Skip to content
Opens in a new window
Listen to this chapter • 6:00

[1] ಆಗ ಅರಸನಾದ ದಾರ್ಯಾವೆಷನ ಅಪ್ಪಣೆಯ ಪ್ರಕಾರ ಅವರು ಬಾಬಿಲೋನಿನ ಭಂಡಾರದಲ್ಲಿದ್ದ ಗ್ರಂಥಾಲಯದಲ್ಲಿ ಹುಡುಕಿದರು.

[2] ಮೇದ್ಯರ ದೇಶದಲ್ಲಿರುವ ಅಹ್ಮೆತಾ ರಾಜಧಾನಿಯಲ್ಲಿ ಜ್ಞಾಪಕಾರ್ಥದ ಒಂದು ಸುರುಳಿ ಸಿಕ್ಕಿತು. ಅದರಲ್ಲಿ ಹೀಗೆ ಬರೆಯಲಾಗಿತ್ತು:

[3] ಅರಸನಾದ ಕೋರೆಷನ ಮೊದಲನೆಯ ವರ್ಷದಲ್ಲಿ ಅರಸನಾದ ಕೋರೆಷನು ಯೆರೂಸಲೇಮಿನಲ್ಲಿರುವ ದೇವರ ಆಲಯಕ್ಕೋಸ್ಕರ ಕೊಟ್ಟ ಅಪ್ಪಣೆ ಏನೆಂದರೆ: ಜನರು ಬಲಿಗಳನ್ನು ಸಮರ್ಪಿಸುವುದಕ್ಕಾಗಿ ಆಲಯವನ್ನು ಪುನಃ ಕಟ್ಟಬೇಕು. ಅದರ ಅಸ್ತಿವಾರಗಳನ್ನು ಬಲವಾಗಿ ಹಾಕಬೇಕು. ಅದರ ಎತ್ತರ 27 ಮೀಟರ್, ಅದರ ಅಗಲ 27 ಮೀಟರ್ ಆಗಿರಲಿ.

[4] ದೊಡ್ಡ ಕಲ್ಲುಗಳ ಮೂರು ಸಾಲುಗಳೂ, ಹೊಸ ತೊಲೆಗಳ ಒಂದು ಸಾಲೂ ಇರಲಿ. ಅದರ ಖರ್ಚು ಅರಮನೆಯ ಬೊಕ್ಕಸದಿಂದ ಕೊಡಲಾಗುವುದು.

[5] ಇದಲ್ಲದೆ ನೆಬೂಕದ್ನೆಚ್ಚರನು ಯೆರೂಸಲೇಮಿನಲ್ಲಿರುವ ಮಂದಿರದಿಂದ ತೆಗೆದುಕೊಂಡು ಬಾಬಿಲೋನಿಗೆ ಒಯ್ದ ದೇವರ ಆಲಯದ ಬೆಳ್ಳಿಬಂಗಾರದ ಸಲಕರಣೆಗಳನ್ನು ತಿರುಗಿ ಯೆರೂಸಲೇಮಿನಲ್ಲಿರುವ ಮಂದಿರಕ್ಕೆ ತೆಗೆದುಕೊಂಡುಹೋಗಿ, ದೇವರ ಆಲಯದೊಳಗೆ ಅದರದರ ಸ್ಥಳದಲ್ಲಿ ಇಡಬೇಕು.

[6] ಬಳಿಕ ದಾರ್ಯಾವೆಷನು ಬರೆದು ಕಳುಹಿಸಿದ್ದು ಏನೆಂದರೆ, ಯೂಫ್ರೇಟೀಸ್ ನದಿಯ ಆಚೆಯಲ್ಲಿರುವ ಅಧಿಪತಿಯಾದ ತತ್ತೆನೈನೇ, ಶೆತರ್ ಬೋಜೆನೈಯೇ, ನದಿಯ ಆಚೆಯಲ್ಲಿರುವ ನಿಮ್ಮ ಜೊತೆಗಾರರು ಸಹ ಆ ಸ್ಥಳವನ್ನು ಬಿಟ್ಟು ದೂರವಾಗಿರಿ.

[7] ದೇವರ ಆಲಯವನ್ನು ಕಟ್ಟುವ ಕೆಲಸಕ್ಕೆ ನೀವು ಅಡ್ಡಿಮಾಡಬೇಡಿರಿ. ಯೆಹೂದ್ಯರ ಅಧಿಪತಿಯೂ, ಯೆಹೂದ್ಯರ ಹಿರಿಯರೂ ಅದರ ಸ್ಥಳದಲ್ಲಿ ದೇವರ ಆಲಯವನ್ನು ಕಟ್ಟಿಸಲಿ.

[8] ಇದಲ್ಲದೆ ದೇವರ ಈ ಆಲಯವನ್ನು ಕಟ್ಟುವುದಕ್ಕೆ ಯೆಹೂದ್ಯರ ಹಿರಿಯರಿಗೆ ನೀವು ಮಾಡತಕ್ಕದ್ದನ್ನು ಕುರಿತು ನಾನು ಕೊಡುವ ಅಪ್ಪಣೆ ಏನೆಂದರೆ: ಅವರು ಅಭ್ಯಂತರ ಮಾಡದ ಹಾಗೆ ನದಿಯ ಆಚೆಯಲ್ಲಿಂದ ಬರುವ ಅರಸನ ತೆರಿಗೆಯಿಂದಲೇ ಈ ಮನುಷ್ಯರಿಗೆ ವೆಚ್ಚವನ್ನು ಕೊಡಬೇಕು.

[9] ಪರಲೋಕದ ದೇವರಿಗೆ ದಹನಬಲಿಗಳ ನಿಮಿತ್ತ ಅವರಿಗೆ ಬೇಕಾದ ಹೋರಿಗಳೂ, ಟಗರುಗಳೂ, ಕುರಿಮರಿಗಳೂ, ಗೋಧಿಯೂ, ಉಪ್ಪೂ, ದ್ರಾಕ್ಷಾರಸವೂ, ಎಣ್ಣೆಯೂ ಪ್ರತಿದಿನ ತಪ್ಪದೆ ಯೆರೂಸಲೇಮಿನಲ್ಲಿರುವ ಯಾಜಕರ ನೇಮಕದ ಪ್ರಕಾರ ಅವರಿಗೆ ಕೊಡಬೇಕು.

[10] ಇದಲ್ಲದೆ ಅವರು ಪರಲೋಕದ ದೇವರಿಗೆ ಸುವಾಸನೆಯುಳ್ಳ ಬಲಿಗಳನ್ನು ಅರ್ಪಿಸುವ ಹಾಗೆಯೂ, ಅರಸನ ಪ್ರಾಣಕ್ಕೋಸ್ಕರವೂ, ಅವನ ಮಕ್ಕಳ ಪ್ರಾಣಕ್ಕೋಸ್ಕರವೂ ಪ್ರಾರ್ಥನೆ ಮಾಡಬೇಕು.

[11] ನಾನು ಕೊಡುವ ಅಪ್ಪಣೆ ಏನೆಂದರೆ, ಯಾವನಾದರೂ ಈ ನನ್ನ ಆಜ್ಞೆಯನ್ನು ಬದಲು ಮಾಡಿದರೆ, ಅವನ ಮನೆಯಿಂದ ಒಂದು ತೊಲೆಯನ್ನು ತೆಗೆದು ಅದರಿಂದಲೇ ಅವನನ್ನು ಗಲ್ಲಿಗೆ ಏರಿಸಬೇಕು. ಅವನ ಮನೆಯನ್ನು ಇದರ ನಿಮಿತ್ತ ತಿಪ್ಪೆಯನ್ನಾಗಿ ಮಾಡಿಬಿಡಬೇಕು.

[12] ಇದಲ್ಲದೆ ದೇವರು ತಮ್ಮ ಹೆಸರನ್ನು ಸ್ಥಾಪಿಸುವುದಕ್ಕಾಗಿ ಆ ಸ್ಥಳವನ್ನು ಆರಿಸಿಕೊಂಡಿರಲು, ಯೆರೂಸಲೇಮಿನ ಈ ದೇವಾಲಯವನ್ನು ಕಟ್ಟಬೇಕೆಂಬ ಆಜ್ಞೆಯನ್ನು ಬದಲಿಸುವುದಕ್ಕಾಗಲಿ, ದೇವಾಲಯವನ್ನು ನಾಶಮಾಡುವುದಕ್ಕಾಗಲಿ ಕೈಯೆತ್ತುವ ಪ್ರತಿಯೊಬ್ಬ ರಾಜನನ್ನೂ, ಜನರನ್ನೂ ದೇವರು ನಾಶಮಾಡಲಿ. ದಾರ್ಯಾವೆಷನಾದ ನಾನು ಈ ಆಜ್ಞೆಯನ್ನು ಕೊಟ್ಟಿದ್ದೇನೆ. ಇದನ್ನು ಶ್ರದ್ಧೆಯಿಂದ ಪಾಲಿಸಬೇಕು, ಎಂಬುದು.

[13] ಆಗ ಯೂಫ್ರೇಟೀಸ್ ನದಿಯ ಈಚೆಯಲ್ಲಿರುವ ಅಧಿಪತಿಯಾದ ತತ್ತೆನೈಯೂ, ಶೆತರ್ ಬೋಜೆನೈಯೂ, ಅವರ ಜೊತೆಗಾರರೂ ಅರಸನಾದ ದಾರ್ಯಾವೆಷನು ಕಳುಹಿಸಿದ ಆಜ್ಞೆಯ ಪ್ರಕಾರ ತ್ವರೆಯಾಗಿ ಮಾಡಿದರು.

[14] ಹಾಗೆಯೇ ಯೆಹೂದ್ಯರ ಹಿರಿಯರು ಕಟ್ಟಿಸಿ, ಪ್ರವಾದಿಗಳಾದ ಹಗ್ಗಾಯನೂ, ಇದ್ದೋನನ ಮಗನಾದ ಜೆಕರ್ಯನೂ ಪ್ರವಾದಿಸಿದ್ದರಿಂದ ಅಭಿವೃದ್ಧಿಯನ್ನು ಹೊಂದಿದರು. ಅವರು ಇಸ್ರಾಯೇಲ್ ದೇವರ ಅಪ್ಪಣೆಯ ಪ್ರಕಾರವೂ, ಕೋರೆಷ್, ದಾರ್ಯಾವೆಷ್ ಹಾಗೂ ಅರ್ತಷಸ್ತ ಎಂಬ ಪರ್ಷಿಯದ ರಾಜರ ಅಪ್ಪಣೆಯ ಪ್ರಕಾರವೂ ಕಟ್ಟಿ ತೀರಿಸಿದರು.

[15] ಅರಸನಾದ ದಾರ್ಯಾವೆಷನ ಆಳಿಕೆಯ ಆರನೆಯ ವರ್ಷದ ಆಡಾರ್ ತಿಂಗಳ, ಮೂರನೆಯ ದಿವಸದಲ್ಲಿ ಈ ಆಲಯವನ್ನು ಕಟ್ಟಿ ಮುಗಿಸಲಾಯಿತು.

[16] ಆಗ ಇಸ್ರಾಯೇಲರೂ, ಯಾಜಕರೂ, ಲೇವಿಯರೂ, ಸೆರೆಯಿಂದ ಬಂದ ಮಿಕ್ಕಾದವರೂ ದೇವರ ಆಲಯವನ್ನು ಸಂತೋಷದಿಂದ ಪ್ರತಿಷ್ಠಾಪಿಸಿದರು.

[17] ದೇವರ ಆಲಯದ ಪ್ರತಿಷ್ಠಾಪನೆಗೋಸ್ಕರ ನೂರು ಹೋರಿಗಳನ್ನೂ, ಇನ್ನೂರು ಟಗರುಗಳನ್ನೂ, ನಾನೂರು ಕುರಿಮರಿಗಳನ್ನೂ, ಇಸ್ರಾಯೇಲ್ ಕುಲ ಗೋತ್ರಗಳ ಲೆಕ್ಕದ ಪ್ರಕಾರ, ಸಮಸ್ತ ಇಸ್ರಾಯೇಲರ ದೋಷಪರಿಹಾರ ಬಲಿಗಾಗಿ ಹನ್ನೆರಡು ಮೇಕೆಯ ಹೋತಗಳನ್ನೂ ಅರ್ಪಿಸಿದರು.

[18] ಮೋಶೆಯ ಗ್ರಂಥದಲ್ಲಿ ಬರೆದ ಹಾಗೆ ಯೆರೂಸಲೇಮಿನಲ್ಲಿ ವಾಸವಾಗಿರುವ ದೇವರ ಆರಾಧನೆಗೋಸ್ಕರ ಯಾಜಕರನ್ನು ಮತ್ತು ಲೇವಿಯರನ್ನು ಅವರ ಸರತಿಯ ಪ್ರಕಾರವೂ ನೇಮಿಸಿದರು.

[19] ಇದಲ್ಲದೆ ಸೆರೆಯಿಂದ ಬಂದವರು ಮೊದಲನೆಯ ತಿಂಗಳಿನ, ಹದಿನಾಲ್ಕನೆಯ ದಿವಸದಲ್ಲಿ ಪಸ್ಕವನ್ನು ಆಚರಿಸಿದರು.

[20] ಯಾಜಕರೂ ಲೇವಿಯರೂ ಕೂಡ ಶುದ್ಧ ಮಾಡಿಕೊಂಡಿದ್ದರು. ಅವರೆಲ್ಲರು ಶುದ್ಧರಾದ ನಂತರ, ಲೇವಿಯರು ಸೆರೆಯಿಂದ ಬಂದವರೆಲ್ಲರಿಗೋಸ್ಕರವೂ, ಯಾಜಕರಾದ ತಮ್ಮ ಸಹೋದರರಿಗೋಸ್ಕರವೂ, ತಮಗೋಸ್ಕರವೂ ಪಸ್ಕದ ಕುರಿಮರಿಯನ್ನು ವಧಿಸಿದರು.

[21] ಸೆರೆಯಿಂದ ತಿರುಗಿ ಬಂದ ಇಸ್ರಾಯೇಲರು ತಮ್ಮ ಇಸ್ರಾಯೇಲ್ ದೇವರಾಗಿರುವ ಯೆಹೋವ ದೇವರನ್ನು ಹುಡುಕಲು ದೇಶದ ಜನಾಂಗಗಳ ಅಶುದ್ಧತೆಯಿಂದ ತಮ್ಮನ್ನು ಪ್ರತ್ಯೇಕಿಸಿಕೊಂಡು, ಅವರ ಕಡೆಗೆ ಸೇರಿದ ಸಮಸ್ತರೂ ಅದನ್ನು ತಿಂದು,

[22] ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಸಂತೋಷದಿಂದ ಏಳು ದಿವಸ ಆಚರಿಸಿದರು. ಏಕೆಂದರೆ ಇಸ್ರಾಯೇಲ್ ದೇವರಾಗಿರುವ ಯೆಹೋವ ದೇವರ ಆಲಯದ ಕಾರ್ಯದಲ್ಲಿ ಅವರ ಕೈಗಳನ್ನು ಬಲಪಡಿಸುವುದಕ್ಕೆ ಅಸ್ಸೀರಿಯ ದೇಶದ ಅರಸನ ಹೃದಯವನ್ನು, ಅವರ ಕಡೆಗೆ ಮನಪರಿವರ್ತಿಸಿದ್ದರಿಂದ ಯೆಹೋವ ದೇವರು ಅವರನ್ನು ಸಂತೋಷಪಡಿಸಿದರು.

ಎಜ್ರ — Chapters