Skip to content
Opens in a new window
Listen to this chapter • 6:17

[1] ಐದು ದಿನಗಳ ನಂತರ, ಪ್ರಧಾನಯಾಜಕ ಅನನೀಯನು ಯೆಹೂದ್ಯರ ಹಿರೀನಾಯಕರಲ್ಲಿ ಕೆಲವರನ್ನು ಮತ್ತು ತೆರ್ತುಲ್ಲ ಎಂಬ ವಕೀಲನನ್ನು ಕರೆದುಕೊಂಡು ರಾಜ್ಯಪಾಲನ ಎದುರಿನಲ್ಲಿ ಪೌಲನ ಮೇಲೆ ದೋಷಾರೋಪಣೆ ಮಾಡಲು ಸೆಜರೇಯ ಪಟ್ಟಣಕ್ಕೆ ಹೋದನು.

[2] ಪೌಲನನ್ನು ಸಭೆಗೆ ಕರೆಸಲಾಯಿತು. ಆಗ ತೆರ್ತುಲ್ಲನು ತನ್ನ ಆಪಾದನೆಗಳನ್ನು ಹೊರಿಸಲಾರಂಭಿಸಿದನು: “ಮಹಾರಾಜಶ್ರೀಗಳಾದ ಫೇಲಿಕ್ಸನೇ, ನಿನ್ನ ದೆಸೆಯಿಂದಾಗಿ ನಮ್ಮ ಜನರು ಶಾಂತಿಯಿಂದ ಜೀವಿಸುತ್ತಿದ್ದಾರೆ. ನಿನ್ನ ವಿವೇಕದ ಸಹಾಯದಿಂದ ನಮ್ಮ ದೇಶದ ಅನೇಕ ದೋಷಗಳನ್ನು ಸರಿಪಡಿಸಿ ಸುಧಾರಣೆಗಳನ್ನು ಮಾಡಲಾಗಿದೆ.

[3] ನಾವು ಇವುಗಳನ್ನು ಬಹು ಕೃತಜ್ಞತೆಯಿಂದ ಎಲ್ಲಾ ಸ್ಥಳಗಳಲ್ಲಿ ಯಾವಾಗಲೂ ಒಪ್ಪಿಕೊಳ್ಳುತ್ತೇವೆ.

[4] ಆದರೆ ನಾನು ನಿನ್ನ ಸಮಯವನ್ನು ಇನ್ನೂ ಹೆಚ್ಚಿಗೆ ತೆಗೆದುಕೊಳ್ಳಬಯಸದೆ, ಕೆಲವೇ ಮಾತುಗಳಲ್ಲಿ ಹೇಳುವೆ. ದಯವಿಟ್ಟು ತಾಳ್ಮೆಯಿಂದಿರು.

[5] ಈ ಮನುಷ್ಯನು (ಪೌಲನು) ಗಲಭೆ ಮಾಡುತ್ತಿದ್ದಾನೆ. ಯೆಹೂದ್ಯರು ಜಗತ್ತಿನಲ್ಲಿ ಎಲ್ಲೇ ಇರಲಿ, ಅಲ್ಲೆಲ್ಲಾ ಇವನು ಗಲಭೆಯನ್ನು ಎಬ್ಬಿಸುತ್ತಾನೆ. ಇವನು ‘ನಜರೇನ’ ಪಂಗಡದ ನಾಯಕನಾಗಿದ್ದಾನೆ.

[6] ಅಲ್ಲದೆ, ಇವನು ದೇವಾಲಯವನ್ನು ಅಶುದ್ಧಗೊಳಿಸಲು ಪ್ರಯತ್ನಿಸಿದನು, ಆದರೆ ನಾವು ಇವನನ್ನು ತಡೆದೆವು.

[7]

[8] ಸ್ವತಃ ನೀನೇ ಇವನಿಗೆ ಕೆಲವು ಪ್ರಶ್ನೆಗಳನ್ನು ಕೇಳು. ಆಗ ಈ ಸಂಗತಿಗಳೆಲ್ಲಾ ಸತ್ಯವಾಗಿವೆಯೋ ಇಲ್ಲವೋ ಎಂದು ನಿರ್ಣಯಿಸಲು ನಿನಗೆ ಸಾಧ್ಯವಾಗುವುದು.”

[9] ಉಳಿದ ಯೆಹೂದ್ಯರು, “ಈ ಸಂಗತಿಗಳು ನಿಜವಾಗಿಯೂ ಸತ್ಯವಾದುವುಗಳು!” ಎಂದರು.

[10] ರಾಜ್ಯಪಾಲನು ಪೌಲನಿಗೆ ಸನ್ನೆಮಾಡಿ, ಮಾತಾಡಲು ಸೂಚಿಸಿದನು. ಆಗ ಪೌಲನು ಹೀಗೆಂದನು: “ರಾಜ್ಯಪಾಲನಾದ ಫೇಲಿಕ್ಸನೇ, ನೀನು ಅನೇಕ ವರ್ಷಗಳಿಂದ ಈ ದೇಶಕ್ಕೆ ನ್ಯಾಯಾಧೀಶನಾಗಿರುವುದು ನನಗೆ ಗೊತ್ತಿದೆ. ಆದ್ದರಿಂದ ಸಂತೋಷದಿಂದ ನಿನ್ನ ಮುಂದೆ ನನ್ನನ್ನು ಪ್ರತಿಪಾದಿಸಿಕೊಳ್ಳುವೆನು.

[11] ನಾನು ಆರಾಧನೆಗೋಸ್ಕರ ಜೆರುಸಲೇಮಿಗೆ ಹೋದದ್ದು ಕೇವಲ ಹನ್ನೆರಡು ದಿನಗಳ ಹಿಂದೆಯಷ್ಟೆ. ಅದು ಸತ್ಯವೆಂದು ಸ್ವತಃ ನೀನೇ ತಿಳಿದುಕೊಳ್ಳಬಲ್ಲೆ.

[12] ನಾನು ದೇವಾಲಯದಲ್ಲಾಗಲಿ ಸಭಾಮಂದಿರಗಳಲ್ಲಾಗಲಿ ಪಟ್ಟಣದಲ್ಲಾಗಲಿ ಯಾರೊಂದಿಗಾದರೂ ವಾದ ಮಾಡುತ್ತಿರುವುದನ್ನು, ಇಲ್ಲವೆ ಜನರ ಗುಂಪು ಕೂಡಿಸುವುದನ್ನು ಇವರು ನೋಡಿಲ್ಲ.

[13] ಈಗ ನನಗೆ ವಿರೋಧವಾಗಿ ಹೇಳುತ್ತಿರುವ ಸಂಗತಿಗಳನ್ನು ಈ ಯೆಹೂದ್ಯರು ನಿರೂಪಿಸಲಾರರು.

[14] “ಆದರೆ ನಾನು ನಿನಗೆ ಹೇಳುವುದೇನೆಂದರೆ, ಯೇಸುವಿನ ಮಾರ್ಗದ ಹಿಂಬಾಲಕನಾದ ನಾನು ನಮ್ಮ ಪಿತೃಗಳ ದೇವರನ್ನು ಆರಾಧಿಸುತ್ತೇನೆ. ಯೇಸುವಿನ ಮಾರ್ಗವು ಸರಿಯಲ್ಲವೆಂದು ಯೆಹೂದ್ಯರು ಹೇಳುತ್ತಾರೆ. ಆದರೆ ಮೋಶೆಯ ಧರ್ಮಶಾಸ್ತ್ರದಲ್ಲಿಯೂ ಪ್ರವಾದಿಗಳ ಪುಸ್ತಕಗಳಲ್ಲಿಯೂ ಬರೆದಿರುವ ಪ್ರತಿಯೊಂದನ್ನು ನಾನು ನಂಬುತ್ತೇನೆ.

[15] ಈ ಯೆಹೂದ್ಯರಿಗೆ ದೇವರಲ್ಲಿ ಯಾವ ನಿರೀಕ್ಷೆಯಿದೆಯೋ ಅದೇ ನಿರೀಕ್ಷೆ ನನಗೂ ಇದೆ. ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುತ್ತದೆ ಎಂಬುದೇ ಆ ನಿರೀಕ್ಷೆ.

[16] ಈ ಕಾರಣದಿಂದ ನಾನು ಯಾವುದನ್ನು ಸರಿಯಾದದ್ದು ಎಂದು ನಂಬಿದ್ದೇನೋ ಅದನ್ನು ದೇವರ ಮುಂದೆಯೂ ಮನುಷ್ಯರ ಮುಂದೆಯೂ ಮಾಡಲು ಯಾವಾಗಲು ಪ್ರಯತ್ನಿಸುತ್ತಿದ್ದೇನೆ.

[17] “ನಾನು ಅನೇಕ ವರ್ಷಗಳಿಂದ ಜೆರುಸಲೇಮಿನಲ್ಲಿ ಇರಲಿಲ್ಲ. ಬಳಿಕ ನಾನು ನನ್ನ ಜನರಿಗಾಗಿ ಹಣವನ್ನು ತರುವುದಕ್ಕಾಗಿಯೂ ಉಡುಗೊರೆಗಳನ್ನು ಕೊಡುವುದಕ್ಕಾಗಿಯೂ ಜೆರುಸಲೇಮಿಗೆ ಮರಳಿ ಹೋದೆನು.

[18] ನಾನು ಈ ಕಾರ್ಯದಲ್ಲಿ ನಿರತನಾಗಿದ್ದಾಗ ಕೆಲವು ಮಂದಿ ಯೆಹೂದ್ಯರು ನನ್ನನ್ನು ದೇವಾಲಯದಲ್ಲಿ ಕಂಡರು. ನಾನು ಶುದ್ಧಾಚಾರದ ವಿಧಿಯನ್ನು ಮುಗಿಸಿದ್ದೆನು. ನಾನು ಯಾವ ಗಲಭೆಯನ್ನೂ ಮಾಡಿರಲಿಲ್ಲ. ನನ್ನ ಸುತ್ತಲೂ ಯಾವ ಜನರೂ ಇರಲಿಲ್ಲ.

[19] ಆದರೆ ಏಷ್ಯಾದ ಕೆಲವು ಮಂದಿ ಯೆಹೂದ್ಯರು ಅಲ್ಲಿದ್ದರು. ಅವರು ಈಗ ನಿನ್ನೆದುರಿನಲ್ಲಿ ಇರಬೇಕಿತ್ತು. ನಾನು ನಿಜವಾಗಿ ಏನಾದರೂ ತಪ್ಪು ಮಾಡಿದ್ದರೆ ಏಷ್ಯಾದ ಆ ಯೆಹೂದ್ಯರೇ ನನ್ನ ಮೇಲೆ ದೋಷಾರೋಪಣೆ ಮಾಡಬೇಕಿತ್ತು.

[20] ನಾನು ಜೆರುಸಲೇಮಿನಲ್ಲಿ ಯೆಹೂದ್ಯ ನ್ಯಾಯಸಭೆಯ ಮುಂದೆ ನಿಂತಿದ್ದಾಗ, ನನ್ನಲ್ಲಿ ಅವರಿಗೆ ಯಾವ ಅಪರಾಧಗಳು ಕಂಡುಬಂದವೆಂದು ಇಲ್ಲಿರುವ ಈ ಯೆಹೂದ್ಯರನ್ನೇ ಕೇಳು.

[21] ನಾನು ಅವರ ಮುಂದೆ ನಿಂತಿದ್ದಾಗ, ‘ಸತ್ತವರು ಪುನರುತ್ಥಾನ ಹೊಂದುತ್ತಾರೆಂದು ನಾನು ನಂಬುವುದರಿಂದ ಇಲ್ಲಿ ನ್ಯಾಯವಿಚಾರಣೆಗೆ ಗುರಿಯಾಗಿದ್ದೇನೆ!’ ಎಂಬ ಒಂದೇ ಒಂದು ಸಂಗತಿಯನ್ನು ನಾನು ಕೂಗಿ ಹೇಳಿದೆ.”

[22] ಫೇಲಿಕ್ಸನು ಯೇಸುವಿನ ಮಾರ್ಗದ ಬಗ್ಗೆ ಮೊದಲೇ ಸಾಕಷ್ಟು ಅರ್ಥಮಾಡಿಕೊಂಡಿದ್ದನು. ಅವನು ವಿಚಾರಣೆಯನ್ನು ನಿಲ್ಲಿಸಿ, “ಸೇನಾಧಿಪತಿಯಾದ ಲೂಸಿಯನು ಇಲ್ಲಿಗೆ ಬಂದಾಗ, ಈ ಸಂಗತಿಗಳ ಬಗ್ಗೆ ನಾನು ತೀರ್ಪನ್ನು ಕೊಡುತ್ತೇನೆ” ಎಂದು ಹೇಳಿದನು.

[23] ಪೌಲನನ್ನು ಕಾವಲಿನಲ್ಲಿರಿಸಬೇಕೆಂದು ಫೇಲಿಕ್ಸನು ಸೇನಾಧಿಕಾರಿಗೆ ತಿಳಿಸಿದನು. ಆದರೆ ಪೌಲನಿಗೆ ಸ್ವಲ್ಪ ಸ್ವತಂತ್ರವನ್ನು ಕೊಡುವಂತೆಯೂ ಪೌಲನ ಮಿತ್ರರು ಅವನಿಗೆ ಅಗತ್ಯವಾದ ವಸ್ತುಗಳನ್ನು ತಂದುಕೊಡುವುದಕ್ಕೆ ಅವಕಾಶ ಕೊಡಬೇಕೆಂತಲೂ ಅವನು ಅಧಿಕಾರಿಗೆ ಹೇಳಿದನು.

[24] ಕೆಲವು ದಿನಗಳಾದ ಮೇಲೆ ಫೇಲಿಕ್ಸನು ತನ್ನ ಹೆಂಡತಿಯಾದ ದ್ರೂಸಿಲ್ಲಳೊಂದಿಗೆ ಬಂದನು. ಆಕೆ ಯೆಹೂದ್ಯಳು. ಫೇಲಿಕ್ಸನು ಪೌಲನನ್ನು ಕರೆಯಿಸಿದನು. ಕ್ರಿಸ್ತನಾದ ಯೇಸುವಿನಲ್ಲಿ ನಂಬಿಕೆ ಇಡುವುದರ ಬಗ್ಗೆ ಪೌಲನು ಹೇಳಿದ್ದನ್ನು ಅವನು ಆಲಿಸಿದನು.

[25] ಆದರೆ ನೀತಿಯಬಾಳ್ವೆ, ಇಂದ್ರಿಯನಿಗ್ರಹ ಮತ್ತು ಮುಂದೆ ಬರಲಿರುವ ನ್ಯಾಯತೀರ್ಪುಗಳ ಬಗ್ಗೆ ಪೌಲನು ಮಾತಾಡಿದಾಗ ಅವನು ಭಯಗೊಂಡು, “ಈಗ ನೀನು ಹೋಗು! ನನಗೆ ಹೆಚ್ಚು ಸಮಯವಿರುವಾಗ ನಿನ್ನನ್ನು ಕರೆಯಿಸುತ್ತೇನೆ” ಎಂದು ಹೇಳಿದನು.

[26] ಆದರೆ ಪೌಲನು ಲಂಚ ಕೊಡಬಹುದೆಂದು ಅವನು ನಿರೀಕ್ಷಿಸಿಕೊಂಡಿದ್ದರಿಂದ ಅವನು ಅನೇಕ ಸಲ ಪೌಲನನ್ನು ಕರೆಯಿಸಿ ಅವನೊಂದಿಗೆ ಮಾತಾಡಿದನು.

[27] ಆದರೆ ಎರಡು ವರ್ಷಗಳ ನಂತರ ಫೇಲಿಕ್ಸನ ಬದಲಾಗಿ ಪೊರ್ಸಿಯ ಫೆಸ್ತನು ರಾಜ್ಯಪಾಲನಾದನು. ಆದರೆ ಫೇಲಿಕ್ಸನು ಯೆಹೂದ್ಯರನ್ನು ಮೆಚ್ಚಿಸುವುದಕ್ಕಾಗಿ ಪೌಲನನ್ನು ಸೆರೆಮನೆಯಲ್ಲಿಯೇ ಬಿಟ್ಟುಹೋದನು.

ಅಪೊಸ್ತಲರ ಕಾರ್ಯಗಳು — Chapters