[1] ಶಿಗ್ಯೋನೋತ ಸ್ವರದ ಮೇಲೆ ಪ್ರವಾದಿಯಾದ ಹಬಕ್ಕೂಕನ ಪ್ರಾರ್ಥನೆ.
[2] ಯೆಹೋವ ದೇವರೇ, ನಿಮ್ಮ ಕೀರ್ತಿಯನ್ನು ನಾನು ಕೇಳಿದ್ದೇನೆ, ಯೆಹೋವ ದೇವರೇ, ನಿಮ್ಮ ಕಾರ್ಯಗಳಿಗಾಗಿ ನಿಮ್ಮ ಮುಂದೆ ಭಯಭಕ್ತಿಯಿಂದ ನಿಲ್ಲುತ್ತೇನೆ. ನಮ್ಮ ದಿನಗಳಲ್ಲಿ ಅವುಗಳನ್ನು ಪುನಃ ಮಾಡಿರಿ. ನಮ್ಮ ವರ್ಷಗಳ ಮಧ್ಯದಲ್ಲಿ ಅವುಗಳನ್ನು ತಿಳಿಸಿರಿ, ನೀನು ರೋಷಗೊಂಡಿದ್ದರೂ ಕರುಣೆಯನ್ನು ಜ್ಞಾಪಕಮಾಡಿಕೊಳ್ಳಿರಿ.
[3] ದೇವರು, ತೇಮಾನಿನಿಂದಲೂ; ಪರಿಶುದ್ಧರು, ಪಾರಾನ್ ಪರ್ವತದಿಂದಲೂ ಬಂದರು. ಅವರ ಮಹಿಮೆ ಆಕಾಶಗಳನ್ನು ಮುಚ್ಚಿತು. ಅವರ ಸ್ತೋತ್ರವು ಭೂಮಿಯನ್ನು ತುಂಬಿಸಿತು.
[4] ಅವರ ತೇಜಸ್ಸು ಸೂರ್ಯೋದಯದ ಹಾಗಿತ್ತು. ಕಿರಣಗಳು ಅವರ ಹಸ್ತಗಳಿಂದ ಮಿಂಚಿದವು. ಅದರಲ್ಲಿ ಅವರ ಬಲ ಅಡಗಿತ್ತು.
[5] ಅವರ ಮುಂದೆ ವ್ಯಾಧಿಯು ಹೋಯಿತು. ವ್ಯಾಧಿಯು ಅವನ ಹೆಜ್ಜೆಗಳನ್ನು ಅನುಸರಿಸಿತು.
[6] ಅವರು ನಿಂತುಕೊಂಡು ಭೂಮಿಯನ್ನು ನಡುಗಿಸಿದರು. ಅವರು ನೋಡಿ ಜನಾಂಗಗಳನ್ನು ನಡುಗುವಂತೆ ಮಾಡಿದರು. ಪುರಾತನ ಪರ್ವತಗಳು ಸೀಳಿಹೋದವು. ಹಳೆಯ ಕಾಲದ ಗುಡ್ಡಗಳು ಬಿದ್ದು ಹೋದವು. ಅವರ ಮಾರ್ಗಗಳು ನಿತ್ಯವಾದವುಗಳೇ.
[7] ಕೂಷಾನಿನ ಡೇರೆಗಳು ಕಷ್ಟದಲ್ಲಿರುವುದನ್ನು ಕಂಡೆನು. ಮಿದ್ಯಾನಿನ ನಿವಾಸಗಳು ವೇದನೆಯಿಂದ ನಡುಗಿದವು.
[8] ಯೆಹೋವ ದೇವರೇ, ನದಿಗಳ ಮೇಲೆ ರೌದ್ರಗೊಂಡಿರುವಿರೋ? ಪ್ರವಾಹಗಳ ಮೇಲೆ ನಿಮ್ಮ ಕೋಪವಿತ್ತೋ? ನೀವು ಕುದುರೆಗಳನ್ನು ಮತ್ತು ರಥಗಳನ್ನು ಮುನ್ನಡೆಸಿದಾಗ ವಿಜಯಕ್ಕೆ ನೀವು ಸಮುದ್ರದ ಮೇಲೆ ಕೋಪಗೊಂಡಿದ್ದೀರಾ?
[9] ನಿನ್ನ ಬಿಲ್ಲನ್ನು ಹೊರ ತೆಗೆದಿ, ಅನೇಕ ಬಾಣಗಳಿಗಾಗಿ ಕರೆ ಕೊಟ್ಟಿದ್ದಿ, ಭೂಮಿಯನ್ನು ನದಿಗಳಿಂದ ಸೀಳಿಬಿಡುವೆ.
[10] ಬೆಟ್ಟಗಳು ನಿನ್ನನ್ನು ಕಂಡು ನಡುಗಿದವು; ಜಲಪ್ರವಾಹವು ಹಾದುಹೋಯಿತು; ಸಾಗರವು ಗರ್ಜಿಸಿ; ತನ್ನ ತೆರೆಗಳನ್ನು ಮೇಲಕ್ಕೆ ಎತ್ತುತ್ತದೆ.
[11] ನಿನ್ನ ಹಾರುವ ಬಾಣಗಳ ಬೆಳಗಿಗೂ, ನಿನ್ನ ಮಿಂಚುವ ಈಟಿಯ ಹೊಳಪಿಗೂ ಸೂರ್ಯ ಚಂದ್ರರು ಆಕಾಶದಲ್ಲಿ ಸ್ಥಿರವಾಗಿದ್ದಾರೆ.
[12] ನೀನು ಸಿಟ್ಟಿನಿಂದ ದೇಶದ ಮೇಲೆ ನಡೆದುಹೋಗಿ, ಕೋಪದಿಂದ ಜನಾಂಗಗಳನ್ನು ತುಳಿದು ಹಾಕಿದ್ದೀಯೆ.
[13] ನಿನ್ನ ಜನರ ರಕ್ಷಣೆಗೋಸ್ಕರವೂ, ನಿನ್ನ ಅಭಿಷಿಕ್ತನ ರಕ್ಷಣೆಗೋಸ್ಕರವೂ ಹೊರಗೆ ಹೊರಟು ಬಂದಿ. ದುಷ್ಟ ದೇಶದ ನಾಯಕನನ್ನು ನೀನು ತುಳಿದುಬಿಟ್ಟಿ. ತಲೆಯಿಂದ ಪಾದದವರೆಗೆ ಅವನನ್ನು ಬೆತ್ತಲೆ ಮಾಡಿದಿ.
[14] ನಮ್ಮನ್ನು ಚದುರಿಸಲು ಅವನ ಯುದ್ಧವೀರರು ಮುತ್ತಿಗೆ ಹಾಕಿದಾಗ, ಅವನ ಸ್ವಂತ ಭರ್ಜಿಯಿಂದಲೇ ಅವನ ತಲೆಯನ್ನು ತಿವಿದಿ. ಅವರು ಅಡಗಿಕೊಂಡಿರುವ ಬಡವರನ್ನು ನುಂಗಲು ಬಂದವರೋ ಎಂಬಂತೆ ಬಂದಿದ್ದರಲ್ಲವೇ?
[15] ನೀನು ನಿನ್ನ ಕುದುರೆಗಳ ಸಂಗಡ ಸಮುದ್ರದಲ್ಲಿಯೂ, ಮಹಾಜಲಗಳ ಸಮೂಹದಲ್ಲಿಯೂ ನಡೆದು ಹೋದೆ.
[16] ನಾನು ಕೇಳಿದಾಗ ನನ್ನ ಹೃದಯ ಬಡಿದುಕೊಂಡಿತು; ಆ ಶಬ್ದಕ್ಕೆ ನನ್ನ ತುಟಿಗಳು ಕದಲಿದವು; ನನ್ನ ಎಲುಬುಗಳು ಕ್ಷಯಗೊಂಡವು; ನನ್ನ ಕಾಲುಗಳು ನಡುಗಿದವು; ಆದರೂ ನಮ್ಮ ಮೇಲೆ ದಾಳಿಮಾಡುವ ಜನರ ಮೇಲೆ ನಾಶನ ಬರುವುದನ್ನು ನೋಡಲು ತಾಳ್ಮೆಯಿಂದ ಕಾದಿರುವೆನು.
[17] ಅಂಜೂರದ ಗಿಡವು ಚಿಗುರದಿದ್ದರೂ, ದ್ರಾಕ್ಷಾಲತೆಗಳಲ್ಲಿ ಹಣ್ಣು ಫಲಿಸದಿದ್ದರೂ, ಎಣ್ಣೆಮರಗಳ ಉತ್ಪತ್ತಿಯು ಶೂನ್ಯವಾದರೂ, ಹೊಲಗಳು ಆಹಾರ ಕೊಡದಿದ್ದರೂ, ಕುರಿಹಟ್ಟಿಗಳು ಬರಿದಾಗಿ ಹೋದರೂ, ಕೊಟ್ಟಿಗೆಗಳಲ್ಲಿ ದನಕರುಗಳು ಇಲ್ಲವಾದರೂ,
[18] ನಾನು ಯೆಹೋವ ದೇವರಲ್ಲಿ ಉಲ್ಲಾಸಿಸುವೆನು. ನನ್ನ ರಕ್ಷಕರಾದ ದೇವರಲ್ಲಿ ಆನಂದಿಸುವೆನು.
[19] ಸಾರ್ವಭೌಮ ಯೆಹೋವ ದೇವರು ನನ್ನ ಬಲವು. ಅವರು ನನ್ನ ಕಾಲುಗಳನ್ನು ಜಿಂಕೆಯ ಕಾಲುಗಳ ಹಾಗೆ ಮಾಡಿ, ನನ್ನ, ಉನ್ನತ ಸ್ಥಳಗಳಲ್ಲಿ ನನ್ನನ್ನು ನಡೆಯುವಂತೆ ಮಾಡುತ್ತಾನೆ. ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ತೆಗೆದದ್ದು; ನನ್ನ ತಂತಿವಾದ್ಯದೊಡನೆ ಹಾಡತಕ್ಕದ್ದು.