Skip to content
Opens in a new window
Listen to this chapter • 6:49

[1] ಕ್ರಿಸ್ತನಲ್ಲಿ ನಮ್ಮ ಸಹೋದರಿಯಾದ ಪೊಯಿಬೆಯನ್ನು ನಾನು ನಿಮಗೆ ಶಿಫಾರಸು ಮಾಡಲಿಚ್ಛಿಸುತ್ತೇನೆ. ಈಕೆಯು ಕೆಂಕ್ರೆಯ ಪಟ್ಟಣದ ಸಭೆಯಲ್ಲಿ ವಿಶೇಷ ಸಹಾಯಕಳಾಗಿದ್ದಾಳೆ.

[2] ನೀವು ಆಕೆಯನ್ನು ಪ್ರಭುವಿನ ಹೆಸರಿನಲ್ಲಿ ಸ್ವೀಕರಿಸಿಕೊಳ್ಳಬೇಕೆಂದು ನಾನು ನಿಮ್ಮನ್ನು ಕೇಳಿಕೊಳ್ಳುತ್ತೇನೆ. ದೇವಜನರಿಗೆ ತಕ್ಕಂತೆ ಈಕೆಯನ್ನು ಸ್ವೀಕರಿಸಿಕೊಳ್ಳಿರಿ. ಆಕೆಗೆ ಬೇಕಾದ ಸಹಾಯಗಳನ್ನೆಲ್ಲಾ ಮಾಡಿರಿ. ಆಕೆಯು ನನಗೆ ಬಹಳವಾಗಿ ಸಹಾಯ ಮಾಡಿದ್ದಾಳೆ. ಅಲ್ಲದೆ ಇತರ ಅನೇಕ ಜನರಿಗೂ ಆಕೆ ಸಹಾಯ ಮಾಡಿದ್ದಾಳೆ.

[3] ಪ್ರಿಸ್ಕಿಲ್ಲಳಿಗೂ ಅಕ್ವಿಲನಿಗೂ ನನ್ನ ವಂದನೆ ತಿಳಿಸಿರಿ. ಅವರು ಕ್ರಿಸ್ತ ಯೇಸುವಿನಲ್ಲಿ ನನ್ನೊಂದಿಗೆ ಸೇವೆ ಮಾಡುತ್ತಿದ್ದಾರೆ.

[4] ಅವರು ನನ್ನ ಪ್ರಾಣವನ್ನು ಉಳಿಸುವುದಕ್ಕಾಗಿ ತಮ್ಮ ಪ್ರಾಣಗಳನ್ನೇ ಅಪಾಯಕ್ಕೆ ಈಡುಮಾಡಿದರು. ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಯೆಹೂದ್ಯರಲ್ಲದ ಸಭೆಗಳವರೆಲ್ಲರೂ ಅವರಿಗೆ ಕೃತಜ್ಞರಾಗಿದ್ದಾರೆ.

[5] ಅಲ್ಲದೆ ಅವರ ಮನೆಯಲ್ಲಿ ಸೇರಿಬರುವ ಸಭೆಯವರಿಗೂ ನನ್ನ ವಂದನೆಗಳನ್ನು ತಿಳಿಸಿರಿ. ನನ್ನ ಪ್ರಿಯ ಸ್ನೇಹಿತನಾದ ಎಪೈನೆತನಿಗೆ ನನ್ನ ವಂದನೆ ತಿಳಿಸಿರಿ. ಏಷ್ಯಾದಲ್ಲಿ ಕ್ರಿಸ್ತನನ್ನು ಹಿಂಬಾಲಿಸಿದವರಲ್ಲಿ ಅವನೇ ಮೊಟ್ಟಮೊದಲನೆಯವನಾಗಿದ್ದಾನೆ.

[6] ಮರಿಯಳಿಗೆ ನನ್ನ ವಂದನೆ ತಿಳಿಸಿರಿ. ಆಕೆ ನಿಮಗೋಸ್ಕರ ಬಹು ಕಷ್ಟಪಟ್ಟು ಕೆಲಸ ಮಾಡಿದಳು.

[7] ಆಂದ್ರೋನಿಕನಿಗೆ ಮತ್ತು ಯೂನ್ಯನಿಗೆ ನನ್ನ ವಂದನೆ ತಿಳಿಸಿರಿ. ಅವರು ನನ್ನ ಸಂಬಂಧಿಕರಾಗಿದ್ದಾರೆ. ಅಲ್ಲದೆ ಅವರು ನನ್ನೊಂದಿಗೆ ಸೆರೆಮನೆಯಲ್ಲಿದ್ದರು. ದೇವರ ಅತ್ಯಂತ ಮುಖ್ಯಸೇವಕರುಗಳಲ್ಲಿ ಅವರೂ ಸೇರಿದ್ದಾರೆ. ಅವರು ನನಗಿಂತ ಮೊದಲೇ ಕ್ರಿಸ್ತನ ವಿಶ್ವಾಸಿಗಳಾಗಿದ್ದಾರೆ.

[8] ಪ್ರಭುವಿನಲ್ಲಿ ನನ್ನ ಪ್ರಿಯ ಸ್ನೇಹಿತನಾದ ಅಂಪ್ಲಿಯಾತನಿಗೆ ನನ್ನ ವಂದನೆ ತಿಳಿಸಿರಿ.

[9] ಉರ್ಬಾನನಿಗೆ ನನ್ನ ವಂದನೆ ತಿಳಿಸಿರಿ. ಅವನು ಕ್ರಿಸ್ತನಿಗೋಸ್ಕರ ನನ್ನ ಸಹೋದ್ಯೋಗಿಯಾಗಿದ್ದಾನೆ. ನನ್ನ ಪ್ರಿಯ ಗೆಳೆಯನಾದ ಸ್ತಾಖುನಿಗೆ ನನ್ನ ವಂದನೆ ತಿಳಿಸಿರಿ.

[10] ಅಪೆಲ್ಲನಿಗೆ ನನ್ನ ವಂದನೆ ತಿಳಿಸಿರಿ. ಅವನು ಕ್ರಿಸ್ತನನ್ನು ನಿಜವಾಗಿಯೂ ಪ್ರೀತಿಸುತ್ತಾನೆಂಬುದನ್ನು ಪರೀಕ್ಷಿಸಿ ನಿರೂಪಿಸಲಾಗಿದೆ. ಅರಿಸ್ತೊಬೂಲನ ಕುಟುಂಬದಲ್ಲಿ ಇರುವವರಿಗೆಲ್ಲ ನನ್ನ ವಂದನೆ ತಿಳಿಸಿರಿ.

[11] ನನ್ನ ಸಂಬಂಧಿಕರಾದ ಹೆರೋಡಿಯೊನನಿಗೂ ಪ್ರಭುವಿಗೆ ಸೇರಿದವನಾದ ನಾರ್ಕಿಸ್ಸನ ಕುಟುಂಬದಲ್ಲಿರುವವರೆಲ್ಲರಿಗೂ ನನ್ನ ವಂದನೆ ತಿಳಿಸಿರಿ.

[12] ತ್ರುಫೈನಳಿಗೂ ತ್ರುಫೋಸಳಿಗೂ ನನ್ನ ವಂದನೆ ತಿಳಿಸಿರಿ. ಅವರು ಪ್ರಭುವಿಗಾಗಿ ಬಹು ಕಷ್ಟಪಟ್ಟು ಸೇವೆ ಮಾಡುತ್ತಿದ್ದಾರೆ. ನನ್ನ ಪ್ರಿಯ ಸಹೋದರಿಯಾದ ಪೆರ್ಸೀಸಳಿಗೂ ನನ್ನ ವಂದನೆ ತಿಳಿಸಿರಿ. ಆಕೆಯು ಸಹ ಪ್ರಭುವಿಗೋಸ್ಕರ ಬಹು ಕಷ್ಟಪಟ್ಟು ಸೇವೆ ಮಾಡಿದಳು.

[13] ರೂಫನಿಗೆ ನನ್ನ ವಂದನೆ ತಿಳಿಸಿರಿ. ಅವನು ಪ್ರಭುವಿನಲ್ಲಿ ವಿಶೇಷವಾದ ವ್ಯಕ್ತಿ. ಅವನ ತಾಯಿಗೂ ನನ್ನ ವಂದನೆ ತಿಳಿಸಿರಿ. ಆಕೆ ನನ್ನನ್ನು ಸ್ವಂತ ಮಗನಂತೆ ನೋಡಿಕೊಂಡಳು.

[14] ಅಸುಂಕ್ರಿತನಿಗೂ ಪ್ಲೆಗೋನನಿಗೂ ಹೆರ್ಮೇಯನಿಗೂ ಪತ್ರೋಬನಿಗೂ ಹೆರ್ಮಾನನಿಗೂ ಮತ್ತು ಅವರೊಂದಿಗಿರುವ ಎಲ್ಲಾ ಕ್ರೈಸ್ತ ಸಹೋದರರಿಗೂ

[15] ಫಿಲೊಲೋಗನಿಗೂ ಯೂಲ್ಯಳಿಗೂ ನೇರ್ಯನಿಗೂ ಅವನ ಸಹೋದರಿಗೂ ಮತ್ತು ಒಲುಂಪನಿಗೂ ಮತ್ತು ಅವರೊಂದಿಗಿರುವ ಎಲ್ಲಾ ಭಕ್ತರಿಗೆ ನನ್ನ ವಂದನೆ ತಿಳಿಸಿರಿ.

[16] ನೀವು ಪರಸ್ಪರ ಸಂಧಿಸುವಾಗ ಪವಿತ್ರವಾದ ಮುದ್ದನ್ನಿಟ್ಟು ವಂದಿಸಿರಿ. ಕ್ರಿಸ್ತನ ಸಭೆಗಳವರೆಲ್ಲಾ ನಿಮಗೆ ವಂದನೆ ತಿಳಿಸುತ್ತಾರೆ.

[17] ಸಹೋದರ ಸಹೋದರಿಯರೇ, ನಿಮ್ಮಲ್ಲಿ ಒಡಕುಗಳನ್ನು ಉಂಟುಮಾಡುವ ಜನರ ವಿಷಯದಲ್ಲಿ ನೀವು ಬಹು ಜಾಗ್ರತೆಯಿಂದ ಇರಬೇಕೆಂದು ನಾನು ನಿಮ್ಮನ್ನು ಕೇಳಿಕೊಳ್ಳುತ್ತೇನೆ. ಇತರರ ನಂಬಿಕೆಯನ್ನು ಕೆಡಿಸುವಂಥವರ ಬಗ್ಗೆ ಬಹು ಎಚ್ಚರದಿಂದಿರಿ. ನೀವು ಕಲಿತಿರುವ ಉಪದೇಶಕ್ಕೆ ಅವರು ವಿರುದ್ಧವಾಗಿದ್ದಾರೆ. ನೀವು ಅವರಿಂದ ದೂರವಿರಿ.

[18] ಅಂಥ ಜನರು ನಮ್ಮ ಪ್ರಭುವಾದ ಕ್ರಿಸ್ತನ ಸೇವೆ ಮಾಡುತ್ತಿಲ್ಲ. ಅವರು ಕೇವಲ ತಮ್ಮ ಸುಖಕ್ಕಾಗಿ ಈ ಕಾರ್ಯಗಳನ್ನು ಮಾಡುತ್ತಿದ್ದಾರೆ. ಕೆಟ್ಟದರ ಬಗ್ಗೆ ತಿಳಿದಿಲ್ಲದ ಜನರ ಮನಸ್ಸುಗಳನ್ನು ಮೋಸಗೊಳಿಸುವುದಕ್ಕಾಗಿ ಅವರು ನಯನಾಜುಕಿನ ನುಡಿಗಳನ್ನಾಡುತ್ತಾರೆ ಮತ್ತು ಮುಖಸ್ತುತಿಯ ಮಾತುಗಳನ್ನಾಡುತ್ತಾರೆ.

[19] ನಿಮ್ಮ ವಿಧೇಯತ್ವವು ಎಲ್ಲಾ ವಿಶ್ವಾಸಿಗಳಿಗೆ ತಿಳಿದಿದೆ. ಆದ್ದರಿಂದ ನಿಮ್ಮ ವಿಷಯದಲ್ಲಿ ನಾನು ಬಹು ಸಂತೋಷಪಡುತ್ತೇನೆ. ಆದರೆ ಒಳ್ಳೆಯ ಸಂಗತಿಗಳ ಬಗ್ಗೆ ನೀವು ವಿವೇಕಿಗಳಾಗಿರಬೇಕೆಂದು ಮತ್ತು ಕೆಟ್ಟಸಂಗತಿಗಳ ಬಗ್ಗೆ ಏನೂ ತಿಳಿದಿಲ್ಲದವರಾಗಿರಬೇಕೆಂದು ನಾನು ಅಪೇಕ್ಷಿಸುತ್ತೇನೆ.

[20] ಶಾಂತಿಯನ್ನು ಕೊಡುವ ದೇವರು ಬೇಗನೆ ಸೈತಾನನನ್ನು ಸೋಲಿಸಿ, ಅವನ ಮೇಲೆ ನಿಮಗೆ ಅಧಿಕಾರವನ್ನು ಕೊಡುವನು. ನಮ್ಮ ಪ್ರಭುವಾದ ಯೇಸುವಿನ ಕೃಪೆಯು ನಿಮ್ಮೊಂದಿಗಿರಲಿ.

[21] ನನ್ನ ಸಹೋದ್ಯೋಗಿಯಾದ ತಿಮೊಥೆಯನು ಮತ್ತು ನನ್ನ ಸಂಬಂಧಿಕರಾದ ಲೂಕ್ಯ, ಯಾಸೋನ ಮತ್ತು ಸೋಸಿಪತ್ರ ನಿಮಗೆ ವಂದನೆ ತಿಳಿಸಿದ್ದಾರೆ.

[22] ಪೌಲನು ಹೇಳುತ್ತಿರುವ ಸಂಗತಿಗಳನ್ನು ಬರೆಯುತ್ತಿರುವ ತೆರ್ತ್ಯೆನೆಂಬ ನಾನು ನಿಮ್ಮನ್ನು ಪ್ರಭುವಿನಲ್ಲಿ ವಂದಿಸುತ್ತೇನೆ.

[23] ಗಾಯನು ನನಗೆ ಅತಿಥಿಸತ್ಕಾರ ಮಾಡುತ್ತಿದ್ದಾನೆ. ಅಲ್ಲದೆ ಸಭಾಕೂಟಕ್ಕಾಗಿ ಅವನ ಮನೆಯನ್ನೇ ಉಪಯೋಗಿಸಲಾಗುತ್ತಿದೆ. ಅವನು ಸಹ ನಿಮಗೆ ವಂದನೆ ತಿಳಿಸುತ್ತಾನೆ. ಈ ಪಟ್ಟಣದ ಖಜಾಂಚಿಯಾದ ಎರಸ್ತನು ಮತ್ತು ಸಹೋದರನಾದ ಕ್ವರ್ತನು ನಿಮಗೆ ವಂದನೆಯನ್ನು ತಿಳಿಸುತ್ತಾರೆ.

[24]

[25] ದೇವರಿಗೆ ಮಹಿಮೆಯಾಗಲಿ. ನಿಮ್ಮನ್ನು ನಂಬಿಕೆಯಲ್ಲಿ ಬಲಗೊಳಿಸಬಲ್ಲಾತನು ದೇವರೊಬ್ಬನೇ. ನಾನು ಉಪದೇಶಿಸುವ ಸುವಾರ್ತೆಯ ಮೂಲಕ ದೇವರು ನಿಮ್ಮನ್ನು ಬಲಗೊಳಿಸಬಲ್ಲನು. ನಾನು ಯೇಸು ಕ್ರಿಸ್ತನ ಬಗ್ಗೆ ಜನರಿಗೆ ತಿಳಿಸುತ್ತಿರುವುದೇ ಆ ಸುವಾರ್ತೆ. ದೇವರು ತಿಳಿಯಪಡಿಸಿದ ಆ ಸುವಾರ್ತೆಯು ರಹಸ್ಯವಾದ ಸತ್ಯವಾಗಿತ್ತು ಮತ್ತು ಆರಂಭದಿಂದಲೂ ಮರೆಯಾಗಿತ್ತು.

[26] ಆದರೆ ರಹಸ್ಯವಾದ ಆ ಸತ್ಯವನ್ನು ಈಗ ನಮಗೆ ತೋರಿಸಲಾಗಿದೆ. ಮತ್ತು ಆ ಸತ್ಯವನ್ನು ಎಲ್ಲಾ ಜನರಿಗೆ ತಿಳಿಸಲಾಗಿದೆ. ದೇವರು ಆಜ್ಞಾಪಿಸಿರುವುದು ಇದನ್ನೇ. ಎಲ್ಲಾ ಜನರು ನಂಬಿಕೊಂಡು ದೇವರಿಗೆ ವಿಧೇಯರಾಗಲೆಂದು ರಹಸ್ಯವಾದ ಈ ಸತ್ಯವನ್ನು ಎಲ್ಲಾ ಜನರಿಗೆ ತಿಳಿಸಲಾಗಿದೆ. ದೇವರು ಸದಾಕಾಲ ಜೀವಿಸುತ್ತಾನೆ.

[27] ಒಬ್ಬನೇ ಜ್ಞಾನಿಯಾದ ದೇವರಿಗೆ ಯೇಸು ಕ್ರಿಸ್ತನ ಮೂಲಕ ಎಂದೆಂದಿಗೂ ಮಹಿಮೆ ಉಂಟಾಗಲಿ. ಆಮೆನ್.

ರೋಮ್‌ನಗರದವರಿಗೆ ಬರೆದ ಪತ್ರ — Chapters