[1] ಸಭೆಯ ಮೇಲ್ವಿಚಾರಕನಾಗಲು ಬಯಸುವವನು ಒಳ್ಳೆಯ ಕೆಲಸವನ್ನು ಅಪೇಕ್ಷಿಸುವವನಾಗಿದ್ದಾನೆಂಬ ಮಾತು ನಂಬತಕ್ಕದ್ದಾಗಿದೆ.
[2] ಸಭೆಯ ಮೇಲ್ವಿಚಾರಕನು ನಿಂದಾರಹಿತನಾಗಿ, ಏಕಪತ್ನಿಯುಳ್ಳವನೂ ಜಿತೇಂದ್ರಿಯನೂ ಸ್ವಸ್ಥಚಿತ್ತನೂ ಗೌರವಸ್ಥನೂ ಅತಿಥಿ ಸತ್ಕಾರ ಮಾಡುವವನೂ ಬೋಧಿಸುವುದರಲ್ಲಿ ಪ್ರವೀಣನೂ ಆಗಿರಬೇಕು.
[3] ಅವನು ಮದ್ಯಪಾನ ಮಾಡುವವನಾಗಿರಬಾರದು, ಹೊಡೆದಾಡುವವನಾಗಿರಬಾರದು. ಆದರೆ ಸಾತ್ವಿಕನೂ ಕುತರ್ಕ ಮಾಡದವನೂ ಹಣದಾಶೆಯಿಲ್ಲದವನೂ ಆಗಿರಬೇಕು.
[4] ಪೂರ್ಣ ಗೌರವದಿಂದ ತನ್ನ ಮಕ್ಕಳನ್ನು ಅಧೀನದಲ್ಲಿಟ್ಟುಕೊಂಡು ಸ್ವಂತ ಮನೆಯವರನ್ನು ಚೆನ್ನಾಗಿ ಆಳುವವನಾಗಿರಬೇಕು.
[5] ಸ್ವಂತ ಮನೆಯವರನ್ನು ಆಳುವುದಕ್ಕೆ ತಿಳಿಯದವನು ದೇವರ ಸಭೆಯನ್ನು ಹೇಗೆ ಪರಾಮರಿಸುವನು?
[6] ಅವನು ಹೊಸದಾಗಿ ವಿಶ್ವಾಸಕ್ಕೆ ಬಂದವನಾಗಿರಬಾರದು. ಅಂಥವನಾದರೆ ಉಬ್ಬಿಕೊಂಡು ಸೈತಾನನ ಶಿಕ್ಷಾವಿಧಿಗೆ ಬಲಿಬೀಳುವನು.
[7] ಇದಲ್ಲದೆ ಅವನು ನಿಂದೆಗೆ ಗುರಿಯಾಗದವನೂ ಸೈತಾನನ ಉರುಲಿಗೆ ಸಿಕ್ಕಿ ಬೀಳದವನೂ ಆಗಿದ್ದಾನೆಂಬ ಒಳ್ಳೆಯ ಸಾಕ್ಷಿಯನ್ನು ಹೊಂದಿದವನಾಗಿರಬೇಕು.
[8] ಅದೇ ರೀತಿಯಾಗಿ ಸಭಾಸೇವಕರು ಗೌರವವುಳ್ಳವರಾಗಿರಬೇಕು. ಅವರು ಎರಡು ನಾಲಿಗೆಯುಳ್ಳವರಾಗಿರಬಾರದು. ಮದ್ಯಾಸಕ್ತರೂ ನೀಚಲಾಭವನ್ನು ಅಪೇಕ್ಷಿಸುವವರೂ ಆಗಿರದೆ
[9] ನಂಬಿಕೆಯ ರಹಸ್ಯವನ್ನು ಶುದ್ಧಮನಸ್ಸಾಕ್ಷಿಯಿಂದ ಹಿಡಿದುಕೊಂಡವರಾಗಿರಬೇಕು.
[10] ಇದಲ್ಲದೆ ಇವರು ಸಹ ಮೊದಲು ಪರೀಕ್ಷೆಗೊಳಪಡಬೇಕು. ಅವರು ನಿಂದಾರಹಿತರಾಗಿ ಕಂಡು ಬಂದರೆ ಸಭಾ ಹಿರಿಯರಾಗಿ ಸೇವೆಮಾಡಲಿ.
[11] ಹಾಗೆಯೇ ಅವರ ಹೆಂಡತಿಯರು ಗೌರವವುಳ್ಳವರಾಗಿರಬೇಕು. ಚಾಡಿ ಹೇಳದವರೂ ಸ್ವಸ್ಥ ಬುದ್ಧಿಯುಳ್ಳವರೂ ಎಲ್ಲಾ ವಿಷಯಗಳಲ್ಲಿ ನಂಬಿಗಸ್ತರೂ ಆಗಿರತಕ್ಕದ್ದು.
[12] ಸಭಾಸೇವಕರು ಏಕಪತ್ನಿಯುಳ್ಳವರೂ ತಮ್ಮ ಮಕ್ಕಳನ್ನೂ ಮನೆಯವರನ್ನೂ ಚೆನ್ನಾಗಿ ಆಳುವವರೂ ಆಗಿರಬೇಕು.
[13] ಸಭಾ ಹಿರಿಯರಾಗಿ ಚೆನ್ನಾಗಿ ಸೇವೆ ಮಾಡಿದವರು ತಮಗೆ ಒಳ್ಳೆಯ ಸ್ಥಿತಿಯನ್ನೂ, ಕ್ರಿಸ್ತ ಯೇಸುವಿನಲ್ಲಿರುವ ವಿಶ್ವಾಸದಲ್ಲಿ ಬಹು ಧೈರ್ಯವನ್ನೂ ಸಂಪಾದಿಸಿಕೊಳ್ಳುತ್ತಾರೆ.
[14] ನಾನು ನಿನ್ನ ಬಳಿಗೆ ಬೇಗನೆ ಬರುವೆನೆಂಬ ನಿರೀಕ್ಷೆಯಿಂದಲೇ ನಿನಗೆ ಈ ವಿಷಯಗಳನ್ನು ಬರೆದಿದ್ದೇನೆ.
[15] ಒಂದು ವೇಳೆ ನಾನು ತಡ ಮಾಡಿದರೂ ಸತ್ಯಕ್ಕೆ ಸ್ತಂಭವೂ ಆಧಾರವೂ ಆಗಿರುವ ದೇವರ ಮನೆಯಲ್ಲಿ ಎಂದರೆ ಜೀವಸ್ವರೂಪರಾದ ದೇವರ ಸಭೆಯಲ್ಲಿ ನಡೆದುಕೊಳ್ಳಬೇಕಾದ ರೀತಿಯು ನಿನಗೆ ಗೊತ್ತಾಗಿರಬೇಕು.
[16] ಎಲ್ಲಾ ಪ್ರಶ್ನೆಗಳಿಂದ ಹೆಚ್ಚಾಗಿ ದೈವ ಭಕ್ತಿಯ ರಹಸ್ಯವು ದೊಡ್ಡದಾದದ್ದು ಅದು ಯಾವುದೆಂದರೆ: “ದೇವರು ಮನುಷ್ಯ ರೂಪದಲ್ಲಿ ಪ್ರತ್ಯಕ್ಷರಾದರು. ಆತ್ಮದಲ್ಲಿ ರುಜುಪಡಿಸಲಾದರು. ದೂತರಿಗೆ ಕಾಣಿಸಿಕೊಂಡರು, ಯೆಹೂದ್ಯರಲ್ಲದವರಿಗೆ ಸಾರಲಾದರು, ಲೋಕದಲ್ಲಿ ನಂಬಲಾದರು, ಮಹಿಮೆಗೆ ಒಯ್ಯಲಾದರು!”