Skip to content
Opens in a new window
Listen to this chapter • 3:04

[1] ನಮ್ಮ ತಂದೆ ದೇವರಲ್ಲಿಯೂ, ನಮಗೆ ಕರ್ತ ಆಗಿರುವ ಯೇಸು ಕ್ರಿಸ್ತರಲ್ಲಿಯೂ ಇರುವ ಥೆಸಲೋನಿಕದವರ ಸಭೆಗೆ ಪೌಲ, ಸಿಲ್ವಾನ, ತಿಮೊಥೆಯರು ಬರೆಯುವುದು:

[2] ನಮ್ಮ ತಂದೆ ದೇವರಿಂದಲೂ ನಮಗೆ ಕರ್ತ ಆಗಿರುವ ಯೇಸು ಕ್ರಿಸ್ತರಿಂದಲೂ ನಿಮಗೆ ಕೃಪೆಯೂ ಸಮಾಧಾನವೂ ಉಂಟಾಗಲಿ.

[3] ಪ್ರಿಯರೇ, ನಾವು ಯಾವಾಗಲೂ ನಿಮಗಾಗಿ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಲು ಬದ್ಧರಾಗಿದ್ದೇವೆ. ಹಾಗೆ ಮಾಡುವುದು ಯೋಗ್ಯ. ಏಕೆಂದರೆ ನಿಮ್ಮ ವಿಶ್ವಾಸವು ಹೆಚ್ಚೆಚ್ಚಾಗಿ ಅಭಿವೃದ್ಧಿಯಾಗುತ್ತಾ ಇದೆ ಮತ್ತು ಪರಸ್ಪರ ನಿಮ್ಮೆಲ್ಲರಲ್ಲಿ ಪ್ರೀತಿಯೂ ಹೆಚ್ಚುತ್ತಿದೆ.

[4] ಹೀಗಿರುವುದರಿಂದ, ನೀವು ಸಹಿಸುತ್ತಿರುವ ನಿಮ್ಮ ಎಲ್ಲಾ ಹಿಂಸೆಗಳಲ್ಲಿಯೂ ಸಂಕಟಗಳಲ್ಲಿಯೂ ನಿಮಗೆ ತೋರಿ ಬಂದ ನಿಮ್ಮ ತಾಳ್ಮೆ, ನಂಬಿಕೆಗಳನ್ನು ನೆನೆಸಿ ನಿಮ್ಮ ವಿಷಯವಾಗಿ ದೇವರ ಸಭೆಗಳಲ್ಲಿ ನಾವೇ ಹೆಮ್ಮೆಪಡುತ್ತೇವೆ.

[5] ನೀವು ಯಾವ ದೇವರ ರಾಜ್ಯಕ್ಕಾಗಿ ಕಷ್ಟವನ್ನು ಅನುಭವಿಸುತ್ತಿರುವಿರೋ, ಆ ರಾಜ್ಯಕ್ಕಾಗಿ ನೀವು ಯೋಗ್ಯರೆಂದು ಎಣಿಕೆಯಾಗಲು ಇದು ದೇವರ ನೀತಿಯುಳ್ಳ ನ್ಯಾಯತೀರ್ಪಿಗೆ ಸ್ಪಷ್ಟವಾದ ನಿದರ್ಶನವಾಗಿದೆ.

[6] ನಿಮ್ಮನ್ನು ಸಂಕಟ ಪಡಿಸುವವರಿಗೆ ದೇವರು ಪ್ರತಿಯಾಗಿ ಸಂಕಟವನ್ನೂ ಮತ್ತು

[7] ಸಂಕಟ ಪಡುವವರಾದ ನಿಮಗೆ ನಮ್ಮೊಡನೆ ಉಪಶಮನವನ್ನೂ ಕೊಡುವುದು ದೇವರಿಗೆ ನ್ಯಾಯವಾಗಿದೆ. ನಮಗೆ ಕರ್ತ ಆಗಿರುವ ಯೇಸು ತಮ್ಮ ಶಕ್ತಿಯುತವಾದ ದೂತರೊಂದಿಗೆ ಪರಲೋಕದಿಂದ ಪ್ರಜ್ವಲಿಸುವ ಜ್ವಾಲೆಯಲ್ಲಿ ಪ್ರತ್ಯಕ್ಷರಾಗುವಾಗ ಇದಾಗುವುದು.

[8] ಅವರು ದೇವರನ್ನು ಅರಿಯದವರಿಗೂ ನಮಗೆ ಕರ್ತ ಆಗಿರುವ ಯೇಸುವಿನ ಸುವಾರ್ತೆಗೆ ಅವಿಧೇಯರಾದವರಿಗೂ ಪ್ರತೀಕಾರ ಮಾಡುವರು.

[9] ಅಂಥವರು ಕರ್ತ ಯೇಸುವಿನ ಸನ್ನಿಧಿಯಿಂದಲೂ ಅವರ ಮಹಿಮೆಯ ಬಲದಿಂದಲೂ ಬಹಿಷ್ಕೃತರಾಗಿ ನಿತ್ಯನಾಶದ ಶಿಕ್ಷೆಯನ್ನು ಅನುಭವಿಸುವರು.

[10] ಆ ದಿನದಲ್ಲಿ ಕರ್ತ ಯೇಸು ತಮ್ಮ ಪರಿಶುದ್ಧ ಜನರಲ್ಲಿ ಮಹಿಮೆ ಹೊಂದುವವರಾಗಿಯೂ ನಂಬುವವರೆಲ್ಲರನ್ನು ಆಶ್ಚರ್ಯಪಡಿಸುವವರಾಗಿಯೂ ಬರುವರು. ನಮ್ಮ ಸಾಕ್ಷಿಯನ್ನು ನಂಬಿದ್ದರಿಂದ ನಿಮಗೂ ಇವು ಸಂಭವಿಸುವುವು.

[11] ನಮ್ಮ ದೇವರು ನೀಡಿರುವ ಕರೆಯುವಿಕೆಗೆ ನಿಮ್ಮನ್ನು ಯೋಗ್ಯರೆಂದು ಎಣಿಸಿ, ಒಳಿತನ್ನು ಮಾಡಲು ನಿಮ್ಮ ಎಲ್ಲಾ ಇಷ್ಟಾರ್ಥವನ್ನೂ ವಿಶ್ವಾಸದಿಂದ ಆಗಿರುವ ನಿಮ್ಮ ಎಲ್ಲಾ ಕಾರ್ಯಗಳನ್ನೂ ದೇವರು ತಮ್ಮ ಶಕ್ತಿಯಿಂದ ಪರಿಪೂರ್ಣಗೊಳಿಸುವಂತೆ ನಾವು ಯಾವಾಗಲೂ ನಿಮಗೋಸ್ಕರ ಪ್ರಾರ್ಥನೆ ಮಾಡುತ್ತೇವೆ.

[12] ನಮ್ಮ ದೇವರ ಹಾಗೂ ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಕೃಪೆಯ ಅನುಸಾರವಾಗಿ, ನಮಗೆ ಕರ್ತ ಆಗಿರುವ ಕ್ರಿಸ್ತ ಯೇಸುವಿನ ಹೆಸರು ನಿಮ್ಮಲ್ಲಿ ಮಹಿಮೆ ಹೊಂದಬೇಕು. ಮಾತ್ರವಲ್ಲದೇ ನೀವು ಕೂಡಾ ಅವರಲ್ಲಿ ಮಹಿಮೆ ಹೊಂದಬೇಕು ಎಂದು ಬೇಡಿಕೊಳ್ಳುತ್ತೇವೆ.

2 ಥೆಸಲೋನಿಕದವರಿಗೆ — Chapters