Skip to content
Opens in a new window
Listen to this chapter • 4:41

[1] ನಾನು ಹೆಬ್ಬಾಗಿಲುಗಳಲ್ಲಿ ಬಾಗಿಲುಗಳನ್ನು ಇಡುವುದಕ್ಕಿಂತ ಮುಂಚೆ ನಾನು ಗೋಡೆಯಲ್ಲಿ ಒಂದು ಸಂದನ್ನೂ ಬಿಡದೆ ಪುನಃ ಕಟ್ಟಿದೆನೆಂದು ಸನ್ಬಲ್ಲಟನೂ, ಟೋಬೀಯನೂ, ಅರಬಿಯನಾದ ಗೆಷೆಮನೂ, ಮಿಕ್ಕಾದ ನಮ್ಮ ಶತ್ರುಗಳೂ ಕೇಳಿದಾಗ,

[2] ಸನ್ಬಲ್ಲಟನೂ, ಗೆಷೆಮನೂ ನನಗೆ, “ಓನೋ ಎಂಬ ಬಯಲಿನಲ್ಲಿರುವ ಗ್ರಾಮಗಳಲ್ಲಿ ಎದುರುಗೊಳ್ಳೋಣ ಬಾ,” ಎಂದರು. ಆದರೆ ಅವರು ನನಗೆ ಕೇಡು ಮಾಡಲು ಯೋಜಿಸಿಕೊಂಡಿದ್ದರು.

[3] ಆದಕಾರಣ ನಾನು ಅವರ ಬಳಿಗೆ ದೂತರನ್ನು ಕಳುಹಿಸಿ, “ನಾನು ದೊಡ್ಡ ಕಾರ್ಯವನ್ನು ಮಾಡುತ್ತಾ ಇದ್ದೇನೆ, ಬರಲಾರೆನು. ನಾನು ಅದನ್ನು ಬಿಟ್ಟು ನಿಮ್ಮ ಬಳಿಗೆ ಬಂದರೆ ಕೆಲಸವು ನಿಂತುಹೋಗುವುದು,” ಎಂದು ಹೇಳಿದೆನು.

[4] ಅವರು ಈ ಪ್ರಕಾರ ನಾಲ್ಕು ಸಾರಿ ನನ್ನ ಬಳಿಗೆ ಕಳುಹಿಸಿದರು. ನಾನು ಅದೇ ಪ್ರಕಾರ ಉತ್ತರ ಕಳುಹಿಸಿದೆನು.

[5] ಐದನೆಯ ಸಾರಿ ಸನ್ಬಲ್ಲಟನು ತನ್ನ ದೂತನ ಕೈಯಲ್ಲಿ ಮುಚ್ಚದಿದ್ದ ಒಂದು ಪತ್ರವನ್ನು ಕಳುಹಿಸಿದನು.

[6] ಅದರಲ್ಲಿ ಹೀಗೆ ಬರೆದಿತ್ತು: “ಗೆಷೆಮ್ ಎಂಬವನು ನನಗೆ ತಿಳಿಸಿದ ಪ್ರಕಾರ ನೀನೂ, ಯೆಹೂದ್ಯರೂ ತಿರುಗಿಬೀಳಲು ಯೋಚಿಸುತ್ತೀರಿ. ಆದಕಾರಣ ಈ ಮಾತುಗಳ ಪ್ರಕಾರ ನೀನು ಅವರಿಗೆ ಅರಸನಾಗಿರುವ ಹಾಗೆ ಗೋಡೆಯನ್ನು ಪುನಃ ಕಟ್ಟಿಸುತ್ತಿದ್ದೀ.

[7] ಇದಲ್ಲದೆ, ಯೆಹೂದದಲ್ಲಿ ಅರಸನು ಇದ್ದಾನೆಂದೂ ಯೆರೂಸಲೇಮಿನಲ್ಲಿ ನಿನ್ನನ್ನು ಕುರಿತು ಕೂಗುವುದಕ್ಕೆ ನೀನು ಪ್ರವಾದಿಗಳನ್ನು ನೇಮಿಸಿದ್ದಿ ಎಂಬುದಾಗಿಯೂ ಜನಾಂಗಗಳಲ್ಲಿ ಸುದ್ದಿ ಉಂಟು. ಈಗ ಈ ವರ್ತಮಾನ ಅರಸನಿಗೆ ತಿಳಿಸಲಾಗುವುದು. ಆದಕಾರಣ ನಾವು ಕೂಡಿಕೊಂಡು ಯೋಚನೆ ಮಾಡಿಕೊಳ್ಳೋಣ ಬಾ.”

[8] ಆಗ ನಾನು, “ನೀನು ಹೇಳಿದ ಕಾರ್ಯಗಳಲ್ಲಿ ಯಾವುದೂ ಮಾಡಿದ್ದಿಲ್ಲ. ನೀವು ಅವುಗಳನ್ನು ನಿನ್ನ ಸ್ವಂತ ಹೃದಯದಲ್ಲಿ ಕಲ್ಪಿಸಿಕೊಂಡಿರುವೆ,” ಎಂದು ಹೇಳಿ ಕಳುಹಿಸಿದೆನು.

[9] ಹೀಗೆ, “ಅವರ ಕೈಗಳು ಬಲಹೀನವಾಗುವುವು. ಕೆಲಸವು ಪೂರ್ತಿಯಾಗುವುದಿಲ್ಲ,” ಎಂದುಕೊಂಡು ಅವರೆಲ್ಲರು ನಮ್ಮನ್ನು ಭಯಪಡಿಸಿದರು. ನಾನಾದರೋ, “ದೇವರೇ, ನನ್ನ ಕೈಗಳನ್ನು ಬಲಪಡಿಸಿರಿ,” ಎಂದು ಪ್ರಾರ್ಥಿಸಿದೆನು.

[10] ತರುವಾಯ ನಾನು ಅಡಗಿಕೊಂಡಿದ್ದ ಮೆಹೇಟಬೇಲನ ಮಗನಾದ ದೆಲಾಯ, ಇವನ ಮಗನಾದ ಶೆಮಾಯನ ಮನೆಗೆ ಬಂದೆನು. ಅವನು, “ನಾವಿಬ್ಬರೂ ದೇವರ ಆಲಯದಲ್ಲಿ ಪವಿತ್ರಸ್ಥಾನದೊಳಗೆ ಹೋಗಿ, ಮಂದಿರದ ಬಾಗಿಲನ್ನು ಮುಚ್ಚಿಕೊಳ್ಳೋಣ ಬಾ, ಏಕೆಂದರೆ ಈ ರಾತ್ರಿಯೇ ನಿನ್ನನ್ನು ಕೊಂದುಹಾಕಲು ಬರುತ್ತಾರೆ,” ಎಂದು ಹೇಳಿದನು.

[11] ಅದಕ್ಕೆ ನಾನು, “ನನ್ನಂಥಾ ಮನುಷ್ಯನು ಓಡಿ ಹೋಗುವನೋ? ನನ್ನಂಥವನು ಬದುಕಬೇಕೆಂದು ದೇವರ ಆಲಯದೊಳಗೆ ಹೋಗಬಹುದೇ? ನಾನು ಒಳಗೆ ಹೋಗುವುದಿಲ್ಲ,” ಎಂದೆನು.

[12] ಆಗ ದೇವರು ಅವನನ್ನು ಕಳುಹಿಸಲಿಲ್ಲ. ಟೋಬೀಯನೂ, ಸನ್ಬಲ್ಲಟನೂ ಶೆಮಾಯನಿಗೆ ಲಂಚಕೊಟ್ಟು, ನನಗೆ ವಿರೋಧವಾಗಿ ಈ ಪ್ರವಾದನೆ ಹೇಳಿಸಿದರೆಂದು ನನಗೆ ಗೊತ್ತಾಯಿತು.

[13] ನಾನು ಭಯಪಟ್ಟು ಹೀಗೆ ಮಾಡಿ ಪಾಪಮಾಡುವಂತೆಯೂ ಅವರು ನನ್ನನ್ನು ನಿಂದಿಸುವುದಕ್ಕೆ ಅಪಕೀರ್ತಿಯ ಕಾರಣವು ಅವರಿಗೆ ಸಿಕ್ಕುವಂತೆಯೂ ಶೆಮಾಯನಿಗೆ ಲಂಚಕೊಟ್ಟಿದ್ದರು.

[14] ನನ್ನ ದೇವರೇ, ನೀವು ಅವರ ಈ ಕಾರ್ಯಗಳ ಪ್ರಕಾರ ಟೋಬೀಯನನ್ನೂ, ಸನ್ಬಲ್ಲಟನನ್ನೂ, ನನ್ನನ್ನು ಹೆದರಿಸುವುದಕ್ಕೆ ಪ್ರಯತ್ನಿಸಿದ ಪ್ರವಾದಿನಿಯಾದ ನೋವದ್ಯ ಮುಂತಾದ ಪ್ರವಾದಿಗಳನ್ನೂ ಜ್ಞಾಪಕಮಾಡಿಕೊಳ್ಳಿರಿ.

[15] ಹೀಗೆ ಗೋಡೆಯು ಐವತ್ತೆರಡು ದಿವಸಗಳಲ್ಲಿ ಏಲುಲ್ ತಿಂಗಳದ ಇಪ್ಪತ್ತೈದನೆಯ ದಿವಸದಲ್ಲಿ ಮುಗಿಯಿತು.

[16] ಈ ಸುದ್ದಿ ಸುತ್ತಮುತ್ತಲಿನ ನಮ್ಮ ವಿರೋಧಿಗಳಾದ ಜನಾಂಗಗಳಿಗೆ ಮುಟ್ಟಿತು. ಅವರು ಭಯಭೀತರಾದರು. ಸೊಕ್ಕು ಮುರಿದವರಾಗಿ ಹಾಗೇ ಕುಗ್ಗಿಹೋದರು. ಈ ಕಾರ್ಯ ನಮ್ಮ ದೇವರಿಂದಲೇ ಪೂರ್ಣಗೊಂಡಿತು ಎಂದು ಅವರಿಗೆ ಮನದಟ್ಟಾಯಿತು.

[17] ಹೇಗಿದ್ದರೂ ಆ ದಿವಸಗಳಲ್ಲಿ ಯೆಹೂದದಲ್ಲಿದ್ದ ಶ್ರೇಷ್ಠರು ಟೋಬೀಯನ ಬಳಿಗೆ ಬಹಳ ಪತ್ರಗಳನ್ನು ಕಳುಹಿಸಿದರು. ಟೋಬೀಯನಿಂದ ಉತ್ತರ ಅವರಿಗೆ ಬರುತ್ತಿದ್ದವು.

[18] ಏಕೆಂದರೆ ಅವನು ಆರಹನ ಮಗ ಶೆಕನ್ಯನ ಅಳಿಯನಾದುದರಿಂದ ಅವನ ಮಗ ಯೆಹೋಹಾನಾನನು ಬೆರೆಕ್ಯನ ಮಗನಾದ ಮೆಷುಲ್ಲಾಮನ ಮಗಳನ್ನು ತೆಗೆದುಕೊಂಡಿದ್ದರಿಂದಲೂ ಯೆಹೂದದಲ್ಲಿ ಅನೇಕರು ಅವನಿಗೆ ನಂಬಿಗಸ್ತರಾಗಿರುವುದಾಗಿ ಪ್ರಮಾಣ ಮಾಡಿದರು.

[19] ಇದಲ್ಲದೆ ಅವರು ಅವನ ಸತ್ಕಾರ್ಯಗಳನ್ನು ನನ್ನ ಮುಂದೆ ಹೇಳಿ, ನನ್ನ ಕಾರ್ಯಗಳನ್ನು ಅವನಿಗೆ ತಿಳಿಸಿದರು. ಆದರೆ ಟೋಬೀಯನೂ ನನ್ನನ್ನು ಭಯಪಡಿಸುವುದಕ್ಕೆ ಪತ್ರಗಳನ್ನು ಕಳುಹಿಸಿದನು.

ನೆಹೆಮೀಯ — Chapters