[1] ಇಗೋ, ನಾವು ದೇವರ ಮಕ್ಕಳೆಂದು ಕರೆಯಲ್ಪಡುವುದರಲ್ಲಿ ತಂದೆಯು ಎಂಥಾ ಪ್ರೀತಿಯನ್ನು ನಮ್ಮ ಮೇಲೆ ಇಟ್ಟಿದ್ದಾನಲ್ಲಾ! ನಾವು ಆತನ ಮಕ್ಕಳಾಗಿದ್ದೇವೆ. ಲೋಕವು ಆತನನ್ನು ಅರ್ಥಮಾಡಿಕೊಳ್ಳದೆ ಇರುವುದರಿಂದ ನಮ್ಮನ್ನೂ ಅರ್ಥಮಾಡಿಕೊಳ್ಳುವುದಿಲ್ಲ.
[2] ಪ್ರಿಯರೇ, ನಾವು ಈಗ ದೇವರ ಮಕ್ಕಳಾಗಿದ್ದೇವೆ. ಮುಂದೆ ನಾವು ಎಂಥವರಾಗಿರುತ್ತೆವೋ ಎಂಬುದು ಇನ್ನೂ ತಿಳಿದಿಲ್ಲ. ಆದರೆ ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಾವು ಆತನ ಹಾಗಿರುವೆವೆಂದು ಬಲ್ಲೆವು. ಏಕೆಂದರೆ ಆತನಿರುವ ಪ್ರಕಾರವೇ ಆತನನ್ನು ನೋಡುವೆವು.
[3] ಆತನ ಮೇಲೆ ಈ ನಿರೀಕ್ಷೆಯನ್ನು ಇಟ್ಟಿರುವ ಪ್ರತಿಯೊಬ್ಬನು ಆತನು ಶುದ್ಧನಾಗಿರುವಂತೆಯೇ ತನ್ನನ್ನು ತಾನು ಶುದ್ಧಿಮಾಡಿಕೊಳ್ಳುತ್ತಾನೆ.
[4] ಪಾಪಮಾಡುವ ಪ್ರತಿಯೊಬ್ಬನೂ ಅಧರ್ಮವನ್ನು ಮಾಡುವವನಾಗಿದ್ದಾನೆ; ಪಾಪವು ಅಧರ್ಮವೇ.
[5] ಪಾಪಗಳನ್ನು ನಿವಾರಣೆ ಮಾಡುವುದಕ್ಕಾಗಿ ಕ್ರಿಸ್ತನು ಪ್ರತ್ಯಕ್ಷನಾದನೆಂಬುದು ಮತ್ತು ಆತನಲ್ಲಿ ಪಾಪವಿಲ್ಲವೆಂಬುದು ನಿಮಗೆ ಗೊತ್ತು.
[6] ಆತನಲ್ಲಿ ನೆಲೆಗೊಂಡಿರುವವನು ಪಾಪವನ್ನುಮಾಡುವುದಿಲ್ಲ; ಪಾಪಮಾಡುವವನು ಆತನನ್ನು ನೋಡಿಲ್ಲ, ತಿಳಿದೂ ಇಲ್ಲ;
[7] ಪ್ರಿಯರಾದ ಮಕ್ಕಳೇ, ಯಾರೂ ನಿಮ್ಮನ್ನು ಮೋಸಗೊಳಿಸದಿರಲಿ. ಕ್ರಿಸ್ತನು ಹೇಗೆ ನೀತಿವಂತನಾಗಿದ್ದನೋ ಹಾಗೆಯೇ ನೀತಿಯನ್ನನುಸರಿಸುವವನು ನೀತಿವಂತನಾಗಿದ್ದಾನೆ.
[8] ಪಾಪಮಾಡುವವನು ಸೈತಾನನಿಗೆ ಸಂಬಂಧಪಟ್ಟವನಾಗಿದ್ದಾನೆ. ಏಕೆಂದರೆ ಆದಿಯಿಂದಲೂ ಸೈತಾನನು ಪಾಪಮಾಡುವವನಾಗಿದ್ದಾನೆ. ಆದ್ದರಿಂದ ಸೈತಾನನ ಕೆಲಸಗಳನ್ನು ನಾಶಮಾಡುವುದಕ್ಕೋಸ್ಕರ ದೇವಕುಮಾರನು ಪ್ರತ್ಯಕ್ಷನಾದನು.
[9] ದೇವರಿಂದ ಹುಟ್ಟಿದವನು ಪಾಪಮಾಡುವುದಿಲ್ಲ. ಏಕೆಂದರೆ ದೇವರ ಸ್ವಭಾವವು ಅವನಲ್ಲಿ ನೆಲೆಗೊಂಡಿದೆ. ಅವನು ದೇವರಿಂದ ಹುಟ್ಟಿದ ಕಾರಣ ಪಾಪಮಾಡಲಾರನು.
[10] ಆದ್ದರಿಂದ ದೇವರ ಮಕ್ಕಳು ಯಾರೆಂಬುದು ಹಾಗೂ ಸೈತಾನನ ಮಕ್ಕಳು ಯಾರೆಂಬುದು ಇದರಿಂದ ತಿಳಿದುಬರುತ್ತದೆ. ನೀತಿಯನ್ನು ಅನುಸರಿಸದವರೂ ತನ್ನ ಸಹೋದರನನ್ನು ಪ್ರೀತಿಸದವರೂ ದೇವರಿಗೆ ಸಂಬಂಧಪಟ್ಟವರಲ್ಲ.
[11] ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನೀವು ಮೊದಲಿನಿಂದಲೂ ಕೇಳಿದ ಸಂದೇಶವಾಗಿದೆ.
[12] ಕೆಡುಕುನಾಗಿದ್ದು ತನ್ನ ತಮ್ಮನನ್ನು ಕೊಂದುಹಾಕಿದ ಕಾಯಿನನಂತೆ ನಾವು ಇರಬಾರದು. ಅವನು ಯಾಕೆ ತಮ್ಮನನ್ನು ಕೊಂದು ಹಾಕಿದನು? ತನ್ನ ಕೃತ್ಯಗಳು ಕೆಟ್ಟದ್ದು ಮತ್ತು ತನ್ನ ತಮ್ಮನ ಕೃತ್ಯಗಳು ನೀತಿಯುಳ್ಳವುಗಳೂ ಆಗಿದ್ದುದರಿಂದಲೇ.
[13] ನನ್ನ ಸಹೋದರರೇ, ಲೋಕವು ನಿಮ್ಮನ್ನು ದ್ವೇಷಿಸಿದರೆ ಆಶ್ಚರ್ಯಪಡಬೇಡಿರಿ.
[14] ನಾವಂತೂ ಕ್ರೈಸ್ತಸಹೋದರರನ್ನು ಪ್ರೀತಿಸುವವರಾಗಿರುವುದರಿಂದ ಮರಣದಿಂದ ಪಾರಾಗಿ ನಿತ್ಯಜೀವದಲ್ಲಿ ಸೇರಿದ್ದೇವೆಂಬುದು ನಮಗೆ ಗೊತ್ತಾಗಿದೆ. ತನ್ನ ಸಹೋದರನನ್ನು ಪ್ರೀತಿಸದೆ ಇರುವವನು ಮರಣದಲ್ಲೇ ಇದ್ದಾನೆ.
[15] ತನ್ನ ಸಹೋದರನನ್ನು ದ್ವೇಷಿಸುವವನು ಕೊಲೆಗಾರನಾಗಿದ್ದಾನೆ. ಮತ್ತು ಯಾವ ಕೊಲೆಗಾರನಲ್ಲಿಯೂ ನಿತ್ಯಜೀವವು ಇರುವುದಿಲ್ಲವೆಂಬುದು ನಿಮಗೆ ಗೊತ್ತಾಗಿದೆ.
[16] ಕ್ರಿಸ್ತನು ನಮಗೋಸ್ಕರ ತನ್ನ ಪ್ರಾಣವನ್ನು ಅರ್ಪಿಸಿದ್ದರಿಂದ ದೇವರ ಪ್ರೀತಿ ಇಂಥದ್ದೆಂದು ನಮಗೆ ತಿಳಿದು ಬಂದಿದೆ. ನಾವು ಸಹ ಸಹೋದರರಿಗೋಸ್ಕರ ನಮ್ಮ ಪ್ರಾಣಗಳನ್ನು ಕೊಡುವ ಹಂಗಿನಲ್ಲಿದ್ದೇವೆ.
[17] ಆದರೆ ಈ ಲೋಕದ ಸಂಪತ್ತುಳ್ಳ ಯಾರಾದರೂ ಕೊರತೆಯಲ್ಲಿರುವ ತನ್ನ ಸಹೋದರನನ್ನು ನೋಡಿ ಕನಿಕರಪಡದೆ ಬಿಟ್ಟರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರಲು ಸಾಧ್ಯವೇ?
[18] ನನ್ನ ಪ್ರಿಯ ಮಕ್ಕಳೇ, ನೀವು ಬರೀ ಮಾತಿನಿಂದಾಗಲಿ, ಬಾಯುಪಚಾರದಿಂದಾಗಲಿ, ಪ್ರೀತಿಸುವವರಾಗಿರದೆ ಕ್ರಿಯೆಗಳಿಂದಲೂ ಮತ್ತು ನಿಜ ಪ್ರೀತಿಯಿಂದ ಪ್ರೀತಿಸುವವರಾಗಿರಬೇಕು.
[19] ನಾವು ಸತ್ಯಕ್ಕೆ ಸೇರಿದವರೆಂಬುದು ಇದರಿಂದಲೇ ನಮಗೆ ತಿಳಿಯುತ್ತದೆ, ನಮ್ಮ ಹೃದಯವು ದೇವರ ಸಮಕ್ಷಮದಲ್ಲಿ ದೋಷರಹಿತವಾಗಿರುತ್ತದೆ.
[20] ಏಕೆಂದರೆ ನಮ್ಮ ಹೃದಯವು ಯಾವ ವಿಷಯದಲ್ಲಾದರು ನಮ್ಮನ್ನು ದೋಷಿಗಳೆಂದು ನಿರ್ಣಯಿಸಿದರೆ, ದೇವರು ನಮ್ಮ ಹೃದಯವನ್ನು ಬಲ್ಲವನಾಗಿರುವುದರಿಂದ ನಮ್ಮ ಹೃದಯವನ್ನು ಆತನಲ್ಲಿ ದೃಢಪಡಿಸಬಹುದು.
[21] ಪ್ರಿಯರೇ, ನಮ್ಮ ಹೃದಯವು ನಮ್ಮನ್ನು ದೋಷಿಗಳೆಂದು ಖಂಡಿಸಿ ನಡೆದರೆ ದೇವರ ಸನ್ನಿಧಿಯಲ್ಲಿ ನಮಗೆ ಭರವಸೆ ದೊರೆಯುತ್ತದೆ.
[22] ಆತನ ಆಜ್ಞೆಗಳನ್ನು ಕೈಕೊಂಡು ಆತನಿಗೆ ಮೆಚ್ಚಿಕೆಯಾಗುವ ಕಾರ್ಯಗಳನ್ನು ಮಾಡುವವರಾದರೆ ನಾವು ಏನು ಬೇಡಿಕೊಂಡರೂ ಆತನಿಂದ ಹೊಂದುವೆವು.
[23] ದೇವರ ಆಜ್ಞೆ ಯಾವುದೆಂದರೆ ನಾವು ಆತನ ಮಗನಾದ ಯೇಸು ಕ್ರಿಸ್ತನನ್ನು ನಂಬಿ ಆತನು ನಮಗೆ ಕೊಟ್ಟಿರುವ ಆಜ್ಞೆಗಳ ಪ್ರಕಾರ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ.
[24] ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವವನು ಆತನಲ್ಲಿ ನೆಲೆಗೊಂಡಿರುತ್ತಾನೆ ಮತ್ತು ದೇವರು ಆತನಲ್ಲಿ ನೆಲೆಗೊಂಡಿರುತ್ತಾನೆ. ಆತನು ಅವನಲ್ಲಿ ನೆಲೆಗೊಂಡಿರುತ್ತಾನೆ. ನಮ್ಮಲ್ಲಿ ನೆಲೆಗೊಂಡಿದ್ದಾನೆಂದು ಆತನು ನಮಗೆ ಅನುಗ್ರಹಿಸಿರುವ ಆತ್ಮನಿಂದ ನಾವು ಬಲ್ಲವರಾಗಿದ್ದೇವೆ.