ಟು, ಇಷ್ಟು ಬೇಗನೆ ಬೇರೆ ಸುವಾರ್ತೆಯ ಕಡೆಗೆ ನೀವು ತಿರುಗಿದಿರೆಂದು ನಾನು ಆಶ್ಚರ್ಯಪಡುತ್ತೇನೆ.

[7] ವಾಸ್ತವವಾಗಿ ಬೇರೊಂದು ಸುವಾರ್ತೆ ಇಲ್ಲ, ಆದರೆ ಕೆಲವರು ನಿಮ್ಮಲ್ಲಿ ಬೇಧವನ್ನು ಹುಟ್ಟಿಸುತ್ತಾ ಕ್ರಿಸ್ತನ ಸುವಾರ್ತೆಯನ್ನು ಮಾರ್ಪಡಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ.

[8] ಆದರೂ ನಾವು ನಿಮಗೆ ಸಾರಿದ ಸುವಾರ್ತೆಗೆ ವಿರುದ್ಧವಾದದ್ದನ್ನು, ನಾವೇ ಆಗಲಿ ಅಥವಾ ಪರಲೋಕದಿಂದ ಬಂದ ದೇವದೂತನೇ ಆಗಲಿ, ನಿಮಗೆ ಸಾರಿದರೆ ಅವನು ಶಾಪಗ್ರಸ್ತನಾಗಲಿ.

[9] ನಾವು ಮೊದಲು ಹೇಳಿದಂತೆಯೇ ಈಗಲೂ ನಾನು ತಿರುಗಿ ಹೇಳುತ್ತೇನೆ. ನೀವು ಸ್ವೀಕರಿಸಿದ ಸುವಾರ್ತೆಗೆ ವಿರುದ್ಧವಾದದ್ದನ್ನು ಯಾವನಾದರೂ ನಿಮಗೆ ಸಾರಿದರೆ ಅವನು ಶಾಪಗ್ರಸ್ತನಾಗುವನು.

[10] ನಾನೀಗ ಯಾರನ್ನು ಒಲಿಸಿಕೊಳ್ಳುತ್ತಾ ಇದ್ದೇನೆ? ಮನುಷ್ಯರನ್ನೋ? ದೇವರನ್ನೋ? ನಾನು ಮನುಷ್ಯರನ್ನು ಮೆಚ್ಚಿಸುವುದಕ್ಕೆ ಪ್ರಯತ್ನಿಸುತ್ತಾ ಇದ್ದೇನೋ? ಇನ್ನೂ ಮನುಷ್ಯರನ್ನು ಮೆಚ್ಚಿಸುವವನಾಗಿದ್ದರೆ ನಾನು ಕ್ರಿಸ್ತನ ಸೇವಕನಲ್ಲ.

[11] ಸಹೋದರರೇ, ನಾನು ಸಾರಿದ ಸುವಾರ್ತೆಯಂತೂ ಕೇವಲ ಮನುಷ್ಯನಿಂದ ಬಂದದ್ದಲ್ಲವೆಂದು ನೀವು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ.

[12] ನಾನು ಅದನ್ನು ಮನುಷ್ಯನಿಂದ ಹೊಂದಲಿಲ್ಲ, ನನಗೆ ಯಾರೂ ಉಪದೇಶಿಸಲಿಲ್ಲ, ಬದಲಾಗಿ ಯೇಸು ಕ್ರಿಸ್ತನೇ ಅದನ್ನು ನನಗೆ ಪ್ರಕಟಪಡಿಸಿದನು.

[13] ಹಿಂದೆ ನಾನು ಯೆಹೂದ್ಯ ಮತದಲ್ಲಿದ್ದಾಗ ನನ್ನ ನಡತೆ ಎಂಥದ್ದೆಂದು ನೀವು ಕೇಳಿದ್ದೀರಿ. ನಾನು ದೇವರ ಸಭೆಯನ್ನು ಬಹಳವಾಗಿ ಹಿಂಸೆಪಡಿಸಿ ಹಾಳುಮಾಡುತ್ತಿದ್ದೆನು.

[14] ಇದಲ್ಲದೆ ನಾನು ನನ್ನ ಪೂರ್ವಿಕರಿಂದ ಬಂದ ಸಂಪ್ರದಾಯಗಳ ಬಗ್ಗೆ ಬಹು ಅಭಿಮಾನವುಳ್ಳವನಾಗಿ, ನನ್ನ ಜನರೊಳಗೆ ಸಮಪ್ರಾಯದವರಾದ ಅನೇಕರಿಗಿಂತ ಯೆಹೂದ್ಯ ಮತಾಚಾರದಲ್ಲಿ ಆಸಕ್ತನಾಗಿದ್ದೆನು.

[15] ಆದರೆ ನಾನು ನನ್ನ ತಾಯಿಯ ಗರ್ಭದಲ್ಲಿದ್ದಾಗಲೇ ನನ್ನನ್ನು ಪ್ರತ್ಯೇಕಿಸಿ, ತನ್ನ ಕೃಪೆಯಿಂದ ಕರೆದ ದೇವರು,

[16] ತನ್ನ ಮಗನನ್ನು ನನ್ನೊಳಗೆ ಪ್ರಕಟಪಡಿಸುವುದಕ್ಕೆ ಮತ್ತು ಅನ್ಯಜನರಲ್ಲಿ ಆತನನ್ನು ನಾನು ಪ್ರಸಿದ್ಧಿಪಡಿಸುವವನಾಗಬೇಕೆಂದು ಇಚ್ಛಿಸಿದನು. ನಾನು ಕೂಡಲೇ ಮನುಷ್ಯರ ಆಲೋಚನೆಯನ್ನು ಕೇಳದೆ,

[17] ಯೆರೂಸಲೇಮಿಗೆ ನನಗಿಂತ ಮೊದಲು ಅಪೊಸ್ತಲರಾಗಿದ್ದವರ ಬಳಿಗೂ ಹೋಗದೆ ಅರಬಸ್ಥಾನಕ್ಕೆ ಹೋಗಿ ತಿರುಗಿ ದಮಸ್ಕಕ್ಕೆ ಬಂದೆನು.

[18] ಮೂರು ವರ್ಷಗಳ ತರುವಾಯ ಕೇಫನ ಪರಿಚಯವನ್ನು ಮಾಡಿಕೊಳ್ಳಬೇಕೆಂದು ಯೆರೂಸಲೇಮಿಗೆ ಹೋಗಿ ಅವನ ಬಳಿಯಲ್ಲಿ ಹದಿನೈದು ದಿನಗಳು ಇದ್ದೆನು.

[19] ಆದರೆ ಕರ್ತನ ಸಹೋದರನಾದ ಯಾಕೋಬನಲ್ಲದೆ ಅಪೊಸ್ತಲರಲ್ಲಿ ಬೇರೆ ಯಾರನ್ನೂ ನಾನು ಕಾಣಲಿಲ್ಲ.

[20] ನಾನು ನಿಮಗೆ ಬರೆಯುವ ಸಂಗತಿಗಳು ಸುಳ್ಳಲ್ಲವೆಂಬುದಕ್ಕೆ ಇಗೋ, ದೇವರೇ ಸಾಕ್ಷೀ.

[21] ಆ ಮೇಲೆ ಸಿರಿಯ ಮತ್ತು ಕಿಲಿಕ್ಯ ಪ್ರಾಂತ್ಯಗಳಿಗೆ ಹೋದೆನು.

[22] ಆದರೆ ಕ್ರಿಸ್ತನಲ್ಲಿರುವ ಯೂದಾಯದ ಸಭೆಗಳಿಗೆ ನನ್ನ ಪರಿಚಯವಿರಲಿಲ್ಲ.

[23] “ಪೂರ್ವದಲ್ಲಿ ನಮ್ಮನ್ನು ಹಿಂಸೆಪಡಿಸಿದವನು, ತಾನು ಹಾಳು ಮಾಡುತ್ತಿದ್ದ ನಂಬಿಕೆಯನ್ನು ಈಗ ಸಾರುತ್ತಿದ್ದಾನೆ” ಎಂಬ ಸುದ್ದಿಯನ್ನು ಅವರು ಕೇಳಿ,

[24] ನನ್ನ ಕುರಿತಾಗಿ ದೇವರನ್ನು ಕೊಂಡಾಡಿದರು.

ಗಲಾತ್ಯದವರಿಗೆ — Chapters