Skip to content
Opens in a new window
Listen to this chapter • 6:53

[1] ಈ ಕಾರ್ಯಗಳಾದ ತರುವಾಯ ಪಾರಸಿಯ ಅರಸನಾದ ಅರ್ತಷಸ್ತನ ಆಳಿಕೆಯಲ್ಲಿ ಎಜ್ರನು ಬಾಬಿಲೋನಿನಿಂದ ಹೊರಟುಹೋದನು. ಇವನು ಸೆರಾಯನ ಮಗನು; ಇವನು ಅಜರ್ಯನ ಮಗನು; ಇವನು ಹಿಲ್ಕೀಯನ ಮಗನು;

[2] ಇವನು ಶಲ್ಲೂಮನ ಮಗನು; ಇವನು ಚಾದೋಕನ ಮಗನು; ಇವನು ಅಹೀಟೂಬನ ಮಗನು;

[3] ಇವನು ಅಮರ್ಯನ ಮಗನು; ಇವನು ಅಜರ್ಯನ ಮಗನು; ಇವನು ಮೆರಾಯೋತನ ಮಗನು;

[4] ಇವನು ಜೆರಹ್ಯನ ಮಗನು; ಇವನು ಉಜ್ಜೀಯನ ಮಗನು; ಇವನು ಬುಕ್ಕೀಯ ಮಗನು;

[5] ಇವನು ಅಬೀಷೂವನ ಮಗನು; ಇವನು ಫೀನೆಹಾಸನ ಮಗನು; ಇವನು ಎಲಿಯಾಜರನ ಮಗನು; ಇವನು ಮುಖ್ಯಯಾಜಕನಾದ ಆರೋನನ ಮಗನು.

[6] ಈ ಎಜ್ರನು ಬಾಬಿಲೋನಿನಿಂದ ಬಂದನು, ಅವನು ಇಸ್ರಾಯೇಲ್ ದೇವರಾಗಿರುವ ಯೆಹೋವ ದೇವರು ಕೊಟ್ಟ ಮೋಶೆಯ ನಿಯಮದಲ್ಲಿ ಪಾಂಡಿತ್ಯ ಪಡೆದ ನಿಯಮಶಾಸ್ತ್ರಿ ಆಗಿದ್ದನು. ಅವನ ಮೇಲೆ ಅವನ ದೇವರಾಗಿರುವ ಯೆಹೋವ ದೇವರ ಕೈ ಇದ್ದುದರಿಂದ, ಅವನು ಕೇಳಿದ್ದನ್ನೆಲ್ಲಾ ಅರಸನು ಕೊಟ್ಟನು.

[7] ಅವನ ಸಂಗಡ ಇಸ್ರಾಯೇಲರಲ್ಲಿಯೂ ಯಾಜಕರಲ್ಲಿಯೂ ಲೇವಿಯರಲ್ಲಿಯೂ ಹಾಡುಗಾರರಲ್ಲಿಯೂ ದ್ವಾರಪಾಲಕರಲ್ಲಿಯೂ ದೇವಾಲಯದ ಸೇವಕರಲ್ಲಿಯೂ ಕೆಲವರು ಅರಸನಾದ ಅರ್ತಷಸ್ತನ ಆಳ್ವಿಕೆಯ ಏಳನೆಯ ವರ್ಷದಲ್ಲಿ ಯೆರೂಸಲೇಮಿಗೆ ಹೋದರು.

[8] ಅರಸನ ಏಳನೆಯ ವರ್ಷದ, ಐದನೆಯ ತಿಂಗಳಲ್ಲಿ ಎಜ್ರನು ಯೆರೂಸಲೇಮಿಗೆ ಬಂದನು.

[9] ಅವನು ಮೊದಲನೆಯ ತಿಂಗಳಿನ, ಮೊದಲನೆಯ ದಿವಸದಲ್ಲಿ ಬಾಬಿಲೋನಿನಿಂದ ಹೊರಟು, ಐದನೆಯ ತಿಂಗಳಿನ, ಮೊದಲನೆಯ ದಿವಸದಲ್ಲಿ ಯೆರೂಸಲೇಮಿಗೆ ಬಂದು ಸೇರಿದನು. ಏಕೆಂದರೆ ಅವನ ದೇವರಾದ ಯೆಹೋವ ದೇವರ ಹಸ್ತವು ಅವನ ಮೇಲಿತ್ತು.

[10] ಏಕೆಂದರೆ ಎಜ್ರನು ಯೆಹೋವ ದೇವರ ನಿಯಮವನ್ನು ಅಭ್ಯಾಸ ಮಾಡುವುದಕ್ಕೂ ಅದನ್ನು ಕೈಗೊಂಡು ನಡೆಯುವುದಕ್ಕೂ ಇಸ್ರಾಯೇಲರಿಗೆ ಅದರ ತೀರ್ಪುಗಳನ್ನು ಹಾಗೂ ನಿಯಮಗಳನ್ನು ಬೋಧಿಸುವುದಕ್ಕೂ ತನ್ನನ್ನು ಪ್ರತಿಷ್ಠಿಸಿಕೊಂಡಿದ್ದನು.

[11] ಯಾಜಕನು, ನಿಯಮಶಾಸ್ತ್ರಿಯು ಹಾಗೂ ಇಸ್ರಾಯೇಲರಿಗೆ ಕೊಡಲಾದ ಯೆಹೋವ ದೇವರ ಆಜ್ಞಾಸೂತ್ರಗಳಲ್ಲಿ ವಿದ್ವಾಂಸನೂ ಆದ ಎಜ್ರನಿಗೆ ಅರಸನಾದ ಅರ್ತಷಸ್ತನು ಕೊಟ್ಟ ಪತ್ರದ ನಕಲು ಇದು:

[12] ರಾಜಾಧಿರಾಜನಾದ ಅರ್ತಷಸ್ತನು, ಯಾಜಕನೂ, ಪರಲೋಕ ದೇವರ ನಿಯಮದಲ್ಲಿ ಪ್ರವೀಣನೂ ಆದ ಎಜ್ರನಿಗೆ, ವಂದನೆಗಳು.

[13] ನನ್ನ ರಾಜ್ಯದಲ್ಲಿರುವ ಇಸ್ರಾಯೇಲರಲ್ಲಿ, ಯಾಜಕರಲ್ಲಿ ಹಾಗು ಲೇವಿಯರಲ್ಲಿ ಯಾರಿಗೆ ಯೆರೂಸಲೇಮಿಗೆ ಹೋಗುವುದಕ್ಕೆ ಮನಸ್ಸಿದೆಯೋ, ಅವರೆಲ್ಲರು ನಿನ್ನೊಂದಿಗೆ ಹೋಗಬಹುದೆಂದು ಅಪ್ಪಣೆ ಮಾಡುತ್ತೇನೆ.

[14] ನೀನು ಹೋಗಿ ಯೆಹೂದದವರ ಮತ್ತು ಯೆರೂಸಲೇಮಿನವರ ಆಚರಣೆಯು ನಿನ್ನ ಕೈಯಲ್ಲಿರುವ ನಿನ್ನ ದೇವರ ನಿಯಮ ಗ್ರಂಥಕ್ಕೆ ಅನುಗುಣವಾಗಿ ಇದೆಯೋ, ಇಲ್ಲವೋ ವಿಮರ್ಶೆ ಮಾಡಬೇಕು.

[15] ಅರಸನು ಮತ್ತು ಅವನ ಮಂತ್ರಿಗಳು ಯೆರೂಸಲೇಮಿನಲ್ಲಿ ವಾಸಿಸುತ್ತಿರುವ ಇಸ್ರಾಯೇಲ್ ದೇವರಿಗೆ ಕಾಣಿಕೆಯಾಗಿ ಸಮರ್ಪಿಸಿದ ಬೆಳ್ಳಿಬಂಗಾರವನ್ನು,

[16] ಬಾಬಿಲೋನ್ ಸಂಸ್ಥಾನದಲ್ಲಿ ಸಿಕ್ಕುವ ಬೆಳ್ಳಿಬಂಗಾರವನ್ನು ಹಾಗು ಇಸ್ರಾಯೇಲ್ ಜನ ಸಾಮಾನ್ಯರೂ, ಯಾಜಕರೂ, ಯೆರೂಸಲೇಮಿನಲ್ಲಿರುವ ತಮ್ಮ ದೇವರ ಆಲಯಕ್ಕಾಗಿ ಸ್ವಂತ ಇಚ್ಛೆಯಿಂದ ಕೊಡುವ ಕಾಣಿಕೆಗಳನ್ನು ಅಲ್ಲಿಗೆ ಒಪ್ಪಿಸಬೇಕು. ಹೀಗೆಂದು ತಿಳಿಸಿ, ನಾನೂ ಮತ್ತು ನನ್ನ ಏಳುಮಂದಿ ಮಂತ್ರಿಗಳೂ ನಿನ್ನನ್ನು ಕಳುಹಿಸುತ್ತಿದ್ದೇವೆ.

[17] ನೀನು ಈ ಹಣದಿಂದ ಹೋರಿ, ಟಗರು, ಕುರಿ, ಇವುಗಳನ್ನೂ ಮತ್ತು ಇವುಗಳೊಡನೆ ಸಮರ್ಪಣೆಯಾಗತಕ್ಕ ಧಾನ್ಯದ್ರವ್ಯ, ಪಾನದ್ರವ್ಯಗಳನ್ನೂ ಕೊಂಡುಕೊಂಡು, ಅವುಗಳನ್ನು ಯೆರೂಸಲೇಮಿನಲ್ಲಿರುವ ನಿಮ್ಮ ದೇವರ ಆಲಯದ ಬಲಿಪೀಠದ ಮೇಲೆ ಸಮರ್ಪಿಸಬೇಕು.

[18] ಉಳಿದ ಬೆಳ್ಳಿಬಂಗಾರವನ್ನು, ನಿಮ್ಮ ದೇವರ ಚಿತ್ತದ ಪ್ರಕಾರ ನಿನಗೂ, ನಿನ್ನ ಸಹೋದರರಿಗೂ ಸರಿತೋರುವಂತೆ ವೆಚ್ಚ ಮಾಡಿರಿ.

[19] ನಿನ್ನ ದೇವರ ಆಲಯದ ಆರಾಧನೆಗಾಗಿ ನಿನ್ನ ವಶಕ್ಕೆ ಕೊಡುವ ಸಾಮಗ್ರಿಗಳನ್ನು ಯೆರೂಸಲೇಮಿನ ದೇವರ ಸನ್ನಿಧಿಗೆ ತೆಗೆದುಕೊಂಡು ಹೋಗು.

[20] ನಿನ್ನ ದೇವರ ಆಲಯಕ್ಕಾಗಿ ನೀನು ಬೇರೆ ಯಾವುದನ್ನಾದರೂ ವೆಚ್ಚಮಾಡಬೇಕಾದರೆ, ಅದನ್ನು ರಾಜ ಭಂಡಾರದಿಂದ ತೆಗೆದುಕೊಂಡು ವೆಚ್ಚಮಾಡು.

[21] “ಅರ್ತಷಸ್ತ ರಾಜನಾದ ನಾನು, ಯೂಫ್ರೇಟೀಸ್ ನದಿ ಆಚೆಯ ಪ್ರಾಂತಗಳ ಭಂಡಾರ ಮುಖ್ಯಸ್ಥರಿಗೆ ಆಜ್ಞಾಪಿಸುವುದೇನೆಂದರೆ ಯಾಜಕನೂ, ಪರಲೋಕ ದೇವರ ಧರ್ಮಾಚಾರ್ಯನೂ ಆದ ಎಜ್ರನು ಕೇಳಿಕೊಳ್ಳುವುದನ್ನೆಲ್ಲಾ ನೀವು ತಪ್ಪದೆ ಕೊಡಬೇಕು.

[22] 3.4 ಮೆಟ್ರಿಕ್ ಟನ್ ಬೆಳ್ಳಿಯನ್ನು, 16 ಮೆಟ್ರಿಕ್ ಟನ್ ಗೋಧಿಯನ್ನು, 2,200 ಲೀಟರ್ ದ್ರಾಕ್ಷಾರಸವನ್ನು, 2,200 ಲೀಟರ್ ಎಣ್ಣೆಯನ್ನು, ಇಷ್ಟರ ಮಟ್ಟಿಗೂ ಕೊಡಬೇಕು. ಉಪ್ಪನ್ನು ಎಷ್ಟು ಬೇಕಾದರೂ ಕೊಡಬಹುದು.

[23] ಅರಸನ ಮತ್ತು ಅವನ ಸಂತಾನದವರ ರಾಜ್ಯದ ಮೇಲೆ ದೇವ ಕೋಪವುಂಟಾಗದ ಹಾಗೆ, ನೀವು ಪರಲೋಕ ದೇವರ ಆಜ್ಞಾನುಸಾರ ಬೇಕಾದುದನ್ನೆಲ್ಲಾ ಯಾವ ಕೊರತೆಯೂ ಇಲ್ಲದೆ ಶ್ರದ್ಧೆಯಿಂದ ಒದಗಿಸಿಕೊಡಬೇಕು.

[24] ಇದಲ್ಲದೆ, ಆ ದೇವಾಲಯದ ಯಾಜಕ, ಲೇವಿಯ, ಗಾಯಕ, ದ್ವಾರಪಾಲಕ, ಚಾಕರ ಮುಂತಾದ ಸೇವಕರಲ್ಲಿ ಯಾವನಿಂದಲೂ ಶುಲ್ಕ, ತೆರಿಗೆ, ಸುಂಕ, ಇವುಗಳನ್ನು ವಸೂಲಿ ಮಾಡುವುದಕ್ಕೆ ನಿಮಗೆ ಅಧಿಕಾರವಿಲ್ಲ ಎಂಬುದು ತಿಳಿದಿರಲಿ.”

[25] “ಎಜ್ರನೇ, ನಿನ್ನಲ್ಲಿರುವ ನಿನ್ನ ದೇವರ ಜ್ಞಾನಕ್ಕೆ ಅನುಸಾರವಾಗಿ ನ್ಯಾಯಾಧೀಶರನ್ನೂ, ದಂಡಾಧಿಕಾರಿಯನ್ನೂ ನೇಮಿಸು. ಅವರು ನದಿಯಾಚೆಯ ಇಸ್ರಾಯೇಲರಲ್ಲಿ, ನಿನ್ನ ದೇವರ ನಿಯಮಗಳನ್ನು ಅರಿತಿರುವವರೆಲ್ಲರ ವ್ಯಾಜ್ಯಗಳನ್ನು ತೀರಿಸಲಿ. ಅರಿಯದವರಿಗೆ ನೀನು ಅದನ್ನು ಕಲಿಸಬೇಕು.

[26] ನಿನ್ನ ದೇವರಾಜ್ಞೆಯನ್ನೂ, ರಾಜಾಜ್ಞೆಯನ್ನೂ ಕೈಗೊಳ್ಳದವರಿಗೆಲ್ಲಾ ಮರಣದಂಡನೆ ವಿಧಿಸುವುದು, ಗಡಿಪಾರು ಮಾಡುವುದು, ದಂಡ ತೆರಿಸುವುದು, ಬೇಡಿ ಹಾಕುವುದು, ಈ ವಿಧವಾದ ಶಿಕ್ಷೆಯನ್ನು ತಪ್ಪದೆ ನೀಡಬೇಕು.”

[27] ಆಗ ಎಜ್ರನು, “ನಮ್ಮ ತಂದೆಗಳ ದೇವರಾಗಿರುವ ಯೆಹೋವ ದೇವರು ಸ್ತುತಿಹೊಂದಲಿ! ಯೆರೂಸಲೇಮಿನಲ್ಲಿರುವ ಯೆಹೋವ ದೇವರ ಆಲಯಕ್ಕೆ ಮಹಿಮೆಯನ್ನು ತರುವಂತೆ, ಅರಸನ ಹೃದಯದಲ್ಲಿ ಇಂಥಾದ್ದನ್ನು ಇಟ್ಟಿದ್ದಾರೆ.

[28] ಅರಸನ ಮುಂದೆಯೂ, ಅವನ ಸಲಹೆಗಾರರ ಮುಂದೆಯೂ, ಅರಸನ ಪರಾಕ್ರಮವುಳ್ಳ ಪ್ರಧಾನರ ಮುಂದೆಯೂ ನನಗೆ ಕೃಪೆತೋರಿಸಿದ್ದಾರೆ. ಹೀಗೆಯೇ ನನ್ನ ದೇವರಾಗಿರುವ ಯೆಹೋವ ದೇವರ ಹಸ್ತವು ನನ್ನ ಮೇಲೆ ಇದ್ದುದರಿಂದ, ನಾನು ಧೈರ್ಯಗೊಂಡು ಇಸ್ರಾಯೇಲಿನೊಳಗಿಂದ ಮುಖ್ಯಸ್ಥರನ್ನು ನನ್ನ ಸಂಗಡ ಹೋಗಲು ಕೂಡಿಸಿಕೊಂಡೆನು,” ಎಂದನು.

ಎಜ್ರ — Chapters