[1] ಶಾರೋನಿನ ಗುಲಾಬಿ ಹೂವೂ, ತಗ್ಗಿನ ತಾವರೆಯೂ ನಾನೇ.
[2] ಮುಳ್ಳುಪೊದರಿನ ನಡುವೆ ತಾವರೆಯಂತೆ ನನ್ನ ಪ್ರಿಯಳು ಕನ್ಯಾಮಣಿಗಳಲ್ಲಿ ಶ್ರೇಷ್ಠಳು.
[3] ಅಡವಿಯ ಮರಗಳಲ್ಲಿ ಸೇಬಿನ ಮರದಂತೆ ಯುವಜನರಲ್ಲಿ ನನ್ನ ಪ್ರಿಯನಿದ್ದಾನೆ. ನಾನು ಅವನ ನೆರಳಿನಲ್ಲಿ ಬಹು ಆನಂದವಾಗಿ ಕುಳಿತುಕೊಂಡೆನು. ಅವನ ಫಲವು ನನ್ನ ರುಚಿಗೆ ಮಧುರವಾಗಿತ್ತು.
[4] ಅವನು ಔತಣದ ಮನೆಗೆ ನನ್ನನ್ನು ಕರೆದುಕೊಂಡು ಬಂದನು. ನನ್ನ ಮೇಲೆ ಇರುವ ಅವನ ಧ್ವಜವು ಪ್ರೀತಿಯೇ.
[5] ದ್ರಾಕ್ಷೆಯಿಂದ ನನ್ನನ್ನು ಬಲಪಡಿಸು. ಸೇಬು ಹಣ್ಣುಗಳಿಂದ ನನ್ನನ್ನು ಚೇತನಗೊಳಿಸು. ಏಕೆಂದರೆ ನಾನು ಪ್ರೀತಿಯ ದೆಸೆಯಿಂದ ಅಸ್ವಸ್ಥಳಾಗಿದ್ದೇನೆ.
[6] ಅವನ ಎಡಗೈ ನನ್ನ ತಲೆದಿಂಬಾಗಿರಲಿ. ಅವನ ಬಲಗೈ ನನ್ನನ್ನು ಅಪ್ಪಿಕೊಳ್ಳಲಿ.
[7] ಯೆರೂಸಲೇಮಿನ ಪುತ್ರಿಯರೇ, ಮೆಚ್ಚುವ ಕಾಲಕ್ಕೆ ಮುಂಚೆ ನೀವು ಪ್ರೀತಿಯನ್ನು ಎಬ್ಬಿಸಬೇಡಿರಿ. ಎಚ್ಚರಿಸಲೂ ಬೇಡಿರಿ ಎಂದು ಅಡವಿಯ ಹುಲ್ಲೆ ಹರಿಣಿಗಳ ಮೇಲೆ ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ.
[8] ನನ್ನ ಪ್ರಿಯನ ಸ್ವರವು! ಇಗೋ! ಅವನು ಪರ್ವತಗಳ ಮೇಲೆ ಹಾರುತ್ತಾ, ಗುಡ್ಡಗಳ ಮೇಲೆ ಜಿಗಿಯುತ್ತಾ ಬರುತ್ತಿದ್ದಾನೆ.
[9] ನನ್ನ ಪ್ರಿಯನು ಜಿಂಕೆಯ ಹಾಗೆ ಇದ್ದಾನೆ. ದುಪ್ಪಿಯ ಮರಿಯ ಹಾಗೆಯೂ ಇದ್ದಾನೆ. ಇಗೋ! ಅವನು ನಮ್ಮ ಗೋಡೆಯ ಹಿಂದೆ ನಿಂತಿದ್ದಾನೆ. ಜಾಲಾಂತರಗಳಲ್ಲಿ ತನ್ನನ್ನು ತೋರಿಸಿ, ಕಿಟಿಕಿಗಳಿಂದ ನೋಡುತ್ತಿದ್ದಾನೆ.
[10] ನನ್ನ ಪ್ರಿಯನು ನನ್ನೊಡನೆ ಮಾತನಾಡಿ ಹೀಗೆಂದನು: “ನನ್ನ ಪ್ರಿಯಳೇ ಎದ್ದು ಬಾ, ನನ್ನ ಸುಂದರಿಯೇ, ಹೊರಟು ಬಾ.
[11] ಇಗೋ! ಚಳಿಗಾಲ ಕಳೆಯಿತು, ಮಳೆ ನಿಂತುಹೋಯಿತು.
[12] ಪುಷ್ಪಗಳು ಭೂಮಿಯ ಮೇಲೆ ಕಾಣಿಸುತ್ತಿವೆ. ಪಕ್ಷಿಗಳು ಹಾಡುವ ಕಾಲ ಬಂತು. ಪಾರಿವಾಳಗಳ ಸ್ವರ ನಮ್ಮ ಊರಲ್ಲಿ ಕೇಳಿಸುತ್ತಿದೆ.
[13] ಅಂಜೂರದ ಕಾಯಿಗಳು ಹಣ್ಣಾಗಿವೆ. ದ್ರಾಕ್ಷಿಬಳ್ಳಿಗಳು ಹೂಬಿಟ್ಟಿವೆ. ಅದರ ಪರಿಮಳ ಹರಡುತ್ತಿದೆ. ಎದ್ದು ಬಾ, ನನ್ನ ಪ್ರಿಯಳೇ, ನನ್ನ ಸುಂದರಿಯೇ, ನನ್ನೊಂದಿಗೆ ಬಾ.”
[14] ಬಂಡೆಯ ಬಿರುಕುಗಳಲ್ಲಿಯೂ ಸಂದುಗಳ ಮರೆಯಲ್ಲಿಯೂ ಇರುವ ನನ್ನ ಪಾರಿವಾಳವೇ ಬಾ. ನಿನ್ನ ಮುಖವನ್ನು ನನಗೆ ತೋರಿಸು. ನಿನ್ನ ಸ್ವರವನ್ನು ನನಗೆ ಕೇಳಿಸು. ನಿನ್ನ ಸ್ವರವು ಇಂಪಾಗಿದೆ. ನಿನ್ನ ಮುಖವು ಸುಂದರವಾಗಿಯೂ ಇದೆ.
[15] ದ್ರಾಕ್ಷಿತೋಟಗಳನ್ನು ಹಾಳುಮಾಡುವ ನರಿಗಳನ್ನೂ ನರಿಮರಿಗಳನ್ನೂ ಹಿಡಿಯಿರಿ. ನಮ್ಮ ದ್ರಾಕ್ಷಿತೋಟಗಳಲ್ಲಿ ಹೂಗಳು ಅರಳಿವೆ.
[16] ನನ್ನ ಪ್ರಿಯನು ನನ್ನವನೇ, ನಾನು ಅವನವಳೇ. ಅವನು ನೆಲದಾವರೆಗಳ ನಡುವೆ ಮಂದೆಯನ್ನು ಮೇಯಿಸುತ್ತಾನೆ.
[17] ನನ್ನ ಪ್ರಿಯನೇ, ಹೊತ್ತು ಮೂಡುವ ಮುಂಚೆ ಕತ್ತಲು ಕವಿಯುವ ಮೊದಲು ಹೊರಟು ಬಾ. ಒರಟಾದ ಪರ್ವತಗಳ ಮೇಲಿರುವ ಜಿಂಕೆಯಂತಿರು. ಹೌದು, ಪ್ರಾಯದ ದುಪ್ಪಿಯಂತೆಯೂ ಇರು.