Skip to content
Opens in a new window
Listen to this chapter • 3:58

[1] ಪ್ರಿಯರೇ, ಈ ಕಾಲಸಮಯಗಳನ್ನು ಕುರಿತು ನಿಮಗೆ ಬರೆಯುವುದು ಅವಶ್ಯವಿಲ್ಲ.

[2] ರಾತ್ರಿಯಲ್ಲಿ ಕಳ್ಳನು ಬರುವಂತೆ ಕರ್ತ ಯೇಸುವಿನ ದಿನವು ಬರುವುದೆಂದು ನೀವೇ ಚೆನ್ನಾಗಿ ಬಲ್ಲಿರಿ.

[3] ಆದರೆ, “ಸಮಾಧಾನ, ಸುರಕ್ಷಿತ,” ಎಂದು ಜನರು ಹೇಳುತ್ತಿರುವಾಗಲೇ, ಅವರ ಮೇಲೆ ವಿನಾಶವು ಗರ್ಭಿಣಿಗೆ ಪ್ರಸವವೇದನೆ ಬರುವಂತೆ ಫಕ್ಕನೆ ಬರುವುದು. ಅವರು ಹೇಗೂ ತಪ್ಪಿಸಿಕೊಳ್ಳಲಾರರು.

[4] ಆದರೆ ಪ್ರಿಯರೇ, ಆ ದಿನವು ಕಳ್ಳನಂತೆ ನಿಮ್ಮನ್ನು ಆಶ್ಚರ್ಯಪಡಿಸುವುದಕ್ಕೆ ನೀವು ಕತ್ತಲೆಯಲ್ಲಿರುವವರಲ್ಲ.

[5] ನೀವೆಲ್ಲರೂ ಬೆಳಕಿನ ಮಕ್ಕಳೂ ಹಗಲಿನ ಮಕ್ಕಳೂ ಆಗಿದ್ದೀರಿ. ನಾವು ರಾತ್ರಿಯವರೂ ಅಲ್ಲ, ಕತ್ತಲೆಯವರೂ ಅಲ್ಲ.

[6] ಆದಕಾರಣ ನಾವು ಇತರರಂತೆ ನಿದ್ರೆ ಮಾಡದೆ ಎಚ್ಚರವಾಗಿದ್ದು ಸ್ವಸ್ಥಚಿತ್ತರಾಗಿರೋಣ.

[7] ನಿದ್ರೆ ಮಾಡುವವರು ರಾತ್ರಿಯಲ್ಲಿ ನಿದ್ರೆ ಮಾಡುತ್ತಾರೆ. ಅಮಲೇರುವವರು ರಾತ್ರಿಯಲ್ಲಿ ಅಮಲೇರುತ್ತಾರೆ.

[8] ನಾವಾದರೋ ಹಗಲಿಗೆ ಸೇರಿದವರಾಗಿ ಇರುವುದರಿಂದ ನಂಬಿಕೆ ಹಾಗೂ ಪ್ರೀತಿಯನ್ನು ಕವಚವನ್ನಾಗಿಯೂ ರಕ್ಷಣೆಯ ನಿರೀಕ್ಷೆಯನ್ನು ಶಿರಸ್ತ್ರಾಣವನ್ನಾಗಿಯೂ ಧರಿಸಿಕೊಂಡು ಸ್ವಸ್ಥಚಿತ್ತರಾಗಿರೋಣ.

[9] ಏಕೆಂದರೆ ದೇವರು ನಮ್ಮನ್ನು ಕೋಪಾಗ್ನಿಗೆ ನೇಮಿಸದೆ ನಾವು ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಮೂಲಕವಾಗಿ ರಕ್ಷಣೆಯನ್ನು ಹೊಂದಬೇಕೆಂದೇ ನೇಮಿಸಿದರು.

[10] ನಾವು ಎಚ್ಚರವಾಗಿದ್ದರೂ ನಿದ್ರೆಯಲ್ಲಿದ್ದರೂ ತಮ್ಮ ಜೊತೆಯಲ್ಲಿಯೇ ನಾವು ಜೀವಿಸಬೇಕೆಂದು ಅವರು ನಮಗಾಗಿ ಸತ್ತರು.

[11] ಆದ್ದರಿಂದ ನೀವು ಈಗ ಮಾಡುತ್ತಿರುವಂತೆಯೇ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ. ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಗೊಳಿಸಿರಿ.

[12] ಪ್ರಿಯರೇ, ಯಾರು ನಿಮ್ಮ ನಡುವೆ ಪ್ರಯಾಸಪಟ್ಟು ಕರ್ತ ಯೇಸುವಿನಲ್ಲಿ ನಿಮ್ಮನ್ನು ಪರಾಮರಿಸುವವರಾಗಿದ್ದು ನಿಮಗೆ ಬುದ್ಧಿ ಹೇಳುತ್ತಾರೋ ಅವರನ್ನು ಗೌರವಿಸಿರಿ.

[13] ಅವರ ಕೆಲಸದ ನಿಮಿತ್ತ ಅವರನ್ನು ಪ್ರೀತಿಯಿಂದ ಅತ್ಯಧಿಕವಾಗಿ ಸನ್ಮಾನ ಮಾಡಬೇಕೆಂದು ನಿಮ್ಮನ್ನು ಕೇಳಿಕೊಳ್ಳುತ್ತೇವೆ. ನಿಮ್ಮನಿಮ್ಮೊಳಗೆ ಸಮಾಧಾನದಿಂದಿರಿ.

[14] ಪ್ರಿಯರೇ, ಶಿಸ್ತು ಇಲ್ಲದವರನ್ನು ಎಚ್ಚರಿಸಿರಿ. ಮನಗುಂದಿದವರನ್ನು ಆದರಿಸಿರಿ. ಬಲಹೀನರಿಗೆ ಆಧಾರವಾಗಿರಿ. ಎಲ್ಲರೊಂದಿಗೂ ತಾಳ್ಮೆಯುಳ್ಳವರಾಗಿರಿ ಎಂದು ನಿಮ್ಮನ್ನು ಪ್ರಬೋಧಿಸುತ್ತೇವೆ.

[15] ಯಾರೂ ಅಪಕಾರಕ್ಕೆ ಅಪಕಾರ ಮಾಡದಂತೆ ನೋಡಿಕೊಳ್ಳಿರಿ. ಯಾವಾಗಲೂ ನೀವು ಒಬ್ಬರಿಗೊಬ್ಬರು ಹಿತವನ್ನು ಮಾಡಿಕೊಳ್ಳುವುದಲ್ಲದೆ ಎಲ್ಲರಿಗೂ ಹಿತವನ್ನು ಮಾಡುವವರಾಗಿರಿ.

[16] ಯಾವಾಗಲೂ ಆನಂದಿಸಿರಿ.

[17] ಎಡೆಬಿಡದೆ ಪ್ರಾರ್ಥಿಸಿರಿ.

[18] ಎಲ್ಲವುಗಳಿಗಾಗಿ ಕೃತಜ್ಞತೆ ಸಲ್ಲಿಸಿರಿ. ಏಕೆಂದರೆ ಇದೇ ನಿಮ್ಮ ವಿಷಯವಾಗಿ ಕ್ರಿಸ್ತ ಯೇಸುವಿನಲ್ಲಿರುವ ದೇವರ ಚಿತ್ತವಾಗಿದೆ.

[19] ಪವಿತ್ರಾತ್ಮ ದೇವರ ಸನ್ನಿಧಿಯನ್ನು ನಂದಿಸಬೇಡಿರಿ.

[20] ಪ್ರವಾದನೆಗಳನ್ನು ಹೀನೈಸಬೇಡಿರಿ.

[21] ಎಲ್ಲವನ್ನು ಪರಿಶೋಧಿಸಿ ಒಳ್ಳೆಯದನ್ನೇ ಬಿಗಿಯಾಗಿ ಹಿಡಿದುಕೊಳ್ಳಿರಿ.

[22] ಸಕಲ ವಿಧವಾದ ಕೆಟ್ಟತನಗಳಿಗೆ ದೂರವಾಗಿರಿ.

[23] ಸಮಾಧಾನದ ದೇವರು ತಾವಾಗಿಯೇ ನಿಮ್ಮನ್ನು ಪರಿಪೂರ್ಣವಾಗಿ ಪವಿತ್ರ ಮಾಡಲಿ. ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಪುನರಾಗಮನದಲ್ಲಿ ನಿಮ್ಮ ಆತ್ಮ, ಪ್ರಾಣ, ಶರೀರಗಳು ದೋಷವಿಲ್ಲದೆ ಸಂಪೂರ್ಣವಾಗಿ ಸುರಕ್ಷಿತವಾಗಿರಲಿ.

[24] ನಿಮ್ಮನ್ನು ಕರೆಯುವ ದೇವರು ನಂಬಿಗಸ್ತರು, ಅವರೇ ಅದನ್ನು ಸಾಧಿಸುವವರೂ ಆಗಿದ್ದಾರೆ.

[25] ಪ್ರಿಯರೇ, ನಮಗಾಗಿ ಪ್ರಾರ್ಥಿಸಿರಿ.

[26] ಪವಿತ್ರವಾದ ಮುದ್ದಿಟ್ಟು ದೇವಜನರೆಲ್ಲರನ್ನೂ ವಂದಿಸಿರಿ.

[27] ಈ ಪತ್ರವನ್ನು ಸಹೋದರ ಸಹೋದರಿಯರೆಲ್ಲರಿಗೂ ಓದಿ ಹೇಳಬೇಕೆಂದು ನಿಮಗೆ ಕರ್ತ ಯೇಸುವಿನ ಹೆಸರಿನಲ್ಲಿ ಆಜ್ಞಾಪಿಸುತ್ತೇನೆ.

[28] ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಕೃಪೆಯು ನಿಮ್ಮೊಂದಿಗಿರಲಿ.

1 ಥೆಸಲೋನಿಕದವರಿಗೆ — Chapters