[1] ಯೇಸುವೇ ಕ್ರಿಸ್ತನೆಂದು ನಂಬುವ ಪ್ರತಿಯೊಬ್ಬನೂ ದೇವರಿಂದ ಹುಟ್ಟಿದವನಾಗಿದ್ದಾನೆ. ಯಾವನು ತನ್ನನ್ನು ಹುಟ್ಟಿಸಿದ ತಂದೆಯನ್ನು ಪ್ರೀತಿಸುತ್ತಾನೋ, ಅವನು ತಂದೆಯಿಂದ ಹುಟ್ಟಿದವರೆಲ್ಲರನ್ನೂ ಪ್ರೀತಿಸುತ್ತಾನೆ.
[2] ನಾವು ದೇವರನ್ನು ಪ್ರೀತಿಸಿ ಆತನ ಆಜ್ಞೆಗಳನ್ನು ಅನುಸರಿಸುವುದರಿಂದಲೇ ದೇವರ ಮಕ್ಕಳನ್ನು ಪ್ರೀತಿಸುತ್ತೇವೆಂಬುದನ್ನು ತಿಳಿದುಕೊಳ್ಳುತ್ತೇವೆ.
[3] ದೇವರ ಮೇಲಿನ ಪ್ರೀತಿ ಏನೆಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವುದೇ. ಆತನ ಆಜ್ಞೆಗಳು ಕಷ್ಟಕರವಾದವುಗಳಲ್ಲ.
[4] ಏಕೆಂದರೆ ದೇವರಿಂದ ಹುಟ್ಟಿದವನು ಲೋಕವನ್ನು ಜಯಿಸುತ್ತಾನೆ. ಲೋಕವನ್ನು ಜಯಿಸುವಂಥದ್ದು ನಮ್ಮ ನಂಬಿಕೆಯೇ.
[5] ಯೇಸುಕ್ರಿಸ್ತನು ದೇವರ ಮಗನೆಂದು ಒಪ್ಪಿಕೊಂಡು ನಂಬಿದವರಲ್ಲದೆ ಮತ್ತಾರು ಲೋಕವನ್ನು ಜಯಿಸಿದವರಾಗಿದ್ದಾರೆ?
[6] ಈತನು ಅಂದರೆ ಯೇಸು ಕ್ರಿಸ್ತನು ನೀರಿನಿಂದಲೂ, ರಕ್ತದಿಂದಲೂ ಬಂದಾತನು. ನೀರಿನಿಂದ ಮಾತ್ರವಲ್ಲದೆ ನೀರಿನಿಂದಲೂ, ರಕ್ತದಿಂದಲೂ ಸಾಕ್ಷಿ ಹೊಂದಿದವನಾಗಿದ್ದಾನೆ. ಆತ್ಮವು ಸಾಕ್ಷಿಯನ್ನು ಕೊಡುತ್ತದೆ. ಏಕೆಂದರೆ ಆತ್ಮನು ಸತ್ಯಸ್ವರೂಪನೇ.
[7] ಇದಲ್ಲದೆ ಸಾಕ್ಷಿ ಕೊಡುವವರು ಮೂವರಿದ್ದಾರೆ.
[8] ಆತ್ಮ, ನೀರು, ರಕ್ತ ಎಂಬ ಮೂರು ಸಾಕ್ಷಿಗಳುಂಟು. ಈ ಮೂರು ಒಂದೇ ಅಭಿಪ್ರಾಯವನ್ನು ಒಪ್ಪಿಕೊಳ್ಳುತ್ತವೆ.
[9] ನಾವು ಮನುಷ್ಯರ ಸಾಕ್ಷಿಯನ್ನು ಒಪ್ಪಿಕೊಳ್ಳುತ್ತೇವಲ್ಲಾ, ಹಾಗೆ ದೇವರ ಸಾಕ್ಷಿಯು ಅದಕ್ಕಿಂತಲೂ ಶ್ರೇಷ್ಠವಾಗಿದೆ. ಏಕೆಂದರೆ ದೇವರು ಕೊಟ್ಟ ಸಾಕ್ಷಿಯು ತನ್ನ ಮಗನ ಕುರಿತದ್ದಾಗಿದೆ.
[10] ದೇವರ ಮಗನಲ್ಲಿ ನಂಬಿಕೆ ಇಟ್ಟವನು ಆ ಸಾಕ್ಷಿಯನ್ನು ತನ್ನಲ್ಲೇ ಹೊಂದಿದ್ದಾನೆ. ದೇವರನ್ನು ನಂಬದವನು ಆತನನ್ನು ಸುಳ್ಳುಗಾರನನ್ನಾಗಿ ಮಾಡಿದ್ದಾನೆ. ಹೇಗೆಂದರೆ ದೇವರು ತನ್ನ ಮಗನ ಪರವಾಗಿ ಕೊಟ್ಟ ಸಾಕ್ಷಿಯಲ್ಲಿ ಅವನು ನಂಬಿಕೆಯಿಡಲಿಲ್ಲ.
[11] ಆ ಸಾಕ್ಷಿ ಯಾವುದೆಂದರೆ, ದೇವರು ನಮಗೆ ನಿತ್ಯಜೀವವನ್ನು ಅನುಗ್ರಹಿಸಿದ್ದಾನೆ. ಆ ಜೀವವು ಆತನ ಮಗನಲ್ಲಿದೆ ಎಂಬುದೇ.
[12] ಯಾರು ದೇವರ ಮಗನನ್ನು ನಂಬುತ್ತಾರೋ ಅವರಲ್ಲಿ ಆ ಜೀವ ಉಂಟು, ಆದರೆ ಯಾರು ದೇವರ ಮಗನನ್ನು ನಂಬುವುದಿಲ್ಲವೋ ಅವರಲ್ಲಿ ಆ ಜೀವವಿಲ್ಲ.
[13] ದೇವರ ಮಗನ ಹೆಸರಿನಲ್ಲಿ ನಂಬಿಕೆಯಿಟ್ಟಿರುವವರಾದ ನಿಮ್ಮಲ್ಲಿ ಆ ನಿತ್ಯಜೀವ ಉಂಟೆಂಬುದು ಗೊತ್ತಾಗುವುದಕ್ಕಾಗಿ ನಿಮಗೆ ಈ ವಿಷಯಗಳನ್ನು ಬರೆದಿದ್ದೇನೆ.
[14] ಮತ್ತು ದೇವರ ಚಿತ್ತಾನುಸಾರವಾಗಿ ಏನಾದರೂ ಬೇಡಿಕೊಂಡರೆ ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆಂಬ ಭರವಸೆಯು ಆತನಲ್ಲಿ ನಮಗುಂಟು.
[15] ನಾವು ಏನು ಬೇಡಿಕೊಂಡರೂ ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆಂಬುದು ನಮಗೆ ತಿಳಿದಿದ್ದರೆ, ನಾವು ಬೇಡಿದವುಗಳು ಆತನಿಂದ ನಮಗೆ ದೊರೆಯುತ್ತವೆಂಬುದು ನಮಗೆ ತಿಳಿಯುತ್ತದೆ.
[16] ಯಾವನಾದರೂ ತನ್ನ ಸಹೋದರನು ಮರಣಕರವಲ್ಲದ ಪಾಪಮಾಡುವುದನ್ನು ಕಂಡರೆ ಅವನು ದೇವರನ್ನು ಬೇಡಿಕೊಳ್ಳಲಿ. ಆಗ ದೇವರು ಮರಣಕರವಲ್ಲದ ಪಾಪಮಾಡುವವರಿಗೆ ಜೀವವನ್ನು ದಯಪಾಲಿಸುವನು. ಮರಣಕರವಾದ ಪಾಪವುಂಟು ಈ ಪಾಪದ ವಿಷಯವಾಗಿ ಅವನು ಬೇಡಿಕೊಳ್ಳಬೇಕೆಂದು ನಾನು ಹೇಳುವುದಿಲ್ಲ.
[17] ನೀತಿಗೆ ವಿರುದ್ಧವಾದದ್ದೆಲ್ಲವೂ ಪಾಪವಾಗಿದೆ. ಆದರೂ ಮರಣಕರವಲ್ಲದ ಪಾಪವುಂಟು.
[18] ದೇವರಿಂದ ಹುಟ್ಟಿರುವವನು ಪಾಪಮಾಡುವುದಿಲ್ಲವೆಂಬುದು ನಮಗೆ ಗೊತ್ತದೆ. ದೇವರಿಂದ ಹುಟ್ಟಿದವನು ತನ್ನನ್ನು ತಾನು ಕಾಪಾಡಿಕೊಳ್ಳುವನು. ಕೆಡುಕನು ಅವನನ್ನು ಮುಟ್ಟುವುದಿಲ್ಲ.
[19] ಇಡೀ ಲೋಕವು ಕೆಡುಕನ ವಶದಲ್ಲಿ ಇದ್ದರು ಸಹ ನಾವು ದೇವರಿಗೆ ಸಂಬಂಧಪಟ್ಟವರಾಗಿದ್ದೇವೆಂಬುದು ನಮಗೆ ತಿಳಿದಿದೆ.
[20] ದೇವರ ಮಗನು ಈ ಲೋಕಕ್ಕೆ ಬಂದು ನಾವು ಸತ್ಯವಾಗಿರುವಾತನನ್ನು ಅರಿತುಕೊಳ್ಳುವ ಹಾಗೆ ನಮಗೆ ವಿವೇಕವನ್ನು ಕೊಟ್ಟಿದ್ದಾನೆಂಬುದು ನಮಗೆ ಗೊತ್ತಿದೆ, ಮತ್ತು ನಾವು ದೇವರ ಮಗನಾದ ಯೇಸುಕ್ರಿಸ್ತನಲ್ಲಿ ಇರುವವರಾಗಿ ಸತ್ಯದೇವರಾಗಿರುವಾತನಲ್ಲಿದ್ದೇವೆ. ಈ ಕ್ರಿಸ್ತನೇ ಸತ್ಯದೇವರೂ, ನಿತ್ಯಜೀವವೂ ಆಗಿದ್ದಾನೆ.
[21] ಪ್ರಿಯಮಕ್ಕಳೇ, ವಿಗ್ರಹಗಳಿಗೆ ದೂರವಾಗಿರುವಂತೆ ನಿಮ್ಮನ್ನು ಕಾಪಾಡಿಕೊಳ್ಳಿರಿ.