[1] ಅರಸನಾದ ಅರ್ತಷಸ್ತನ ಆಳಿಕೆಯಲ್ಲಿ ಬಾಬಿಲೋನಿನಿಂದ ನನ್ನ ಸಂಗಡ ಹೊರಟು ಬಂದವರ ಕುಟುಂಬಗಳಲ್ಲಿ ಮುಖ್ಯಸ್ಥರು ಯಾರೆಂದರೆ:
[2] ಫೀನೆಹಾಸನ ವಂಶಜರಲ್ಲಿ ಗೇರ್ಷೋಮನೂ, ಈತಾಮಾರನ ವಂಶಜರಲ್ಲಿ ದಾನಿಯೇಲನೂ; ದಾವೀದನ ವಂಶಜರಲ್ಲಿ ಹಟ್ಟೂಷನೂ.
[3] ಇವನು ಶೆಕನ್ಯನ ವಂಶಜನು. ಪರೋಷಿನ ವಂಶಜರಲ್ಲಿ ಜೆಕರ್ಯನೂ, ಅವನ ಸಂಗಡ ವಂಶಜರಲ್ಲಿ 150 ಮಂದಿ ಗಂಡಸರು.
[4] ಪಹತ್ ಮೋವಾಬನ ವಂಶಜರಲ್ಲಿ ಜೆರಹ್ಯನ ಮಗನಾದ ಎಲಿಹೋಯೇನೈನೂ, ಅವನ ಸಂಗಡ 200 ಮಂದಿ ಗಂಡಸರು.
[5] ಜತ್ತುವಿನ ವಂಶಜರಲ್ಲಿ ಯಹಜಿಯೇಲನ ಮಗನಾದ ಶೆಕನ್ಯನು ಮತ್ತು ಅವನ ಸಂಗಡ 300 ಮಂದಿ ಗಂಡಸರು.
[6] ಅದೀನನ ವಂಶಜರಲ್ಲಿ ಯೋನಾತಾನನ ಮಗ ಏಬೆದನೂ, ಅವನ ಸಂಗಡ 50 ಮಂದಿ ಗಂಡಸರು.
[7] ಏಲಾಮನ ವಂಶಜರಲ್ಲಿ ಅತಲ್ಯನ ಮಗ ಯೆಶಾಯನೂ, ಅವನ ಸಂಗಡ 70 ಮಂದಿ ಗಂಡಸರು.
[8] ಶೆಫಟ್ಯನ ವಂಶಜರಲ್ಲಿ ಮೀಕಾಯೇಲನ ಮಗ ಜೆಬದ್ಯನೂ, ಅವನ ಸಂಗಡ 80 ಮಂದಿ ಗಂಡಸರು.
[9] ಯೋವಾಬನ ವಂಶಜರಲ್ಲಿ ಯೆಹೀಯೇಲನ ಮಗ ಓಬದ್ಯನೂ, ಅವನ ಸಂಗಡ 218 ಮಂದಿ ಗಂಡಸರು.
[10] ಬಾನೀಯ ವಂಶಜರಲ್ಲಿ ಯೋಸಿಫ್ಯನ ಮಗ ಶೆಲೋಮೀತನು ಮತ್ತು ಅವನ ಸಂಗಡ 160 ಮಂದಿ ಗಂಡಸರು.
[11] ಬೇಬೈನ ವಂಶಜರಲ್ಲಿ ಬೆಬಾಯಿಯ ಮಗ ಜೆಕರ್ಯನು; ಅವನ ಸಂಗಡ 28 ಮಂದಿ ಗಂಡಸರು.
[12] ಅಜ್ಗಾದನ ವಂಶಜರಲ್ಲಿ ಹಕ್ಕಾಟಾನನ ಮಗ ಯೋಹಾನಾನನೂ, ಅವನ ಸಂಗಡ 110 ಮಂದಿ ಗಂಡಸರು;
[13] ಅದೋನೀಕಾಮಿನ ವಂಶಜರಲ್ಲಿ ಕಡೇ ಪುತ್ರರಾದ ಎಲೀಫೆಲೆಟ್, ಯೆವಿಯೇಲನು, ಶೆಮಾಯನು ಎಂಬ ಹೆಸರುಳ್ಳವರೂ, ಅವರ ಸಂಗಡ 60 ಮಂದಿ ಗಂಡಸರು;
[14] ಬಿಗ್ವೈ ವಂಶಜರಲ್ಲಿ ಜಕ್ಕೂರನ ಮಗನಾದ ಊತೈ ಮತ್ತು ಅವನ ಸಂಗಡ 70 ಮಂದಿ ಗಂಡಸರು.
[15] ಇವರನ್ನು ನಾನು ಅಹಾವಕ್ಕೆ ಹರಿಯುವ ನದಿಯ ಬಳಿಯಲ್ಲಿ ಕೂಡಿಸಿಕೊಂಡು, ಅಲ್ಲಿ ಮೂರು ದಿವಸ ಡೇರೆಗಳಲ್ಲಿ ವಾಸಿಸಿದ್ದೆವು. ನಾನು ಜನರನ್ನೂ, ಯಾಜಕರನ್ನೂ ಶೋಧಿಸಿ ನೋಡುವಾಗ, ಲೇವಿಯರಲ್ಲಿ ಒಬ್ಬನೂ ಅಲ್ಲಿ ಸಿಕ್ಕಲಿಲ್ಲ.
[16] ಆಗ ನಾನು ಎಲೀಯೆಜೆರನು, ಅರೀಯೇಲನು, ಶೆಮಾಯನು, ಎಲ್ನತಾನನು, ಯಾರೀಬನು, ಎಲ್ನಾತಾನನು, ನಾತಾನನು, ಜೆಕರ್ಯನು, ಮೆಷುಲ್ಲಾಮನು ಎಂಬ ಪ್ರಮುಖರನ್ನೂ, ಯೋಯಾರೀಬನು, ಎಲ್ನತಾನನು ಎಂಬ ಗ್ರಹಿಕೆಯುಳ್ಳವರನ್ನೂ ಕರೆಕಳುಹಿಸಿದೆನು.
[17] ಕಾಸಿಫ್ಯದಲ್ಲಿರುವ ಅಧಿಪತಿಯಾದ ಇದ್ದೋನನ ಬಳಿಗೆ ಅಪ್ಪಣೆಕೊಟ್ಟು ಕಳುಹಿಸಿ, ಅವರು ನಮ್ಮ ದೇವರ ಆಲಯಕ್ಕೋಸ್ಕರ ಸೇವಕರನ್ನು ತರುವ ಹಾಗೆ ಅವರು ಕಸಿಪ್ಯವೆಂಬ ಸ್ಥಳದಲ್ಲಿರುವ ಇದ್ದೋವಿಗೂ, ಅವನ ಸಹೋದರರಾದ ನೆತಿನಿಯರಿಗೂ ಹೇಳಬೇಕಾದದ್ದನ್ನು ತಿಳಿಸಿದೆನು.
[18] ನಮ್ಮ ದೇವರ ಕೃಪಾಹಸ್ತವು ನಮ್ಮ ಮೇಲೆ ಇದ್ದುದರಿಂದ, ಅವರು ಇಸ್ರಾಯೇಲಿನ ಮಗನಾಗಿರುವ ಲೇವಿಯ ಮಗ ಮಹ್ಲೀಯ ಪುತ್ರರಲ್ಲಿ ಬುದ್ಧಿವಂತನಾದ ಶೇರೇಬ್ಯನೂ, ಅವನ ಪುತ್ರರೂ, ಸಹೋದರರೂ ಆದ ಹದಿನೆಂಟು ಮಂದಿಯನ್ನೂ,
[19] ಹಷಬ್ಯನೂ, ಅವನ ಸಂಗಡ ಮೆರಾರೀಯ ಪುತ್ರರಲ್ಲಿ ಯೆಶಾಯನೂ, ಅವನ ಸಹೋದರರೂ, ಅವರ ಪುತ್ರರೂ ಆದ ಇಪ್ಪತ್ತು ಮಂದಿಯನ್ನೂ,
[20] ದಾವೀದನೂ, ಪ್ರಧಾನರೂ, ಲೇವಿಯರನ್ನು ಸೇವಿಸುವುದಕ್ಕೆ ನೇಮಿಸಿದ ದೇವಾಲಯದ ಸೇವಕರಲ್ಲಿ ಇನ್ನೂರ ಇಪ್ಪತ್ತು ಮಂದಿ ಸೇವಕರನ್ನೂ, ನಮ್ಮ ಬಳಿಗೆ ಕರೆದುಕೊಂಡು ಬಂದರು. ಅವರೆಲ್ಲರ ಹೆಸರುಗಳು ದಾಖಲೆಯಾಗಿದ್ದವು.
[21] ಆಗ ನಾವು ನಮ್ಮ ದೇವರ ಮುಂದೆ ನಮ್ಮನ್ನು ತಗ್ಗಿಸಿಕೊಳ್ಳುವುದಕ್ಕೂ, ನಮಗೂ ನಮ್ಮ ಮಕ್ಕಳಿಗೂ, ನಮ್ಮ ಎಲ್ಲಾ ಸ್ಥಿತಿಗೂ ಅವರಿಂದ ಸರಿಯಾದ ಮಾರ್ಗವನ್ನು ಹುಡುಕುವುದಕ್ಕೂ, ನಾನು ಅಲ್ಲಿ ಅಹಾವ ನದಿಯ ಬಳಿಯಲ್ಲಿ ಉಪವಾಸವನ್ನು ಮಾಡಲು ಪ್ರಕಟಿಸಿದೆನು.
[22] “ನಮ್ಮ ದೇವರ ಕೃಪಾಹಸ್ತವು ಅವರನ್ನು ಹುಡುಕುವವರೆಲ್ಲರ ಮೇಲೆಯೂ ಇದೆ, ಆದರೆ ಅವರ ಕೋಪವು ಅವರನ್ನು ತ್ಯಜಿಸುವ ಎಲ್ಲರ ವಿರುದ್ಧವಾಗಿರುತ್ತದೆ,” ಎಂದು ನಾವು ಅರಸನಿಗೆ ಹೇಳಿದ್ದರಿಂದ, ಮಾರ್ಗದಲ್ಲಿ ಶತ್ರುವಿಗೆ ವಿರೋಧವಾಗಿ ನಮಗೆ ಸಹಾಯ ಕೊಡಲು ಸೈನ್ಯವನ್ನೂ ಅಶ್ವಬಲವನ್ನೂ ಅರಸನಿಂದ ಕೇಳಲು ನಾಚಿಕೆಪಟ್ಟೆವು.
[23] ಆದ್ದರಿಂದ ನಾವು ಉಪವಾಸ ಮಾಡಿ ಇದಕ್ಕೋಸ್ಕರ ನಮ್ಮ ದೇವರನ್ನು ಬೇಡಿಕೊಂಡೆವು. ದೇವರು ನಮ್ಮ ವಿಜ್ಞಾಪನೆಯನ್ನು ಕೇಳಿದರು.
[24] ನಾನು ಯಾಜಕರ ಪ್ರಮುಖರಲ್ಲಿ ಹನ್ನೆರಡು ಮಂದಿಯಾಗಿರುವ ಶೇರೇಬ್ಯ, ಹಷಬ್ಯ ಇವರ ಸಂಗಡ ಅವರ ಸಹೋದರರಲ್ಲಿ ಹತ್ತು ಮಂದಿಯನ್ನೂ ಪ್ರತ್ಯೇಕಿಸಿ
[25] ಅರಸನೂ, ಅವನ ಸಲಹೆಗಾರರೂ, ಅವನ ಪ್ರಧಾನರೂ ಅಲ್ಲಿದ್ದ ಎಲ್ಲಾ ಇಸ್ರಾಯೇಲರೂ ನಮ್ಮ ದೇವರ ಆಲಯಕ್ಕೆ ಅರ್ಪಿಸಿದ ಕಾಣಿಕೆಯಾದ ಬೆಳ್ಳಿಯನ್ನೂ, ಬಂಗಾರವನ್ನೂ, ಸಲಕರಣೆಗಳನ್ನೂ ಅವರಿಗೆ ತೂಕಮಾಡಿ ಕೊಟ್ಟೆನು.
[26] ಅವರ ಕೈಗೆ ಕೊಟ್ಟ ಸಲಕರಣೆಗಳ ತೂಕ 22 ಬೆಳ್ಳಿ ಮೆಟ್ರಿಕ್ ಟನ್; ಬೆಳ್ಳಿಯ ನೂರು ಸಾಮಗ್ರಿಗಳ ತೂಕ 3.4 ಮೆಟ್ರಿಕ್ ಟನ್; ಬಂಗಾರ 3.4 ಮೆಟ್ರಿಕ್ ಟನ್.
[27] ಬಂಗಾರದ ಇಪ್ಪತ್ತು ಬಟ್ಟಲುಗಳು ಪ್ರತಿಯೊಂದೂ 8.4 ಕಿಲೋಗ್ರಾಂ, ಇವುಗಳಲ್ಲದೆ ಶ್ರೇಷ್ಠವಾದ ಕಂಚಿನ ಎರಡು ಪಾತ್ರೆಗಳಿದ್ದವು. ಅವು ಬಂಗಾರದಷ್ಟು ಬೆಲೆಯುಳ್ಳವುಗಳು.
[28] ನಾನು ಅವರಿಗೆ, “ನೀವು ಯೆಹೋವ ದೇವರಿಗೆ ಪ್ರತಿಷ್ಠಿತರಾಗಿದ್ದೀರಿ. ಈ ವಸ್ತುಗಳು ಹಾಗೆಯೇ ಪ್ರತಿಷ್ಠಿತವು. ಈ ಬೆಳ್ಳಿ ಬಂಗಾರವು ನಿಮ್ಮ ಪಿತೃಗಳ ದೇವರಾಗಿರುವ ಯೆಹೋವ ದೇವರಿಗೆ ಸಮರ್ಪಿತವಾದ ಕಾಣಿಕೆ.
[29] ನೀವು ಯೆರೂಸಲೇಮಿನಲ್ಲಿ ಯೆಹೋವ ದೇವರ ಆಲಯದ ಕೊಠಡಿಗಳೊಳಗೆ ಯಾಜಕರ ಲೇವಿಯರ, ಪ್ರಧಾನರ ಮುಂದೆಯೂ ಇಸ್ರಾಯೇಲ್ ಕುಟುಂಬಗಳ ಪ್ರಧಾನರ ಮುಂದೆಯೂ ತೂಕಮಾಡುವವರೆಗೆ ಜಾಗ್ರತೆಯಾಗಿ ಕಾಪಾಡಿರಿ,” ಎಂದೆನು.
[30] ಹಾಗೆಯೇ ಯಾಜಕರೂ, ಲೇವಿಯರೂ ತೂಕದ ಹಾಗೆ ಬೆಳ್ಳಿಯನ್ನೂ, ಬಂಗಾರವನ್ನೂ, ವಸ್ತುಗಳನ್ನೂ ಯೆರೂಸಲೇಮಿನಲ್ಲಿರುವ ನಮ್ಮ ದೇವರ ಆಲಯಕ್ಕೆ ತೆಗೆದುಕೊಂಡು ಬಂದರು.
[31] ನಾವು ಯೆರೂಸಲೇಮಿಗೆ ಹೋದ ಮೊದಲನೆಯ ತಿಂಗಳ, ಹನ್ನೆರಡನೆಯ ದಿವಸದಲ್ಲಿ ಅಹಾವ ನದಿಯನ್ನು ಬಿಟ್ಟು ಹೊರಟೆವು. ನಮ್ಮ ದೇವರ ಹಸ್ತವು ನಮ್ಮ ಮೇಲೆ ಇದ್ದುದರಿಂದ, ದೇವರು ಶತ್ರುವಿನ ಕೈಗೂ, ಮಾರ್ಗದಲ್ಲಿ ಹೊಂಚುಹಾಕುವವರ ಕೈಗೂ ನಮ್ಮನ್ನು ತಪ್ಪಿಸಿಬಿಟ್ಟರು.
[32] ನಾವು ಯೆರೂಸಲೇಮಿಗೆ ಬಂದು, ಅಲ್ಲಿ ಮೂರು ದಿವಸ ವಿಶ್ರಮಿಸಿಕೊಂಡೆವು.
[33] ತರುವಾಯ ನಾಲ್ಕನೆಯ ದಿವಸದಲ್ಲಿ ಆ ಬೆಳ್ಳಿಯೂ, ಬಂಗಾರವೂ, ಸಲಕರಣೆಗಳೂ ನಮ್ಮ ದೇವರ ಆಲಯದಲ್ಲಿ ಯಾಜಕರಾಗಿರುವ ಊರೀಯನ ಮಗ ಮೆರೇಮೋತನ ಕೈಯಿಂದ ತೂಕಮಾಡಿ ಕೊಟ್ಟೆವು. ಅವನ ಸಂಗಡ ಲೇವಿಯರಾದ ಫೀನೆಹಾಸನ ಮಗನಾಗಿರುವ ಎಲಿಯಾಜರನೂ, ಯೇಷೂವನ ಮಗ ಯೋಜಾಬಾದನೂ, ಬಿನ್ನೂಯ್ ಮಗ ನೋವದ್ಯನೂ ಇದ್ದರು.
[34] ಅದರದರ ಲೆಕ್ಕದ ಪ್ರಕಾರವೂ, ತೂಕದ ಪ್ರಕಾರವೂ ಎಲ್ಲವುಗಳ ತೂಕವು ತಕ್ಷಣವೇ ಲಿಖಿತವಾಯಿತು.
[35] ಸೆರೆಯಿಂದ ಮರಳಿ ಬಂದವರು ಇಸ್ರಾಯೇಲ್ ದೇವರಿಗೆ ದಹನಬಲಿಗಳನ್ನು ಅರ್ಪಿಸಿದರು. ಸಮಸ್ತ ಇಸ್ರಾಯೇಲರಿಗೋಸ್ಕರ ಹನ್ನೆರಡು ಹೋರಿಗಳನ್ನೂ, ತೊಂಬತ್ತಾರು ಟಗರುಗಳನ್ನೂ, ಎಪ್ಪತ್ತೇಳು ಕುರಿಮರಿಗಳನ್ನೂ, ದೋಷಪರಿಹಾರಕ್ಕಾಗಿ ಹನ್ನೆರಡು ಹೋತಗಳನ್ನೂ ಅರ್ಪಿಸಿದರು. ಇವೆಲ್ಲಾ ಯೆಹೋವ ದೇವರಿಗೆ ದಹನಬಲಿಯಾಗಿತ್ತು.
[36] ಅವರು ಅರಸನ ಆಜ್ಞೆಗಳನ್ನು ಯೂಫ್ರೇಟೀಸ್ ನದಿಯ ಈಚೆಯಲ್ಲಿರುವ ಅರಸನ ಅಧಿಪತಿಗಳಿಗೂ, ಯಜಮಾನರಿಗೂ ಒಪ್ಪಿಸಿದರು. ಆಗ ಅವರು ಜನರಿಗೂ, ದೇವರ ಆಲಯಕ್ಕೂ ಸಹಾಯ ಮಾಡಿದರು.