Skip to content
Opens in a new window
Listen to this chapter • 4:42

[1] ನಾನು ಕಾವಲುಗಾರನಾಗಿ ನಿಲ್ಲುವೆನು. ಕಾವಲು ಗೋಪುರವನ್ನೇ ಹತ್ತಿ ನಿಂತುಕೊಳ್ಳುವೆನು. ಯೆಹೋವ ದೇವರು ನನಗೆ ಏನು ಹೇಳುವರೋ, ಯಾವ ಉತ್ತರ ಕೊಡುವರೋ, ಎಂದು ಎದುರು ನೋಡುವೆನು.

[2] ಆಗ ಯೆಹೋವ ದೇವರು ನನಗೆ ಉತ್ತರಕೊಟ್ಟರು. ಪ್ರಕಟನೆಯನ್ನು ಬರೆ. ಅದನ್ನು ಓದುವವನು ಶೀಘ್ರವಾಗಿ ಓದುವಂತೆ, ಅದನ್ನು ಹಲಗೆಗಳ ಮೇಲೆ ಕೆತ್ತು.

[3] ಏಕೆಂದರೆ ಪ್ರಕಟನೆಯು ಇನ್ನೂ ನೇಮಕವಾದ ಕಾಲಕ್ಕಾಗಿ ಎದುರು ನೋಡುವುದು. ಅದು ಅಂತ್ಯದ ಬಗ್ಗೆ ಮಾತಾಡುವುದು. ಅದು ಸುಳ್ಳಾಗದು. ಅದು ತಡವಾದರೂ, ಅದಕ್ಕೆ ಕಾದುಕೊಂಡಿರು. ಏಕೆಂದರೆ ಅದು ತಡಮಾಡದೆ ನಿಶ್ಚಯವಾಗಿ ಬರುವುದು.

[4] ಇಗೋ, ಹೆಚ್ಚಿಸಿಕೊಂಡವನ ಆತ್ಮವು ತನ್ನಲ್ಲಿ ಯಥಾರ್ಥವಲ್ಲ. ಆದರೆ ನೀತಿವಂತನು ತನ್ನ ನಂಬಿಕೆಯಿಂದಲೇ ಬದುಕುವನು.

[5] ಇದಲ್ಲದೆ ದ್ರಾಕ್ಷಾರಸವು ಮೋಸಕರ. ಅವನು ಅಹಂಕಾರಿ, ಎಂದಿಗೂ ವಿಶ್ರಾಂತಿ ಹೊಂದನು. ಪಾತಾಳದ ಹಾಗೆ ತನ್ನ ಆಶೆಯನ್ನು ದೊಡ್ಡದಾಗಿ ಮಾಡಿಕೊಳ್ಳುತ್ತಾನೆ. ಮರಣದ ಹಾಗಿದ್ದಾನೆ, ತೃಪ್ತಿಯಾಗುವುದಿಲ್ಲ; ಎಲ್ಲಾ ಜನಾಂಗಗಳನ್ನು ತನಗಾಗಿ ಕೂಡಿಸುತ್ತಾನೆ; ಎಲ್ಲಾ ಜನರನ್ನು ತನ್ನ ಸೆರೆಯಾಳುಗಳಾಗಿ ಮಾಡಿಕೊಳ್ಳುತ್ತಾನೆ.

[6] ಅವರೆಲ್ಲರೂ ಅವನನ್ನು ಅಪಹಾಸ್ಯದ ಮಾತುಗಳಿಂದ ಅವಮಾನ ಮಾಡುವುದಿಲ್ಲವೋ? ಕದ್ದುಕೊಂಡ ವಸ್ತುಗಳನ್ನು ರಾಶಿಯಾಗಿ ಕೂಡಿಸಿಟ್ಟುಕೊಳ್ಳುವವನಿಗೆ ಅಕ್ರಮ ಮಾರ್ಗದಿಂದ ಐಶ್ವರ್ಯವಂತನಾಗಿರುವವನಿಗೆ ಕಷ್ಟ. ಇದೆಷ್ಟರವರೆಗೆ ಮುಂದುವರಿಯಬೇಕು?

[7] ನಿನ್ನ ಸಾಲಗಾರರು ಕ್ಷಣಮಾತ್ರದಲ್ಲಿ ಏಳರೋ? ಅವರು ಎಚ್ಚರಗೊಂಡು ನಿನಗೆ ಬೆದರಿಕೆ ಹಾಕುವರೋ? ಆಗ ನೀನು ಅವರಿಗೆ ಸುಲಿಗೆಯಾಗುವೆ.

[8] ನೀನು ಅನೇಕ ಜನಾಂಗಗಳನ್ನು ಸೂರೆ ಮಾಡಿದ್ದರಿಂದ, ಜನರಲ್ಲಿ ಉಳಿದವರೆಲ್ಲಾ ನಿನ್ನನ್ನು ಸೂರೆ ಮಾಡುವರು. ಏಕೆಂದರೆ ನೀನು ಮಾನವರ ರಕ್ತ ಸುರಿಸಿದ್ದಿ. ನಾಡುಗಳನ್ನು, ಪಟ್ಟಣಗಳನ್ನು, ಅವುಗಳಲ್ಲಿ ಇರುವುದೆಲ್ಲವನ್ನು ನಾಶಮಾಡಿದ್ದೀ.

[9] ಅನ್ಯಾಯದ ಲಾಭದಿಂದ ತನ್ನ ನಿವಾಸ ಕಟ್ಟಿಕೊಳ್ಳುವವನಿಗೂ, ತನ್ನ ಗೂಡನ್ನು ಉನ್ನತದಲ್ಲಿಡುವವನಿಗೂ, ನಾಶದ ಹಿಡಿತದಿಂದ ತಪ್ಪಿಸಿಕೊಳ್ಳಬಯಸುವವನಿಗೂ ಕಷ್ಟ!

[10] ನೀನು ಬಹು ಜನಾಂಗಗಳನ್ನು ನಿರ್ಮೂಲ ಮಾಡಿದ್ದು, ನಿನ್ನ ಕುಲಕ್ಕೆ ಅವಮಾನವನ್ನೇ ಆಲೋಚಿಸಿಕೊಂಡ ಹಾಗಾಯಿತು. ನಿನಗೆ ನೀನೇ ಕೆಡುಕು ಮಾಡಿಕೊಂಡಿದ್ದೀ.

[11] ಗೋಡೆಯೊಳಗಿಂದ ಕಲ್ಲು ಕೂಗುತ್ತದೆ. ಮರದ ತೊಲೆ ಅದಕ್ಕೆ ಉತ್ತರ ಕೊಡುತ್ತದೆ.

[12] ಊರನ್ನು ನರಹತ್ಯದಿಂದ ಕಟ್ಟಿ, ಪಟ್ಟಣವನ್ನು ಅನ್ಯಾಯದಿಂದ ಸ್ಥಾಪಿಸುವವನಿಗೆ ಕಷ್ಟ!

[13] ಜನರ ಶ್ರಮೆಯು ಬೆಂಕಿಗೆ ತುತ್ತಾಗುವುದು. ಜನಾಂಗಗಳು ವ್ಯರ್ಥವಾಗಿ ದಣಿದುಕೊಳ್ಳುತ್ತವೆ. ಇದು ಸೇನಾಧೀಶ್ವರ ಯೆಹೋವ ದೇವರ ಚಿತ್ತವಷ್ಟೆ.

[14] ಸಮುದ್ರವು ನೀರಿನಿಂದ ತುಂಬಿಕೊಂಡಿರುವಂತೆ, ಯೆಹೋವ ದೇವರ ಮಹಿಮೆಯ ತಿಳುವಳಿಕೆಯು ಭೂಮಿಯಲ್ಲಿ ತುಂಬಿಕೊಂಡಿರುವುದು.

[15] ನಿನ್ನ ರೋಷವನ್ನು ಪಾನಕಕ್ಕೆ ಬೆರಸಿ, ನಿನ್ನ ನೆರೆಯವರಿಗೆ ಕುಡಿಸಿ, ಅವರ ಬೆತ್ತಲೆತನವನ್ನು ನೋಡಬೇಕೆಂದು ಅವರನ್ನು ಅಮಲೇರಿಸಿದವನೇ, ಅಯ್ಯೋ, ನಿನ್ನ ಗತಿಯನ್ನು ಏನು ಹೇಳಲಿ!

[16] ಮಹಿಮೆಯ ಬದಲಾಗಿ ನಾಚಿಕೆಯಿಂದ ನೀನು ತುಂಬಿರುವೆ. ಈಗ ನಿನ್ನ ಸರದಿ, ಕುಡಿದು ಬೆತ್ತಲೆಯಾಗು. ಯೆಹೋವ ದೇವರ ಬಲಗೈಯಲ್ಲಿನ ಪಾತ್ರೆ ನಿನ್ನ ಕಡೆಗೆ ತಿರುಗುವುದು. ನಿನ್ನ ಘನತೆಯನ್ನು ಅವಮಾನವು ಮುಚ್ಚುವುದು.

[17] ಲೆಬನೋನಿನ ಮೇಲೆ ಮಾಡಿದ ಬಲಾತ್ಕಾರವು ನಿನ್ನನ್ನು ಚಕಿತಗೊಳಿಸುವುದು. ಮೃಗಗಳ ನಾಶವು ನಿನ್ನನ್ನು ಹೆದರಿಸುವುದು. ಏಕೆಂದರೆ ನೀನು ಮನುಷ್ಯರ ರಕ್ತ ಸುರಿಸಿದ್ದೀ; ನೀನು ನಾಡುಗಳನ್ನು, ಪಟ್ಟಣಗಳನ್ನು, ಅವುಗಳಲ್ಲಿರುವ ಎಲ್ಲವುಗಳನ್ನು ನಾಶಮಾಡಿದ್ದೀ.

[18] “ಮನುಷ್ಯನು ಕೆತ್ತಿ ರೂಪಿಸಿದ ವಿಗ್ರಹದಿಂದ ಪ್ರಯೋಜನವೇನು? ಸುಳ್ಳನ್ನು ಬೋಧಿಸುವಂಥ ಪ್ರತಿಮೆಯ ಬೆಲೆಯೇನು? ಅದನ್ನು ರೂಪಿಸಿದವನು, ತನ್ನ ಸ್ವಂತ ಸೃಷ್ಟಿಯನ್ನು ನಂಬುತ್ತಾನೆ. ಮಾತನಾಡದಂಥ ಮೂರ್ತಿಗಳನ್ನು ಅವನು ಮಾಡುತ್ತಾನೆ.

[19] ಮರಕ್ಕೆ, ‘ಎಚ್ಚರವಾಗು!’ ಮೂಕವಾದ ಕಲ್ಲಿಗೆ, ‘ಎದ್ದೇಳು!’ ಎಂದು ಹೇಳುವವನಿಗೆ ಕಷ್ಟ! ಅದು ಮಾರ್ಗದರ್ಶನ ನೀಡುವುದೇ? ಅದು ಬಂಗಾರ, ಬೆಳ್ಳಿಯಿಂದ ಹೊದಿಸಿದ್ದಾರೆ. ಆದರೆ ಅದರಲ್ಲಿ ಉಸಿರು ಎಷ್ಟು ಮಾತ್ರವೂ ಇಲ್ಲ.”

[20] ಆದರೆ ಯೆಹೋವ ದೇವರು ತಮ್ಮ ಪರಿಶುದ್ಧ ಮಂದಿರದಲ್ಲಿ ಇದ್ದಾರೆ. ಅವರ ಮುಂದೆ ಭೂಮಿಯೆಲ್ಲಾ ಮೌನವಾಗಿರಲಿ.

ಹಬಕ್ಕೂಕ — Chapters