Skip to content
Opens in a new window
Listen to this chapter • 5:19

[1] ಜನರೆಲ್ಲರು ಏಕವಾಗಿ ನೀರು ಬಾಗಿಲಿಗೆ ಎದುರಾಗಿರುವ ಬೀದಿಯಲ್ಲಿ ಕೂಡಿಕೊಂಡು ಬಂದರು. ಯೆಹೋವ ದೇವರು ಇಸ್ರಾಯೇಲರಿಗೆ ಆಜ್ಞಾಪಿಸಿದ ಮೋಶೆಯ ನಿಯಮದ ಗ್ರಂಥವನ್ನು ತೆಗೆದುಕೊಂಡು ಬರಲು ಜನರು ನಿಯಮಶಾಸ್ತ್ರಿಯಾದ ಎಜ್ರನಿಗೆ ಹೇಳಿದರು.

[2] ಹೀಗೆಯೇ ಏಳನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಸ್ತ್ರೀಪುರುಷರ ಮುಂದೆಯೂ ಗ್ರಹಿಕೆಯಿಂದ ಕೇಳುವವರೆಲ್ಲರ ಮುಂದೆಯೂ ಯಾಜಕನಾದ ಎಜ್ರನು ದೇವರ ನಿಯಮವನ್ನು ತೆಗೆದುಕೊಂಡು ಬಂದನು.

[3] ಅನಂತರ ಎಜ್ರನು ನೀರಿನ ಬಾಗಿಲ ಮುಂಭಾಗದಲ್ಲಿರುವ ಬೀದಿಯಲ್ಲಿ ಸ್ತ್ರೀಪುರುಷರ ಮುಂದೆಯೂ ಗ್ರಹಿಕೆಯುಳ್ಳ ಎಲ್ಲರ ಮುಂದೆಯೂ ಬೆಳಗಿನಿಂದ ಮಧ್ಯಾಹ್ನದವರೆಗೆ ಓದಿದನು. ಜನರೆಲ್ಲರು ನಿಯಮದ ಗ್ರಂಥಕ್ಕೆ ಕಿವಿಗೊಟ್ಟರು.

[4] ಆಗ ನಿಯಮಶಾಸ್ತ್ರಿಯಾದ ಎಜ್ರನು ಅದಕ್ಕೋಸ್ಕರ ಮಾಡಲಾಗಿದ್ದ ಒಂದು ಮರದ ಪೀಠದ ಮೇಲೆ ನಿಂತನು. ಅವನ ಬಳಿಯಲ್ಲಿ ಅವನ ಬಲಗಡೆಯಲ್ಲಿ ಮತ್ತಿತ್ಯ. ಶೆಮ, ಅನಾಯ, ಊರೀಯ, ಹಿಲ್ಕೀಯ, ಮಾಸೇಯ, ಅವನಿಗೆ ಎಡಗಡೆಯಲ್ಲಿ ಪೆದಾಯ್, ಮೀಷಾಯೇಲ್, ಮಲ್ಕೀಯ, ಹಾಷುಮ್, ಹಷ್ಬದ್ದಾನ, ಜೆಕರ್ಯ, ಮೆಷುಲ್ಲಾಮ್ ನಿಂತಿದ್ದರು.

[5] ಎಜ್ರನು ಸಕಲ ಜನರ ಕಣ್ಣು ಮುಂದೆ ದೇವರ ಗ್ರಂಥವನ್ನು ತೆರೆದನು. ಸಕಲ ಜನರಿಗಿಂತ ಎತ್ತರವಾದ ಸ್ಥಳದಲ್ಲಿ ನಿಂತಿದ್ದನು. ಅವನು ಅದನ್ನು ತೆರೆದಾಗ, ಜನರೆಲ್ಲರು ಎದ್ದು ನಿಂತರು.

[6] ಆಗ ಎಜ್ರನು ಮಹಾ ದೇವರಾಗಿರುವ ಯೆಹೋವ ದೇವರನ್ನು ಸ್ತುತಿಸಿದನು. ಅದಕ್ಕೆ ಜನರೆಲ್ಲರು ತಮ್ಮ ಕೈಗಳನ್ನೆತ್ತಿ ಉತ್ತರವಾಗಿ, “ಆಮೆನ್, ಆಮೆನ್,” ಎಂದು ಹೇಳಿ ನೆಲದವರೆಗೂ ತಮ್ಮ ತಲೆಗಳನ್ನು ಬಗ್ಗಿಸಿ ಯೆಹೋವ ದೇವರನ್ನು ಆರಾಧಿಸಿದರು.

[7] ಆಮೇಲೆ ಯೇಷೂವ, ಬಾನೀ, ಶೇರೇಬ್ಯ, ಯಾಮೀನ್, ಅಕ್ಕೂಬ್, ಶಬ್ಬೆತೈ, ಹೋದೀಯ, ಮಾಸೇಯ, ಕೆಲೀಟ, ಅಜರ್ಯ, ಯೋಜಾಬಾದ್, ಹಾನಾನ್, ಪೆಲಾಯ ಎಂಬ ಲೇವಿಯರು ನಿಯಮವನ್ನು ತಿಳಿಯುವಂತೆ ಹೇಳಿದರು. ಜನರು ತಮ್ಮ ತಮ್ಮ ಸ್ಥಳಗಳಲ್ಲಿ ನಿಂತುಕೊಂಡಿದ್ದರು.

[8] ಜನರು ಎದ್ದು ನಿಂತ ನಂತರ, ಅವರು ದೇವರ ನಿಯಮವನ್ನು ಸ್ಪಷ್ಟವಾಗಿ ಓದುತ್ತಾ, ಅದರ ತಾತ್ಪರ್ಯವನ್ನು ವಿವರಿಸಿದರು. ಜನರು ಚೆನ್ನಾಗಿ ಗ್ರಹಿಸಿಕೊಂಡರು.

[9] ರಾಜಪಾಲನಾದ ನೆಹೆಮೀಯನೂ, ನಿಯಮಶಾಸ್ತ್ರಿಯೂ, ಯಾಜಕನೂ ಆದ ಎಜ್ರನೂ, ಜನರನ್ನು ಬೋಧಿಸುತ್ತಿದ್ದ ಲೇವಿಯರೂ ಜನರೆಲ್ಲರಿಗೆ: “ಈ ದಿನವು ನಿಮ್ಮ ದೇವರಾಗಿರುವ ಯೆಹೋವ ದೇವರಿಗೆ ಪರಿಶುದ್ಧವಾದುದರಿಂದ ದುಃಖಿಸದೆ, ಅಳದೆ ಇರಿ,” ಎಂದರು. ಏಕೆಂದರೆ ಜನರೆಲ್ಲರು ದೇವರ ನಿಯಮದ ಮಾತುಗಳನ್ನು ಕೇಳಿದಾಗ ಅತ್ತರು.

[10] ಇದಲ್ಲದೆ ಎಜ್ರನು ಅವರಿಗೆ, “ನೀವು ಹೋಗಿ ಒಳ್ಳೆಯ ಆಹಾರವನ್ನು ತಿಂದು, ಸಿಹಿಯಾದದ್ದನ್ನು ಕುಡಿಯಿರಿ, ತಮಗಾಗಿ ಸಿದ್ಧಮಾಡಿಕೊಳ್ಳದವರಿಗೆ ಒಂದು ಪಾಲನ್ನು ಕಳುಹಿಸಿಕೊಡಿರಿ. ಈ ದಿನವು ನಮ್ಮ ಯೆಹೋವ ದೇವರಿಗೆ ಪರಿಶುದ್ಧವಾಗಿದೆ. ನೀವು ವ್ಯಥೆಪಡಬೇಡಿರಿ. ಯೆಹೋವ ದೇವರ ಆನಂದವೇ ನಿಮ್ಮ ಬಲ,” ಎಂದು ಹೇಳಿದನು.

[11] ಲೇವಿಯರು ಕೂಡ, “ಈ ದಿನವು ಪರಿಶುದ್ಧವಾದುದರಿಂದ ನೀವು ಶಾಂತವಾಗಿದ್ದು, ವ್ಯಥೆಪಡಬೇಡಿರಿ,” ಎಂದು ಹೇಳಿ ಜನರನ್ನು ಸುಮ್ಮನಿರಿಸಿದರು.

[12] ಆಗ ಜನರೆಲ್ಲರೂ ತಮಗೆ ತಿಳಿಸಿದ ಮಾತುಗಳನ್ನು ಗ್ರಹಿಸಿದ್ದರಿಂದ, ಅವರು ಅನ್ನಪಾನಗಳನ್ನು ತೆಗೆದುಕೊಂಡು, ಏನೂ ಇಲ್ಲದವರಿಗೆ ಆಹಾರ ಪಾಲುಗಳನ್ನು ಕಳುಹಿಸಲೂ ಮತ್ತು ಸಂತೋಷದಿಂದ ಆಚರಿಸಲೂ ಹೊರಟು ಹೋದರು.

[13] ಎರಡನೆಯ ದಿವಸದಲ್ಲಿ ಸಮಸ್ತ ಜನರ ಪಿತೃಗಳಲ್ಲಿರುವ ಮುಖ್ಯವಾದವರೂ ಯಾಜಕರೂ ಲೇವಿಯರೂ ದೇವರ ನಿಯಮದ ಮಾತುಗಳನ್ನು ತಿಳಿದುಕೊಳ್ಳುವ ಹಾಗೆ, ನಿಯಮಶಾಸ್ತ್ರಿಯಾದ ಎಜ್ರನ ಬಳಿಗೆ ಬಂದರು.

[14] ಆಗ ಅವರು ಏಳನೆಯ ತಿಂಗಳ ಹಬ್ಬದಲ್ಲಿ, ಇಸ್ರಾಯೇಲರು ಪರ್ಣಶಾಲೆಗಳಲ್ಲಿ ವಾಸವಾಗಿರಬೇಕೆಂದು ಯೆಹೋವ ದೇವರು ಮೋಶೆಯ ಮುಖಾಂತರ ಆಜ್ಞಾಪಿಸಿದ ವಿಷಯ ನಿಯಮದಲ್ಲಿ ಬರೆದದ್ದನ್ನು ಕಂಡರು.

[15] ಅದರಲ್ಲಿ, “ಪರ್ಣಶಾಲೆಗಳಿಗಾಗಿ ಬೆಟ್ಟಕ್ಕೆ ಹೋಗಿ ಓಲಿವ್, ಕಾಡು ಓಲಿವ್, ಸುಗಂಧ, ಖರ್ಜೂರ ಮುಂತಾದ ದಟ್ಟವಾಗಿರುವ ಗಿಡದ ಕೊಂಬೆಗಳನ್ನೂ ತೆಗೆದುಕೊಂಡು ಬನ್ನಿರಿ ಎಂದೂ, ತಮ್ಮ ಸಕಲ ಪಟ್ಟಣಗಳಲ್ಲಿಯೂ, ಯೆರೂಸಲೇಮಿನಲ್ಲಿಯೂ ಬಹಿರಂಗವಾಗಿ ಸಾರಬೇಕು,” ಎಂದೂ ಬರೆದಿತ್ತು.

[16] ಹಾಗೆಯೇ ಜನರು ಹೊರಟುಹೋಗಿ ಕೊಂಬೆಗಳನ್ನು ತೆಗೆದುಕೊಂಡು ಬಂದು ಅವರವರು ತಮ್ಮ ಮನೆಗಳ ಮೇಲೆಯೂ, ತಮ್ಮ ಅಂಗಳಗಳಲ್ಲಿಯೂ, ದೇವರ ಮನೆಯ ಅಂಗಳಗಳಲ್ಲಿಯೂ, ನೀರು ಬಾಗಿಲ ಬೀದಿಗಳಲ್ಲಿಯೂ, ಎಫ್ರಾಯೀಮನ ಬಾಗಿಲ ಬೀದಿಗಳಲ್ಲಿಯೂ ತಮಗೆ ಪರ್ಣಶಾಲೆಗಳನ್ನು ಹಾಕಿದರು.

[17] ಈ ಪ್ರಕಾರ ಸೆರೆಯಿಂದ ತಿರುಗಿ ಬಂದ ಸಭೆಯವರೆಲ್ಲರು ಪರ್ಣಶಾಲೆಗಳನ್ನು ಹಾಕಿ, ಅದರಲ್ಲಿ ವಾಸವಾಗಿದ್ದರು. ನೂನನ ಮಗ ಯೆಹೋಶುವನ ದಿನವು ಮೊದಲುಗೊಂಡು ಆ ದಿವಸದವರೆಗೂ ಇಸ್ರಾಯೇಲರು ಹಾಗೆ ಮಾಡಿರಲಿಲ್ಲ. ಅಲ್ಲಿ ಅವರಿಗೆ ಬಹಳ ಸಂತೋಷವಿತ್ತು.

[18] ಎಜ್ರನು ಮೊದಲನೆಯ ದಿವಸದಿಂದ ಕಡೇ ದಿವಸದವರೆಗೂ ದಿನದಿನವೂ ದೇವರ ನಿಯಮದ ಗ್ರಂಥವನ್ನು ಓದುತ್ತಿದ್ದನು. ಹೀಗೆಯೇ ಅವರು ಏಳು ದಿವಸ ಹಬ್ಬವನ್ನು ಆಚರಿಸಿದರು. ಎಂಟನೆಯ ದಿವಸದಲ್ಲಿ ಪದ್ಧತಿಯ ಪ್ರಕಾರ ಸಭೆಯು ಸೇರಿತ್ತು.

ನೆಹೆಮೀಯ — Chapters