[1] ಸಹೋದರ ಸಹೋದರಿಯರೇ, ಇಸ್ರೇಲರೆಲ್ಲರೂ ರಕ್ಷಣೆ ಹೊಂದಬೇಕೆಂಬುದೇ ನನ್ನ ಮಹಾಭಿಲಾಷೆ. ನಾನು ದೇವರಲ್ಲಿ ಅದಕ್ಕಾಗಿ ಪ್ರಾರ್ಥಿಸುತ್ತಿದ್ದೇನೆ.
[2] ನಾನು ಯೆಹೂದ್ಯರ ಬಗ್ಗೆ ಹೀಗೆ ಹೇಳಬಲ್ಲೆನು: ಅವರು ದೇವರನ್ನು ಹಿಂಬಾಲಿಸಲು ನಿಜವಾಗಿಯೂ ಪ್ರಯತ್ನಿಸುತ್ತಾರೆ. ಆದರೆ ಅವರಿಗೆ ಸರಿಯಾದ ಮಾರ್ಗ ಗೊತ್ತಿಲ್ಲ.
[3] ನೀತಿವಂತರನ್ನಾಗಿ ಮಾಡುವ ದೇವರ ಮಾರ್ಗವನ್ನು ಅವರು ತಿಳಿದಿಲ್ಲದ ಕಾರಣ ತಮ್ಮ ಸ್ವಂತ ಮಾರ್ಗದ ಮೂಲಕವಾಗಿ ತಮ್ಮನ್ನು ನೀತಿವಂತರನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸಿದರು.
[4] ತನ್ನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬನು ನೀತಿನಿರ್ಣಯ ಹೊಂದಬೇಕೆಂದು ಕ್ರಿಸ್ತನು ಧರ್ಮಶಾಸ್ತ್ರವನ್ನು ಕೊನೆಗೊಳಿಸಿದನು.
[5] ಧರ್ಮಶಾಸ್ತ್ರದಿಂದಾಗುವ ನೀತಿಯ ಬಗ್ಗೆ, “ಧರ್ಮಶಾಸ್ತ್ರವನ್ನು ಅನುಸರಿಸುವುದರ ಮೂಲಕ ಜೀವವನ್ನು ಪಡೆದುಕೊಳ್ಳಲು ಬಯಸುವವನು, ಧರ್ಮಶಾಸ್ತವು ಹೇಳುವ ಕಾರ್ಯಗಳನ್ನು ಮಾಡಲೇಬೇಕು” ಎಂದು ಮೋಶೆ ಹೇಳಿದ್ದಾನೆ.
[6] ಆದರೆ ನಂಬಿಕೆಯ ಮೂಲಕ ನೀತಿನಿರ್ಣಯ ಹೊಂದುವುದರ ಬಗ್ಗೆ, “(ಕ್ರಿಸ್ತನನ್ನು ಕೆಳಕ್ಕೆ ಕರೆದುಕೊಂಡು ಬರಲು) ‘ಯಾರು ಪರಲೋಕಕ್ಕೆ ಏರಿಹೋಗಬಲ್ಲರು?’” ಎಂದಾಗಲಿ (ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿಕೊಂಡು ಬರಲು.)
[7] “‘ಯಾರು ಪಾತಾಳಕ್ಕೆ ಇಳಿದುಹೋಗಬಲ್ಲರು’ ಎಂದಾಗಲಿ ಹೇಳಬೇಡಿ” ಎಂದು ಪವಿತ್ರ ಗ್ರಂಥವು ಹೇಳುತ್ತದೆ.
[8] ಇದಲ್ಲದೆ, “ದೇವರ ವಾಕ್ಯವು ನಿಮ್ಮ ಸಮೀಪದಲ್ಲೇ ಇದೆ. ಅದು ನಿಮ್ಮ ಬಾಯಲ್ಲಿಯೂ ನಿಮ್ಮ ಹೃದಯದಲ್ಲಿಯೂ ಇದೆ” ಎಂದು ಪವಿತ್ರ ಗ್ರಂಥವು ಹೇಳುತ್ತದೆ. ನಾವು ಜನರಿಗೆ ನಂಬಿಕೆಯ ಕುರಿತಾಗಿ ಸಾರುವ ವಾಕ್ಯವೇ ಅದು.
[9] “ಯೇಸುವೇ ಪ್ರಭು”ವೆಂದು ನಿನ್ನ ಬಾಯಿಯ ಮೂಲಕ ಹೇಳುವುದಾದರೆ ಮತ್ತು ಯೇಸುವನ್ನು ಸತ್ತವರೊಳಗಿಂದ ಜೀವಂತನಾಗಿ ಎಬ್ಬಿಸಿದವನು ದೇವರೇ ಎಂದು ನಿನ್ನ ಹೃದಯದಲ್ಲಿ ನಂಬುವುದಾದರೆ, ನೀನು ರಕ್ಷಣೆ ಹೊಂದುವೆ.
[10] ಹೌದು, ನಾವು ನಮ್ಮ ಹೃದಯಗಳಲ್ಲಿ ನಂಬುವುದರ ಮೂಲಕ ನೀತಿವಂತರಾಗುತ್ತೇವೆ. “ನಂಬುತ್ತೇವೆ” ಎಂದು ಬಾಯಾರೆ ಹೇಳುವುದರ ಮೂಲಕ ರಕ್ಷಣೆ ಹೊಂದುತ್ತೇವೆ.
[11] ಪವಿತ್ರ ಗ್ರಂಥವು ಹೀಗೆ ಹೇಳುತ್ತದೆ: “ಆತನಲ್ಲಿ ನಂಬಿಕೆಯಿಡುವ ಯಾವ ವ್ಯಕ್ತಿಯೂ ನಾಚಿಕೆಗೆ ಗುರಿಯಾಗುವುದೇ ಇಲ್ಲ.”
[12] ಏಕೆಂದರೆ ಯೆಹೂದ್ಯರಿಗೂ ಯೆಹೂದ್ಯರಲ್ಲದವರಿಗೂ ಯಾವ ವ್ಯತ್ಯಾಸವೂ ಇಲ್ಲ. ಎಲ್ಲರಿಗೂ ಒಬ್ಬನೇ ಪ್ರಭು. ತನ್ನಲ್ಲಿ ನಂಬಿಕೆಯಿಡುವ ಜನರೆಲ್ಲರಿಗೆ ಪ್ರಭುವು ಅನೇಕ ಆಶೀರ್ವಾದಗಳನ್ನು ಕೊಡುತ್ತಾನೆ.
[13] ಹೌದು, ಪವಿತ್ರ ಗ್ರಂಥವು ಹೇಳುವಂತೆ, “ಪ್ರಭುವಿನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬನು ರಕ್ಷಣೆ ಹೊಂದುವನು.”
[14] ಪ್ರಭುವಿನಲ್ಲಿ ನಂಬಿಕೆಯಿಲ್ಲದೆ ಆತನಲ್ಲಿ ಭರವಸೆವಿಡುವುದಾದರೂ ಹೇಗೆ? ಪ್ರಭುವಿನ ವಿಷಯವನ್ನು ಕೇಳದೆ ಆತನಲ್ಲಿ ನಂಬಿಕೆ ಇಡುವುದಾದರೂ ಹೇಗೆ? ಮತ್ತೊಬ್ಬನು ತಿಳಿಸದ ಹೊರತು ಪ್ರಭುವಿನ ಬಗ್ಗೆ ಕೇಳುವುದಾದರೂ ಹೇಗೆ?
[15] ಬೋಧಕರನ್ನು ಕಳುಹಿಸದ ಹೊರತು ಜನರಿಗೆ ತಿಳಿಸುವುದಾದರೂ ಹೇಗೆ? ಆದ್ದರಿಂದಲೇ, “ಸುವಾರ್ತಿಕರ ಪಾದಗಳು ಸುಂದರವಾಗಿವೆ” ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ.
[16] ಆದರೆ ಯೆಹೂದ್ಯರೆಲ್ಲರೂ ಆ ಸುವಾರ್ತೆಯನ್ನು ಸ್ವೀಕರಿಸಿಕೊಳ್ಳಲಿಲ್ಲ. “ಪ್ರಭುವೇ, ನಾವು ಅವರಿಗೆ ಹೇಳಿದ ಸಂಗತಿಗಳನ್ನು ಯಾರು ನಂಬಿದರು?” ಎಂದು ಯೆಶಾಯ ಹೇಳಿದ್ದಾನೆ.
[17] ಹೀಗಿರಲು, ಸುವಾರ್ತೆಯನ್ನು ಕೇಳುವುದರ ಮೂಲಕ ನಂಬಿಕೆ ಬರುತ್ತದೆ. ಕ್ರಿಸ್ತನ ಬಗ್ಗೆ ಹೇಳುವುದರ ಮೂಲಕ ಸುವಾರ್ತೆ ಪ್ರಕಟವಾಗುತ್ತದೆ.
[18] ಆದರೆ, “ಜನರು ಸುವಾರ್ತೆಯನ್ನು ಕೇಳಲಿಲ್ಲವೇ?” ಎಂದು ನಾನು ಪ್ರಶ್ನಿಸುತ್ತೇನೆ. ಹೌದು, ಅವರು ಕೇಳಿದರು ಪವಿತ್ರ ಗ್ರಂಥ ಹೇಳುವಂತೆ: “ಅವರ ಸ್ವರಗಳು ಲೋಕದಲ್ಲೆಲ್ಲಾ ಪ್ರಸಾರಗೊಂಡವು. ಅವರ ಮಾತುಗಳು ಪ್ರಪಂಚದ ಎಲ್ಲಾ ಕಡೆಗಳಿಗೂ ಹೋದವು.” ಕೀರ್ತನೆ. 19:4
[19] “ಇಸ್ರೇಲಿನ ಜನರು ಅರ್ಥಮಾಡಿಕೊಳ್ಳಲಿಲ್ಲವೇ?” ಎಂದು ನಾನು ಮತ್ತೆ ಕೇಳುತ್ತೇನೆ. ಹೌದು, ಅವರು ಅರ್ಥಮಾಡಿಕೊಂಡರು. ಮೊದಲನೆಯದಾಗಿ, ದೇವರು ಮೋಶೆಯ ಮೂಲಕ ಹೀಗೆ ತಿಳಿಸಿದ್ದಾನೆ: “ಜನಾಂಗವೆನಿಸಿಕೊಳ್ಳದವರ ಮೂಲಕ ಹೀಗೆ ನಾನು ನಿಮ್ಮಲ್ಲಿ ಅಸೂಯೆ ಹುಟ್ಟಿಸುವೆನು. ಬುದ್ದಿಹೀನರೆನಿಸಿಕೊಂಡ ಜನಾಂಗದ ಮೂಲಕ ನಾನು ನಿಮ್ಮನ್ನು ಸಿಟ್ಟಿಗೆಬ್ಬಿಸುವೆನು.” ಧರ್ಮೋಪದೇಶ. 32:21
[20] ಬಳಿಕ ಯೆಶಾಯನು ದೇವರ ಈ ನುಡಿಯನ್ನು ಧೈರ್ಯವಾಗಿ ಹೇಳಿದ್ದಾನೆ: “ನನ್ನನ್ನು ಹುಡುಕದೆ ಇದ್ದ ಜನರು ನನ್ನನ್ನು ಕಂಡುಕೊಂಡರು. ನನಗಾಗಿ ಕೇಳಿಕೊಳ್ಳದ ಜನರಿಗೆ ನನ್ನನ್ನು ತೋರ್ಪಡಿಸಿಕೊಂಡೆನು.” ಯೆಶಾಯ 65:1
[21] ಆದರೆ ಇಸ್ರೇಲಿನ ಜನರ ಬಗ್ಗೆ ದೇವರು: “ನಾನು ಆ ಜನರಿಗಾಗಿ ದಿನವೆಲ್ಲಾ ಕಾದುಕೊಂಡಿದ್ದೆನು, ಆದರೆ ಅವರು ವಿಧೇಯರಾಗಲಿಲ್ಲ; ನನ್ನನ್ನು ಹಿಂಬಾಲಿಸಲಿಲ್ಲ” ಎನ್ನುತ್ತಾನೆ.ಯೆಶಾಯ 65:2.