[1] ಆದರೆ ಕಡೆ ದಿನಗಳಲ್ಲಿ ಕಠಿಣಕಾಲಗಳು ಬರುವವೆಂಬುದನ್ನು ತಿಳಿದುಕೋ.
[2] ಮನುಷ್ಯರು ಸ್ವಾರ್ಥಚಿಂತಕರೂ, ಹಣದಾಸೆಯವರೂ, ಬಡಾಯಿಕೊಚ್ಚುವವರೂ, ಅಹಂಕಾರಿಗಳೂ, ದೂಷಕರೂ, ತಂದೆತಾಯಿಗಳಿಗೆ ಅವಿಧೇಯರೂ, ಉಪಕಾರ ನೆನಸದವರೂ, ದೇವಭಯವಿಲ್ಲದವರೂ,
[3] ಮಮತೆಯಿಲ್ಲದವರೂ, ಸಮಾಧಾನಹೊಂದದವರೂ, ಚಾಡಿಹೇಳುವವರೂ, ದಮೆಯಿಲ್ಲದವರೂ, ಕ್ರೂರರೂ, ಒಳ್ಳೆಯದನ್ನು ದ್ವೇಷಿಸುವವರೂ,
[4] ದ್ರೋಹಿಗಳೂ, ದುಡುಕುವವರೂ, ದುರಹಂಕಾರವುಳ್ಳವರೂ, ದೇವರನ್ನು ಪ್ರೀತಿಸುವುದಕ್ಕಿಂತ ಅಧಿಕವಾಗಿ ಭೋಗವನ್ನೇ ಪ್ರೀತಿಸುವವರೂ,
[5] ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು. ಇಂಥವರ ಸಹವಾಸವನ್ನೂ ಮಾಡದಿರು.
[6] ಅವರಲ್ಲಿ ಕೆಲವರು ಮನೆಗಳಲ್ಲಿ ನುಸುಳಿ, ಪಾಪಗಳಿಂದ ತುಂಬಿದವರೂ, ನಾನಾ ವಿಧವಾದ ಆಸೆಗಳಿಂದ ಪ್ರೇರಿತರೂ ಆಗಿರುವ ಅವಿವೇಕಿಗಳಾದ ಸ್ತ್ರೀಯರನ್ನು ವಶಮಾಡಿಕೊಳ್ಳುವವರು ಆಗಿರುತ್ತಾರೆ.
[7] ಆ ಸ್ತ್ರೀಯರು ಯಾವಾಗಲೂ ಉಪದೇಶ ಕೇಳುತ್ತಿದ್ದರೂ ಸತ್ಯದ ಪರಿಜ್ಞಾನವನ್ನು ಹೊಂದಲಾರದವರು.
[8] ಯನ್ನ, ಯಂಬ್ರ ಎಂಬವರು ಮೋಶೆಯನ್ನು ವಿರೋಧಿಸಿದಂತೆಯೇ ಈ ಮನುಷ್ಯರು ಸಹ ಸತ್ಯಕ್ಕೆ ವಿರೋಧಿಗಳಾಗಿದ್ದು, ಬುದ್ಧಿಹೀನರೂ ನಂಬಿಕೆಯ ವಿಷಯದಲ್ಲಿ ನಿಷ್ಪ್ರಯೋಜಕರೂ ಆಗಿದ್ದಾರೆ.
[9] ಆದರೆ ಅವರು ಹೆಚ್ಚು ಮುಂದುವರಿಯಲು ಸಾಧ್ಯವಿಲ್ಲ. ಆ ಯನ್ನ ಯಂಬ್ರರ ಮೂರ್ಖತನವು ಎಲ್ಲರಿಗೂ ಪ್ರಕಟವಾಗಿ ಬಂದ ಹಾಗೆಯೇ ಇವರದೂ ಪ್ರಕಟವಾಗುವುದು.
[10] ನೀನಾದರೋ ನನ್ನನ್ನು ಅನುಸರಿಸುವವನಾಗಿದ್ದು, ನನ್ನ ಬೋಧನೆ, ನಡತೆ, ಉದ್ದೇಶ, ನಂಬಿಕೆ, ದೀರ್ಘಶಾಂತಿ, ಪ್ರೀತಿ, ಸೈರಣೆ ಇವುಗಳನ್ನೂ,
[11] ಅಂತಿಯೋಕ್ಯ, ಇಕೋನ್ಯ, ಲುಸ್ತ್ರ ಎಂಬ ಪಟ್ಟಣಗಳಲ್ಲಿ ನನಗೆ ಸಂಭವಿಸಿದ ಹಿಂಸೆಗಳನ್ನೂ, ಕಷ್ಟಾನುಭವಗಳನ್ನೂ ತಿಳಿದವನಾಗಿದ್ದೀ. ನಾನು ಎಂಥೆಂಥ ಹಿಂಸೆಗಳನ್ನು ಸಹಿಸಿಕೊಂಡೆನು, ಅವೆಲ್ಲವುಗಳೊಳಗಿನಿಂದ ಕರ್ತನು ನನ್ನನ್ನು ಬಿಡಿಸಿದನು.
[12] ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವುದಕ್ಕೆ ಮನಸ್ಸು ಮಾಡುವವರೆಲ್ಲರೂ ಹಿಂಸೆಗೊಳಗಾಗುವರು.
[13] ಆದರೆ ದುಷ್ಟರೂ, ವಂಚಕರೂ ಇತರರನ್ನು ಮೋಸಮಾಡುತ್ತಾ ತಾವೇ ಮೋಸಹೋಗುತ್ತಾ ಹೆಚ್ಚಾದ ಕೆಟ್ಟತನಕ್ಕೆ ಹೋಗುವರು.
[14] ನೀನಾದರೋ ಕಲಿತು ದೃಢವಾಗಿ ನಂಬಿದ ಬೋಧನೆಗಳಲ್ಲಿ ನೆಲೆಯಾಗಿರು. ಕಲಿಸಿಕೊಟ್ಟವರು ಯಾರೆಂಬುದನ್ನು ಆಲೋಚಿಸು.
[15] ಚಿಕ್ಕಂದಿನಿಂದಲೂ ನಿನಗೆ ಪರಿಶುದ್ಧ ಗ್ರಂಥಗಳ ಪರಿಚಯವಾಗಿದೆಯಲ್ಲಾ. ಆ ಗ್ರಂಥಗಳು ಕ್ರಿಸ್ತಯೇಸುವಿನಲ್ಲಿರುವ ನಂಬಿಕೆಯ ಮೂಲಕ ರಕ್ಷಣೆಹೊಂದುವ ಜ್ಞಾನವನ್ನು ನಿನಗೆ ಕೊಡುವುದಕ್ಕೆ ಶಕ್ತವಾಗಿವೆ.
[16] ದೈವ ಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ, ಖಂಡನೆಗೂ, ತಿದ್ದುಪಡಿಗೂ, ನೀತಿಶಿಕ್ಷೆಗೂ ಉಪಯುಕ್ತವಾಗಿದೆ.
[17] ಆದ್ದರಿಂದ ದೇವರ ಮನುಷ್ಯನು ಎಲ್ಲವನ್ನೂ ಬಲ್ಲವನಾಗಿದ್ದು ಸಕಲಸತ್ಕಾರ್ಯಗಳಿಗೆ ಸನ್ನದ್ಧನಾಗುವನು.