Skip to content
Opens in a new window
Listen to this chapter • 5:12

[1] ಪ್ರಿಯರೇ, ಅನೇಕ ಸುಳ್ಳುಪ್ರವಾದಿಗಳು ಲೋಕದೊಳಗೆ ಬಂದಿರುವುದರಿಂದ ನೀವು ಎಲ್ಲಾ ಆತ್ಮಗಳ ನುಡಿಗಳನ್ನು ನಂಬದೆ ಆಯಾ ಆತ್ಮಗಳ ನುಡಿಗಳು ದೇವರಿಂದ ಪ್ರೇರಿತವಾದವುಗಳೋ ಅಲ್ಲವೋ ಎಂದು ಅವುಗಳನ್ನು ಪರೀಕ್ಷಿಸಬೇಕು.

[2] ದೇವರಾತ್ಮ ಪ್ರೇರಿತವಾದ ನುಡಿಗಳು ಎಂದು ತಿಳಿದುಕೊಳ್ಳುವುದು ಹೇಗೆಂದರೆ, ಯೇಸು ಕ್ರಿಸ್ತನು ಮನುಷ್ಯ ರೂಪವನ್ನು ಧರಿಸಿಕೊಂಡು ಬಂದನು ಎಂದು ಒಪ್ಪಿಕೊಳ್ಳುವ ಆತ್ಮವು ದೇವರಿಂದ ಪ್ರೇರಿತವಾಗಿ ಬಂದದ್ದಾಗಿದೆ.

[3] ಯೇಸುಕ್ರಿಸ್ತನನ್ನು ಒಪ್ಪಿಕೊಳ್ಳದಿರುವ ಪ್ರತಿಯೊಂದು ಆತ್ಮವು ದೇವರಿಂದ ಬಂದದ್ದಲ್ಲ. ಅದು ಕ್ರಿಸ್ತವಿರೋಧಿಯ ಆತ್ಮವಾಗಿದೆ. ಅದು ಬರುತ್ತದೆಂಬುದನ್ನು ನೀವು ಕೇಳಿದ್ದೀರಲ್ಲಾ. ಅದು ಈಗಾಗಲೇ ಲೋಕದಲ್ಲಿ ಇದೆ.

[4] ಪ್ರಿಯಮಕ್ಕಳೇ, ನೀವಂತೂ ದೇವರಿಗೆ ಸೇರಿದವರಾಗಿದ್ದೀರಿ. ಮತ್ತು ಲೋಕದಲ್ಲಿರುವವನಿಗಿಂತ ನಿಮ್ಮಲ್ಲಿರುವಾತನು ಉನ್ನತನಾಗಿರುವುದರಿಂದ ನೀವು ಆ ಸುಳ್ಳು ಪ್ರವಾದಿಗಳ ಆತ್ಮವನ್ನು ಜಯಿಸಿದ್ದೀರಿ.

[5] ಅವರು ಲೋಕಸಂಬಂಧಿಗಳಾಗಿದ್ದಾರೆ. ಈ ಕಾರಣದಿಂದ ಅವರು ಲೌಕಿಕವಾದುದನ್ನೇ ಮಾತನಾಡುತ್ತಾರೆ ಮತ್ತು ಲೋಕದವರು ಅವರ ಮಾತನ್ನು ಕೇಳುತ್ತಾರೆ.

[6] ನಾವಂತೂ ದೇವರಿಗೆ ಸಂಬಂಧಪಟ್ಟವರಾಗಿದ್ದೇವೆ. ದೇವರನ್ನು ಬಲ್ಲವರು ನಮ್ಮ ಮಾತನ್ನು ಕೇಳುತ್ತಾರೆ. ದೇವರಿಗೆ ಸಂಬಂಧಪಡದವರು ನಮ್ಮ ಮಾತನ್ನು ಕೇಳುವುದಿಲ್ಲ. ಇದರಿಂದಲೇ ಸತ್ಯವನ್ನು ಬೋಧಿಸುವ ಆತ್ಮ ಯಾವುದು ಮತ್ತು ಸುಳ್ಳನ್ನು ಬೋಧಿಸುವ ಆತ್ಮ ಯಾವುದು ಎಂದು ನಾವು ತಿಳಿದುಕೊಳ್ಳುತ್ತೇವೆ.

[7] ಪ್ರಿಯರೇ, ನಾವು ಒಬ್ಬರನ್ನೊಬ್ಬರು ಪ್ರೀತಿಸೋಣ. ಏಕೆಂದರೆ ಪ್ರೀತಿಯು ದೇವರಿಂದ ಬಂದದ್ದಾಗಿದೆ ಮತ್ತು ಪ್ರೀತಿ ಮಾಡುವ ಪ್ರತಿಯೊಬ್ಬನು ದೇವರಿಂದ ಹುಟ್ಟಿದವನೂ ದೇವರನ್ನು ಬಲ್ಲವನೂ ಆಗಿದ್ದಾನೆ.

[8] ಪ್ರೀತಿ ಇಲ್ಲದವನು ದೇವರನ್ನು ಬಲ್ಲವನಲ್ಲ. ಏಕೆಂದರೆ ದೇವರು ಪ್ರೀತಿಸ್ವರೂಪನಾಗಿದ್ದಾನೆ.

[9] ನಾವು ಆತನ ಮೂಲಕ ಜೀವಿಸುವುದಕ್ಕಾಗಿ ದೇವರು ತನ್ನ ಒಬ್ಬನೇ ಮಗನನ್ನು ಲೋಕಕ್ಕೆ ಕಳುಹಿಸಿಕೊಟ್ಟದ್ದರಲ್ಲಿಯೇ ದೇವರ ಪ್ರೀತಿಯು ನಮ್ಮಲ್ಲಿ ಪ್ರತ್ಯಕ್ಷವಾಗಿದೆ.

[10] ನಾವು ದೇವರನ್ನು ಪ್ರೀತಿಸಿಲ್ಲ, ಆದರೂ ಆತನು ನಮ್ಮನ್ನು ಪ್ರೀತಿಸಿ ನಮ್ಮ ಪಾಪಗಳಿಗೆ ಪ್ರಾಯಶ್ಚಿತ್ತ ಬಲಿಯಾಗಿ ತನ್ನ ಮಗನನ್ನು ಕಳುಹಿಸಿಕೊಟ್ಟಿದ್ದರಲ್ಲಿಯೇ ಆತನ ನಿಜವಾದ ಪ್ರೀತಿಯು ತೋರಿಬರುತ್ತದೆ.

[11] ಪ್ರಿಯರೇ, ದೇವರು ನಮ್ಮನ್ನು ಹೀಗೆ ಪ್ರೀತಿಸಿದ ಮೇಲೆ ನಾವೂ ಸಹ ಒಬ್ಬರನ್ನೊಬ್ಬರು ಪ್ರೀತಿಸುವ ಹಂಗಿನಲ್ಲಿದ್ದೇವೆ.

[12] ದೇವರನ್ನು ಯಾರೂ ಎಂದೂ ನೋಡಿಲ್ಲ. ನಾವು ಒಬ್ಬರನ್ನೊಬ್ಬರು ಪ್ರೀತಿಸಿದರೆ ದೇವರು ನಮ್ಮಲ್ಲಿ ನೆಲೆಗೊಂಡಿದ್ದಾನೆ, ಮತ್ತು ಆತನ ಪ್ರೀತಿಯು ನಮ್ಮಲ್ಲಿ ಪರಿಪೂರ್ಣಗೊಂಡಿರುತ್ತದೆ.

[13] ದೇವರು ನಮಗೆ ತನ್ನ ಆತ್ಮವನ್ನು ಕೊಟ್ಟಿರುವುದರಿಂದಲೇ ನಾವು ಆತನಲ್ಲಿ ನೆಲೆಗೊಂಡಿದ್ದೇವೆ ಮತ್ತು ಆತನು ನಮ್ಮಲ್ಲಿ ನೆಲೆಗೊಂಡಿದ್ದಾನೆಂದು ತಿಳಿದುಕೊಳ್ಳುತ್ತೇವೆ.

[14] ತಂದೆಯು ತನ್ನ ಮಗನನ್ನು ಲೋಕರಕ್ಷಕನನ್ನಾಗಿ ಕಳುಹಿಸಿಕೊಟ್ಟಿರುವುದನ್ನು ನಾವು ತಿಳಿದಿದ್ದೇವೆ ಮತ್ತು ಅದರ ವಿಷಯದಲ್ಲಿ ನಾವು ಸಾಕ್ಷಿ ಹೇಳುತ್ತೇವೆ.

[15] ಯೇಸುಕ್ರಿಸ್ತನು ದೇವರ ಮಗನಾಗಿದ್ದಾನೆಂದು ಯಾರು ಒಪ್ಪಿಕೊಳ್ಳುತ್ತಾರೋ ಅವರಲ್ಲಿ ದೇವರು ನೆಲೆಗೊಂಡಿರುತ್ತಾನೆ, ಹಾಗೂ ಅವನು ದೇವರಲ್ಲಿ ನೆಲೆಗೊಂಡಿದ್ದಾನೆ.

[16] ಹೀಗೆ ದೇವರು ನಮ್ಮಲ್ಲಿಟ್ಟಿರುವ ಪ್ರೀತಿಯನ್ನು ನಾವು ತಿಳಿದುಕೊಂಡಿದ್ದೇವೆ. ಅದನ್ನು ನಂಬಿದ್ದೇವೆ. ದೇವರು ಪ್ರೀತಿಸ್ವರೂಪಿ, ಪ್ರೀತಿಯಲ್ಲಿ ನೆಲೆಗೊಂಡಿರುವವನು ದೇವರಲ್ಲಿ ನೆಲೆಗೊಂಡಿದ್ದಾನೆ. ದೇವರು ಅವನಲ್ಲಿ ನೆಲೆಗೊಂಡಿದ್ದಾನೆ.

[17] ನ್ಯಾಯತೀರ್ಪಿನ ದಿನದಲ್ಲಿ ನಾವು ಧೈರ್ಯದಿಂದಿರುವುದಕ್ಕಾಗಿ ಆತನ ಪ್ರೀತಿಯು ನಮ್ಮೊಳಗೆ ಪೂರ್ಣಗೊಂಡಿದೆ. ಈ ಲೋಕದಲ್ಲಿ ನಮ್ಮ ಬಾಳು ಕ್ರಿಸ್ತಯೇಸುವಿನ ಬಾಳಿನಂತೆ ಇರುವುದರಿಂದಲೇ ಆ ಭರವಸೆ ನಮಗೆ ಇರುತ್ತದೆ.

[18] ಪ್ರೀತಿ ಇರುವಲ್ಲಿ ಹೆದರಿಕೆಯಿಲ್ಲ. ಹೆದರಿಕೆಯಿರುವಲ್ಲಿ ಯಾತನೆಗಳಿರುವವು. ಆದರೆ ಪೂರ್ಣಪ್ರೀತಿಯು ಹೆದರಿಕೆಯನ್ನು ಹೊಡೆದೊಡಿಸಿಬಿಡುತ್ತದೆ. ಹೆದರುವವನು ಪ್ರೀತಿಯಲ್ಲಿ ಪೂರ್ಣಗೊಂಡವನಲ್ಲ.

[19] ದೇವರು ಮೊದಲು ನಮ್ಮನ್ನು ಪ್ರೀತಿಸಿದ್ದರಿಂದಲೇ ನಾವು ಆತನನ್ನು ಪ್ರೀತಿಸುತ್ತೇವೆ.

[20] ಒಬ್ಬನು, “ತಾನು ದೇವರನ್ನು ಪ್ರೀತಿಸುತ್ತೇನೆ” ಎಂದು ಹೇಳಿ ತನ್ನ ಸಹೋದರನನ್ನು ದ್ವೇಷಿಸಿದರೆ ಅವನು ಸುಳ್ಳುಗಾರನಾಗಿದ್ದಾನೆ. ಏಕೆಂದರೆ ತನ್ನೊಂದಿಗೆ ಇರುವ ಸಹೋದರನನ್ನು ಪ್ರೀತಿಸದವನು, ತಾನು ಕಾಣದಿರುವ ದೇವರನ್ನು ಹೇಗೆ ಪ್ರೀತಿಸಬಲ್ಲನು?

[21] ದೇವರನ್ನು ಪ್ರೀತಿಸುವವನು, ತನ್ನ ಸಹೋದರನನ್ನೂ ಪ್ರೀತಿಸಬೇಕೆಂಬ ಆಜ್ಞೆಯನ್ನು ನಾವು ಆತನಿಂದ ಹೊಂದಿದ್ದೇವೆ.

1 ಯೋಹಾನನು — Chapters