Skip to content
Opens in a new window
Listen to this chapter • 4:51

[1] ವೃದ್ಧನನ್ನು ಗದರಿಸದೆ ತಂದೆಯಂತೆಯೂ ಯೌವನಸ್ಥರನ್ನು ಸಹೋದರರಂತೆಯೂ

[2] ವೃದ್ಧ ಸ್ತ್ರೀಯರನ್ನು ತಾಯಿಯಂತೆಯೂ ಯೌವನ ಸ್ತ್ರೀಯರನ್ನು ಪೂರ್ಣ ಪವಿತ್ರತೆಯಿಂದ ಸಹೋದರಿಯರಂತೆಯೂ ಅವರವರಿಗೆ ಬುದ್ಧಿ ಹೇಳು.

[3] ನಿಜವಾಗಿಯೂ ಕಷ್ಟದಲ್ಲಿರುವ ವಿಧವೆಯರನ್ನು ಗುರುತಿಸಿ ಅವರಿಗೆ ಸಹಾಯಮಾಡು.

[4] ಆದರೆ ಯಾವ ವಿಧವೆಗಾದರೂ ಮಕ್ಕಳಾಗಲಿ, ಮೊಮ್ಮಕ್ಕಳಾಗಲಿ ಇದ್ದರೆ ಅವರೇ ಮೊದಲು ತಮ್ಮ ಮನೆಯಲ್ಲಿ ಭಕ್ತಿಯಿಂದಿರುವುದಕ್ಕೂ ತಂದೆತಾಯಿಗಳಿಗೆ ಪ್ರತ್ಯುಪಕಾರ ಮಾಡುವುದಕ್ಕೂ ಕಲಿತುಕೊಳ್ಳಲಿ. ಇದು ದೇವರ ದೃಷ್ಟಿಯಲ್ಲಿ ಮೆಚ್ಚಿಕೆಯಾದದ್ದು.

[5] ನಿಜವಾಗಿಯೂ ಕಷ್ಟದಲ್ಲಿರುವ ವಿಧವೆಯು ದೇವರ ಮೇಲೆ ನಿರೀಕ್ಷೆಯನ್ನಿಟ್ಟು ಹಗಲು ಇರುಳು ವಿಜ್ಞಾಪನೆಗಳಲ್ಲಿಯೂ ಪ್ರಾರ್ಥನೆಗಳಲ್ಲಿಯೂ ನೆಲೆಗೊಂಡಿರುವಳು.

[6] ಆದರೆ ಭೋಗಿಯಾಗಿರುವ ವಿಧವೆಯು ಬದುಕಿರುವಾಗಲೂ ಸತ್ತವಳೇ.

[7] ವಿಧವೆಯರು ನಿಂದೆಗೆ ಗುರಿಯಾಗದಂತೆ ಇವುಗಳನ್ನು ಆಜ್ಞಾಪಿಸು.

[8] ಯಾವನಾದರೂ ಸ್ವಂತದವರನ್ನು ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆ ಹೋದರೆ ಅವನು ನಂಬಿಕೆಯನ್ನು ಅಲ್ಲಗಳೆದವನೂ ಅವಿಶ್ವಾಸಿಗಿಂತ ನೀಚನೂ ಆಗಿದ್ದಾನೆ.

[9] ವಯಸ್ಸಿನಲ್ಲಿ ಅರವತ್ತಕ್ಕೆ ಕಡಿಮೆಯಿಲ್ಲದ ವಿಧವೆಯರನ್ನು ಮಾತ್ರ ವಿಧವೆಯರ ಪಟ್ಟಿಯಲ್ಲಿ ಸೇರಿಸು. ಅಂಥವಳು ಗಂಡನಿಗೆ ನಂಬಿಗಸ್ತಳಾಗಿದ್ದಿರಬೇಕು.

[10] ಆಕೆಯು ಮಕ್ಕಳನ್ನು ಸಾಕಿದವಳೂ ಅತಿಥಿ ಸತ್ಕಾರ ಮಾಡಿದವಳೂ ಭಕ್ತರ ಪಾದಗಳನ್ನು ತೊಳೆದವಳೂ ಸಂಕಟದಲ್ಲಿದ್ದವರಿಗೆ ಸಹಾಯ ಮಾಡಿದವಳೂ ಆಗಿರಬೇಕು. ಹೀಗೆ ಪ್ರತಿಯೊಂದು ಸತ್ಕ್ರಿಯೆಗಳಿಗೆ ಹೆಸರಾದವಳೂ ಆಗಿರಬೇಕು.

[11] ಆದರೆ ಪ್ರಾಯದ ವಿಧವೆಯರನ್ನು ಪಟ್ಟಿಯಲ್ಲಿ ಸೇರಿಸಬೇಡ. ಏಕೆಂದರೆ ಅವರಲ್ಲಿ ದೈಹಿಕ ಅಪೇಕ್ಷೆಗಳು ಕ್ರಿಸ್ತ ಯೇಸುವಿನ ಮೇಲಿಟ್ಟ ಅವರ ಪ್ರತಿಷ್ಠೆಯನ್ನು ಸೋಲಿಸಿ, ಅವರು ಮದುವೆ ಮಾಡಿಕೊಳ್ಳುವಂತೆ ಮಾಡುವವು.

[12] ಅಂಥವರು ತಮ್ಮ ಮೊದಲಿನ ನಂಬಿಕೆಯನ್ನು ಬಿಟ್ಟಿದ್ದರಿಂದ ತೀರ್ಪಿಗೆ ಗುರಿಯಾಗುವರು.

[13] ಇದಲ್ಲದೆ ಅವರು ಮನೆಯಿಂದ ಮನೆಗೆ ತಿರುಗಾಡುತ್ತಾ ಸೋಮಾರಿತನವನ್ನು ಕಲಿಯುತ್ತಾರೆ. ಸೋಮಾರಿಗಳಾಗುವುದಷ್ಟೇ ಅಲ್ಲ, ಹರಟೆ ಮಾತನಾಡುವವರೂ ಇತರರ ಕೆಲಸದಲ್ಲಿ ತಲೆಹಾಕುವವರಾಗಿ ಆಡಬಾರದ ಮಾತುಗಳನ್ನಾಡುವವರೂ ಆಗುತ್ತಾರೆ.

[14] ಆದ್ದರಿಂದ ಯೌವನಸ್ಥ ವಿಧವೆಯರು ಮದುವೆಮಾಡಿಕೊಂಡು, ಮಕ್ಕಳನ್ನು ಹೆತ್ತು, ಮನೆಯ ಕೆಲಸಮಾಡಿ, ವಿರೋಧಿಯ ನಿಂದೆಗೆ ಆಸ್ಪದ ಕೊಡಬಾರದೆಂಬುದೇ ನನ್ನ ಅಪೇಕ್ಷೆ.

[15] ಈಗಾಗಲೇ ಕೆಲವರು ದಾರಿತಪ್ಪಿ ಸೈತಾನನನ್ನು ಹಿಂಬಾಲಿಸಿದ್ದಾರೆ.

[16] ವಿಶ್ವಾಸಿಯಾದ ಸ್ತ್ರೀಯ ಕುಟುಂಬದಲ್ಲಿ ವಿಧವೆಯರಿದ್ದರೆ, ಆಕೆ ಇಂಥವರನ್ನು ಸಂರಕ್ಷಿಸಲಿ. ಸಭೆಯು ದಿಕ್ಕಿಲ್ಲದ ವಿಧವೆಯರನ್ನು ಸಂರಕ್ಷಿಸಬೇಕಾಗಿರುವುದರಿಂದ ಆ ಭಾರವನ್ನು ಸಭೆಯ ಮೇಲೆ ಹಾಕಬಾರದು.

[17] ಸಭಾಕಾರ್ಯಗಳನ್ನು ಸರಿಯಾಗಿ ನಡೆಸುತ್ತಿರುವ ಹಿರಿಯರು, ವಿಶೇಷವಾಗಿ ವಾಕ್ಯದಲ್ಲಿಯೂ ಬೋಧನೆಯಲ್ಲಿಯೂ ಶ್ರಮಿಸುತ್ತಿರುವವರು ಇಮ್ಮಡಿಯಾದ ಗೌರವಕ್ಕೆ ಯೋಗ್ಯರೆಂದು ಎಣಿಸಬೇಕು.

[18] ಏಕೆಂದರೆ, “ಕಣ ತುಳಿಯುವ ಎತ್ತಿನ ಬಾಯನ್ನು ಕಟ್ಟಬಾರದು!” ಎಂತಲೂ, “ಕೆಲಸದವನು ತನ್ನ ಕೂಲಿಗೆ ಯೋಗ್ಯನಾಗಿದ್ದಾನೆ!” ಎಂತಲೂ ಪವಿತ್ರ ವೇದದಲ್ಲಿ ಹೇಳಿದೆಯಲ್ಲಾ.

[19] ಹಿರಿಯನ ಮೇಲೆ ಯಾರಾದರೂ ದೂರು ಹೇಳಿದರೆ, ಇಬ್ಬರ ಇಲ್ಲವೆ ಮೂವರ ಸಾಕ್ಷಿ ಇಲ್ಲದೆ ಅದನ್ನು ಅಂಗೀಕರಿಸಬೇಡ.

[20] ಪಾಪಮಾಡುವ ಹಿರಿಯರನ್ನು ಎಲ್ಲರ ಮುಂದೆಯೇ ಗದರಿಸು. ಇದರಿಂದ ಇತರರಿಗೂ ಎಚ್ಚರಿಕೆಯಾಗುವುದು.

[21] ನೀನು ವಿಚಾರಿಸುವುದಕ್ಕೆ ಮೊದಲೇ ತೀರ್ಮಾನಿಸದೆಯೂ ಪಕ್ಷಪಾತದಿಂದ ಏನೂ ಮಾಡದೆಯೂ ಇವುಗಳನ್ನು ಕೈಗೊಳ್ಳಬೇಕೆಂದು ದೇವರ ಮುಂದೆಯೂ ಕ್ರಿಸ್ತ ಯೇಸುವಿನ ಮುಂದೆಯೂ ಆಯ್ಕೆಯಾದ ದೂತರ ಮುಂದೆಯೂ ಖಂಡಿತವಾಗಿ ನಾನು ಹೇಳುತ್ತೇನೆ.

[22] ಅವಸರದಿಂದ ಯಾರ ಮೇಲೆಯೂ ಹಸ್ತವನ್ನಿಟ್ಟು, ಸಭಾ ಹಿರಿಯರನ್ನಾಗಿ ನೇಮಿಸಬೇಡ. ಇತರರ ಪಾಪಗಳಲ್ಲಿ ಪಾಲುಗಾರನಾಗಬೇಡ. ನಿನ್ನನ್ನು ಶುದ್ಧನಾಗಿ ಕಾಪಾಡಿಕೋ.

[23] ನೀರನ್ನು ಮಾತ್ರ ಕುಡಿಯದೆ ನಿನ್ನ ಹೊಟ್ಟೆಯ ನಿಮಿತ್ತವಾಗಿಯೂ ನಿನಗೆ ಆಗಾಗ್ಗೆ ಉಂಟಾಗುವ ಬಲಹೀನತೆಗಳಿಗಾಗಿಯೂ ಸ್ವಲ್ಪ ದ್ರಾಕ್ಷಾರಸವನ್ನು ಉಪಯೋಗಿಸು.

[24] ಕೆಲವರ ಪಾಪಗಳು ತೀರ್ಪಿಗೆ ಮುಂಚೆಯೇ ಬಹಿರಂಗವಾಗುತ್ತವೆ. ಇನ್ನು ಕೆಲವರ ಪಾಪಗಳು ಕ್ರಮೇಣವಾಗಿ ಕಂಡುಬರುತ್ತವೆ.

[25] ಅದರಂತೆಯೇ ಕೆಲವರ ಒಳ್ಳೆಯ ಕ್ರಿಯೆಗಳು ಮುಂಚೆಯೇ ಪ್ರತ್ಯಕ್ಷವಾಗಿರುತ್ತವೆ. ಪ್ರತ್ಯಕ್ಷವಾಗದಿರುವ ಒಳ್ಳೆಯ ಕ್ರಿಯೆಗಳು ನಿರಂತರವಾಗಿ ಮರೆಯಾಗಿರಲಾರವು.

1 ತಿಮೊಥೆಯನಿಗೆ — Chapters