Skip to content
Opens in a new window
Listen to this chapter • 4:47

[1] ದೇವರ ನಾಮವೂ ನಮ್ಮ ಬೋಧನೆಯೂ ದೂಷಣೆಗೆ ಗುರಿಯಾಗದಂತೆ ದಾಸತ್ವದ ನೊಗ ಹೊತ್ತಿರುವವರು ತಮ್ಮ ಸ್ವಂತ ಯಜಮಾನರನ್ನು ಪೂರ್ಣ ಗೌರವಕ್ಕೆ ಯೋಗ್ಯರೆಂದೆಣಿಸಲಿ.

[2] ವಿಶ್ವಾಸಿಗಳಾದ ಯಜಮಾನರಿರುವವರು ಆ ಯಜಮಾನರು ಸಹೋದರನಾಗಿರುವುದರಿಂದ ಅವರನ್ನು ತಾತ್ಸಾರ ಮಾಡದಿರಲಿ. ಏಕೆಂದರೆ ತಮ್ಮ ಸೇವೆಯಿಂದ ಲಾಭ ಹೊಂದುವವರು ವಿಶ್ವಾಸಿಗಳು ಮತ್ತು ತಮಗೆ ಪ್ರಿಯರಾಗಿದ್ದಾರೆ ಎಂದು ತಿಳಿದು ಅವರಿಗೆ ಉತ್ತಮ ಸೇವೆಮಾಡಲಿ. ಇವುಗಳನ್ನು ಅವರಿಗೆ ಬೋಧಿಸಿ ಎಚ್ಚರಿಸು.

[3] ಯಾವನಾದರೂ ಬೇರೆ ವಿಧವಾದ ಉಪದೇಶವನ್ನು ಮಾಡಿ, ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಶುದ್ಧವಾದ ಮಾತುಗಳಿಗೂ ಭಕ್ತಿಗೆ ಅನುಸಾರವಾದ ಬೋಧನೆಗೂ ಸಮ್ಮತಿಸದೆ ಹೋದರೆ,

[4] ಅಂಥವರು ಅಹಂಕಾರಿಯೂ ವಿವೇಕರಹಿತನಾಗಿದ್ದಾರೆ. ಅವರು ಹೊಟ್ಟೆಕಿಚ್ಚು, ಜಗಳ, ದೂಷಣೆ, ದುಸ್ಸಂಶಯಪಡುವ ಭ್ರಾಂತರಾಗಿ ಸತ್ಯವನ್ನು ಬಿಟ್ಟು, ಕುತರ್ಕ ವಾಗ್ವಾದಗಳನ್ನು ಮಾಡುವವರಾಗಿದ್ದಾರೆ.

[5] ಹೀಗೆ ಅನಾರೋಗ್ಯಕರವಾದ ವಿವಾದಗಳನ್ನೂ ಕೆಲವು ಮಾತುಗಳ ಕುರಿತಾಗಿರುವ ತರ್ಕಗಳನ್ನೂ ಸೃಷ್ಟಿಸುವ ಪ್ರಸಿದ್ಧರಾಗಿದ್ದಾರೆ. ಅಂಥವರು ದೇವಭಕ್ತಿಯನ್ನು ಆರ್ಥಿಕ ಲಾಭವನ್ನಾಗಿ ಭಾವಿಸುವವರಾಗಿದ್ದಾರೆ.

[6] ಸಂತೃಪ್ತಿಯೊಂದಿಗಿರುವ ದೇವಭಕ್ತಿಯೇ ದೊಡ್ಡ ಲಾಭವು.

[7] ನಾವು ಲೋಕದೊಳಗೆ ಏನನ್ನೂ ತೆಗೆದುಕೊಂಡು ಬರಲಿಲ್ಲ. ಅದರೊಳಗಿಂದ ಏನೂ ತೆಗೆದುಕೊಂಡು ಹೋಗಲಾರೆವು.

[8] ಆದರೆ ಅನ್ನವಸ್ತ್ರಗಳು ನಮಗಿರುವುದಾದರೆ, ನಾವು ಅದರಲ್ಲಿ ತೃಪ್ತರಾಗಿರೋಣ.

[9] ಆದರೆ ಐಶ್ವರ್ಯವಂತರಾಗಬೇಕೆಂದು ಬಯಸುವವರು ಶೋಧನೆಯಲ್ಲಿಯೂ ಉರುಲಿನಲ್ಲಿಯೂ ಬಿದ್ದು ಅನೇಕ ಬುದ್ಧಿಹೀನವಾದ ಹಾಗೂ ಹಾನಿಕರವಾದ ಆಶೆಗಳಲ್ಲಿ ಬೀಳುತ್ತಾರೆ. ಇಂಥ ಆಶೆಗಳು ಮನುಷ್ಯರನ್ನು ಸಂಹಾರ ವಿನಾಶನಗಳಲ್ಲಿ ಮುಳುಗಿಸುತ್ತವೆ.

[10] ಹಣದ ಪ್ರೀತಿಯು ಸಕಲ ವಿಧವಾದ ಕೆಟ್ಟತನಕ್ಕೆ ಬೇರಾಗಿದೆ. ಕೆಲವರು ಹಣಕ್ಕಾಗಿ ಆತುರಪಟ್ಟು ನಂಬಿಕೆಯಿಂದ ದೂರಹೋಗಿ ಅನೇಕ ದುಃಖಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ.

[11] ದೇವರ ಮನುಷ್ಯನೇ, ನೀನಾದರೋ ಇವುಗಳಿಂದ ಓಡಿಹೋಗು. ನೀತಿ, ಭಕ್ತಿ, ನಂಬಿಕೆ, ಪ್ರೀತಿ, ತಾಳ್ಮೆ, ಸಾತ್ವಿಕತ್ವ ಇವುಗಳನ್ನು ಹಿಂಬಾಲಿಸು.

[12] ವಿಶ್ವಾಸದ ಒಳ್ಳೆಯ ಹೋರಾಟವನ್ನು ಮಾಡು. ನಿತ್ಯಜೀವವನ್ನು ಹಿಡಿದುಕೋ; ಅದಕ್ಕಾಗಿಯೇ ದೇವರು ನಿನ್ನನ್ನು ಕರೆದಿದ್ದಾರೆ. ನೀನು ಅನೇಕ ಸಾಕ್ಷಿಗಳ ಮುಂದೆ ಒಳ್ಳೆಯ ಅರಿಕೆಯನ್ನು ಮಾಡಿದ್ದೀಯಲ್ಲಾ?

[13] ಎಲ್ಲಕ್ಕೂ ಜೀವ ನೀಡುವ ದೇವರ ಮುಂದೆಯೂ ಪೊಂತ್ಯ ಪಿಲಾತನ ಮುಂದೆ ಒಳ್ಳೆಯ ಅರಿಕೆಯನ್ನು ಸಾಕ್ಷಿಯಾಗಿ ನೀಡಿದ ಕ್ರಿಸ್ತ ಯೇಸುವಿನ ಮುಂದೆಯೂ ನಾನು ನಿನಗೆ ಖಂಡಿತವಾಗಿ ಹೇಳವುದೇನೆಂದರೆ:

[14] ನಮಗೆ ಕರ್ತ ಆಗಿರುವ ಯೇಸು ಕ್ರಿಸ್ತರು ಪ್ರತ್ಯಕ್ಷರಾಗುವ ತನಕ ಈ ಆಜ್ಞೆಯನ್ನು ನಿಷ್ಕಳಂಕವಾಗಿಯೂ ನಿಂದಾರಹಿತವಾಗಿಯೂ ನೀನು ಕಾಪಾಡಬೇಕು.

[15] ರಾಜಾಧಿರಾಜನೂ ಕರ್ತರ ಕರ್ತನೂ ಭಾಗ್ಯವಂತರಾದ ಏಕಾಧಿಪತಿಯು ತಮ್ಮ ಸಮಯಗಳಲ್ಲೆ ಕ್ರಿಸ್ತ ಯೇಸುವನ್ನು ಪ್ರತ್ಯಕ್ಷಪಡಿಸುವರು.

[16] ದೇವರೊಬ್ಬರೇ ಅಮರತ್ವವುಳ್ಳವರೂ ಯಾರೂ ಸಮೀಪಿಸಲಾರದ ಬೆಳಕಿನಲ್ಲಿ ವಾಸಿಸುವವರೂ ಆಗಿದ್ದಾರೆ. ಯಾವ ಮನುಷ್ಯನೂ ದೇವರನ್ನು ಕಾಣಲಿಲ್ಲ. ಯಾರೂ ಕಾಣಲಾರರು. ದೇವರಿಗೆ ಮಾನವೂ ಬಲವೂ ಸದಾಕಾಲಕ್ಕೂ ಇರಲಿ. ಆಮೆನ್.

[17] ಈ ಲೋಕದಲ್ಲಿ ಅಹಂಕಾರಿಗಳಾಗಿರದೆ, ಅಸ್ತಿರವಾದ ಐಶ್ವರ್ಯದ ಮೇಲೆ ನಿರೀಕ್ಷೆಯನ್ನಿಡದೆ ನಮ್ಮ ಸುಖಕ್ಕೋಸ್ಕರ ಎಲ್ಲವನ್ನೂ ಸಮೃದ್ಧಿಯಾಗಿ ದಯಪಾಲಿಸುವ ದೇವರ ಮೇಲೆ ನಿರೀಕ್ಷೆಯನ್ನಿಡಬೇಕೆಂದು ಐಶ್ವರ್ಯವಂತರಿಗೆ ಆಜ್ಞಾಪಿಸು.

[18] ಅಂಥವರು ಒಳ್ಳೆಯದನ್ನು ಮಾಡುವವರೂ ಸತ್ಕಾರ್ಯಗಳಲ್ಲಿ ಐಶ್ವರ್ಯವಂತರೂ ಪಾಲು ಕೊಡುವುದರಲ್ಲಿ ಸಿದ್ಧರಾಗಿರುವವರೂ ಪರೋಪಕಾರ ಮಾಡುವವರೂ ಆಗಿರಬೇಕೆಂದು ಅವರನ್ನು ಪ್ರಬೋಧಿಸು.

[19] ಹೀಗೆ ಮುಂದಿನ ಕಾಲಕ್ಕೆ ಯಥಾರ್ಥ ಜೀವವಾಗಿರುವ ನಿತ್ಯಜೀವವನ್ನು ಹಿಡಿದುಕೊಳ್ಳುವಂತೆ ತಮಗೋಸ್ಕರ ಸ್ಥಿರವಾದ ಅಸ್ತಿವಾರಕ್ಕಾಗಿ ನಿಕ್ಷೇಪಗಳನ್ನು ಕೂಡಿಸಿಟ್ಟುಕೊಳ್ಳಲಿ.

[20] ತಿಮೊಥೆಯನೇ, ನಿನ್ನ ವಶಕ್ಕೆ ಕೊಟ್ಟಿರುವುದನ್ನು ಕಾಪಾಡು. ದೇವಭಕ್ತಿಗೆ ಅನುಗುಣವಾಗದ ಹರಟೆ ಮಾತುಗಳಿಗೂ ಜ್ಞಾನದಿಂದ ವಿಚಾರಪಡಿಸುವ ಸುಳ್ಳು ತರ್ಕಗಳಿಗೂ ಒಳಪಡದಿರು.

[21] ಕೆಲವರು ಇಂಥವುಗಳಿಗೆ ಒಳಪಟ್ಟು ನಂಬಿಕೆಯಿಂದ ಗುರಿತಪ್ಪಿ ಹೋಗಿದ್ದಾರೆ. ಕೃಪೆಯು ನಿಮ್ಮೊಂದಿಗಿರಲಿ.

1 ತಿಮೊಥೆಯನಿಗೆ — Chapters