Skip to content
Opens in a new window
Listen to this chapter • 7:37

[1] ಪೌಲನು, “ನನ್ನ ಸಹೋದರರೇ, ನನ್ನ ತಂದೆಗಳೇ, ನನ್ನ ಪ್ರತಿವಾದವನ್ನು ಕೇಳಿರಿ!” ಎಂದನು.

[2] ಪೌಲನು ಯೆಹೂದ್ಯರ ಭಾಷೆಯಲ್ಲಿ ಮಾತಾಡುತ್ತಿರುವುದನ್ನು ಕೇಳಿ ಯೆಹೂದ್ಯರು ಮತ್ತಷ್ಟು ನಿಶಬ್ಧರಾದರು.

[3] ಆಗ ಪೌಲನು ಹೀಗೆಂದನು: “ನಾನು ಯೆಹೂದ್ಯನು. ನಾನು ಹುಟ್ಟಿದ್ದು ಸಿಲಿಸಿಯ ದೇಶದ ತಾರ್ಸದಲ್ಲಿ. ಆದರೆ ನಾನು ಬೆಳೆದದ್ದು ಈ ಪಟ್ಟಣದಲ್ಲಿ. ನಾನು ಗಮಲಿಯೇಲನ ವಿದ್ಯಾರ್ಥಿಯಾಗಿದ್ದೆನು. ನಮ್ಮ ಪಿತೃಗಳ ಧರ್ಮಶಾಸ್ತ್ರದ ಬಗ್ಗೆ ಪ್ರತಿಯೊಂದನ್ನೂ ಅವನು ನನಗೆ ಬಹು ಸೂಕ್ಷ್ಮವಾಗಿ ಬೋಧಿಸಿದ್ದಾನೆ. ಇಂದು ಇಲ್ಲಿರುವ ನಿಮ್ಮೆಲ್ಲರಂತೆಯೇ ನಾನೂ ದೇವರ ಸೇವೆಯ ಬಗ್ಗೆ ಬಹಳ ಅಭಿಮಾನ ಉಳ್ಳವನಾಗಿದ್ದೆ.

[4] ಯೇಸುವಿನ ಮಾರ್ಗವನ್ನು ಯಾರು ಹಿಂಬಾಲಿಸುತ್ತಾರೋ ಅವರನ್ನು ನಾನು ಹಿಂಸಿಸಿದೆನು. ನನ್ನ ದೆಸೆಯಿಂದ ಅವರಲ್ಲಿ ಕೆಲವರು ಕೊಲ್ಲಲ್ಪಟ್ಟರು. ನಾನು ಪುರುಷರನ್ನು ಮತ್ತು ಸ್ತ್ರೀಯರನ್ನು ಬಂಧಿಸಿ ಸೆರೆಮನೆಗೆ ಹಾಕಿದೆನು.

[5] “ಇದು ಸತ್ಯವೆಂಬುದಕ್ಕೆ ಪ್ರಧಾನಯಾಜಕರು ಮತ್ತು ಯೆಹೂದ್ಯರ ಹಿರೀನಾಯಕರ ಸಭೆಯವರೆಲ್ಲರು ಸಾಕ್ಷಿಗಳಾಗಿದ್ದಾರೆ. ಒಂದು ಸಲ, ಈ ನಾಯಕರು ನನಗೆ ಕೆಲವು ಪತ್ರಗಳನ್ನು ಕೊಟ್ಟರು. ದಮಸ್ಕ ಪಟ್ಟಣದಲ್ಲಿನ ಯೆಹೂದ್ಯ ಸಹೋದರರಿಗೆ ಆ ಪತ್ರಗಳನ್ನು ಬರೆಯಲಾಗಿತ್ತು. (ಯೇಸುವಿನ) ಶಿಷ್ಯರನ್ನು ಬಂಧಿಸಿ ದಂಡಿಸುವುದಕ್ಕಾಗಿ ಅವರನ್ನು ಜೆರುಸಲೇಮಿಗೆ ಎಳೆದುಕೊಂಡು ಬರಲು ನಾನು ಅಲ್ಲಿಗೆ ಹೋಗುತ್ತಿದ್ದೆ.

[6] “ನಾನು ಪ್ರಯಾಣ ಮಾಡುತ್ತಾ ದಮಸ್ಕದ ಸಮೀಪಕ್ಕೆ ಬಂದಾಗ ಒಂದು ಘಟನೆ ಸಂಭವಿಸಿತು. ಆಗ ಸುಮಾರು ಮಧ್ಯಾಹ್ನವಾಗಿತ್ತು. ಇದ್ದಕ್ಕಿದ್ದಂತೆ ಪ್ರಕಾಶಮಾನವಾದ ಬೆಳಕೊಂದು ನನ್ನ ಸುತ್ತಲೂ ಪ್ರಕಾಶಿಸಿತು.

[7] ನಾನು ನೆಲಕ್ಕೆ ಬಿದ್ದೆನು. ಆಗ ವಾಣಿಯೊಂದು ನನಗೆ, ‘ಸೌಲನೇ, ಸೌಲನೇ, ನೀನು ನನ್ನನ್ನು ಯಾಕೆ ಹಿಂಸೆ ಪಡಿಸುತ್ತಿರುವೆ?’ ಎಂದು ಹೇಳಿತು.

[8] “ನಾನು, ‘ಪ್ರಭುವೇ, ನೀನು ಯಾರು?’ ಎಂದು ಕೇಳಿದೆನು. ಆ ವಾಣಿಯು, ‘ನಾನು ನಜರೇತಿನ ಯೇಸು. ನೀನು ಹಿಂಸಿಸುತ್ತಿರುವುದು ನನ್ನನ್ನೇ’ ಎಂದು ಹೇಳಿತು.

[9] ನನ್ನೊಂದಿಗಿದ್ದ ಜನರು ನನ್ನ ಸಂಗಡ ಮಾತಾಡುತ್ತಿದ್ದ ವ್ಯಕ್ತಿಯ ಸ್ವರವನ್ನು ಕೇಳಲಿಲ್ಲ. ಆದರೆ ಅವರು ಬೆಳಕನ್ನು ನೋಡಿದರು.

[10] “ನಾನು, ‘ಪ್ರಭುವೇ, ನಾನೇನು ಮಾಡಲಿ’ ಎಂದೆನು. ಪ್ರಭುವು ‘ಎದ್ದು ದಮಸ್ಕದೊಳಗೆ ಹೋಗು. ನಾನು ನಿನಗೆ ನೇಮಿಸಿರುವ ಕೆಲಸಗಳನ್ನೆಲ್ಲಾ ಅಲ್ಲಿ ನಿನಗೆ ತಿಳಿಸಲಾಗುವುದು’ ಎಂದು ಉತ್ತರಕೊಟ್ಟನು.

[11] ಪ್ರಕಾಶಮಾನವಾದ ಆ ಬೆಳಕು ನನ್ನನ್ನು ಕುರುಡನನ್ನಾಗಿ ಮಾಡಿದ್ದರಿಂದ ನನಗೆ ಏನೂ ಕಾಣಲಿಲ್ಲ. ಆದ್ದರಿಂದ ಆ ಜನರು ನನ್ನನ್ನು ದಮಸ್ಕಕ್ಕೆ ಕೈಹಿಡಿದು ನಡೆಸಿಕೊಂಡು ಹೋದರು.

[12] “ದಮಸ್ಕದಲ್ಲಿ ಅನನೀಯ ಎಂಬುವನು ನನ್ನ ಬಳಿಗೆ ಬಂದನು. ಅನನೀಯನು ಧಾರ್ಮಿಕ ವ್ಯಕ್ತಿಯಾಗಿದ್ದನು. ಅವನು ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯನಾಗಿದ್ದನು. ಅಲ್ಲಿ ವಾಸವಾಗಿದ್ದ ಯೆಹೂದ್ಯರೆಲ್ಲರು ಅವನನ್ನು ಗೌರವಿಸುತ್ತಿದ್ದರು.

[13] ಅನನೀಯನು ನನ್ನ ಬಳಿಗೆ ಬಂದು, ‘ಸಹೋದರನಾದ ಸೌಲನೇ, ನಿನಗೆ ಮತ್ತೆ ದೃಷ್ಟಿ ಬರಲಿ!’ ಎಂದನು. ಆ ಕೂಡಲೇ ನನಗೆ ದೃಷ್ಟಿ ಬಂದಿತು ಮತ್ತು ನಾನು ಅವನನ್ನು ನೋಡಿದೆನು.

[14] “ಅನನೀಯನು ನನಗೆ, ‘ನಮ್ಮ ಪಿತೃಗಳ ದೇವರು ಬಹುಕಾಲದ ಹಿಂದೆಯೇ ನಿನ್ನನ್ನು ಆರಿಸಿಕೊಂಡನು. ನೀನು ದೇವರ ಯೋಜನೆಯನ್ನು ತಿಳಿದುಕೊಳ್ಳಬೇಕೆಂತಲೂ ನೀತಿಸ್ವರೂಪನನ್ನು (ಯೇಸು) ನೋಡಬೇಕೆಂತಲೂ ಆತನ ವಾಕ್ಯಗಳನ್ನು ಕೇಳಬೇಕೆಂತಲೂ ದೇವರು ನಿನ್ನನ್ನು ಆರಿಸಿಕೊಂಡನು.

[15] ನೀನು ಕಂಡ ಮತ್ತು ಕೇಳಿದ ಸಂಗತಿಗಳ ಬಗ್ಗೆ ಎಲ್ಲಾ ಜನರಿಗೆ ಸಾಕ್ಷಿಯಾಗಿರುವೆ.

[16] ಈಗ ನೀನು ತಡಮಾಡುವುದೇಕೆ? ಎದ್ದೇಳು! ಆತನಲ್ಲಿ ನಂಬಿಕೆಯಿಟ್ಟು ದೀಕ್ಷಾಸ್ನಾನ ಮಾಡಿಸಿಕೊಂಡು ನಿನ್ನ ಪಾಪಗಳನ್ನು ತೊಳೆದುಕೊ’ ಎಂದು ಹೇಳಿದನು.

[17] “ತರುವಾಯ ನಾನು ಜೆರುಸಲೇಮಿಗೆ ಹಿಂತಿರುಗಿದೆನು. ನಾನು ದೇವಾಲಯದ ಅಂಗಳದಲ್ಲಿ ಪ್ರಾರ್ಥಿಸುತ್ತಿದ್ದಾಗ ನನಗೊಂದು ದರ್ಶನವಾಯಿತು.

[18] ನಾನು ಯೇಸುವನ್ನು ಕಂಡೆನು. ಆತನು ನನಗೆ, ‘ಬೇಗನೆ ಜೆರುಸಲೇಮಿನಿಂದ ಹೊರಡು! ನನ್ನ ಕುರಿತಾದ ಸಾಕ್ಷಿಯನ್ನು ಈ ಜನರು ಸ್ವೀಕರಿಸುವುದಿಲ್ಲ’ ಎಂದು ಹೇಳಿದನು.

[19] “ನಾನು, ‘ಪ್ರಭುವೇ, ವಿಶ್ವಾಸಿಗಳನ್ನು ಸೆರೆಮನೆಗಳಿಗೆ ಹಾಕಿಸಿ ಹೊಡೆಸುತ್ತಿದ್ದವನು ನಾನೇ ಎಂಬುದು ಜನರಿಗೆ ಗೊತ್ತಿದೆ. ನಿನ್ನಲ್ಲಿ ನಂಬಿಕೆಯಿಟ್ಟಿರುವ ಜನರನ್ನು ಪತ್ತೆಹಚ್ಚಿ ಬಂಧಿಸುವುದಕ್ಕಾಗಿ ನಾನು ಎಲ್ಲಾ ಸಭಾಮಂದಿರಗಳಿಗೆ ಹೋಗಿದ್ದೇನೆ.

[20] ನಿನ್ನ ಸಾಕ್ಷಿಯಾದ ಸ್ತೆಫನನು ಕೊಲ್ಲಲ್ಪಟ್ಟಾಗ ನಾನು ಅಲ್ಲಿದ್ದದ್ದು ಸಹ ಜನರಿಗೆ ಗೊತ್ತಿದೆ. ಸ್ತೆಫನನನ್ನು ಕೊಲ್ಲಲು ಅವರು ನಿರ್ಧರಿಸಿದಾಗ ನಾನೂ ಅದಕ್ಕೆ ಒಪ್ಪಿಗೆ ಸೂಚಿಸಿ ಅಲ್ಲೇ ನಿಂತುಕೊಂಡಿದ್ದೆನು. ಅಲ್ಲದೆ ಅವನನ್ನು ಕೊಲ್ಲುತ್ತಿದ್ದ ಜನರ ಮೇಲಂಗಿಗಳನ್ನು ಸಹ ನಾನು ಹಿಡಿದುಕೊಂಡಿದ್ದೆ!’ ಎಂದೆನು.

[21] “ಆದರೆ ಯೇಸು ನನಗೆ, ‘ಈಗ ಹೊರಡು, ಬಹುದೂರದಲ್ಲಿರುವ ಯೆಹೂದ್ಯರಲ್ಲದ ಜನರ ಬಳಿಗೆ ನಾನು ನಿನ್ನನ್ನು ಕಳುಹಿಸುವೆನು’ ಎಂದು ಹೇಳಿದನು.”

[22] ಪೌಲನು ಈ ಕೊನೆಯ ಸಂಗತಿಯನ್ನು ಅಂದರೆ ಯೆಹೂದ್ಯರಲ್ಲದವರ ಬಳಿಗೆ ಹೋಗುವುದರ ಬಗ್ಗೆ ಹೇಳಿದಾಗ ಅವರು ಅವನ ಮಾತಿಗೆ ಕಿವಿಗೊಡುವುದನ್ನು ನಿಲ್ಲಿಸಿ, “ಅವನನ್ನು ಕೊಲ್ಲಿರಿ! ಅವನನ್ನು ಪ್ರಪಂಚದಿಂದ ತೊಲಗಿಸಿರಿ! ಇಂಥ ಮನುಷ್ಯನಿಗೆ ಜೀವಿಸಲು ಅವಕಾಶವನ್ನೇ ಕೊಡಕೂಡದು!” ಎಂದು ಕೂಗಿದರು.

[23] ಅವರು ಬೊಬ್ಬೆಹಾಕಿದರು; ತಮ್ಮ ಮೇಲಂಗಿಗಳನ್ನು ಬಿಚ್ಚಿ ಬೀಸಿದರು; ಧೂಳನ್ನು ಮೇಲಕ್ಕೆ ತೂರಿದರು.

[24] ಆಗ ಸೇನಾಧಿಪತಿಯು ಪೌಲನನ್ನು ದಂಡಿನ ಪಾಳೆಯದೊಳಗೆ ಕರೆದುಕೊಂಡು ಹೋಗಿ ಹೊಡೆಯಲು ಸೈನಿಕರಿಗೆ ಹೇಳಿದನು. ಜನರು ಪೌಲನ ವಿರೋಧವಾಗಿ ಈ ರೀತಿ ಕೂಗಲು ಕಾರಣವೇನೆಂದು ಪೌಲನಿಂದಲೇ ಹೇಳಿಸಬೇಕೆಂಬುದು ಸೇನಾಧಿಪತಿಯ ಅಪೇಕ್ಷೆಯಾಗಿತ್ತು.

[25] ಸೈನಿಕರು ಹೊಡೆಯುವುದಕ್ಕಾಗಿ ಪೌಲನನ್ನು ಕಟ್ಟುತ್ತಿರಲು ಅಲ್ಲಿದ್ದ ರೋಮ್ ಅಧಿಕಾರಿಗೆ ಪೌಲನು, “ಅಪರಾಧಿಯೆಂದು ತೀರ್ಪಾಗಿಲ್ಲದ ರೋಮ್ ಪ್ರಜೆಯೊಬ್ಬನನ್ನು ಹೊಡೆಯಲು ನಿಮಗೆ ಹಕ್ಕಿದೆಯೋ?” ಎಂದು ಕೇಳಿದನು.

[26] ಆ ಅಧಿಕಾರಿಯು ಇದನ್ನು ಕೇಳಿದ ಕೂಡಲೇ ಸೇನಾಧಿಪತಿಯ ಬಳಿಗೆ ಬಂದು, “ನೀನು ಏನು ಮಾಡುತ್ತಿರುವೆ ಎಂಬುದು ನಿನಗೆ ಗೊತ್ತಿದೆಯೋ? ಈ ಮನುಷ್ಯನು ರೋಮಿನ ಪ್ರಜೆ!” ಎಂದು ಹೇಳಿದನು.

[27] ಸೇನಾಧಿಪತಿಯು ಪೌಲನ ಬಳಿಗೆ ಬಂದು, “ಹೇಳು, ನೀನು ನಿಜವಾಗಿಯೂ ರೋಮಿನ ಪ್ರಜೆಯೋ?” ಎಂದು ಕೇಳಿದನು. ಪೌಲನು, “ಹೌದು” ಎಂದು ಉತ್ತರಕೊಟ್ಟನು.

[28] ಸೇನಾಧಿಪತಿಯು, “ನಾನು ರೋಮಿನ ಪ್ರಜೆಯಾಗಲು ಬಹಳ ಹಣಕೊಟ್ಟಿರುವೆ” ಎಂದು ಹೇಳಿದನು. ಅದಕ್ಕೆ ಪೌಲನು, “ನಾನು ಹುಟ್ಟಿದಂದಿನಿಂದಲೇ ರೋಮಿನ ಪ್ರಜೆ” ಎಂದನು.

[29] ಪೌಲನನ್ನು ಪ್ರಶ್ನಿಸಲು ಸಿದ್ಧರಾಗುತ್ತಿದ್ದ ಜನರು ಆ ಕೂಡಲೇ ಪೌಲನ ಬಳಿಯಿಂದ ಹೊರಟುಹೋದರು. ಪೌಲನನ್ನು ಆಗಲೇ ಕಟ್ಟಿಹಾಕಿದ್ದರಿಂದ ಮತ್ತು ಪೌಲನು ರೋಮಿನ ಪ್ರಜೆಯಾಗಿದ್ದರಿಂದ ಸೇನಾಧಿಪತಿಗೆ ಭಯವಾಯಿತು.

[30] ಮರುದಿನ, ಪೌಲನಿಗೆ ವಿರೋಧವಾಗಿ ಯೆಹೂದ್ಯರು ತಂದ ಆಪಾದನೆ ಏನೆಂದು ತಿಳಿದುಕೊಳ್ಳಲು ಸೇನಾಧಿಪತಿಯು ನಿರ್ಧರಿಸಿದನು. ಆದ್ದರಿಂದ ಅವನು ಮಹಾಯಾಜಕರಿಗೂ ಯೆಹೂದ್ಯರ ನ್ಯಾಯಸಭೆಯವರಿಗೂ ಒಟ್ಟಾಗಿ ಸೇರಿಬರಲು ಆಜ್ಞಾಪಿಸಿದನು. ಸೇನಾಧಿಪತಿಯು ಪೌಲನ ಸರಪಣಿಗಳನ್ನು ತೆಗೆದುಹಾಕಿ ಅವನನ್ನು ಹೊರಗೆ ಕರೆದುಕೊಂಡು ಬಂದು ಸಭೆಯ ಮುಂದೆ ನಿಲ್ಲಿಸಿದನು.

ಅಪೊಸ್ತಲರ ಕಾರ್ಯಗಳು — Chapters