Skip to content
Opens in a new window
Listen to this chapter • 3:10

[1] ಕರ್ತನಾದ ಯೆಹೋವನು ಇದನ್ನು ನನಗೆ ತೋರಿಸಿದನು. ಇಗೋ, ಮಾಗಿದ ಹಣ್ಣಿನ ಪುಟ್ಟಿಯನ್ನು ಕಂಡೆನು!

[2] ಆತನು ನನಗೆ, “ಆಮೋಸನೇ, ನಿನ್ನ ಕಣ್ಣಿಗೆ ಕಾಣಿಸುವುದೇನು?” ಎಂದು ಕೇಳಲು, ನಾನು ಅದಕ್ಕೆ, “ಮಾಗಿದ ಹಣ್ಣಿನ ಪುಟ್ಟಿ” ಎಂದೆನು. ಆಗ ಯೆಹೋವನು ನನಗೆ ಹೀಗೆ ಹೇಳಿದನು, “ಇಸ್ರಾಯೇಲೆಂಬ ನನ್ನ ಜನರಿಗೆ ಕಡೆಗಾಲವು ಮಾಗುತ್ತಾ ಬಂದಿದೆ. ಇನ್ನು ಮೇಲೆ ನಾನು ಅವರನ್ನು ಉಳಿಸುವುದಿಲ್ಲ.

[3] ಆ ದಿನದಲ್ಲಿ ದೇವಾಲಯದ ಹಾಡುಗಳು ಕಿರಿಚಾಟವಾಗುವವು” ಕರ್ತನಾದ ಯೆಹೋವನು ಹೀಗೆ ನುಡಿಯುತ್ತಾನೆ, “ಆಗ ಹೆಣಗಳು ಹೆಚ್ಚುವವು, ಅವುಗಳನ್ನು ಎಲ್ಲಾ ಸ್ಥಳಗಳಲ್ಲಿ ಸದ್ದುಗದ್ದಲವಿಲ್ಲದೆ ಬಿಸಾಡಿಬಿಡುವರು!”

[4] “ಎಷ್ಟು ಹೊತ್ತಿಗೆ ಅಮಾವಾಸ್ಯೆಯು ತೀರುವುದು? ಧಾನ್ಯವನ್ನು ಮಾರಬೇಕಲ್ಲಾ; ಸಬ್ಬತ್ತು ಇನ್ನೆಷ್ಟು ಹೊತ್ತು ಇರುವುದು? ಗೋದಿಯನ್ನು ಅಂಗಡಿಯಲ್ಲಿ ಇಡಬೇಕಲ್ಲಾ; ಕೊಳಗವನ್ನು ಕಿರಿದುಮಾಡೋಣ; ಬಡವರನ್ನು ನುಂಗುವವರೇ, ತೊಲವನ್ನು ಹೆಚ್ಚಿಸೋಣ; ಸುಳ್ಳು ತಕ್ಕಡಿಯಿಂದ ಮೋಸಮಾಡೋಣ; ದೇಶದ ಬಡವರನ್ನು ಮುಗಿಸಬೇಕೆಂದಿರುವವರೇ ಇದನ್ನು ಕೇಳಿರಿ.

[5] ಬಡವರನ್ನು ಬೆಳ್ಳಿಗೂ, ದಿಕ್ಕಿಲ್ಲದವರನ್ನು ಒಂದು ಜೊತೆ ಕೆರಗಳ ಜೋಡಿಗೂ ಕೊಂಡುಕೊಳ್ಳೋಣ; ಗೋದಿಯ ನುಚ್ಚುನ್ನು ಮಾರಿಬಿಡೋಣ” ಎಂದು ಹೇಳುತ್ತೀರಿ ಅಲ್ಲವೇ?

[6] ದಿಕ್ಕಿಲ್ಲದವರನ್ನು ತುಳಿದು ಬಿಡುವವರೇ, ದೇಶದ ಬಡವರನ್ನು ಮುಗಿಸಬೇಕೆಂದಿರುವವರೇ, ಇದನ್ನು ಕೇಳಿರಿ!

[7] ಯೆಹೋವನು ಯಾಕೋಬಿನ ಮಹಿಮೆಯ ಮೇಲೆ ಹೀಗೆ ಆಣೆಯಿಟ್ಟಿದ್ದಾನೆ, “ಖಂಡಿತವಾಗಿ ಅವರ ಕೃತ್ಯಗಳಲ್ಲಿ ಯಾವುದನ್ನೂ ಎಂದಿಗೂ ಮರೆತುಬಿಡುವುದಿಲ್ಲ”

[8] ಆ ಕೃತ್ಯಗಳಿಗೆ ದೇಶವು ನಡುಗಬೇಕಾಗುವುದಲ್ಲವೇ, ಅದರ ನಿವಾಸಿಗಳೆಲ್ಲರೂ ದುಃಖಿಸುವರಲ್ಲವೇ? ದೇಶವೆಲ್ಲಾ ನೈಲ್ ನದಿಯಂತೆ ಉಬ್ಬಿ ಅಲ್ಲಕಲ್ಲೋಲವಾಗುವುದು, ಐಗುಪ್ತದ ನದಿಯ ಹಾಗೆಯೇ, ಇಳಿದು ಹೋಗುವುದು.

[9] ಆ ದಿನದಲ್ಲಿ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಆ ದಿನದಲ್ಲಿ ಸೂರ್ಯನನ್ನು ಮಧ್ಯಾಹ್ನಕ್ಕೆ ಮುಣುಗಿಸುವೆನು, ಭೂಮಿಯನ್ನು ಹಗಲಿನಲ್ಲೇ ಕತ್ತಲು ಮಾಡುವೆನು.

[10] ನಿಮ್ಮ ಉತ್ಸವಗಳನ್ನು ದುಃಖಕ್ಕೆ ಮಾರ್ಪಡಿಸುವೆನು ಮತ್ತು ನಿಮ್ಮ ಹರ್ಷಗೀತೆಗಳನ್ನೆಲ್ಲಾ ಶೋಕಗೀತೆಗೆ ತಿರುಗಿಸುವೆನು. ಎಲ್ಲರೂ ಸೊಂಟಕ್ಕೆ ಗೋಣಿತಟ್ಟನ್ನು ಸುತ್ತಿಕೊಂಡು, ತಲೆಬೋಳಿಸಿಕೊಳ್ಳುವಂತೆ ಮಾಡುವೆನು. ನಿಮ್ಮ ಪ್ರಲಾಪವು ಏಕಪುತ್ರಶೋಕಕ್ಕೆ ಸಮಾನವಾಗುವುದು, ಅದು ಆದ ಮೇಲೆಯೂ ಶೋಕವು ಇದ್ದೇ ಇರುವುದು.

[11] ಇಗೋ, ಆ ದಿನಗಳು ಬರುವವು.” ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ದೇಶಕ್ಕೆ ಕ್ಷಾಮವನ್ನು ಉಂಟುಮಾಡುವ ದಿನಗಳು ಬರುತ್ತವೆ, ಅದು ಅನ್ನದ ಕ್ಷಾಮವಲ್ಲ, ನೀರಿನ ಕ್ಷಾಮವಲ್ಲ, ಯೆಹೋವನ ವಾಕ್ಯಗಳ ಕ್ಷಾಮವೇ.

[12] ಸಮುದ್ರದಿಂದ ಸಮುದ್ರಕ್ಕೆ; ಉತ್ತರದಿಂದ ಪೂರ್ವಕ್ಕೂ ಬಳಲುತ್ತಾ ಹೋಗುವರು ಯೆಹೋವನ ವಾಕ್ಯವನ್ನು ಹುಡುಕುತ್ತಾ ಓಡಾಡುವರು, ಆದರೂ ಅದು ಸಿಕ್ಕುವುದಿಲ್ಲ.

[13] ಆ ದಿನದಲ್ಲಿ ಸುಂದರವಾದ ಯುವತಿಯರೂ ಮತ್ತು ಯೌವನಸ್ಥರು ಸಹ ಬಾಯಾರಿಕೆಯಿಂದ ಮೂರ್ಛೆ ಹೋಗುವರು.

[14] ‘ದಾನೇ, ನಿನ್ನ ದೇವರ ಜೀವದಾಣೆ’ ಎಂದೂ ‘ಮತ್ತು ಬೇರ್ಷೆಬದ ಮಾರ್ಗದ ಜೀವದಾಣೆ’” ಎಂದೂ ಹೇಳುವರು. ಅವರು ಸಮಾರ್ಯದ ಪಾಪದ ಮೇಲೆ ಪ್ರಮಾಣಮಾಡಿಕೊಂಡು, ಅವರು ಬಿದ್ದು ಮತ್ತೆ ಮೇಲೆ ಏಳಲಾರರು.

ಆಮೋಸನು — Chapters