Skip to content
Opens in a new window
Listen to this chapter • 2:46

[1] ನಿನ್ನ ಪ್ರಿಯನು ಎಲ್ಲಿಗೆ ಹೋದನು? ಸ್ತ್ರೀಯರಲ್ಲಿ ಅತಿ ಸುಂದರಿಯೇ, ನಾವು ಅವನನ್ನು ನಿನ್ನ ಸಂಗಡ ಹುಡುಕುವಂತೆ ನಿನ್ನ ಪ್ರಿಯನು ಯಾವ ಕಡೆಗೆ ಹೋಗಿದ್ದಾನೆ?

[2] ನನ್ನ ಪ್ರಿಯನು ತೋಟಗಳಲ್ಲಿ ಮಂದೆ ಮೇಯಿಸುವುದಕ್ಕೂ, ನೆಲದಾವರೆಗಳನ್ನು ಕೊಯ್ದು ತರುವುದಕ್ಕೂ, ಸುಗಂಧ ಸಸ್ಯಗಳಿರುವ ಉದ್ಯಾನವನಕ್ಕೆ ಹೋಗಿದ್ದಾನೆ.

[3] ನನ್ನ ಪ್ರಿಯನು ನನ್ನವನೇ, ನಾನು ಅವನವಳೇ. ಅವನು ನೆಲದಾವರೆಗಳ ನಡುವೆ ಮಂದೆಯನ್ನು ಮೇಯಿಸುತ್ತಾನೆ.

[4] ನನ್ನ ಪ್ರಿಯಳೇ, ನೀನು ತಿರ್ಚ ನಗರದಂತೆ ಸುಂದರಿ, ಯೆರೂಸಲೇಮಿನ ಹಾಗೆ ರಮ್ಯಳು, ಧ್ವಜಗಳಿರುವ ದಂಡಿನ ಹಾಗೆ ಗಂಭೀರಳೂ ಆಗಿರುವೆ.

[5] ನಿನ್ನ ಕಣ್ಣುಗಳನ್ನು ನನ್ನ ಕಡೆಯಿಂದ ತಿರುಗಿಸು, ಏಕೆಂದರೆ ಅವು ನನ್ನನ್ನು ಜಯಿಸಿವೆ. ನಿನ್ನ ತಲೆಗೂದಲು ಗಿಲ್ಯಾದ್ ಪರ್ವತದಿಂದ ಇಳಿಯುವ ಮೇಕೆಯ ಮಂದೆಯಂತಿದೆ.

[6] ನಿನ್ನ ಹಲ್ಲುಗಳ ಹೊಳಪು ಉಣ್ಣೆ ಕತ್ತರಿಸಿ ಸ್ನಾನಮಾಡಿಸಿದ ಕುರಿಮಂದೆಗೆ ಸಮಾನ. ಅವು ಜೊತೆಯಾಗಿಯೇ ಇರುತ್ತವೆ. ಅವುಗಳಲ್ಲಿ ಒಂದೂ ಒಂಟಿಯಾಗಿರದು.

[7] ಮುಸುಕಿನೊಳಗಿನ ನಿನ್ನ ಕೆನ್ನೆ ವಿಭಾಗಿಸಿದ ದಾಳಿಂಬೆಯ ಹಣ್ಣಿನ ಹಾಗೆ ಇದೆ.

[8] ಅರಸನಿಗೆ ಅರವತ್ತು ಮಂದಿ ರಾಣಿಯರೂ ಎಂಬತ್ತು ಮಂದಿ ಉಪಪತ್ನಿಯರೂ ಲೆಕ್ಕವಿಲ್ಲದ ಕನ್ಯೆಯರೂ ಇದ್ದಾರೆ.

[9] ಆದರೆ ನನಗೆ ನನ್ನ ಪಾರಿವಾಳವು, ನನ್ನ ಪರಿಪೂರ್ಣಳು ಒಬ್ಬಳೇ. ಇವಳು ತನ್ನ ತಾಯಿಗೆ ಒಬ್ಬಳೇ ಮಗಳು. ತನ್ನ ಹೆತ್ತವಳಿಗೆ ಪ್ರಿಯಳು. ಕನ್ನಿಕೆಯರು ಇವಳನ್ನು ಕಂಡು ಆಶೀರ್ವದಿಸಿದರು. ಹೌದು, ರಾಣಿಯರೂ ಉಪಪತ್ನಿಯರೂ ಇವಳನ್ನು ಹೀಗೆಂದು ಹೊಗಳಿದರು:

[10] ಮೆರವಣೆಗೆಯಲ್ಲಿ ನಕ್ಷತ್ರಗಳ ಹಾಗೆ ಗಂಭೀರಳೂ, ಚಂದ್ರನ ಹಾಗೆ ಸುಂದರಿಯೂ, ಸೂರ್ಯನ ಹಾಗೆ ಪ್ರಕಾಶಿಸುವವಳೂ ಆಗಿರುವ ಈ ಉದಯವಂತೆ ಯಾರು?

[11] ದ್ರಾಕ್ಷಿಬಳ್ಳಿಯು ಚಿಗುರಿದೆಯೋ, ದಾಳಿಂಬೆ ಗಿಡ ಹೂಬಿಟ್ಟಿದೆಯೋ ಎಂದು ಕಣಿವೆಯಲ್ಲಿನ ಫಲಗಳನ್ನು ನೋಡಲು ನಾನು ಬಾದಾಮಿಯ ತೋಟಕ್ಕೆ ಹೋದೆನು.

[12] ನಾನು ಅದನ್ನು ಅರಿತುಕೊಳ್ಳುವ ಮೊದಲು, ನನ್ನ ಆಸೆ ನನ್ನ ಜನ ಪ್ರಧಾನರ ನಡುವೆ ರಥದ ಮೇಲೆ ಕೂತಿರುವಂತೆ ನನ್ನನ್ನು ನಡೆಸಿತು.

[13] ತಿರುಗಿ ಬಾ, ತಿರುಗಿ ಬಾ, ಶೂಲಮ್ ಊರಿನವಳೇ, ನಾವು ನಿನ್ನನ್ನು ನೋಡುವಂತೆ ತಿರುಗಿ ಬಾ, ತಿರುಗಿ ಬಾ! ಎರಡು ಗುಂಪಿನ ನರ್ತಕಿಯರ ನಡುವೆ ಕುಣಿಯುತ್ತಿರುವ, ಶೂಲಮ್ ಊರಿನವಳನ್ನು ನೀವು ನೋಡುವುದೇಕೆ?

ಪರಮಗೀತೆ — Chapters