[1] ನನ್ನ ಮಗನೇ, ನೀನು ಕ್ರಿಸ್ತ ಯೇಸುವಿನಲ್ಲಿರುವ ಕೃಪೆಯಿಂದ ಬಲಹೊಂದಿದವನಾಗು.
[2] ನೀನು ಅನೇಕ ಸಾಕ್ಷಿಗಳ ಮುಂದೆ ನನ್ನಿಂದ ಕೇಳಿದ ಉಪದೇಶವನ್ನು ಇತರರಿಗೆ ಬೋಧಿಸಲು ಶಕ್ತರಾದ, ನಂಬಿಗಸ್ತರಾದ ಜನರಿಗೆ ಅದನ್ನು ಒಪ್ಪಿಸಿಕೊಡು.
[3] ಕ್ರಿಸ್ತ ಯೇಸುವಿನ ಒಳ್ಳೆಯ ಸೈನಿಕನಂತೆ ನನ್ನೊಂದಿಗೆ ಕಷ್ಟವನ್ನನುಭವಿಸು.
[4] ಯುದ್ಧಕ್ಕೆ ಹೋಗುವ ಸೈನಿಕನು ಲೋಕವ್ಯವಹಾರದಲ್ಲಿ ಸಿಕ್ಕಿಕೊಳ್ಳದೆ, ತನ್ನನ್ನು ಸೈನ್ಯದಲ್ಲಿ ಸೇರಿಸಿಕೊಂಡವನನ್ನು ಮೆಚ್ಚಿಸುವುದಕ್ಕಾಗಿ ಪ್ರಯಾಸ ಪಡುತ್ತಿರುವನಲ್ಲವೇ.
[5] ಇದಲ್ಲದೆ ಯಾವನಾದರೂ ಸ್ಪರ್ಧೆಯಲ್ಲಿ ಎದುರಾಳಿಯೊಡನೆ ಹೋರಾಡುವಾಗ ನಿಯಮದ ಪ್ರಕಾರ ಹೋರಾಡದಿದ್ದರೆ ಅವನಿಗೆ ಜಯಮಾಲೆಯು ದೊರಕುವುದಿಲ್ಲ.
[6] ವ್ಯವಸಾಯದ ಹುಟ್ಟುವಳಿಯಲ್ಲಿ ಮೊದಲನೆಯ ಪಾಲು ಕಷ್ಟಪಟ್ಟ ಕೃಷಿಕನಿಗೆ ದೊರೆಯುತ್ತದೆ.
[7] ನಾನು ಹೇಳುವುದನ್ನು ಯೋಚಿಸು. ಕರ್ತನು ಎಲ್ಲಾದರಲ್ಲಿಯೂ ನಿನಗೆ ವಿವೇಕವನ್ನು ದಯಪಾಲಿಸುವನು.
[8] ಸತ್ತವರೊಳಗಿಂದ ಎಬ್ಬಿಸಲ್ಪಟ್ಟವನೂ ದಾವೀದನ ವಂಶದವನೂ ಆಗಿರುವ ಯೇಸು ಕ್ರಿಸ್ತನನ್ನು ಜ್ಞಾಪಕಮಾಡಿಕೋ, ಇದೇ ನಾನು ಸಾರುವ ಸುವಾರ್ತೆ.
[9] ಇದರಲ್ಲಿ ನಾನು ಕಷ್ಟವನ್ನನುಭವಿಸಿ ದುಷ್ಕರ್ಮಿಯಂತೆ ಸಂಕೋಲೆಯಿಂದ ಬಂಧಿಸಲ್ಪಟ್ಟವನಾಗಿದ್ದೇನೆ. ಆದರೆ ದೇವರ ವಾಕ್ಯಕ್ಕೆ ಬಂಧನವಿಲ್ಲ.
[10] ಆದಕಾರಣ ದೇವರು ಆರಿಸಿಕೊಂಡವರು ಸಹ ಕ್ರಿಸ್ತ ಯೇಸುವಿನಲ್ಲಿರುವ ರಕ್ಷಣೆಯನ್ನು ನಿತ್ಯ ಮಹಿಮೆಯ ಸಹಿತವಾಗಿ ಹೊಂದಬೇಕೆಂದು ನಾನು ಅವರಿಗೋಸ್ಕರ ಎಲ್ಲವನ್ನು ತಾಳಿಕೊಳ್ಳುತ್ತೇನೆ.
[11] ಈ ಮಾತು ನಂಬತಕ್ಕದ್ದಾಗಿದೆ, ಅದೇನೆಂದರೆ “ನಾವು ಆತನೊಡನೆ ಸತ್ತಿದ್ದರೆ ಆತನೊಡನೆ ಜೀವಿಸುವೆವು,
[12] ಸಹಿಸಿಕೊಳ್ಳುವವರಾಗಿದ್ದರೆ ಆತನೊಡನೆ ಆಳುವೆವು. ನಾವು ಯೇಸುವಿನವರಲ್ಲವೆಂದು ಹೇಳಿದರೆ ಆತನು ನಮ್ಮನ್ನು ತನ್ನವರಲ್ಲವೆಂದು ಹೇಳುವನು.
[13] ನಾವು ಅಪನಂಬಿಗಸ್ತರಾಗಿದ್ದರೂ ಆತನು ನಂಬಿಗಸ್ತನಾಗಿಯೇ ಇರುವನು. ಆತನು ತನ್ನ ಸ್ವಭಾವವನ್ನು ನಿರಾಕರಿಸಲು ಆಗುವುದಿಲ್ಲ.”
[14] ಈ ಸಂಗತಿಗಳನ್ನು ಸಭೆಯವರ ಜ್ಞಾಪಕಕ್ಕೆ ತರಬೇಕು. ಕೇಳುವವರಿಗೆ ಕೇಡನ್ನುಂಟುಮಾಡುವುದಲ್ಲದೇ, ಯಾವ ಪ್ರಯೋಜನಕ್ಕೂ ಬಾರದ ತರ್ಕ ವಾಗ್ವಾದಗಳನ್ನು ಮಾಡಬಾರದೆಂದು, ಅವರಿಗೆ ದೇವರ ಸನ್ನಿಧಿಯಲ್ಲಿ ಖಂಡಿತವಾಗಿ ಹೇಳು.
[15] ನೀನು ದೇವರಿಗೆ ಯೋಗ್ಯನಾಗಿ ಕಾಣಿಸಿಕೊಳ್ಳುವುದಕ್ಕೆ ಪ್ರಯಾಸಪಡು. ಅವಮಾನಕ್ಕೆ ಗುರಿಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವನೂ ಆಗಿರು.
[16] ಪ್ರಾಪಂಚಿಕವಾದ ವ್ಯರ್ಥ ಹರಟೆ ಮಾತುಗಳಿಂದ ದೂರವಾಗಿರು, ಅವುಗಳಿಗೆ ಮನಸ್ಸುಕೊಡುವವರು ಹೆಚ್ಚೆಚ್ಚಾಗಿ ಭಕ್ತಿಹೀನರಾಗುವರು.
[17] ಅವರ ಮಾತು ಹುಣ್ಣುವ್ಯಾಧಿಯಂತೆ ಹರಡಿಕೊಳ್ಳುವುದು. ಅವರಲ್ಲಿ ಹುಮೆನಾಯನೂ ಪಿಲೇತನೂ ಇದ್ದಾರೆ.
[18] ಅವರು ಸತ್ಯಭ್ರಷ್ಟರಾಗಿ ಪುನರುತ್ಥಾನವು ಆಗಿಹೋಯಿತೆಂದು ಹೇಳುತ್ತಾ ಹಲವರ ನಂಬಿಕೆಯನ್ನು ಕೆಡಿಸುವವರಾಗಿದ್ದಾರೆ.
[19] ಆದರೂ ದೇವರ ಸ್ಥಿರವಾದ ಅಸ್ತಿವಾರವು ನಿಲ್ಲುತ್ತದೆ. ಅದರ ಮೇಲೆ “ತನ್ನವರು ಯಾರೆಂಬುದನ್ನು ಕರ್ತನು ತಿಳಿದಿದ್ದಾನೆ” ಎಂತಲೂ “ಕರ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರು ದುರ್ಮಾರ್ಗತನವನ್ನು ಬಿಟ್ಟುಬಿಡಬೇಕು” ಎಂತಲೂ ಲಿಖಿತವಾಗಿದೆ.
[20] ದೊಡ್ಡ ಮನೆಯಲ್ಲಿ ಬೆಳ್ಳಿ ಬಂಗಾರದ ಪಾತ್ರೆಗಳಲ್ಲದೆ, ಮರದ ಪಾತ್ರೆಗಳೂ, ಮಣ್ಣಿನ ಪಾತ್ರೆಗಳೂ ಇರುತ್ತವೆ. ಅವುಗಳಲ್ಲಿ ಕೆಲವನ್ನು ಉತ್ತಮವಾದ ಬಳಕೆಗೂ ಕೆಲವನ್ನು ಹೀನವಾದ ಬಳಕೆಗೂ ಬಳಸಲಾಗುತ್ತದೆ.
[21] ಹೀಗಿರಲಾಗಿ ಒಬ್ಬನು ಹೀನ ನಡತೆಯುಳ್ಳವರ ಸಹವಾಸವನ್ನು ಬಿಟ್ಟು ತನ್ನನ್ನು ಶುದ್ಧಮಾಡಿಕೊಂಡರೆ, ಅವನು ಉತ್ತಮವಾದ ಬಳಕೆಗೆ ಯೋಗ್ಯನಾಗಿರುವನು. ಅವನು ದೇವರ ಸೇವೆಗೆ ಪ್ರತಿಷ್ಠಿತನಾಗಿಯೂ, ಯಜಮಾನನಿಗೆ ಉಪಯುಕ್ತನಾಗಿಯೂ, ಸಕಲ ಸತ್ಕ್ರಿಯೆಗಳನ್ನು ಮಾಡುವುದಕ್ಕೆ ಸಿದ್ಧನಾಗಿಯೂ ಇರುವನು.
[22] ನೀನು ಯೌವನದ ಮೋಹಗಳಿಗೆ ದೂರವಾಗಿರು. ಶುದ್ಧಹೃದಯವುಳ್ಳವರಾಗಿ ಕರ್ತನನ್ನು ಬೇಡಿಕೊಳ್ಳುವವರ ಸಂಗಡ ನೀತಿ, ನಂಬಿಕೆ, ಪ್ರೀತಿ ಮತ್ತು ಸಮಾಧಾನಗಳನ್ನು ಸಂಪಾದಿಸುವುದಕ್ಕೆ ಪ್ರಯಾಸಪಡು.
[23] ಮೂಢರ ಬುದ್ಧಿಹೀನರ ವಿಚಾರಗಳು ಜಗಳಗಳಿಗೆ ಕಾರಣವಾಗುತ್ತವೆಯೆಂದು ತಿಳಿದು ಅವುಗಳ ಗೊಡವೆಗೆ ಹೋಗಬೇಡ.
[24] ಕರ್ತನ ಸೇವಕನು ಜಗಳವಾಡದೆ, ಎಲ್ಲರ ವಿಷಯದಲ್ಲಿ ಸಾಧುವೂ, ಬೋಧಿಸುವುದರಲ್ಲಿ ಪ್ರವೀಣನ್ನೂ, ತಾಳ್ಮೆಯುಳ್ಳವನ್ನೂ
[25] ಎದುರಿಸುವವರನ್ನು ಸೌಮ್ಯತೆಯಿಂದ ತಿದ್ದುವವನೂ ಆಗಿರಬೇಕು. ಬಹುಶಃ ದೇವರು ಆ ಎದುರಿಸುವವರ ಮನಸ್ಸನ್ನು ತನ್ನ ಕಡೆಗೆ ತಿರುಗಿಸಿ ಸತ್ಯದ ಜ್ಞಾನವನ್ನು ಅವರಿಗೆ ಕೊಟ್ಟಾನು.
[26] ಸೈತಾನನ ಬಲೆಗೆ ಬಿದ್ದವರಾದ ಇವರು ಒಂದು ವೇಳೆ ತಪ್ಪಿಸಿಕೊಂಡು ದೇವರ ಚಿತ್ತವನ್ನು ಅನುಸರಿಸುವುದಕ್ಕೆ ಶಕ್ತರಾದಾರು.