Skip to content
Opens in a new window
Listen to this chapter • 3:47

[1] ಪ್ರಿಯರೇ, ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಬರುವಿಕೆಯನ್ನೂ ನಾವು ಅವರ ಸನ್ನಿಧಿಯಲ್ಲಿ ಒಂದಾಗಿ ಸೇರುವ ವಿಷಯವನ್ನೂ ಕುರಿತು ನಾವು ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ:

[2] ಕ್ರಿಸ್ತ ಯೇಸುವಿನ ದಿನವು ಈಗಾಗಲೇ ಬಂದಿದೆಯೆಂದು ಪ್ರವಾದನೆಯಿಂದಾಗಲಿ, ಪ್ರಸಂಗದಿಂದಾಗಲಿ ಅಥವಾ ನಮ್ಮ ಪತ್ರದಿಂದಾಗಲಿ ತಿಳಿದು ನೀವು ಬೇಗನೆ ಚಂಚಲರಾಗಿ ಕಳವಳಪಡಬೇಡಿರಿ.

[3] ನಿಮ್ಮನ್ನು ಯಾರೂ ಯಾವ ವಿಧದಲ್ಲಿಯೂ ವಂಚಿಸದಿರಲಿ. ಏಕೆಂದರೆ ವಿಶ್ವಾಸದಿಂದ ಬಿದ್ದುಹೋಗುವಿಕೆಯು ಸಂಭವಿಸಿ, ನಾಶಕ್ಕೆ ನೇಮಕವಾಗಿರುವ ನಿಯಮ ಮೀರುವ ಮನುಷ್ಯನು ಬರುವುದಕ್ಕೆ ಮುಂಚೆ ಕರ್ತ ಯೇಸುವಿನ ದಿನವು ಬರುವುದಿಲ್ಲ!

[4] ದೇವರೆಣಿಸಿಕೊಳ್ಳುವ ಎಲ್ಲವನ್ನೂ ಆರಾಧಿಸಲಾಗುವ ಪ್ರತಿಯೊಂದನ್ನೂ ಅವನು ವಿರೋಧಿಸಿ ನಿಲ್ಲುವನು. ದೇವರಿಗೆ ಸಂಬಂಧಿಸಿದ ಇವೆಲ್ಲವುಗಳ ಮೇಲೆ ತನ್ನನ್ನು ಹೆಚ್ಚಿಸಿಕೊಳ್ಳುವನು. ತಾನೇ ದೇವರೆಂದು ಘೋಷಿಸಿ ದೇವರ ಆಲಯದಲ್ಲಿ ಕೂತುಕೊಳ್ಳುವನು.

[5] ನಾನು ನಿಮ್ಮ ಸಂಗಡ ಇರುವಾಗ ಈ ಸಂಗತಿಗಳನ್ನು ನಿಮಗೆ ಹೇಳಿದ್ದು ಜ್ಞಾಪಕವಿಲ್ಲವೋ?

[6] ಇದಲ್ಲದೆ ಅವನು ನಿಯಮಿತ ಕಾಲದಲ್ಲಿ ಮಾತ್ರ ಕಾಣಿಸಿಕೊಳ್ಳುವಂತೆ ಈಗ ಅವನನ್ನು ಏನು ಅಡ್ಡಿಮಾಡುತ್ತಿದೆಯೋ ಅದನ್ನು ನೀವೇ ಬಲ್ಲಿರಿ.

[7] ಏಕೆಂದರೆ, ನಿಯಮ ಮೀರುವ ರಹಸ್ಯ ಶಕ್ತಿಯು ಈಗಾಗಲೇ ಕಾರ್ಯಮಾಡುತ್ತಿದೆ. ಅವನನ್ನು ದಾರಿಯಿಂದ ತೆಗೆಯುವವರೆಗೆ ಈಗ ಅಡ್ಡಿಮಾಡುವಾತನು ಅಡ್ಡಿ ಮಾಡುತ್ತಲೇ ಇರುವನು.

[8] ಆಗ ಆ ನಿಯಮ ಮೀರುವವನು ಪ್ರತ್ಯಕ್ಷನಾಗುವನು. ಅವನನ್ನು ಕರ್ತ ಯೇಸು ತಮ್ಮ ಬಾಯಿಯ ಶ್ವಾಸದಿಂದ ಕೆಡವಿ, ತಮ್ಮ ಪ್ರತ್ಯಕ್ಷತೆಯ ಮಹಿಮೆಯಿಂದ ನಾಶಮಾಡಿಬಿಡುವರು.

[9] ಆ ನಿಯಮ ಮೀರುವವನ ಬರುವಿಕೆಯು ಸೈತಾನನ ಕಾರ್ಯಗಳಿಗೆ ಅನುಸಾರವಾಗಿರುವುದು. ಅವು ಎಲ್ಲಾ ಶಕ್ತಿಯ ಪ್ರದರ್ಶನದಿಂದಲೂ ಸುಳ್ಳಾದ ಸೂಚಕಕಾರ್ಯಗಳಿಂದಲೂ ಅದ್ಭುತಕಾರ್ಯಗಳಿಂದಲೂ ಇರುವವು.

[10] ಎಲ್ಲಾ ವಿಧವಾದ ದುಷ್ಟತನದ ವಂಚನೆಯಿಂದಲೂ ಕೂಡಿ ನಾಶವಾಗುವವರಲ್ಲಿ ಇದು ಸಂಭವಿಸುವುದು. ಏಕೆಂದರೆ ಅವರು ರಕ್ಷಣೆ ಹೊಂದುವಂತೆ ಸತ್ಯವನ್ನು ಪ್ರೀತಿಸಲು ನಿರಾಕರಿಸಿದ ಕಾರಣದಿಂದ ನಾಶವಾಗಿ ಹೋಗುವರು.

[11] ಇದೇ ಕಾರಣದಿಂದ ದೇವರು ಅವರ ಮೇಲೆ ವಂಚಿಸಲು ಶಕ್ತಿಯುಳ್ಳ ಭ್ರಮೆಯನ್ನು ಕಳುಹಿಸಿ ಅವರು ಆ ಸುಳ್ಳನ್ನು ನಂಬುವಂತೆ ಮಾಡುವರು.

[12] ಸತ್ಯವನ್ನು ನಂಬದೆ ಅನೀತಿಯಲ್ಲಿ ಆನಂದಿಸುವವರೆಲ್ಲರೂ ಈ ಪ್ರಕಾರ ತೀರ್ಪಿಗೆ ಗುರಿಯಾಗುವರು.

[13] ಕರ್ತ ಯೇಸುವಿಗೆ ಪ್ರಿಯರಾಗಿರುವವರೇ, ನಾವು ನಿಮ್ಮ ವಿಷಯದಲ್ಲಿ ಯಾವಾಗಲೂ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಏಕೆಂದರೆ, ನೀವು ಪವಿತ್ರಾತ್ಮ ದೇವರ ಶುದ್ಧೀಕರಣದಿಂದಲೂ ಸತ್ಯವನ್ನು ನಂಬುವುದರಿಂದಲೂ ರಕ್ಷಣೆಯನ್ನು ಹೊಂದಿ ಪ್ರಥಮ ಫಲವಾಗುವುದಕ್ಕೆ ದೇವರು ನಿಮ್ಮನ್ನು ಆದಿಯಿಂದ ಆರಿಸಿಕೊಂಡಿದ್ದಾರೆ.

[14] ನಾವು ನಿಮಗೆ ತಿಳಿಸಿದ ಸುವಾರ್ತೆಯ ಮೂಲಕವಾಗಿ, ನೀವು ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಮಹಿಮೆಯನ್ನು ಸಂಪಾದಿಸಿಕೊಳ್ಳಬೇಕೆಂದು ದೇವರು ನಿಮ್ಮನ್ನು ಈ ಆಯ್ಕೆಗಾಗಿ ಕರೆದರು.

[15] ಹೀಗಿರುವುದರಿಂದ ಪ್ರಿಯರೇ, ದೃಢವಾಗಿ ನಿಲ್ಲಿರಿ. ನಾವು ಮಾತಿನಿಂದಾಗಲಿ, ಪತ್ರದಿಂದಾಗಲಿ ನಿಮಗೆ ಕಲಿಸಿದ ಬೋಧನೆಗಳನ್ನು ನೀವು ಭದ್ರವಾಗಿ ಪಾಲಿಸಿರಿ.

[16] ನಮಗೆ ಕರ್ತ ಆಗಿರುವ ಯೇಸು ಕ್ರಿಸ್ತರು ಹಾಗೂ ನಮ್ಮ ತಂದೆ ದೇವರು ನಮ್ಮನ್ನು ಪ್ರೀತಿಸಿ ಕೃಪೆಯಿಂದ ಕೊಟ್ಟಿರುವ ನಮಗೆ ನಿತ್ಯ ಆದರಣೆಯನ್ನೂ ಒಳ್ಳೆಯ ನಿರೀಕ್ಷೆಯನ್ನೂ ನೀಡಿ,

[17] ನಿಮ್ಮ ಹೃದಯಗಳನ್ನು ಸಂತೈಸಿ, ಸಕಲ ಸದ್ವಾಕ್ಯದಲ್ಲಿಯೂ ಸತ್ಕಾರ್ಯದಲ್ಲಿಯೂ ದೃಢಪಡಿಸಲಿ.

2 ಥೆಸಲೋನಿಕದವರಿಗೆ — Chapters