[1] ಈಗ ಪ್ರವಾದಿಗಳಾದ ಹಗ್ಗಾಯನೂ, ಇದ್ದೋನನ ಮಗ ಜೆಕರ್ಯನೂ ಯೆಹೂದ ಮತ್ತು ಯೆರೂಸಲೇಮಿನಲ್ಲಿ ಇರುವ ಯೆಹೂದ್ಯರಿಗೆ, ಇಸ್ರಾಯೇಲ್ ದೇವರ ನಾಮದಲ್ಲಿ ಅವರಿಗೆ ಪ್ರವಾದಿಸಿದರು.
[2] ಆಗ ಶೆಯಲ್ತಿಯೇಲನ ಮಗ ಜೆರುಬ್ಬಾಬೆಲನೂ, ಯೋಚಾದಾಕನ ಮಗ ಯೇಷೂವನೂ ಎದ್ದು ಯೆರೂಸಲೇಮಿನಲ್ಲಿರುವ ದೇವರ ಆಲಯವನ್ನು ಪುನಃ ಕಟ್ಟಿಸಲು ಪ್ರಾರಂಭಿಸಿದರು. ಅವರಿಗೆ ಸಹಾಯಕರಾಗಿ ದೇವರ ಪ್ರವಾದಿಗಳು ಅವರ ಸಂಗಡ ಇದ್ದರು.
[3] ಆ ವೇಳೆಯಲ್ಲಿ ಯೂಫ್ರೇಟೀಸ್ ನದಿಯ ಈಚೆಯಲ್ಲಿರುವ ಪ್ರದೇಶಗಳ ಅಧಿಪತಿಯಾಗಿದ್ದ ತತ್ತೆನೈಯೂ, ಶೆತರ್ ಬೋಜೆನೈಯೂ, ಅವರ ಜೊತೆಗಾರರೂ ಅವರ ಬಳಿಗೆ ಬಂದು, “ಈ ಆಲಯವನ್ನು ಪುನಃ ಕಟ್ಟಿ ತೀರಿಸುವುದಕ್ಕೆ ನಿಮಗೆ ಅಪ್ಪಣೆ ಕೊಟ್ಟವರು ಯಾರು?” ಎಂದು ಕೇಳಿದರು.
[4] ಇದಲ್ಲದೆ ಅವರು, “ಈ ಕಟ್ಟಡವನ್ನು ಕಟ್ಟಿಸುವವರ ಹೆಸರುಗಳೇನು?” ಎಂದು ವಿಚಾರಿಸಿದರು.
[5] ಆದರೆ ಈ ಕಾರ್ಯವು ದಾರ್ಯಾವೆಷನ ಬಳಿಗೆ ಬರುವವರೆಗೂ, ಅವರು ಇವರನ್ನು ನಿಲ್ಲಿಸದ ಹಾಗೆ ಇವರ ದೇವರ ಕಣ್ಣು ಯೆಹೂದ್ಯರ ಹಿರಿಯರ ಮೇಲೆ ಇತ್ತು. ಆಗ ಇದನ್ನು ಕುರಿತು ಅವರು ಉತ್ತರವನ್ನು ಪತ್ರದಲ್ಲಿ ಕಳುಹಿಸಿದರು.
[6] ಯೂಫ್ರೇಟೀಸ್ ನದಿಯ ಈಚೆಯಲ್ಲಿರುವ ಅಧಿಪತಿಯಾದ ತತ್ತೆನೈನೂ, ಶೆತರ್ ಬೋಜೆನೈಯೂ ಯೂಫ್ರೇಟೀಸ್ ನದಿಯ ಈಚೆಯಲ್ಲಿರುವ ಅವನ ಜೊತೆಗಾರರೂ, ಅರಸನಾದ ದಾರ್ಯಾವೆಷನಿಗೆ ಪತ್ರ ಬರೆದು ಕಳುಹಿಸಿದರು.
[7] ಅವರು ಅವನ ಬಳಿಗೆ ಕಳುಹಿಸಿದ ಪತ್ರದ ಪ್ರತಿಯಲ್ಲಿ: ಅರಸನಾದ ದಾರ್ಯಾವೆಷನಿಗೆ: ಸರ್ವತಾ ಕ್ಷೇಮ.
[8] ಅರಸನಿಗೆ ತಿಳಿಯಬೇಕಾದದ್ದೇನೆಂದರೆ, ನಾವು ಯೆಹೂದರ ದೇಶದಲ್ಲಿರುವ ಮಹಾ ದೇವರ ಆಲಯಕ್ಕೆ ಹೋದೆವು. ಅದನ್ನು ದೊಡ್ಡ ಕಲ್ಲುಗಳಿಂದ ಕಟ್ಟುತ್ತಿದ್ದಾರೆ. ಗೋಡೆಗಳ ಮೇಲೆ ತೊಲೆಗಳನ್ನು ಇಡುತ್ತಿದ್ದಾರೆ. ಆ ಕೆಲಸವು ತೀವ್ರವಾಗಿ ನಡೆಯುತ್ತಾ ಅವರ ಕೈಗಳಿಂದ ವೇಗವಾಗಿ ವೃದ್ಧಿಯಾಗುತ್ತದೆ.
[9] “ಆಗ ಈ ಆಲಯವನ್ನು ಕಟ್ಟುವುದಕ್ಕೂ ನಿಮಗೆ ಅಪ್ಪಣೆ ಕೊಟ್ಟವರು ಯಾರು?” ಎಂದು ನಾವು ಆ ಹಿರಿಯರನ್ನು ಕೇಳಿದೆವು.
[10] ಇದಲ್ಲದೆ ಅವರಲ್ಲಿರುವ ಮುಖ್ಯಸ್ಥರ ಹೆಸರುಗಳನ್ನು ನಿಮಗೆ ಬರೆದು ತಿಳಿಸುವಂತೆ ಅವರ ಹೆಸರುಗಳನ್ನು ಕೇಳಿದೆವು.
[11] ಅವರು ನಮಗೆ ಕೊಟ್ಟ ಉತ್ತರವೇನೆಂದರೆ: “ನಾವು ಪರಲೋಕ ಮತ್ತು ಭೂಲೋಕಗಳ ದೇವರ ಸೇವಕರಾಗಿದ್ದೇವೆ. ಅನೇಕ ವರ್ಷಗಳ ಹಿಂದೆ ಇಸ್ರಾಯೇಲಿನಲ್ಲಿದ್ದ ಒಬ್ಬ ಮಹಾ ಅರಸನು ಕಟ್ಟಿದ್ದ ಆಲಯವನ್ನು ನಾವು ಪುನಃ ಕಟ್ಟುತ್ತಿದ್ದೇವೆ.
[12] ಆದರೆ ನಮ್ಮ ಪಿತೃಗಳು ಪರಲೋಕದ ದೇವರಿಗೆ ಕೋಪವನ್ನು ಎಬ್ಬಿಸಿದ ಕಾರಣ, ದೇವರು ಅವರನ್ನು ಬಾಬಿಲೋನಿನ ಅರಸನಾಗಿದ್ದ ಕಸ್ದೀಯರ ದೇಶದವನಾದ ನೆಬೂಕದ್ನೆಚ್ಚರನ ಕೈಯಲ್ಲಿ ಒಪ್ಪಿಸಿಕೊಟ್ಟರು. ಆ ಅರಸನು ಆ ಆಲಯವನ್ನು ಹಾಳು ಮಾಡಿ, ಜನರನ್ನು ಬಾಬಿಲೋನಿಗೆ ಸೆರೆಹಿಡಿದುಕೊಂಡು ಹೋದನು.
[13] “ಆದರೆ ಬಾಬಿಲೋನಿನ ಅರಸನಾದ ಕೋರೆಷನ ಮೊದಲನೆಯ ವರ್ಷದಲ್ಲಿ ಅರಸನಾದ ಕೋರೆಷನು ದೇವರ ಈ ಆಲಯವನ್ನು ಪುನಃ ಕಟ್ಟಲು ಆಜ್ಞೆಯನ್ನು ಕೊಟ್ಟನು.
[14] ಇದಲ್ಲದೆ ನೆಬೂಕದ್ನೆಚ್ಚರನು ಯೆರೂಸಲೇಮಿನಲ್ಲಿರುವ ದೇವಾಲಯದಿಂದ ತೆಗೆದುಕೊಂಡು, ಬಾಬಿಲೋನಿನ ಮಂದಿರಕ್ಕೆ ತಂದ ದೇವಸ್ಥಾನದ ಬೆಳ್ಳಿಬಂಗಾರದ ಸಾಮಗ್ರಿಗಳನ್ನು ಅರಸನಾದ ಕೋರೆಷನು ಬಾಬಿಲೋನಿನ ಮಂದಿರದಿಂದ ತೆಗೆದುಕೊಂಡು, ತಾನು ನೇಮಿಸಿದ ಅಧಿಪತಿಯಾದ ಶೆಷ್ಬಚ್ಚರನಿಗೆ ಒಪ್ಪಿಸಿಕೊಟ್ಟನು.
[15] ಅವನಿಗೆ, ‘ಈ ಸಾಮಗ್ರಿಗಳನ್ನು ತೆಗೆದುಕೊಂಡು ಯೆರೂಸಲೇಮಿನಲ್ಲಿರುವ ದೇವಾಲಯಕ್ಕೆ ತೆಗೆದುಕೊಂಡು ಹೋಗು. ದೇವಾಲಯವನ್ನು ಪುನಃ ಅದರ ಸ್ಥಳದಲ್ಲಿ ಕಟ್ಟು,’ ಎಂದು ಆಜ್ಞಾಪಿಸಿದನು.
[16] “ಆಗ ಶೆಷ್ಬಚ್ಚರನು ಬಂದು, ಯೆರೂಸಲೇಮಿನಲ್ಲಿರುವ ದೇವರ ಆಲಯಕ್ಕೆ ಅಸ್ತಿವಾರವನ್ನು ಹಾಕಿದನು. ಅಂದಿನಿಂದ ಇಂದಿನವರೆಗೂ ಕಟ್ಟುವ ಕೆಲಸ ನಡೆಯುತ್ತಾ ಇದೆ, ಇನ್ನೂ ಮುಗಿಯಲಿಲ್ಲ,” ಎಂದರು.
[17] “ಆದ್ದರಿಂದ ಅರಸನಿಗೆ ಸರಿ ತೋರುವುದಾದರೆ, ಯೆರೂಸಲೇಮಿನಲ್ಲಿರುವ ದೇವರ ಆಲಯವನ್ನು ಪುನಃ ಕಟ್ಟಲು ಅರಸನಾದ ಕೋರೆಷನು ಅಪ್ಪಣೆ ಮಾಡಿದ್ದು ಉಂಟೋ, ಇಲ್ಲವೋ ಎಂಬುದನ್ನು ಬಾಬಿಲೋನಿನಲ್ಲಿರುವ ಅರಸನ ಬೊಕ್ಕಸದ ಮನೆಯಲ್ಲಿ ವಿಚಾರಿಸಲಿ. ತರುವಾಯ ಅರಸನು ಈ ಕಾರ್ಯಕ್ಕೋಸ್ಕರ ತನ್ನ ಚಿತ್ತವೇನೆಂದು ನಮಗೆ ತಿಳಿಸೋಣವಾಗಲಿ,” ಎಂಬುದಾಗಿ ಉತ್ತರಕೊಟ್ಟರು.