Skip to content
Opens in a new window
Listen to this chapter • 6:43

[1] ಹೀಗಿರಲು, ಯೆಹೂದ್ಯರ ವೈಶಿಷ್ಟವೇನು? ಸುನ್ನತಿ ಮಾಡಿಸಿಕೊಂಡಿರುವುದರಲ್ಲಿ ಏನಾದರೂ ವಿಶೇಷತೆಯಿದೆಯೇ?

[2] ಹೌದು, ಯೆಹೂದ್ಯರಿಗೆ ಅನೇಕ ವಿಶೇಷತೆಗಳಿವೆ. ಎಲ್ಲಕ್ಕಿಂತಲೂ ಅತಿಮುಖ್ಯವಾದದ್ದೇನೆಂದರೆ, ದೇವರು ಯೆಹೂದ್ಯರಲ್ಲಿ ಭರವಸವಿಟ್ಟು ತನ್ನ ಉಪದೇಶಗಳನ್ನು ಅವರಿಗೆ ಕೊಟ್ಟನು.

[3] ಕೆಲವು ಯೆಹೂದ್ಯರು ದೇವರಿಗೆ ನಂಬಿಗಸ್ತರಾಗಿರಲಿಲ್ಲ ಎಂಬುದೇನೊ ಸತ್ಯ. ಆದರೆ ದೇವರು ತಾನು ಮಾಡಿದ ವಾಗ್ದಾನವನ್ನು ನೆರವೇರಿಸದಂತೆ ಅದು ಮಾಡುತ್ತದೆಯೇ?

[4] ಇಲ್ಲ! ಪ್ರತಿಯೊಬ್ಬ ವ್ಯಕ್ತಿ ಸುಳ್ಳುಗಾರನಾದರೂ ದೇವರು ಸತ್ಯವಂತನಾಗಿಯೇ ಇರುತ್ತಾನೆ. ಪವಿತ್ರ ಗ್ರಂಥವು ಹೀಗೆಂದು ಹೇಳುತ್ತದೆ: “ನಿನ್ನ ಮಾತುಗಳಲ್ಲಿ ನೀನು ನ್ಯಾಯಸ್ಥನೆಂದು ನಿರೂಪಿತನಾಗಬೇಕು. ನಿನಗೆ ತೀರ್ಪಾಗುವಾಗ ನೀನು ಜಯಗಳಿಸಬೇಕು.” ಕೀರ್ತನೆ. 51:4

[5] ದೇವರು ನ್ಯಾಯವಂತನೆಂಬುದನ್ನು ನಾವು ಮಾಡುವ ತಪ್ಪು ಮತ್ತಷ್ಟು ಸ್ಪಷ್ಟವಾಗಿ ತೋರ್ಪಡಿಸುತ್ತದೆ. ಹೀಗಿರಲು, ದೇವರು ನಮ್ಮನ್ನು ಶಿಕ್ಷಿಸುವಾಗ, ಆತನು ಅನ್ಯಾಯ ಮಾಡುತ್ತಿದ್ದಾನೆಂದು ನಾವು ಹೇಳಲು ಸಾಧ್ಯವೇ? (ಬೇರೆ ಕೆಲವು ಜನರಿಗೆ ಇರಬಹುದಾದ ಆಲೋಚನೆಯನ್ನೇ ನಾನು ಇಲ್ಲಿ ಹೇಳುತ್ತಿದ್ದೇನೆ.)

[6] ಇಲ್ಲ! ದೇವರು ನಮ್ಮನ್ನು ದಂಡಿಸಲಾಗದಿದ್ದರೆ, ದೇವರು ಲೋಕಕ್ಕೆ ತೀರ್ಪುಮಾಡಲಾಗುವುದಿಲ್ಲ.

[7] “ನಾನಾಡುವ ಸುಳ್ಳು ದೇವರ ಸತ್ಯವನ್ನು ತೋರಿಸುವುದಾದರೆ ನನ್ನ ಸುಳ್ಳಿನಿಂದ ದೇವರಿಗೆ ನಿಜವಾಗಿಯೂ ಮಹಿಮೆಯಾಗುತ್ತದೆ. ಹೀಗಿರಲು ನನಗೆ ‘ಪಾಪಿ’ ಎಂಬ ತೀರ್ಪಾಗುವುದೇಕೆ?” ಎಂದು ಒಬ್ಬನು ಕೇಳಬಹುದು.

[8] “ಒಳ್ಳೆಯದಾಗುವಂತೆ ನಾವು ಕೇಡುಮಾಡೋಣ” ಎಂದು ಹೇಳುವುದಕ್ಕೂ ಅದಕ್ಕೂ ಯಾವ ವ್ಯತ್ಯಾಸವಿಲ್ಲ. ಅನೇಕ ಜನರು ನಮ್ಮನ್ನು ಟೀಕಿಸುತ್ತಾರೆ ಮತ್ತು ನಾವು ಅಂಥ ಸಂಗತಿಗಳನ್ನು ಬೋಧಿಸುತ್ತೇವೆ ಎಂದು ಹೇಳುತ್ತಾರೆ. ಆ ಜನರು ತಪ್ಪಿತಸ್ಥರಾಗಿದ್ದಾರೆ. ಅವರಿಗೆ ದಂಡನೆಯಾಗಲೇಬೇಕು.

[9] ಹೀಗಿರಲು, ಯೆಹೂದ್ಯರಾದ ನಾವು ಬೇರೆಯವರಿಗಿಂತ ಉತ್ತಮರಾಗಿದ್ದೇವೋ? ಇಲ್ಲ! ಯೆಹೂದ್ಯರಿಗೂ ಯೆಹೂದ್ಯರಲ್ಲದವರಿಗೂ ಯಾವ ವ್ಯತ್ಯಾಸವಿಲ್ಲವೆಂದು ಆಗಲೇ ನಿರೂಪಿಸಿದ್ದೇನೆ. ಅವರೆಲ್ಲರೂ ಪಾಪಮಾಡಿ ಅಪರಾಧಿಗಳಾಗಿದ್ದಾರೆ.

[10] ಪವಿತ್ರ ಗ್ರಂಥವು ಹೀಗೆ ಹೇಳುತ್ತದೆ: “ಪಾಪವಿಲ್ಲದ ಒಬ್ಬನೂ ಇಲ್ಲ. ಇಲ್ಲವೇ ಇಲ್ಲ!

[11] ಅರ್ಥಮಾಡಿಕೊಳ್ಳುವ ಒಬ್ಬನೂ ಇಲ್ಲ. ದೇವರೊಂದಿಗಿರಲು ನಿಜವಾಗಿ ಬಯಸುವ ಒಬ್ಬನೂ ಇಲ್ಲ.

[12] ಎಲ್ಲಾ ಜನರು ದಾರಿ ತಪ್ಪಿದ್ದಾರೆ. ಎಲ್ಲಾ ಜನರು ಅಯೋಗ್ಯರಾಗಿದ್ದಾರೆ. ಒಳ್ಳೆಯದನ್ನು ಮಾಡುವ ಒಬ್ಬನೂ ಇಲ್ಲ. ಇಲ್ಲವೇ ಇಲ್ಲ!” ಕೀರ್ತನೆ. 14:1-3

[13] “ಜನರ ಬಾಯಿಗಳು ತೆರೆದ ಸಮಾಧಿಗಳಂತಿವೆ. ಅವರು ಸುಳ್ಳು ಹೇಳಲು ತಮ್ಮ ನಾಲಿಗೆಗಳನ್ನು ಬಳಸುತ್ತಾರೆ.” ಕೀರ್ತನೆ. 5:9 “ಅವರು ಹೇಳುವ ಸಂಗತಿಗಳು ವಿಷಪೂರಿತವಾದ ಹಾವುಗಳಂತಿವೆ.” ಕೀರ್ತನೆ. 140:3

[14] “ಅವರ ಬಾಯಿಗಳಲ್ಲಿ ಶಾಪವೂ ಕಠೋರತೆಯೂ ತುಂಬಿವೆ.” ಕೀರ್ತನೆ. 10:7

[15] “ಹಿಂಸಿಸಲು ಮತ್ತು ಕೊಲ್ಲಲು ಜನರು ಯಾವಾಗಲೂ ಸಿದ್ಧರಾಗಿದ್ದಾರೆ.

[16] ಅವರು ಹೋದಲ್ಲೆಲ್ಲಾ ನಾಶನವನ್ನೂ ಸಂಕಟವನ್ನೂ ಬರಮಾಡುತ್ತಾರೆ.

[17] ಜನರು ಶಾಂತಿಯ ಮಾರ್ಗವನ್ನು ತಿಳಿದಿಲ್ಲ.” ಯೆಶಾಯ 59:7-8

[18] “ಅವರಿಗೆ ದೇವರಲ್ಲಿ ಭಯವಾಗಲಿ ಗೌರವವಾಗಲಿ ಇಲ್ಲ.” ಕೀರ್ತನೆ. 36:1

[19] ಧರ್ಮಶಾಸ್ತ್ರದ ಅಧೀನದಲ್ಲಿರುವ ಜನರ ವಿಷಯವಾಗಿಯೇ ಧರ್ಮಶಾಸ್ತ್ರವು ಈ ಸಂಗತಿಯನ್ನು ಹೇಳುತ್ತಿದೆ. ಆದ್ದರಿಂದ ಯೆಹೂದ್ಯರು ನೆವ ಹೇಳಲು ಸಾದ್ಯವಿಲ್ಲ. ಅಲ್ಲದೆ ಇಡೀ ಲೋಕವೇ ದೇವರ ನ್ಯಾಯತೀರ್ಪಿಗೆ ಒಳಗಾಗಿದೆ.

[20] ಏಕೆಂದರೆ ಧರ್ಮಶಾಸ್ತ್ರವನ್ನು ಅನುಸರಿಸುವುದರ ಮೂಲಕ ನೀತಿವಂತರಾಗಲು ಯಾರಿಗೂ ಸಾಧ್ಯವಿಲ್ಲ. ಧರ್ಮಶಾಸ್ತ್ರವು ನಮ್ಮ ಪಾಪವನ್ನು ಮಾತ್ರ ತೋರ್ಪಡಿಸುತ್ತದೆ.

[21] ಆದರೆ ಈಗ ದೇವರು ಧರ್ಮಶಾಸ್ತ್ರದ ನೆರವಿಲ್ಲದೆಯೇ ಜನರನ್ನು ನೀತಿವಂತರನ್ನಾಗಿ ಮಾಡುವ ಮಾರ್ಗವನ್ನು ತೋರಿಸಿದ್ದಾನೆ. ಧರ್ಮಶಾಸ್ತ್ರ ಮತ್ತು ಪ್ರವಾದಿಗಳು ಈ ಹೊಸ ಮಾರ್ಗದ ಬಗ್ಗೆ ನಮಗೆ ಹೇಳಿದ್ದಾರೆ.

[22] ನಂಬಿಕೆಯ ಮೂಲಕವಾಗಿ ಅಂದರೆ ಯೇಸು ಕ್ರಿಸ್ತನಲ್ಲಿ ನಂಬಿಕೆ ಇಡುವ ಎಲ್ಲಾ ಜನರನ್ನು ದೇವರು ನೀತಿವಂತರನ್ನಾಗಿ ಮಾಡುತ್ತಾನೆ. ಆತನಿಗೆ ಎಲ್ಲಾ ಜನರು ಒಂದೇ.

[23] ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದವರಾಗಿದ್ದಾರೆ.

[24] ಅವರು ನೀತಿವಂತರೆಂದು ನಿರ್ಣಯ ಹೊಂದುವುದು ದೇವರ ಉಚಿತಾರ್ಥವರವಾದ ಕೃಪೆಯಿಂದಲೇ. ದೇವರು ಯೇಸು ಕ್ರಿಸ್ತನ ಮೂಲಕವಾಗಿ ಜನರನ್ನು ಪಾಪದಿಂದ ಬಿಡುಗಡೆ ಮಾಡಿ, ನೀತಿವಂತರನ್ನಾಗಿ ಮಾಡುತ್ತಾನೆ.

[25] ದೇವರು ನಂಬಿಕೆಯ ಮೂಲಕ ಜನರ ಪಾಪಗಳನ್ನು ಕ್ಷಮಿಸುವ ಮಾರ್ಗವನ್ನು ಮಾಡಿದ್ದಾನೆ. ಆ ಮಾರ್ಗವೇ ಯೇಸು. ದೇವರು ಯೇಸುವಿನ ರಕ್ತದ ಮೂಲಕ ಪಾಪವನ್ನು ಕ್ಷಮಿಸುತ್ತಾನೆ. ದೇವರು ಮಾಡುವಂಥದ್ದು ಯಾವಾಗಲೂ ಸರಿಯಾಗಿರುತ್ತದೆ ಮತ್ತು ನ್ಯಾಯಬದ್ಧವಾಗಿರುತ್ತದೆ ಎಂಬುದನ್ನು ಇದು ತೋರಿಸುತ್ತದೆ. ದೇವರು ಹಿಂದಿನ ಕಾಲದಲ್ಲಿ ತಾಳ್ಮೆಯಿಂದಿದ್ದು ಜನರನ್ನು ಅವರ ಪಾಪಗಳಿಗಾಗಿ ದಂಡಿಸದೆ ಹೋದಾಗಲೂ ದೇವರು ನೀತಿವಂತನಾಗಿದ್ದನು.

[26] ಹೀಗೆ ದೇವರು ತಾನೇ ನೀತಿವಂತನೆಂಬುದನ್ನು ಮತ್ತು ಯೇಸುವಿನಲ್ಲಿ ನಂಬಿಕೆಯಿಡುವ ಯಾವನನ್ನೇ ಆಗಲಿ ನೀತಿವಂತನನ್ನಾಗಿ ಮಾಡುತ್ತೇನೆಂಬದನ್ನು ನಿರೂಪಿಸಿದ್ದಾನೆ.

[27] ಹೀಗಿರಲು, ನಮ್ಮ ಬಗ್ಗೆ ಹೊಗಳಿಕೊಳ್ಳಲು ನಮಗೆ ಏನಾದರೂ ಕಾರಣಗಳಿವೆಯೋ? ಇಲ್ಲ! ಏಕೆ? ಎಲ್ಲಾ ಹೊಗಳಿಕೆಯನ್ನು ನಿಲ್ಲಿಸುವಂಥದ್ದು ನಂಬಿಕೆಯ ಮಾರ್ಗವೇ ಹೊರತು ಧರ್ಮಶಾಸ್ತ್ರವನ್ನು ಅನುಸರಿಸುವ ಮಾರ್ಗವಲ್ಲ.

[28] ಏಕೆಂದರೆ ಒಬ್ಬನು ನೀತಿವಂತನಾಗುವುದು ನಂಬಿಕೆಯ ಮೂಲಕವೇ ಹೊರತು ಧರ್ಮಶಾಸ್ತ್ರವನ್ನು ಅನುಸರಿಸಲು ಅವನು ಮಾಡಿದ ಕಾರ್ಯಗಳಿಂದಲ್ಲ. ನಾವು ನಂಬುವುದೂ ಇದನ್ನೇ.

[29] ದೇವರು ಕೇವಲ ಯೆಹೂದ್ಯರ ದೇವರಲ್ಲ. ಆತನು ಯೆಹೂದ್ಯರಲ್ಲದವರಿಗೂ ಸಹ ದೇವರಾಗಿದ್ದಾನೆ.

[30] ದೇವರು ಒಬ್ಬನೇ. ಆತನು ಯೆಹೂದ್ಯರನ್ನೂ ಯೆಹೂದ್ಯರಲ್ಲದವರನ್ನೂ ಅವರ ನಂಬಿಕೆಯ ಮೂಲಕ ನೀತಿವಂತರನ್ನಾಗಿ ಮಾಡುತ್ತಾನೆ.

[31] ಹೀಗಿರಲು, ನಂಬಿಕೆಯ ಮಾರ್ಗವನ್ನು ಅನುಸರಿಸುವುದರ ಮೂಲಕ ನಾವು ಧರ್ಮಶಾಸ್ತ್ರವನ್ನು ಅಲ್ಲಗಳೆಯುತ್ತೇವೋ? ಇಲ್ಲ! ನಾವು ಧರ್ಮಶಾಸ್ತ್ರವನ್ನು ಸಮರ್ಥಿಸುತ್ತೇವೆ.

ರೋಮ್‌ನಗರದವರಿಗೆ ಬರೆದ ಪತ್ರ — Chapters