Skip to content
Opens in a new window
Listen to this chapter • 3:14

[1] ನೀನು ನನ್ನ ತಾಯಿಯ ಹಾಲು ಕುಡಿದ ನನ್ನ ಅಣ್ಣನಾಗಿದ್ದರೆ, ಎಷ್ಟೋ ಚೆನ್ನಾಗಿರುತ್ತಿತ್ತು! ನಾನು ನಿನ್ನನ್ನು ಕಂಡು ಹೊರಗೆಯೇ ನಿನಗೆ ಮುದ್ದಿಡುತ್ತಿದ್ದೆ. ಆಗ ಯಾರೂ ನನ್ನನ್ನು ನಿಂದಿಸುತ್ತಿರಲಿಲ್ಲ.

[2] ನಿನ್ನನ್ನು ನನ್ನ ತಾಯಿಯ ಮನೆಗೆ ಕರೆದುಕೊಂಡು ಹೋಗುತ್ತಿದ್ದೆನು. ಅಲ್ಲಿ ನೀನು ನನಗೆ ಉಪದೇಶ ಮಾಡಬಹುದಾಗಿತ್ತು. ನಾನು ದ್ರಾಕ್ಷಿ ಮಿಶ್ರಪಾನಕವನ್ನು ಕೊಡುತ್ತಿದ್ದೆನು. ದಾಳಿಂಬೆ ರಸವನ್ನು ನಿನಗೆ ಕುಡಿಸುತ್ತಿದ್ದೆನು.

[3] ನಿನ್ನ ಎಡಗೈ ನನ್ನ ತಲೆದಿಂಬಾಗಿರಲಿ. ನಿನ್ನ ಬಲಗೈ ನನ್ನನ್ನು ಅಪ್ಪಿಕೊಳ್ಳಲಿ.

[4] ಯೆರೂಸಲೇಮಿನ ಪುತ್ರಿಯರೇ, ಮೆಚ್ಚುವ ಕಾಲಕ್ಕೆ ಮುಂಚೆ ನೀವು ಪ್ರೀತಿಯನ್ನು ಎಬ್ಬಿಸಬೇಡಿರಿ, ಎಚ್ಚರಿಸಲೂ ಬೇಡಿರಿ ಎಂದು ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ.

[5] ತನ್ನ ಪ್ರಿಯನನ್ನು ಒರಗಿಕೊಂಡು ಅಡವಿಯಿಂದ ಬರುವ ಇವಳು ಯಾರು? ಸೇಬುಗಿಡದ ಕೆಳಗೆ ನಿನ್ನನ್ನು ಪ್ರೇರಿಸಿದೆನು. ಅದು ನಿನ್ನ ತಾಯಿ ನಿನ್ನನ್ನು ಗರ್ಭಧರಿಸಿದ ಸ್ಥಳ. ಅಲ್ಲಿ ನಿನ್ನ ತಾಯಿ ಪ್ರಸವವೇದನೆಯಿಂದ ನಿನ್ನನ್ನು ಹಡೆದಳು.

[6] ನನ್ನನ್ನು ನಿನ್ನ ಹೃದಯದ ಮೇಲೆ ಒಂದು ಮುದ್ರೆಯಾಗಿ ಧರಿಸಿಕೋ. ನಾನು ನಿನ್ನ ಕೈಮೇಲೆ ಒಂದು ಮುದ್ರೆಯಾಗಿರುವೆ. ಪ್ರೀತಿಯು ಮರಣದಷ್ಟು ಬಲವಾಗಿದೆ. ಮತ್ಸರವು ಸಮಾಧಿಯಷ್ಟು ಕ್ರೂರ. ಪ್ರೀತಿಯು ಉರಿಯುವ ಬೆಂಕಿ ಪ್ರಜ್ವಲಿಸುವ ಜ್ವಾಲೆಯ ಹಾಗಿರುವುದು.

[7] ಜಲರಾಶಿಗಳು ಪ್ರೀತಿಯನ್ನು ನಂದಿಸಲಾರವು. ಪ್ರವಾಹಗಳು ಸಹ ಪ್ರೀತಿಯನ್ನು ಮುಳುಗಿಸಲಾರವು. ಒಬ್ಬನು ತನ್ನ ಆಸ್ತಿಯನ್ನೆಲ್ಲಾ ಪ್ರೀತಿಗೋಸ್ಕರ ಕೊಟ್ಟರೂ, ಆ ಪ್ರೀತಿಗೆ ಬದಲಾಗಿ ಅಂಥವನಿಗೆ ಸಂಪೂರ್ಣ ನಿಂದೆಯೇ ಸಿಗುವುದು.

[8] ಪ್ರಾಯಕ್ಕೆ ಬಾರದ ತಂಗಿ ಒಬ್ಬಳು ನಮಗಿದ್ದಾಳೆ. ಅವಳನ್ನು ಮದುವೆಗಾಗಿ ಮಾತಾಡಲು ಯಾರಾದರೂ ಬಂದರೆ, ನಾವೇನು ಮಾಡೋಣ?

[9] ಅವಳು ಗೋಡೆಯಾದರೆ, ನಾವು ಅವಳ ಮೇಲೆ ಬೆಳ್ಳಿಯ ಗೋಪುರವನ್ನು ಕಟ್ಟುವೆವು. ಅವಳು ಬಾಗಿಲಾದರೆ, ದೇವದಾರು ಹಲಿಗೆಗಳಿಂದ ಅವಳನ್ನು ಭದ್ರಪಡಿಸುವೆವು.

[10] ನಾನು ಗೋಡೆಯಂಥವಳೇ, ನನ್ನ ಯೌವನವು ಬುರುಜುಗಳು. ಹೀಗೆ ನಾನು ಅವನ ದೃಷ್ಟಿಯಲ್ಲಿ ಸಮಾಧಾನ ಹೊಂದುವೆನು.

[11] ಸೊಲೊಮೋನನಿಗೆ ಬಾಳ್ ಹಾಮೋನಿನಲ್ಲಿ ಒಂದು ದ್ರಾಕ್ಷಿತೋಟ ಇತ್ತು. ಅವನು ಆ ದ್ರಾಕ್ಷಿತೋಟವನ್ನು ರೈತರಿಗೆ ಗುತ್ತಿಗೆಗೆ ಕೊಟ್ಟನು. ಪ್ರತಿಯೊಬ್ಬ ಗುತ್ತಿಗೆಗಾರನು ಅದರ ಫಲದಿಂದ ಸಾವಿರ ಬೆಳ್ಳಿಯ ನಾಣ್ಯಗಳನ್ನು ತರಬೇಕಾಗಿತ್ತು.

[12] ಸೊಲೊಮೋನನೇ, ಆ ಸಾವಿರ ಬೆಳ್ಳಿ ನಾಣ್ಯಗಳು ನಿನಗೇ ಇರಲಿ. ತೋಟದ ಫಲವನ್ನು ಕಾಪಾಡುವವರಿಗೆ ಇನ್ನೂರು ಬೆಳ್ಳಿನಾಣ್ಯಗಳು ಸೇರಲಿ. ಆದರೆ ನನ್ನ ದ್ರಾಕ್ಷಿತೋಟ ನನಗೇ ಇರಲಿ.

[13] ತೋಟಗಳಲ್ಲಿ ವಾಸವಾಗಿರುವಳೇ, ಸ್ನೇಹಿತರು ನನ್ನ ಸಂಗಡ ಇದ್ದಾರೆ. ನಾನು ನಿನ್ನ ಧ್ವನಿಯನ್ನು ಕೇಳ ಮಾಡು!

[14] ನನ್ನ ಪ್ರಿಯನೇ, ಸುಗಂಧ ಸಸ್ಯ ಪರ್ವತಗಳ ಮೇಲಿರುವ ಜಿಂಕೆಯಂತೆಯೂ, ಪ್ರಾಯದ ಹುಲ್ಲೆಯಂತೆಯೂ ನೀನು ಬೇಗ ಬಾ.

ಪರಮಗೀತೆ — Chapters