[1] ಎಲ್ಲದಕ್ಕಿಂತ ಮೊದಲು ಮನುಷ್ಯರೆಲ್ಲರಿಗೋಸ್ಕರವೂ ಅರಸರುಗಳಿಗಾಗಿಯೂ ವಿಜ್ಞಾಪನೆಗಳನ್ನೂ ಪ್ರಾರ್ಥನೆಗಳನ್ನೂ ಬಿನ್ನಹಗಳನ್ನೂ ಕೃತಜ್ಞತಾಸ್ತುತಿಗಳನ್ನೂ ಮಾಡಬೇಕೆಂದು ಪ್ರಬೋಧಿಸುತ್ತೇನೆ.
[2] ಹೀಗೆ ಮಾಡಿದರೆ ನಾವು ನೆಮ್ಮದಿ ಹಾಗೂ ಸಮಾಧಾನಗಳಿಂದ ಕೂಡಿದ ಜೀವನವನ್ನು ಪೂರ್ಣಭಕ್ತಿಯಿಂದಲೂ ಗೌರವದಿಂದಲೂ ನಡೆಸುವುದಕ್ಕಾಗುವುದು.
[3] ಏಕೆಂದರೆ ಇದು ನಮ್ಮ ರಕ್ಷಕರಾದ ದೇವರ ಮುಂದೆ ಒಳ್ಳೆಯದಾಗಿಯೂ ಅಂಗೀಕರಿಸತಕ್ಕದ್ದಾಗಿಯೂ ಇದೆ.
[4] ಎಲ್ಲಾ ಮನುಷ್ಯರೂ ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಬರಬೇಕೆಂಬುದು ದೇವರ ಚಿತ್ತವಾಗಿದೆ.
[5] ದೇವರು ಒಬ್ಬರೇ, ದೇವರಿಗೂ ಮನುಷ್ಯರಿಗೂ ಮಧ್ಯಸ್ಥ ಒಬ್ಬರೇ. ಅವರು ಮನುಷ್ಯರಾಗಿ ಬಂದ ಕ್ರಿಸ್ತ ಯೇಸುವೇ.
[6] ಯೇಸು ಎಲ್ಲರಿಗೋಸ್ಕರ ವಿಮೋಚನೆಯ ಕ್ರಯವಾಗಿ ತಮ್ಮನ್ನು ತಾವೇ ಒಪ್ಪಿಸಿಕೊಟ್ಟರು. ಇದೇ ಸೂಕ್ತ ಸಮಯದಲ್ಲಿ ನೀಡಬೇಕಾದ ಸಾಕ್ಷಿಯಾಗಿದೆ.
[7] ಇದಕ್ಕಾಗಿಯೇ ಸಂದೇಶ ಸಾರುವವನೂ ಅಪೊಸ್ತಲನೂ ಆಗಿರುವ ನಾನು ಯೆಹೂದ್ಯರಲ್ಲದವರಿಗೆ ನಂಬಿಗಸ್ತನಾದ ಸತ್ಯ ಬೋಧಕನಾಗಿ ನೇಮಕವಾದೆನು. ಇದು ಸುಳ್ಳಲ್ಲ, ಸತ್ಯವನ್ನೇ ಹೇಳುತ್ತೇನೆ.
[8] ಆದ್ದರಿಂದ ಪುರುಷರು ಎಲ್ಲಾ ಸ್ಥಳಗಳಲ್ಲಿ ಕೋಪವೂ ಸಂದೇಹವೂ ಇಲ್ಲದೆ ಶುದ್ಧವಾದ ಕೈಗಳನ್ನೆತ್ತಿ ಪ್ರಾರ್ಥಿಸಬೇಕೆಂದು ನಾನು ಅಪೇಕ್ಷಿಸುತ್ತೇನೆ.
[9] ಹಾಗೆಯೇ ಸ್ತ್ರೀಯರು ಸಭ್ಯತೆ ಹಾಗೂ ಸ್ವಸ್ಥಬುದ್ಧಿಯುಳ್ಳವರಾಗಿದ್ದು ಗೌರವಕ್ಕೆ ತಕ್ಕ ಉಡುಪನ್ನುಟ್ಟುಕೊಳ್ಳಬೇಕೆಂದು ಅಪೇಕ್ಷಿಸುತ್ತೇನೆ. ಅವರು ಜಡೆ, ಚಿನ್ನ, ಮುತ್ತುಗಳು, ಬೆಲೆಯುಳ್ಳ ವಸ್ತ್ರ ಇವುಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳದೆ,
[10] ದೇವ ಭಕ್ತೆಯರೆನಿಸಿಕೊಳ್ಳುವ ಸ್ತ್ರೀಯರಿಗೆ ತಕ್ಕಂತೆ ಸತ್ಕ್ರಿಯೆಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳಬೇಕು.
[11] ಸ್ತ್ರೀಯು ಮೌನವಾಗಿದ್ದು ಎಲ್ಲಾ ಅಧೀನತೆಯನ್ನು ಕಲಿಯಬೇಕು.
[12] ಆದರೆ ಉಪದೇಶ ಮಾಡುವುದಕ್ಕಾಗಲಿ, ಪುರುಷನ ಮೇಲೆ ಅಧಿಕಾರ ನಡೆಸುವುದಕ್ಕಾಗಲಿ ಸ್ತ್ರೀಗೆ ನಾನು ಅಪ್ಪಣೆ ಕೊಡುವುದಿಲ್ಲ. ಆಕೆಯು ಮೌನವಾಗಿರಬೇಕು.
[13] ಏಕೆಂದರೆ ಮೊದಲು ನಿರ್ಮಿತನಾದವನು ಆದಾಮನು, ಆಮೇಲೆ ಹವ್ವಳು.
[14] ಆದಾಮನು ವಂಚನೆಗೊಳಗಾಗಲಿಲ್ಲ, ಸ್ತ್ರೀಯು ವಂಚನೆಗೊಳಗಾಗಿ ಅಪರಾಧಿಯಾದಳು.
[15] ಆದರೂ ಸ್ತ್ರೀಯರು ಸ್ವಸ್ಥಬುದ್ಧಿಯಿಂದ ನಂಬಿಕೆ, ಪ್ರೀತಿ ಹಾಗೂ ಪರಿಶುದ್ಧತೆಯಲ್ಲಿ ನೆಲೆಗೊಂಡಿದ್ದರೆ ಅವರು ಮಗುವನ್ನು ಹೆರುವುದರ ಮೂಲಕ ರಕ್ಷಣೆಹೊಂದುವರು.