[1] ಇಸ್ರಾಯೇಲರೇ ಯೆಹೋವನು ನಿಮಗೆ ವಿರುದ್ಧವಾಗಿ, ತಾನು ಐಗುಪ್ತ ದೇಶದೊಳಗಿಂದ ಪಾರು ಮಾಡಿದ ಪೂರ್ಣಕುಲಕ್ಕೆ ವಿರುದ್ಧವಾಗಿ ನುಡಿದಿರುವ ಈ ಮಾತನ್ನು ಕೇಳಿರಿ,
[2] ಭೂಮಿಯ ಸಕಲ ಕುಲಗಳೊಳಗೆ ನಿಮ್ಮನ್ನು ಮಾತ್ರ ನನ್ನವರೆಂದು ಆರಿಸಿಕೊಂಡಿದ್ದೇನೆ. ಆದಕಾರಣ ನಿಮ್ಮ ಎಲ್ಲಾ ಪಾಪಗಳ ಫಲವನ್ನು ನೀವು ಅನುಭವಿಸುವಂತೆ ಮಾಡುವೆನು.
[3] ಗೊತ್ತುಮಾಡಿಕೊಳ್ಳದೆ ಯಾರಾದರಿಬ್ಬರು ಜೊತೆಯಾಗಿ ನಡೆಯುವುದುಂಟೆ?
[4] ಬೇಟೆಯ ಬಲಿ ಕಾಣದೇ ಸಿಂಹವು ಅರಣ್ಯದಲ್ಲಿ ಗರ್ಜಿಸುವುದೋ? ಏನನ್ನೂ ಬೇಟೆಯಾಡದೆ ಪ್ರಾಯದ ಸಿಂಹವು ಗವಿಯಲ್ಲಿ ಕುಳಿತು ಗುರುಗುಟ್ಟುವುದೋ?
[5] ಕಾಳಿಲ್ಲದೆ ಪಕ್ಷಿಯು ನೆಲದಲ್ಲಿನ ಬಲೆಯೊಳಗೆ ಬೀಳುವುದೋ? ಏನೂ ಬಲೆಗೆ ಸಿಕ್ಕಿಕೊಳ್ಳದೇ ಬೋನು ಉರುಲಾಗುವುದೋ?
[6] ಪಟ್ಟಣದಲ್ಲಿ ಕೊಂಬನ್ನು ಊದಿದರೆ ಜನರು ಹೆದರುವುದಿಲ್ಲವೋ? ಯೆಹೋವನಿಂದಲ್ಲದೆ ಪಟ್ಟಣಕ್ಕೆ ವಿಪತ್ತು ಸಂಭವಿಸುವುದೋ?
[7] ನಿಶ್ಚಯವಾಗಿ ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ಯೋಜನೆಯನ್ನು ತಿಳಿಸದೆ ಯೆಹೋವನಾದ ದೇವರು ಏನನ್ನೂ ಮಾಡುವುದಿಲ್ಲ.
[8] ಸಿಂಹವು ಗರ್ಜಿಸಿದರೆ, ಭಯಪಡದೆ ಇರುವವರು ಯಾರು? ಕರ್ತನಾದ ಯೆಹೋವನು ನುಡಿದಿದ್ದಾನೆ, ಆ ನುಡಿಯನ್ನು ಕೇಳಿ ಪ್ರವಾದಿಸದವರು ಯಾರು?
[9] ಅಷ್ದೋದಿನ ಅರಮನೆಗಳಲ್ಲಿಯೂ, ಐಗುಪ್ತ ದೇಶದ ಅರಮನೆಗಳಲ್ಲಿಯೂ ಹೀಗೆ ಪ್ರಕಟಿಸಿರಿ, “ಸಮಾರ್ಯದ ಬೆಟ್ಟಗಳಲ್ಲಿ ಕೂಡಿಬನ್ನಿರಿ. ಪಟ್ಟಣದೊಳಗೆ ಇರುವ ಗದ್ದಲವನ್ನು, ಅದರೊಳಗಿರುವ ಹಿಂಸೆಯನ್ನೂ ನೋಡಿರಿ.
[10] ನ್ಯಾಯನೀತಿಗಳನ್ನು ಮಾಡುವುದಕ್ಕೆ ಅವರಿಗೆ ತಿಳಿದಿಲ್ಲ” ಇದು ಯೆಹೋವನ ನುಡಿ. ತಮ್ಮ ಉಪ್ಪರಿಗೆಗಳಲ್ಲಿ ಬಾಧೆಯನ್ನೂ, ನಾಶನವನ್ನೂ ಕೂಡಿಸಿಟ್ಟುಕೊಂಡಿದ್ದಾರೆ.
[11] ಹೀಗಿರಲು, ಕರ್ತನಾದ ಯೆಹೋವನು ಇಂತೆನ್ನುತ್ತಾನೆ: “ಶತ್ರುವು ನಿನ್ನ ದೇಶವನ್ನು ಮುತ್ತಿಕೊಳ್ಳುವನು. ನಿನ್ನ ಶಕ್ತಿಯನ್ನು ಕುಂದಿಸಿಬಿಡುವನು ಮತ್ತು ನಿನ್ನ ಅರಮನೆಗಳು ಸೂರೆಯಾಗುವವು.”
[12] ಯೆಹೋವನು ಇಂತೆನ್ನುತ್ತಾನೆ: “ಸಿಂಹದ ಬಾಯೊಳಗಿಂದ ಕುರುಬನು ತನ್ನ ಕುರಿಗಳ ಎರಡು ಕಾಲನ್ನೂ, ಅಥವಾ ಕಿವಿಯ ಒಂದು ತುಂಡನ್ನೂ, ಹೇಗೆ ರಕ್ಷಿಸುವನೋ, ಹಾಗೆಯೇ ಸಮಾರ್ಯದೊಳಗೆ ಹಾಸಿಗೆಯ ಮೂಲೆಯಲ್ಲಿಯೂ, ಮಂಚದ ಪಟ್ಟೇದಿಂಬುಗಳಲ್ಲಿಯೂ, ಒರಗಿಕೊಳ್ಳುವ ಇಸ್ರಾಯೇಲರ ಸ್ವಲ್ಪ ಭಾಗ ಮಾತ್ರ ರಕ್ಷಿಸಲ್ಪಡುವುದು.”
[13] ಸೇನಾಧೀಶ್ವರ ದೇವನಾದ ಯೆಹೋವನು ಇಂತೆನ್ನುತ್ತಾನೆ; ಕೇಳಿರಿ, ಯಾಕೋಬ ವಂಶದವರಿಗೆ ವಿರುದ್ಧವಾಗಿ ಸಾಕ್ಷಿಕೊಡಿರಿ.
[14] “ನಾನು ಇಸ್ರಾಯೇಲಿನ ದ್ರೋಹಗಳಿಗಾಗಿ ಅವರನ್ನು ಶಿಕ್ಷಿಸುವ ದಿನಗಳಲ್ಲಿ, ಬೇತೇಲಿನ ಯಜ್ಞವೇದಿಗಳನ್ನು ಧ್ವಂಸಮಾಡುವೆನು. ಯಜ್ಞವೇದಿಯ ಕೊಂಬುಗಳು ಕಡಿಯಲ್ಪಟ್ಟು ನೆಲದ ಮೇಲೆ ಉರುಳುವವು.
[15] ನಾನು ಚಳಿಗಾಲದ ಅರಮನೆಯನ್ನೂ, ಬೇಸಿಗೆಯ ಅರಮನೆಯನ್ನೂ ಹೊಡೆದುಹಾಕುವೆನು. ದಂತಮಂದಿರಗಳು ಹಾಳಾಗುವವು ಮತ್ತು ದೊಡ್ಡಮನೆಗಳು ಕೊನೆಗಾಣುವವು” ಇದು ಯೆಹೋವನ ನುಡಿ.