Skip to content
Opens in a new window
Listen to this chapter • 3:38

[1] ಯೆಹೂದದ ಅರಸನಾದ ಉಜ್ಜೀಯನ ಕಾಲದಲ್ಲಿ ಇಸ್ರಾಯೇಲಿನ ಅರಸನೂ, ಯೋವಾಷನ ಮಗನೂ ಆದ ಯಾರೊಬ್ಬಾಮನ ಕಾಲದಲ್ಲಿ ಭೂಕಂಪಕ್ಕೆ ಎರಡು ವರ್ಷಗಳ ಮೊದಲೇ ತೆಕೋವದ ಕುರುಬರಲ್ಲಿ ಒಬ್ಬನಾದ ಆಮೋಸನಿಗೆ ಇಸ್ರಾಯೇಲಿನ ವಿಷಯವಾಗಿ ಕೇಳಿಬಂದ ದೈವೋಕ್ತಿಗಳು.

[2] ಆಮೋಸನು ಹೀಗೆ ಪ್ರಕಟಿಸಿದನು, “ಯೆಹೋವನು ಚೀಯೋನಿನಿಂದ ಗರ್ಜಿಸಿ, ಯೆರೂಸಲೇಮಿನಿಂದ ಧ್ವನಿಗೈಯುವನು. ಆಗ ಕುರುಬರ ಹುಲ್ಲುಗಾವಲುಗಳು ಬಾಡಿಹೋಗುವವು. ಕರ್ಮೆಲ್ ಬೆಟ್ಟದ ತುದಿಯು ಒಣಗಿಹೋಗುವವು.”

[3] ಯೆಹೋವನು ಇಂತೆನ್ನುತ್ತಾನೆ, “ದಮಸ್ಕವು ಬಹಳ ದ್ರೋಹಗಳನ್ನು ಮಾಡಿದ್ದರಿಂದ, ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. ಏಕೆಂದರೆ ಅದು ಗಿಲ್ಯಾದನ್ನು ಕಬ್ಬಿಣದ ಹಂತಿ ಕುಂಟೆಗಳಿಂದ ಒಕ್ಕಿ ನುಗ್ಗುಮಾಡಿತಷ್ಟೆ.

[4] ನಾನು ಹಜಾಯೇಲನ ವಂಶದ ಮೇಲೆ ಬೆಂಕಿಯನ್ನು ಸುರಿಸುವೆನು. ಅದು ಬೆನ್ಹದದನ ಅರಮನೆಯನ್ನು ನುಂಗಿಬಿಡುವುದು.

[5] ನಾನು ದಮಸ್ಕದ ಹೆಬ್ಬಾಗಿಲುಗಳನ್ನು ಮುರಿಯುವೆನು ಮತ್ತು ಆವೆನ್ ತಗ್ಗಿನೊಳಗಿನಿಂದ ನಿವಾಸಿಗಳನ್ನು ಮತ್ತು ಬೇತ್ ಎದೆನ್ ಪಟ್ಟಣದ ಆಡಳಿತಾಧಿಕಾರಿಯನ್ನು ನಿರ್ಮೂಲಮಾಡುವೆನು; ಅರಾಮ್ಯರು ಕೀರ್ ಪಟ್ಟಣಕ್ಕೆ ಸೆರೆಯಾಗಿ ಹೋಗುವರು.” ಇದು ಯೆಹೋವನ ನುಡಿ.

[6] ಯೆಹೋವನು ಇಂತೆನ್ನುತ್ತಾನೆ, “ಗಾಜವು ಬಹಳ ದ್ರೋಹಗಳನ್ನು ಮಾಡಿದ್ದರಿಂದ, ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ, ಏಕೆಂದರೆ ಅದು ಜನರನ್ನು ಗುಂಪುಗುಂಪಾಗಿ ಸೆರೆಹಿಡಿದು ಎದೋಮಿಗೆ ವಶಮಾಡಿಬಿಟ್ಟಿತು.

[7] ನಾನು ಗಾಜದ ಕೋಟೆಯ ಮೇಲೆ ಬೆಂಕಿಯನ್ನು ಸುರಿಸುವೆನು, ಅದು ಅದರ ಅರಮನೆಗಳನ್ನು ನುಂಗಿಬಿಡುವುದು.

[8] ನಾನು ಅಷ್ದೋದಿನೊಳಗಿಂದ ಸಿಂಹಾಸನಾಸೀನನನ್ನೂ ಮತ್ತು ಅಷ್ಕೆಲೋನಿನೊಳಗಿಂದ ರಾಜದಂಡ ದಾರಿಯನ್ನೂ ನಿರ್ಮೂಲಮಾಡುವೆನು. ನಾನು ಎಕ್ರೋನಿನ ವಿರುದ್ಧವಾಗಿ ಕೈಯೆತ್ತುವೆನು, ಉಳಿದ ಫಿಲಿಷ್ಟಿಯರೆಲ್ಲರೂ ನಾಶವಾಗಿ ಹೋಗುವರು.” ಇದು ಕರ್ತನಾದ ಯೆಹೋವನ ನುಡಿ.

[9] ಯೆಹೋವನು ಇಂತೆನ್ನುತ್ತಾನೆ: “ತೂರ್ ಪಟ್ಟಣವು ಬಹಳ ದ್ರೋಹಗಳನ್ನು ಮಾಡಿದ್ದರಿಂದ, ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. ಏಕೆಂದರೆ ಅದು ಒಡಹುಟ್ಟಿದವರ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳದೇ, ಜನರನ್ನು ಗುಂಪುಗುಂಪಾಗಿ ಎದೋಮಿಗೆ ವಶಮಾಡಿಬಿಟ್ಟಿತು.

[10] ನಾನು ತೂರಿನ ಕೋಟೆಯ ಮೇಲೆ ಬೆಂಕಿಯನ್ನು ಸುರಿಸುವೆನು, ಮತ್ತು ಅದು ಅದರ ಅರಮನೆಗಳನ್ನು ನುಂಗಿಬಿಡುವುದು.”

[11] ಯೆಹೋವನು ಇಂತೆನ್ನುತ್ತಾನೆ: “ಎದೋಮ್ ಬಹಳ ದ್ರೋಹಗಳನ್ನು ಮಾಡಿದ್ದರಿಂದ, ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. ಏಕೆಂದರೆ ಅವನು ಕತ್ತಿ ಹಿಡಿದು ತನ್ನ ಸಹೋದರರನ್ನು ಹಿಂದಟ್ಟಿದನು, ಕರುಣೆಯನ್ನು ತೋರಿಸಲಿಲ್ಲ. ರೋಷವನ್ನು ಸಾಧಿಸಿದ್ದಾರೆ. ಇದರಿಂದ ಅವನ ಕೋಪವು ಸದಾ ಹರಿಯುತ್ತಿತ್ತು, ಆತನು ರೌದ್ರವನ್ನು ನಿರಂತರವಾಗಿ ಇಟ್ಟುಕೊಂಡನು.

[12] ನಾನು ತೇಮಾನಿನ ಮೇಲೆ ಬೆಂಕಿಯನ್ನು ಸುರಿಸುವೆನು, ಮತ್ತು ಅದು ಬೊಚ್ರದ ಅರಮನೆಗಳನ್ನು ನುಂಗಿಬಿಡುವುದು.”

[13] ಯೆಹೋವನು ಇಂತೆನ್ನುತ್ತಾನೆ, “ಅಮ್ಮೋನ್ಯರು ಬಹಳ ದ್ರೋಹಗಳನ್ನು ಮಾಡಿದ್ದರಿಂದ, ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. ಏಕೆಂದರೆ ಅವರು ತಮ್ಮ ದೇಶವನ್ನು ವಿಸ್ತರಿಸಬೇಕೆಂದು ಗಿಲ್ಯಾದಿನ ಗರ್ಭಿಣಿಯರ ಹೊಟ್ಟೆಯನ್ನು ಸೀಳಿಬಿಟ್ಟರು.

[14] ನಾನು ರಬ್ಬದ ಕೋಟೆಯನ್ನು ಬೆಂಕಿಯಿಂದ ಉರಿಸುವೆನು, ಅದು ಅದರ ಅರಮನೆಗಳನ್ನು ನುಂಗಿಬಿಡುವುದು; ಆ ಯುದ್ಧದ ದಿನದಲ್ಲಿ ಆರ್ಭಟವಾಗುವುದು, ಆ ಸುಂಟರಗಾಳಿಯಂತ ದಿನದಲ್ಲಿ ಪ್ರಚಂಡ ಕಾದಾಟವೂ ಉಂಟಾಗುವುದು.

[15] ಅವರ ಅರಸನೂ ಮತ್ತು ಅವನ ರಾಜ್ಯಾಧಿಕಾರಗಳೂ ಒಟ್ಟಿಗೆ ಸೆರೆಯಾಗಿ ಹೋಗುವರು.” ಇದು ಯೆಹೋವನ ನುಡಿ.

ಆಮೋಸನು — Chapters