[1] ಕೊನೆಯದಾಗಿ ಪ್ರಿಯರೇ, ಕರ್ತ ಯೇಸುವಿನ ವಾಕ್ಯವು ನಿಮ್ಮಲ್ಲಿ ಹಬ್ಬಿದಂತೆ ಎಲ್ಲ ಕಡೆಗಳಲ್ಲಿಯೂ ಅತಿವೇಗದಿಂದ ಹಬ್ಬಿ ಹರಡುವಂತೆ ನಮಗಾಗಿ ಬೇಡಿಕೊಳ್ಳಿರಿ.
[2] ವಕ್ರಬುದ್ಧಿಯುಳ್ಳ ದುಷ್ಟರ ಕೈಯಿಂದ ನಾವು ತಪ್ಪಿಸಿಕೊಳ್ಳುವಂತೆಯೂ ಪ್ರಾರ್ಥಿಸಿರಿ. ಏಕೆಂದರೆ ಎಲ್ಲರಲ್ಲಿಯೂ ವಿಶ್ವಾಸವಿಲ್ಲವಲ್ಲಾ.
[3] ಆದರೆ ಕರ್ತ ಯೇಸು ನಂಬಿಗಸ್ತರು, ಅವರು ನಿಮ್ಮನ್ನು ದೃಢಪಡಿಸಿ ನಿಮ್ಮನ್ನು ಕೆಡುಕನಿಂದ ತಪ್ಪಿಸುವರು.
[4] ನಾವು ನಿಮಗೆ ಆಜ್ಞಾಪಿಸಿದವುಗಳನ್ನು ನೀವು ಮಾಡುತ್ತೀರೆಂತಲೂ ಮುಂದೆಯೂ ಮಾಡುವಿರೆಂತಲೂ ನಿಮ್ಮ ವಿಷಯವಾಗಿ ಕರ್ತ ಯೇಸುವಿನಲ್ಲಿ ನಮಗೆ ಭರವಸೆಯಿದೆ.
[5] ಕರ್ತ ಯೇಸು ದೇವರ ಪ್ರೀತಿಯಲ್ಲಿಯೂ ತಮ್ಮ ತಾಳ್ಮೆಯಲ್ಲಿಯೂ ನಿಮ್ಮ ಹೃದಯಗಳನ್ನು ನಡೆಸಲಿ.
[6] ಪ್ರಿಯರೇ, ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಹೆಸರಿನಲ್ಲಿ ನಾವು ನಿಮಗೆ ಆಜ್ಞಾಪಿಸುವುದೇನೆಂದರೆ, ನಮ್ಮಿಂದ ಸ್ವೀಕರಿಸಿದ ಬೋಧನೆಯನ್ನು ಅನುಸರಿಸದೆ, ಸೋಮಾರಿಯಾಗಿ ಅಶಿಸ್ತಿನಿಂದ ನಡೆಯುವ ಪ್ರತಿ ವಿಶ್ವಾಸಿಗೆ ನೀವು ದೂರವಾಗಿರಬೇಕು.
[7] ನೀವು ನಮ್ಮ ಮಾದರಿಯನ್ನು ಅನುಸರಿಸಿ ಹೇಗೆ ನಡೆಯಬೇಕೆಂದು ನೀವೇ ಬಲ್ಲಿರಿ. ಏಕೆಂದರೆ ನಾವು ನಿಮ್ಮಲ್ಲಿರುವಾಗ ಸೋಮಾರಿಗಳಾಗಿರಲಿಲ್ಲ.
[8] ನಾವು ಉಚಿತವಾಗಿ ಯಾರ ಬಳಿಯಲ್ಲಿಯೂ ಊಟ ಮಾಡಲಿಲ್ಲ. ನಿಮ್ಮಲ್ಲಿ ಒಬ್ಬರಿಗೂ ನಾವು ಭಾರವಾಗಬಾರದೆಂದು ಹಗಲಿರುಳೂ ಕಷ್ಟದಿಂದಲೂ ಪ್ರಯಾಸದಿಂದಲೂ ದುಡಿದೆವು.
[9] ನಿಮ್ಮಿಂದ ಪೋಷಣೆ ಹೊಂದುವುದಕ್ಕೆ ನಮಗೆ ಹಕ್ಕಿಲ್ಲವೆಂದಲ್ಲ. ನೀವು ನಮ್ಮನ್ನು ಅನುಸರಿಸುವುದಕ್ಕಾಗಿ ನಿಮಗೆ ಆದರ್ಶರಾಗಿರಬೇಕೆಂದು ಹಾಗೆ ಮಾಡಿದೆವು.
[10] ನಾವು ನಿಮ್ಮ ಸಂಗಡ ಇದ್ದಾಗ, “ಕೆಲಸ ಮಾಡಲೊಲ್ಲದವನು ಉಣ್ಣಲೂಬಾರದು,” ಎಂದು ನಿಮಗೆ ಆಜ್ಞಾಪಿಸಿದ್ದೆವು.
[11] ಆದರೆ ನಿಮ್ಮಲ್ಲಿ ಕೆಲವರು ಯಾವ ಕೆಲಸವನ್ನೂ ಮಾಡದೆ ಇತರರ ಕೆಲಸದಲ್ಲಿ ಮಾತ್ರ ತಲೆಹಾಕಿ ಅಶಿಸ್ತಿನಿಂದ ನಡೆಯುತ್ತಾರೆಂದು ಕೇಳಿದ್ದೇವೆ.
[12] ಅಂಥವರು ಶಾಂತವಾಗಿ ಕೆಲಸಮಾಡಿ ತಮ್ಮ ಸ್ವಂತ ಆಹಾರವನ್ನೇ ಊಟ ಮಾಡಬೇಕೆಂದು ನಮಗೆ ಕರ್ತ ಆಗಿರುವ ಯೇಸು ಕ್ರಿಸ್ತರಲ್ಲಿ ನಾವು ಆಜ್ಞಾಪಿಸಿ ಪ್ರಬೋಧಿಸುತ್ತೇವೆ.
[13] ಪ್ರಿಯರೇ, ನೀವಾದರೋ ಒಳ್ಳೆಯದನ್ನು ಮಾಡುವುದರಲ್ಲಿ ಬೇಸರಗೊಳ್ಳಬೇಡಿರಿ.
[14] ಈ ಪತ್ರದ ಮೂಲಕ ಹೇಳಿರುವ ನಮ್ಮ ಮಾತಿಗೆ ಯಾರಾದರೂ ವಿಧೇಯರಾಗದಿದ್ದರೆ ಅಂಥವರನ್ನು ಗುರುತಿಸಿ ಅವರಿಗೆ ನಾಚಿಕೆಯಾಗುವಂತೆ ಅವರ ಸಹವಾಸದಲ್ಲಿ ಸೇರಬೇಡಿರಿ.
[15] ಆದರೂ ಅಂಥವರನ್ನು ವೈರಿಯೆಂದು ಎಣಿಸದೆ, ಜೊತೆ ವಿಶ್ವಾಸಿಯೆಂದು ಭಾವಿಸಿ ಬುದ್ಧಿಹೇಳಿರಿ.
[16] ನಮಗೆ ಕರ್ತ ಆಗಿರುವ ಯೇಸು ಈ ಸಮಾಧಾನದಲ್ಲಿ ತಾವೇ ಸದಾಕಾಲದಲ್ಲಿಯೂ ಸಕಲ ವಿಧದಲ್ಲಿಯೂ ನಿಮಗೆ ಸಮಾಧಾನವನ್ನು ದಯಪಾಲಿಸಲಿ. ಕರ್ತದೇವರು ನಿಮ್ಮೆಲ್ಲರೊಂದಿಗೆ ಇರಲಿ.
[17] ಪೌಲನೆಂಬ ನಾನು ಸ್ವತಃ ನನ್ನ ಕೈಯಿಂದ ಬರೆದ ವಂದನೆಯಿದು. ನನ್ನ ಎಲ್ಲಾ ಪತ್ರಗಳಲ್ಲಿಯೂ ಇದೇ ಗುರುತು. ನಾನು ಹೀಗೆಯೇ ಬರೆಯುತ್ತೇನೆ.
[18] ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಕೃಪೆಯು ನಿಮ್ಮೆಲ್ಲರ ಸಂಗಡ ಇರಲಿ.