[1] ಯೆಹೋವನು ಇಂತೆನ್ನುತ್ತಾನೆ, “ಮೋವಾಬಿನವರು ಬಹಳ ದ್ರೋಹಗಳನ್ನು ಮಾಡಿದ್ದರಿಂದ, ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. ಅದು ಎದೋಮಿನ ಅರಸನ ಎಲುಬುಗಳನ್ನು ಸುಟ್ಟು ಬೂದಿಮಾಡಿತು.
[2] ನಾನು ಮೋವಾಬಿನ ಮೇಲೆ ಬೆಂಕಿಯನ್ನು ಸುರಿಸುವೆನು, ಅದು ಕೆರೀಯೋತಿನ ಅರಮನೆಗಳನ್ನು ನುಂಗಿಬಿಡುವುದು. ಭಟರು ಘೋಷಿಸಿ ಕೊಂಬೂದುವ ಯುದ್ಧದ ಕೋಲಾಹಲದಲ್ಲಿ, ಮೋವಾಬು ಸಾಯುವುದು;
[3] ನಾನು ಅದರೊಳಗಿಂದ ಅಧಿಪತಿಯನ್ನು ಕಡಿದುಹಾಕಿ, ಸಕಲ ರಾಜ್ಯಾಧಿಕಾರಿಗಳನ್ನೂ ಸಂಹರಿಸುವೆನು.” ಇದು ಯೆಹೋವನ ನುಡಿ.
[4] ಯೆಹೋವನು ಇಂತೆನ್ನುತ್ತಾನೆ, “ಯೆಹೂದವು ಮೂರು ದ್ರೋಹಗಳನ್ನು, ಹೌದು ನಾಲ್ಕು ದ್ರೋಹಗಳನ್ನು ಮಾಡಿದ್ದರಿಂದ, ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. ಏಕೆಂದರೆ ಯೆಹೂದ್ಯರು ಯೆಹೋವನ ಧರ್ಮೋಪದೇಶವನ್ನು ನಿರಾಕರಿಸಿದರು. ಆತನ ವಿಧಿಗಳನ್ನು ಕೈಕೊಳ್ಳಲಿಲ್ಲ. ಅವರ ಪೂರ್ವಿಕರು ಹಿಂಬಾಲಿಸಿದ ಸುಳ್ಳುದೇವತೆಗಳು, ಇವರನ್ನು ದಾರಿ ತಪ್ಪುವಂತೆ ಮಾಡಿದವು.
[5] ಆದಕಾರಣ ನಾನು ಯೆಹೂದದ ಮೇಲೆ ಬೆಂಕಿಯನ್ನು ಉರಿಸುವೆನು. ಅದು ಯೆರೂಸಲೇಮಿನ ಅರಮನೆಗಳನ್ನು ನುಂಗಿಬಿಡುವುದು.”
[6] ಯೆಹೋವನು ಇಂತೆನ್ನುತ್ತಾನೆ, “ಇಸ್ರಾಯೇಲರು ಮೂರು ದ್ರೋಹಗಳನ್ನು, ಹೌದು ನಾಲ್ಕು ದ್ರೋಹಗಳನ್ನು ಮಾಡಿದ್ದರಿಂದ, ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. ಏಕೆಂದರೆ ಇಸ್ರಾಯೇಲರು ನ್ಯಾಯವಂತನನ್ನು ಬೆಳ್ಳಿಗೆ, ಒಂದು ಜೊತೆ ಕೆರದ ಸಾಲಕ್ಕಾಗಿ ದಿಕ್ಕಿಲ್ಲದವನನ್ನು ಮಾರಿದರು.
[7] ಬಡವರ ತಲೆಗಳನ್ನು ನೆಲದ ಧೂಳಿನಂತೆ ತುಳಿದು ಬಿಡುತ್ತಾರೆ, ದೀನರ ದಾರಿಗೆ ಅಡ್ಡ ಹಾಕುತ್ತಾರೆ. ಮಗನೂ ಮತ್ತು ತಂದೆಯೂ ಒಬ್ಬಳಲ್ಲಿ ಹೋಗಿ ನನ್ನ ಪವಿತ್ರ ನಾಮವನ್ನು ಅಪಕೀರ್ತಿಗೆ ಗುರಿಮಾಡುತ್ತಾರೆ.
[8] ಒಂದೊಂದು ಯಜ್ಞವೇದಿಯ ಹತ್ತಿರದಲ್ಲಿಯೂ ಅಡವು ಇಟ್ಟ ಬಟ್ಟೆಗಳ ಮೇಲೆ ಮಲಗಿಕೊಳ್ಳುತ್ತಾರೆ; ದಂಡಹಾಕಿಸಿಕೊಂಡವರು ದ್ರಾಕ್ಷಾರಸವನ್ನು ತಮ್ಮ ದೇವರ ಮಂದಿರದಲ್ಲಿಯೂ ಕುಡಿಯುತ್ತಾರೆ.
[9] ಆಹಾ, ಅವರಿಗೆ ಎದುರಾಗಿ ನಿಂತ ಅಮೋರಿಯರನ್ನು ನಾನೇ ಧ್ವಂಸಮಾಡಿದೆನು, ಆ ಶತ್ರುವು ದೇವದಾರು ಮರದಷ್ಟು ಎತ್ತರವಾಗಿ, ಅಲ್ಲೋನ್ ಮರದ ಹಾಗೆ ಬಲಿಷ್ಠವಾಗಿಯೂ ಇದ್ದರು. ಆದರೂ ಮರದ ಮೇಲಿನ ಅದರ ಫಲವನ್ನು, ಕೆಳಗೆ ಅದರ ಬುಡವನ್ನು ನಾಶಪಡಿಸಿದೆನು.
[10] ಇಸ್ರಾಯೇಲ್ಯರೇ, ನೀವು ಅಮ್ಮೋನಿಯರ ದೇಶವನ್ನು ಸ್ವಾಧೀನಪಡಿಸಿಕೊಳ್ಳಲು, ನಾನು ನಿಮ್ಮನ್ನು ಐಗುಪ್ತ ದೇಶದೊಳಗಿಂದ ಪಾರುಮಾಡಿ, ನಲ್ವತ್ತು ವರ್ಷ ಅರಣ್ಯದಲ್ಲಿ ನಿಮ್ಮನ್ನು ನಡೆಸಿದೆನು.
[11] ನಿಮ್ಮ ಪುತ್ರರಲ್ಲಿ ಪ್ರವಾದಿಗಳನ್ನೂ ಮತ್ತು ನಿಮ್ಮ ಯುವಕರಲ್ಲಿ ಪ್ರತಿಷ್ಠಿತರನ್ನೂ ಎಬ್ಬಿಸಿದೆನು. ಇಸ್ರಾಯೇಲಿನ ಜನರೇ, ಇದು ಸತ್ಯವಲ್ಲವೋ?” ಎಂದು ಯೆಹೋವನು ಅನ್ನುತ್ತಾನೆ.
[12] “ಆದರೆ ನೀವೋ ಪ್ರತಿಷ್ಠಿತರಿಗೆ ದ್ರಾಕ್ಷಾರಸವನ್ನು ಕುಡಿಯಲು ಕೊಟ್ಟಿರಿ ಮತ್ತು ಪ್ರವಾದಿಗಳಿಗೆ ಪ್ರವಾದಿಸಬೇಡಿರೆಂದು ಆಜ್ಞಾಪಿಸಿದ್ದಿರಿ.
[13] ಇಗೋ, ನೀವು ನಿಂತಿರುವಲ್ಲಿಯೇ ನಿಮ್ಮನ್ನು ಸಿವುಡು ತುಂಬಿದ ಬಂಡಿ ಒತ್ತುವ ಪ್ರಕಾರ ನಾನು ನಿಮ್ಮನ್ನು ಕೆಳಗೆ ಹಾಕಿ ಒತ್ತುವೆನು.
[14] ತ್ವರೆಯಾಗಿ ಓಡುವವನು ತಪ್ಪಿಸಿಕೊಳ್ಳಲಾರನು. ಬಲಿಷ್ಠನು ತನ್ನ ಬಲವನ್ನು, ತನ್ನ ಪ್ರಾಣವನ್ನು ಬಲಪಡಿಸಿಕೊಳ್ಳಲಾರನು. ಪರಾಕ್ರಮಿಯು ತನ್ನ ಪ್ರಾಣವನ್ನು ಉಳಿಸಿಕೊಳ್ಳಲಾರನು.
[15] ಬಿಲ್ಲು ಹಿಡಿಯುವವನು ಭೂಮಿಯ ಮೇಲೆ ನಿಲ್ಲಲಾರನು, ಪಾದತ್ವರಿತನು ತಪ್ಪಿಸಿಕೊಳ್ಳಲಾರನು, ಅಶ್ವಾರೂಢನು ತನ್ನ ಪ್ರಾಣವನ್ನು ಉಳಿಸಿಕೊಳ್ಳಲಾರನು.
[16] ಆ ದಿನದಲ್ಲಿ ಶೂರರಲ್ಲಿ ಧೀರನಾದವನು ಬೆತ್ತಲೆಯಾಗಿ ಓಡಿಹೋಗುವನು” ಇದು ಯೆಹೋವನ ನುಡಿ.