Skip to content
Opens in a new window
Listen to this chapter • 2:32

[1] ಸಭೆಯ ಹಿರಿಯನಾದ ನಾನು, ದೇವರು ಆಯ್ಕೆ ಮಾಡಿರುವ ಅಮ್ಮನವರಿಗೂ, ಆಕೆಯ ಮಕ್ಕಳಿಗೂ ಬರೆಯುವುದೇನೆಂದರೆ;

[2] ನಮ್ಮಲ್ಲಿ ನೆಲೆಗೊಂಡಿರುವಂಥ ಮತ್ತು ಸದಾಕಾಲ ನಮ್ಮೊಂದಿಗಿರುವಂಥ ಸತ್ಯದ ನಿಮಿತ್ತ, ನಾನು ನಿಮ್ಮನ್ನು ಸತ್ಯವಾಗಿ ಪ್ರೀತಿಸುತ್ತೇನೆ. ನಾನು ಮಾತ್ರವಲ್ಲದೆ, ಸತ್ಯವನ್ನು ಪ್ರೀತಿಸುವವರೆಲ್ಲರೂ ನಿಮ್ಮನ್ನು ಪ್ರೀತಿಸುತ್ತಾರೆ.

[3] ತಂದೆಯಾದ ದೇವರಿಂದಲೂ, ದೇವರ ಮಗನಾಗಿರುವ ಯೇಸು ಕ್ರಿಸ್ತನಿಂದಲೂ, ಕೃಪೆಯೂ, ಕರುಣೆಯೂ, ಶಾಂತಿಯೂ, ಸತ್ಯವೂ, ಪ್ರೀತಿಯೂ ಸದಾಕಾಲ ನಮ್ಮೊಂದಿಗಿರಲಿ.

[4] ತಂದೆಯಿಂದ ನಾವು ಹೊಂದಿದ ಆಜ್ಞಾನುಸಾರ, ನಿಮ್ಮ ಮಕ್ಕಳಲ್ಲಿ ಕೆಲವರು, ಸತ್ಯವಂತರಾಗಿ ನಡೆಯುವುದನ್ನು ಕಂಡು ನಾನು ಬಹಳ ಸಂತೋಷಪಟ್ಟೆನು.

[5] ಅಮ್ಮನವರೇ, ನಾನು ಹೊಸ ಆಜ್ಞೆಯನ್ನು ನಿಮಗೆ ಬರೆಯದೆ, ಮೊದಲಿನಿಂದಲೂ ನಮಗೆ ಇದ್ದ ಆಜ್ಞೆಯನ್ನು ನಿಮಗೆ ಬರೆಯುವವನಾಗಿ; ನಾವು ಒಬ್ಬರನ್ನೊಬ್ಬರು ಪ್ರೀತಿಸುವವರಾಗಿರೋಣ ಎಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.

[6] ದೇವರ ಆಜ್ಞೆಗಳನ್ನು ಅನುಸರಿಸಿ, ವಿಧೇಯರಾಗಿ ನಡೆಯುವುದೇ ಪ್ರೀತಿಯಾಗಿದೆ. ಪ್ರೀತಿಯಲ್ಲಿ ನಡೆಯಬೇಕೆಂಬುದೇ, ನೀವು ಮೊದಲಿನಿಂದಲೂ ಕೇಳಿದ ಆಜ್ಞೆಯಾಗಿದೆ.

[7] ಏಕೆಂದರೆ, ಯೇಸುಕ್ರಿಸ್ತನು ಮನುಷ್ಯನಾಗಿ ಬಂದನು ಎಂಬುದನ್ನು ಒಪ್ಪದೆ ಇರುವ ಅನೇಕ ಮೋಸಗಾರರು ಲೋಕದೊಳಗೆ ಹೊರಟು ಬಂದಿದ್ದಾರೆ. ಇಂಥವರೇ, ಯೇಸುವನ್ನು ಒಪ್ಪದ ಮೋಸಗಾರರೂ, ಕ್ರಿಸ್ತವಿರೋಧಿಗಳು ಆಗಿದ್ದಾರೆ.

[8] ನೀವು ಪ್ರಯಾಸಪಟ್ಟು ಮಾಡಿದವುಗಳನ್ನು, ಕಳೆದುಕೊಳ್ಳದೆ ಪೂರ್ಣ ಪ್ರತಿಫಲವನ್ನು ಹೊಂದುವಂತೆ ಜಾಗರೂಕರಾಗಿರಿ.

[9] ಕ್ರಿಸ್ತನ ಉಪದೇಶದಲ್ಲಿ ನೆಲೆಗೊಳ್ಳದೆ ಅದನ್ನು ಮೀರಿ ಹೋಗುವವನಲ್ಲಿ ದೇವರಿಲ್ಲ. ಆ ಉಪದೇಶದಲ್ಲಿ ನೆಲೆಗೊಂಡಿರುವವನಿಗೆ ತಂದೆಯ ಮತ್ತು ಮಗನ ಅನ್ಯೋನ್ಯತೆ ಇರುತ್ತದೆ.

[10] ಈ ಉಪದೇಶವನ್ನು ಮೀರಿದ ಯಾವನಾದರೂ ನಿಮ್ಮ ಬಳಿಗೆ ಬಂದರೆ ಅವನನ್ನು ಮನೆಯೊಳಗೆ ಸೇರಿಸಿಕೊಳ್ಳಬೇಡಿರಿ. ಅವನಿಗೆ ಶುಭವಾಗಲಿ ಎಂದು ಹೇಳಬೇಡಿರಿ.

[11] ಏಕೆಂದರೆ, ಅವನಿಗೆ ಶುಭವಾಗಲಿ ಎಂದು ಹರಸುವವನು ಅವನ ದುಷ್ಕೃತ್ಯಗಳಲ್ಲಿ ಪಾಲುಗಾರನಾಗುತ್ತಾನೆ.

[12] ನಿಮಗೆ ಬರೆಯುವುದಕ್ಕೆ ನನಗೆ ಅನೇಕ ವಿಷಯಗಳಿದ್ದರೂ, ಅವುಗಳನ್ನು ಮಸಿಯಿಂದ ಕಾಗದದ ಮೇಲೆ ಬರೆದು ತಿಳಿಸುವುದಕ್ಕೆ ನನಗೆ ಇಷ್ಟವಿಲ್ಲ. ಆದರೆ, ನಾನು ನಿಮ್ಮ ಬಳಿಗೆ ಬಂದು, ನಿಮ್ಮ ಸಂಗಡ ಮುಖಾಮುಖಿಯಾಗಿ ಮಾತನಾಡುವೆನೆಂದು ನಿರೀಕ್ಷಿಸುತ್ತೇನೆ. ಆಗ, ನಿಮ್ಮ ಸಂತೋಷವು ಪರಿಪೂರ್ಣವಾಗುವುದು.

[13] ದೇವರು ಆರಿಸಿಕೊಂಡವರಾದ, ನಿಮ್ಮ ಸಹೋದರಿಯ ಮಕ್ಕಳು ನಿಮಗೆ ವಂದನೆ ಹೇಳುತ್ತಾರೆ.