Skip to content
Opens in a new window
Listen to this chapter • 4:31

[1] ಯೆಹೂದದ ಅರಸನಾದ ಆಮೋನನ ಮಗನಾದ ಯೋಷೀಯನ ಕಾಲದಲ್ಲಿ ಕೂಷಿಯ ಮಗನೂ ಗೆದಲ್ಯನ ಮೊಮ್ಮಗನೂ ಹಿಜ್ಕೀಯನಿಗೆ ಹುಟ್ಟಿದ ಅಮರ್ಯನ ಮರಿಮಗನೂ ಆದ ಚೆಫನ್ಯನಿಗೆ ಯೆಹೋವ ದೇವರು ದಯಪಾಲಿಸಿದ ವಾಕ್ಯ:

[2] ಯೆಹೋವ ದೇವರು ಹೇಳುವುದೇನೆಂದರೆ, “ನಾನು ದೇಶದೊಳಗಿಂದ ಎಲ್ಲವುಗಳನ್ನು ಸಂಪೂರ್ಣವಾಗಿ ನಾಶಮಾಡುವೆನು.”

[3] “ಮನುಷ್ಯರನ್ನೂ ಮೃಗಗಳನ್ನೂ ನಾಶಮಾಡುವೆನು. ಆಕಾಶದ ಪಕ್ಷಿಗಳನ್ನೂ ಸಮುದ್ರದ ಮೀನುಗಳನ್ನೂ ನಾಶಮಾಡುವೆನು.” “ಮನುಷ್ಯರನ್ನು ದೇಶದೊಳಗಿಂದ ಕಡಿದು ಬಿಡುವಾಗ ದುಷ್ಟರಿಗೆ ಉಳಿಯುವುದು ಕಸದರಾಶಿಯೇ,” ಎಂದು ಯೆಹೋವ ದೇವರು ಹೇಳುತ್ತಾರೆ.

[4] “ಯೆಹೂದದ ಮೇಲೆಯೂ ಯೆರೂಸಲೇಮಿನ ಎಲ್ಲಾ ನಿವಾಸಿಗಳ ಮೇಲೆಯೂ ನನ್ನ ಕೈಚಾಚುವೆನು. ಈ ಸ್ಥಳದಲ್ಲಿ ಬಾಳನ ಪೂಜೆಗಳನ್ನು ಮತ್ತು ಉಳಿದಿರುವ ವಿಗ್ರಹಾರಾಧಕ ಯಾಜಕರ ಹೆಸರುಗಳನ್ನು ತೆಗೆದುಬಿಡುವೆನು.

[5] ಮಾಳಿಗೆಗಳ ಮೇಲೆ ತಲೆಬಾಗಿಸಿ ಆಕಾಶದ ನಕ್ಷತ್ರಗಣಕ್ಕೆ ಆರಾಧಿಸುವವರನ್ನೂ ಯೆಹೋವ ದೇವರ ಮೇಲೆಯೂ ಮಲ್ಕಾಮನ ಮೇಲೆಯೂ ಆಣೆ ಇಟ್ಟುಕೊಳ್ಳುವವರನ್ನೂ

[6] ಯೆಹೋವ ದೇವರನ್ನು ಅನುಸರಿಸದೆ ಹಿಂತಿರುಗಿ ಹೋಗುವವರನ್ನು ಯೆಹೋವ ದೇವರನ್ನು ಹುಡುಕದೆಯೂ ವಿಚಾರಿಸದೆಯೂ ಇರುವವರನ್ನೂ ಕಡಿದುಬಿಡುವೆನು.”

[7] ಸಾರ್ವಭೌಮ ಯೆಹೋವ ದೇವರ ಮುಂದೆ ಮೌನವಾಗಿರಿ. ಏಕೆಂದರೆ ಯೆಹೋವ ದೇವರ ದಿನವು ಸಮೀಪವಾಗಿದೆ. ಯೆಹೋವ ದೇವರು ಯಜ್ಞವನ್ನು ಸಿದ್ಧಮಾಡಿದ್ದಾರೆ. ಅವರು ಆಮಂತ್ರಿಸಿದವರನ್ನು ಅವರು ಪವಿತ್ರೀಕರಿಸಿದ್ದಾರೆ.

[8] ಯೆಹೋವ ದೇವರ ಯಜ್ಞದ ದಿನದಲ್ಲಿ ನಾನು ಪ್ರಧಾನರನ್ನು, ರಾಜಪುತ್ರರನ್ನು ಮತ್ತು ವಿದೇಶಿಯರ ಉಡುಪನ್ನು ತೊಟ್ಟುಕೊಳ್ಳುವವರೆಲ್ಲರನ್ನೂ ದಂಡಿಸುವೆನು.

[9] ಆ ದಿನದಲ್ಲಿ ಹೊಸ್ತಿಲನ್ನು ದಾಟುವವರೆಲ್ಲರನ್ನೂ ತಮ್ಮ ದೇವರುಗಳ ಆಲಯಗಳನ್ನು ಹಿಂಸಾಚಾರದಿಂದಲೂ ಮೋಸದಿಂದಲೂ ತುಂಬಿಸುವವರನ್ನೂ ದಂಡಿಸುವೆನು.

[10] “ಆ ದಿನದಲ್ಲಿ, ಮೀನಿನ ಬಾಗಿಲಿನಿಂದ ಕೂಗಿನ ಶಬ್ದವೂ ಹೊಸ ಮನೆಯಿಂದ ಗೋಳಾಟವೂ ಗುಡ್ಡಗಳ ಕಡೆಯಿಂದ ಮುರಿಯುವ ಬಲವಾದ ಶಬ್ದವೂ ಕೇಳಿಬರುವುದು, ಎಂದು ಯೆಹೋವ ದೇವರು ಹೇಳುತ್ತಾರೆ.

[11] ಮಾರುಕಟ್ಟೆಗಳ ಜಿಲ್ಲೆಯಲ್ಲಿ ವಾಸಿಸುವವರೇ, ಗೋಳಾಡಿರಿ. ಏಕೆಂದರೆ ವರ್ತಕರ ಜನರೆಲ್ಲಾ ಸಂಹಾರವಾದರು. ಬೆಳ್ಳಿಯ ವ್ಯಾಪಾರಿಗಳೆಲ್ಲರೂ ನಾಶವಾದರು.

[12] ಆ ಕಾಲದಲ್ಲಿ, ನಾನು ಯೆರೂಸಲೇಮನ್ನು ದೀಪಗಳಿಂದ ಹುಡುಕಿಬಿಡುವೆನು. ‘ಯೆಹೋವ ದೇವರು ಒಳ್ಳೆಯದನ್ನಾದರೂ ಕೆಟ್ಟದ್ದನ್ನಾದರೂ ಮಾಡುವುದಿಲ್ಲ’ ಎಂದುಕೊಂಡು ಮಡ್ಡಿಯ ಮೇಲೆ ಮಂದವಾಗಿರುವ ದ್ರಾಕ್ಷಾರಸಕ್ಕೆ ಸಮಾನರಾದ ಜನರನ್ನೂ ದಂಡಿಸುವೆನು.

[13] ಆದ್ದರಿಂದ ಅವರ ಸಂಪತ್ತು ಕೊಳ್ಳೆಯಾಗುವುದು, ಅವರ ಮನೆಗಳು ಹಾಳಾಗುವುವು. ಅವರು ಮನೆಗಳನ್ನು ಕಟ್ಟಿಕೊಂಡರೂ ಅವುಗಳಲ್ಲಿ ವಾಸಮಾಡರು. ದ್ರಾಕ್ಷಿತೋಟಗಳನ್ನು ನೆಟ್ಟು ಅವುಗಳ ರಸವನ್ನು ಕುಡಿಯರು.”

[14] ಯೆಹೋವ ದೇವರ ಮಹಾದಿವಸವು ಸಮೀಪವಾಗಿದೆ, ಬಹು ತ್ವರೆಯಾಗಿ ಬರುತ್ತಿದೆ. ಕೇಳಿರಿ. ಯೆಹೋವ ದೇವರ ದಿನದಂದು ಕೂಗು ಕಹಿಯಾಗಿರುವುದು. ಶೂರನು ಅಲ್ಲಿ ಬೊಬ್ಬೆ ಹಾಕುವನು.

[15] ಆ ದಿವಸವು ರೌದ್ರದ ದಿವಸವು, ಇಕ್ಕಟ್ಟು ಸಂಕಟಗಳ ದಿವಸವು, ಹಾಳುಪಾಳುಗಳ ದಿವಸವು, ಕತ್ತಲೆ ಮಬ್ಬುಗಳ ದಿವಸವು, ಕಾರ್ಮುಗಿಲ ಕಗ್ಗತ್ತಲ ದಿವಸವು,

[16] ಕೋಟೆಯುಳ್ಳ ಪಟ್ಟಣಗಳಿಗೆ ವಿರೋಧವಾಗಿಯೂ ಉನ್ನತವಾದ ಗೋಪುರಗಳಿಗೆ ವಿರೋಧವಾಗಿಯೂ ತುತೂರಿ ಆರ್ಭಟಗಳ ದಿವಸವು.

[17] “ನಾನು ಮನುಷ್ಯರ ಮೇಲೆ ಇಕ್ಕಟ್ಟು ತರಿಸುವೆನು. ಅವರು ಕುರುಡರ ಹಾಗೆ ತಡಕುವರು. ಏಕೆಂದರೆ ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿದ್ದಾರೆ. ಅವರ ರಕ್ತವು ಧೂಳಿನಂತೆಯೂ ಅವರ ಮಾಂಸವು ಗೊಬ್ಬರದಂತೆಯೂ ಸುರಿದಿರುವುದು.

[18] ಯೆಹೋವ ದೇವರ ರೌದ್ರದಿನದಂದು ಅವರ ಬೆಳ್ಳಿಯಾದರೂ ಅವರ ಬಂಗಾರವಾದರೂ ಅವರನ್ನು ರಕ್ಷಿಸಲಾರವು.” ಅವರ ಅಸೂಯೆಯ ಬೆಂಕಿಯು ದೇಶವನ್ನೆಲ್ಲಾ ನುಂಗುವುದು. ಏಕೆಂದರೆ ದೇಶದ ನಿವಾಸಿಗಳನ್ನೆಲ್ಲಾ ಬೇಗ ನಿರ್ಮೂಲ ಮಾಡಿಬಿಡುವರು.

ಚೆಫನ್ಯ — Chapters