[1] ಓ ರಾಜಪುತ್ರಿಯೇ! ಕೆರಗಳನ್ನು ಮೆಟ್ಟಿರುವ ನಿನ್ನ ಪಾದಗಳು ಎಷ್ಟು ಸುಂದರವಾಗಿವೆ! ನಿನ್ನ ಅಂದದ ಕಾಲುಗಳು ಶಿಲ್ಪಿಯ ಕೈಕೆಲಸದ ಆಭರಣಗಳಂತಿವೆ.
[2] ನಿನ್ನ ಹೊಕ್ಕಳು ಮಿಶ್ರಪಾನಕ ತುಂಬಿದ ದುಂಡು ಬಟ್ಟಲಿನ ಹಾಗಿದೆ. ನಿನ್ನ ಹೊಟ್ಟೆ ನೆಲದಾವರೆಗಳಿಂದ ಸುತ್ತಿಕೊಂಡಿರುವ ಹೂವುಗಳು ಸುತ್ತಿಕೊಂಡಿರುವ ಗೋಧಿಯ ರಾಶಿಯಾಗಿದೆ.
[3] ನಿನ್ನ ಸ್ತನಗಳೆರಡೂ ಹುಲ್ಲೆಯ ಅವಳಿಮರಿಗಳ ಹಾಗಿವೆ.
[4] ನಿನ್ನ ಕೊರಳು ದಂತದ ಗೋಪುರ. ನಿನ್ನ ಕಣ್ಣುಗಳು ಬತ್ ರಬ್ಬೀಮ್ ಬಾಗಿಲ ಬಳಿಯಲ್ಲಿರುವ ಹೆಷ್ಬೋನಿನ ಕೊಳಗಳು. ನಿನ್ನ ಮೂಗು, ದಮಸ್ಕದ ಕಡೆಗಿರುವ ಲೆಬನೋನಿನ ಗೋಪುರದ ಹಾಗಿದೆ.
[5] ನಿನ್ನ ತಲೆಯು ಕರ್ಮೆಲ್ ಬೆಟ್ಟದಂತೆ ವೈಭವ. ನಿನ್ನ ತಲೆಕೂದಲು ಧೂಮ್ರ ಬಣ್ಣದ ಹಾಗೆ ಇದೆ. ಹೆಣೆದ ಆ ಜಡೆಯಿಂದ ಅರಸನಿಗೂ ಆಕರ್ಷಣ.
[6] ನನ್ನ ಪ್ರೇಮವೇ, ನೀನು ನಿನ್ನ ಹರ್ಷದಿಂದ ಎಷ್ಟೋ ಸುಂದರಿಯೂ ಎಷ್ಟೋ ಮನೋಹರಳೂ ಆಗಿರುವೆ.
[7] ನಿನ್ನ ನೀಳ ಆಕಾರವು ಖರ್ಜೂರ ಮರದಂತಿದೆ. ನಿನ್ನ ಸ್ತನಗಳು ಅದರ ಗೊಂಚಲುಗಳು.
[8] ನಾನು, “ಆ ಖರ್ಜೂರದ ಮರವನ್ನು ಹತ್ತಿ ಅದರ ಗರಿಗಳನ್ನು ಹಿಡಿಯುವೆ,” ಎಂದುಕೊಂಡೆನು. ನಿನ್ನ ಸ್ತನಗಳು ದ್ರಾಕ್ಷಿ ಗೊಂಚಲುಗಳಂತಿರಲಿ, ನಿನ್ನ ಉಸಿರು ಸೇಬು ಹಣ್ಣಿನ ಪರಿಮಳದಂತೆಯೂ ಇರಲಿ.
[9] ನಿನ್ನ ಬಾಯಿಯ ಮುದ್ದುಗಳು ಉತ್ತಮ ದ್ರಾಕ್ಷಾರಸದ ಹಾಗಿರಲಿ. ನನ್ನ ಪ್ರಿಯಕರನ ತುಟಿ, ಹಲ್ಲುಗಳಲ್ಲಿ ದ್ರಾಕ್ಷಾರಸವು ನೇರವಾಗಿ ಹರಿದು ಇಂಪಾಗಿ ರುಚಿಸಲಿ.
[10] ನಾನು ನನ್ನ ಪ್ರಿಯನವಳು. ಅವನ ಆಸೆಯು ನನ್ನ ಕಡೆಗಿರುವುದು.
[11] ನನ್ನ ಪ್ರಿಯನೇ, ಬಾ ಹೋಗೋಣ. ನಾವು ಗ್ರಾಮಗಳಲ್ಲಿ ವಸತಿಯಾಗಿರೋಣ ಬಾ.
[12] ನಾವು ಬೆಳಗ್ಗೆ ಹೊರಟು, ದ್ರಾಕ್ಷಿ ತೋಟಗಳಿಗೆ ಹೋಗೋಣ ಬಾ. ದ್ರಾಕ್ಷಿ ಚಿಗುರಿದೆಯೋ, ಅದರ ಹೂ ಅರಳಿದೆಯೋ ದಾಳಿಂಬೆ ಹೂಬಿಟ್ಟಿದೆಯೋ ನೋಡೋಣ ಬಾ. ಅಲ್ಲಿ ನನ್ನ ಪ್ರೀತಿಯನ್ನು ನಿನಗೆ ಅರ್ಪಿಸುವೆನು.
[13] ನನ್ನ ಪ್ರಿಯನೇ, ಕಾಮಜನಕ ವೃಕ್ಷಗಳು ಪರಿಮಳ ಬೀರುತ್ತಿವೆ. ನಮ್ಮ ಬಾಗಿಲ ಬಳಿಯಲ್ಲಿ ನಿನಗೋಸ್ಕರ ನಾನು ರುಚಿಯುಳ್ಳ ಮಾಗಿದ ಹೊಸ ಹಣ್ಣುಗಳನ್ನು ಸಿದ್ಧಪಡಿಸಿದ್ದೇನೆ.