[1] ಪ್ರವಾದಿಯಾದ ಹಬಕ್ಕೂಕನು ಹೊಂದಿದ ಪ್ರವಾದನೆಯು:
[2] ಯೆಹೋವ ದೇವರೇ, ನಾನು ಎಷ್ಟು ಕಾಲ ಸಹಾಯಕ್ಕಾಗಿ ಮೊರೆಯಿಡಬೇಕು. ನೀವು ನನ್ನ ಮೊರೆಗೆ ಎಷ್ಟು ಕಾಲ ಕಿವಿಗೊಡದಿರುವಿರಿ. “ಹಿಂಸೆಯಾಗುತ್ತಿದೆ,” ಎಂದು ಕೂಗುತ್ತಿದ್ದೇನೆ, ಆದರೂ ನೀವು ರಕ್ಷಿಸುವುದಿಲ್ಲ.
[3] ಅನ್ಯಾಯವನ್ನು ನಾನು ನೋಡುವಂತೆ ಏಕೆ ಮಾಡುತ್ತೀರಿ? ತಪ್ಪನ್ನು ಏಕೆ ಸಹಿಸುತ್ತೀರಿ? ನಾಶವೂ ಹಿಂಸೆಯೂ ನನ್ನ ಮುಂದೆ ಇವೆ. ಹೋರಾಟವೂ ಒಡುಕೂ ಹೆಚ್ಚುತ್ತಲಿವೆ.
[4] ಆದ್ದರಿಂದ ದೈವನಿಯಮವು ಪಕ್ಕಕ್ಕೆ ಇಡಲಾಗಿದೆ. ನ್ಯಾಯವು ಎಂದಿಗೂ ಸ್ಥಾಪಿತವಾಗುವುದಿಲ್ಲ. ಏಕೆಂದರೆ ದುಷ್ಟರು ನೀತಿವಂತರನ್ನು ಸುತ್ತಿಕೊಂಡಿದ್ದಾರೆ. ಆದ್ದರಿಂದ ತಪ್ಪಾಗಿ ನ್ಯಾಯತೀರ್ಪು ಹೊರಡುತ್ತದೆ.
[5] “ಜನಾಂಗಗಳ ಕಡೆಗೆ ನೋಡಿ ಲಕ್ಷ್ಯಗೊಟ್ಟು ಬಹಳವಾಗಿ ಆಶ್ಚರ್ಯಪಡಿರಿ. ನಿಮ್ಮ ಜೀವಮಾನ ಕಾಲದಲ್ಲಿ ನಾನು ಒಂದು ಕಾರ್ಯವನ್ನು ಮಾಡಲಿದ್ದೇನೆ ಆ ಕಾರ್ಯವನ್ನು ವಿವರಿಸಿ ಹೇಳಿದರೂ ನೀವದನ್ನು ನಂಬುವುದಿಲ್ಲ.
[6] ನಾನು ಬಾಬಿಲೋನಿಯರನ್ನು ಎಬ್ಬಿಸುತ್ತೇನೆ. ಅವರು ಉಗ್ರ ಮತ್ತು ಸಾಹಸಿ ಜನರು. ತಮ್ಮದಲ್ಲದ ನಿವಾಸಗಳನ್ನು ವಶಮಾಡಿಕೊಳ್ಳುವುದಕ್ಕೆ ವಿಶಾಲವಾದ ದೇಶದಲ್ಲಿ ಹಾದುಹೋಗುವರು.
[7] ಅವರು ಭಯಂಕರವಾದವರು ಮತ್ತು ಕ್ರೂರವಾದವರು. ಅವರು ತಮಗೆ ತಾವೇ ಕಾನೂನಾಗಿದ್ದಾರೆ. ತಮ್ಮನ್ನು ತಾವೇ ಗೌರವಿಸಿಕೊಳ್ಳುವವರೂ ಆಗಿದ್ದಾರೆ.
[8] ಅವರ ಕುದುರೆಗಳು ಚಿರತೆಗಳಿಗಿಂತ ವೇಗವಾಗಿಯೂ, ಸಂಜೆಯ ತೋಳಗಳಿಗಿಂತ ಚುರುಕಾಗಿಯೂ ಇವೆ. ಅವರ ಅಶ್ವಸೈನ್ಯ ಎರಗುವುದು. ಅವರ ಕುದುರೆ ಸವಾರರು ದೂರದಿಂದ ಬರುವರು; ನುಂಗುವುದಕ್ಕೆ ತ್ವರೆಪಡುವ ಹದ್ದಿನಂತೆ ಹಾರಿ ಬರುವರು.
[9] ಅವರೆಲ್ಲರು ಹಿಂಸಿಸುವುದಕ್ಕೆ ಬರುವರು; ಅವರ ಸಮೂಹ, ಮರುಭೂಮಿಯ ಗಾಳಿಯಂತೆಯೇ ಮುಂದೆ ಬರುವುದು; ಸೆರೆಯವರನ್ನು ಮರಳಿನ ಹಾಗೆ ಕೂಡಿಸುವರು.
[10] ಅವರ ಅರಸನನ್ನು ಧಿಕ್ಕರಿಸುವರು; ಪ್ರಧಾನರು ಅವರನ್ನು ಪರಿಹಾಸ್ಯ ಮಾಡುವರು; ಕೋಟೆಗಳಿಗೆಲ್ಲಾ ಕುಚೋದ್ಯ ಮಾಡುವರು; ಮಣ್ಣಿನ ದಿನ್ನೆಗಳನ್ನು ಮಾಡಿ, ಅವುಗಳನ್ನು ಹಿಡಿಯುವರು.
[11] ಬಿರುಗಾಳಿಯಂತೆ ಕೊಚ್ಚಿಕೊಳ್ಳುತ್ತಾ ಮುಂದೆ ಸಾಗುವರು. ಅಪರಾಧಿ ಜನರವರು. ಅವರ ಸ್ವಂತ ಬಲ, ಅವರ ದೇವರು.”
[12] ಯೆಹೋವ ದೇವರೇ, ನೀವು ಅನಾದಿಕಾಲದಿಂದ ಬಂದವರಲ್ಲವೇ? ನನ್ನ ದೇವರೇ, ನನ್ನ ಪರಿಶುದ್ಧರೇ, ನೀನು ಎಂದಿಗೂ ಸಾಯುವುದಿಲ್ಲ. ಯೆಹೋವ ದೇವರೇ, ನ್ಯಾಯತೀರ್ಪನ್ನು ಜಾರಿಗೊಳಿಸಲು ಅವರನ್ನು ನೇಮಿಸಿದ್ದೀರಿ. ನನ್ನ ಬಂಡೆಯೇ, ನೀವು ಶಿಕ್ಷಿಸಲು ಅವರನ್ನು ನೇಮಕ ಮಾಡಿದ್ದೀರಿ.
[13] ನೀನು ಕೆಟ್ಟದ್ದನ್ನು ನೋಡದ ಹಾಗೆ ಶುದ್ಧ ಕಣ್ಣುಗಳುಳ್ಳವರು. ನೀವು ಅನ್ಯಾಯವನ್ನು ದೃಷ್ಟಿಸಲಾರಿರಿ, ವಂಚಿಸುವವರನ್ನು ಏಕೆ ಸಹಿಸಿಕೊಳ್ಳುತ್ತೀರಿ? ದುಷ್ಟನು ತನಗಿಂತ ನೀತಿವಂತನನ್ನು ನುಂಗಿ ಬಿಡುವ ವೇಳೆಯಲ್ಲಿ ಏಕೆ ಸುಮ್ಮನಿರುತ್ತೀರಿ?
[14] ಮನುಷ್ಯರನ್ನು ಸಮುದ್ರದ ಮೀನುಗಳಂತೆಯೂ, ಆಳುವವನಿಲ್ಲದ ಕ್ರಿಮಿಗಳಂತೆಯೂ ಮಾಡಿರುತ್ತೀರಿ.
[15] ದುಷ್ಟ ವೈರಿಯು ಅವುಗಳನ್ನು ಗಾಳದಿಂದ ಎತ್ತಿ, ತನ್ನ ಬಲೆಯಿಂದ ಅವುಗಳನ್ನು ಹಿಡಿದು, ತನ್ನ ಜಾಲದಿಂದ ಅವುಗಳನ್ನು ಕೂಡಿಸಿಡುತ್ತಾನೆ. ಅವನು ಹಿಗ್ಗುತ್ತಾನೆ, ಸಂತೋಷಪಡುತ್ತಾನೆ.
[16] ಆದ್ದರಿಂದ ತಮ್ಮ ಬಲೆಗೆ ಬಲಿ ಅರ್ಪಿಸಿ, ತಮ್ಮ ಜಾಲಕ್ಕೆ ಧೂಪವನ್ನು ಸುಡುತ್ತಾರೆ. ಏಕೆಂದರೆ ಇವುಗಳಿಂದ ಅವರ ಭೋಜನ ಪುಷ್ಟಿಯಾಗಿಯೂ, ಅವರ ಆಹಾರ ರುಚಿಯುಳ್ಳದ್ದಾಗಿಯೂ ಇದೆ.
[17] ಹೀಗಿರುವುದರಿಂದ ನಿರಂತರವಾಗಿ ಅವರು ತಮ್ಮ ಬಲೆಯನ್ನು ಬರಿದುಮಾಡಿ, ಕರುಣೆ ಇಲ್ಲದೆ ಜನಾಂಗಗಳನ್ನು ನಾಶ ಮಾಡುತ್ತಾ ಅವನು ಹೋಗಬೇಕೇ?