[1] ಯೆಹೂದ್ಯರಲ್ಲದವರು ಸಹ ದೇವರ ವಾಕ್ಯವನ್ನು ಸ್ವೀಕರಿಸಿಕೊಂಡರೆಂಬುದು ಅಪೊಸ್ತಲರಿಗೂ ಜುದೇಯದ ಸಹೋದರರಿಗೂ ತಿಳಿಯಿತು.
[2] ಆದರೆ ಪೇತ್ರನು ಜೆರುಸಲೇಮಿಗೆ ಬಂದಾಗ ಕೆಲವು ಯೆಹೂದ್ಯ ವಿಶ್ವಾಸಿಗಳು ಅವನೊಂದಿಗೆ ವಾದ ಮಾಡಿದರು.
[3] ಅವರು, “ಯೆಹೂದ್ಯರಲ್ಲದವರ ಮತ್ತು ಸುನ್ನತಿ ಮಾಡಿಸಿಕೊಂಡಿಲ್ಲದವರ ಮನೆಗಳಿಗೆ ನೀನು ಹೋದೆ! ನೀನು ಅವರೊಂದಿಗೆ ಊಟವನ್ನು ಸಹ ಮಾಡಿದೆ!” ಎಂದು ಹೇಳಿದರು.
[4] ಆದ್ದರಿಂದ ಪೇತ್ರನು ನಡೆದ ಸಂಗತಿಯನ್ನೆಲ್ಲಾ ಅವರಿಗೆ ವಿವರಿಸಿದನು.
[5] ಪೇತ್ರನು ಅವರಿಗೆ, “ನಾನು ಜೊಪ್ಪ ಪಟ್ಟಣದಲ್ಲಿದ್ದೆನು. ನಾನು ಪ್ರಾರ್ಥಿಸುತ್ತಿದ್ದಾಗ ನನಗೊಂದು ದರ್ಶನವಾಯಿತು. ಆ ದರ್ಶನದಲ್ಲಿ, ಆಕಾಶದಿಂದ ಇಳಿದುಬರುತ್ತಿರುವ ಒಂದು ವಸ್ತುವನ್ನು ಕಂಡೆನು. ಅದು ದೊಡ್ಡ ತಟ್ಟೆಯಂತಿತ್ತು. ಅದರ ನಾಲ್ಕು ಮೂಲೆಗಳಲ್ಲಿ ಹಗ್ಗವನ್ನು ಕಟ್ಟಿ ಭೂಮಿಗೆ ಇಳಿಯಬಿಡಲಾಗಿತ್ತು. ಅದು ಇಳಿದು ಬಂದು ನನ್ನ ಸಮೀಪದಲ್ಲೇ ನಿಂತುಕೊಂಡಿತು.
[6] ನಾನು ಅದರೊಳಗೆ ನೋಡಿದೆನು. ಅದರಲ್ಲಿ ಪಶುಗಳೂ ಕ್ರೂರಪ್ರಾಣಿಗಳೂ ಹರಿದಾಡುವ ಕ್ರಿಮಿಕೀಟಗಳೂ ಹಾರಾಡುವ ಪಕ್ಷಿಗಳೂ ಇದ್ದವು.
[7] ಆಗ, ‘ಪೇತ್ರನೇ, ಎದ್ದೇಳು! ಇವುಗಳಲ್ಲಿ ಯಾವುದನ್ನು ಬೇಕಾದರೂ ಕೊಯ್ದುತಿನ್ನು!’ ಎಂದು ನನಗೆ ಹೇಳುವ ವಾಣಿಯನ್ನು ಕೇಳಿದೆನು.
[8] “ಆದರೆ ನಾನು, ‘ಪ್ರಭುವೇ, ನಾನು ಹಾಗೆ ಮಾಡಲಾರೆ! ಅಪವಿತ್ರವಾದ ಮತ್ತು ಅಶುದ್ಧವಾದ ಏನನ್ನಾಗಲಿ ನಾನೆಂದೂ ತಿಂದಿಲ್ಲ’ ಎಂದು ಹೇಳಿದೆನು.
[9] “ಆದರೆ, ‘ಇವುಗಳನ್ನು ದೇವರು ಶುದ್ಧೀಕರಿಸಿದ್ದಾನೆ. ಇವುಗಳನ್ನು ಅಶದ್ಧವೆಂದು ಹೇಳಬೇಡ!’ ಎಂದು ಆ ವಾಣಿಯು ನನಗೆ ಉತ್ತರಕೊಟ್ಟಿತು.
[10] “ಹೀಗೆ ಮೂರು ಸಲವಾಯಿತು. ಬಳಿಕ ಆ ಇಡೀ ವಸ್ತುವನ್ನು ಆಕಾಶಕ್ಕೆ ಹಿಂತೆಗೆದುಕೊಳ್ಳಲಾಯಿತು.
[11] ಅದೇ ಸಮಯದಲ್ಲಿ ನಾನಿದ್ದ ಮನೆಗೆ ಮೂರು ಮಂದಿ ಬಂದರು. ಈ ಮೂವರನ್ನು ಸೆಜರೇಯ ಪಟ್ಟಣದಿಂದ ಕಳುಹಿಸಲಾಗಿತ್ತು.
[12] ಸಂದೇಹಪಡದೆ ಅವರೊಂದಿಗೆ ಹೋಗಬೇಕೆಂದು ಪವಿತ್ರಾತ್ಮನು ನನಗೆ ಹೇಳಿದನು. ಇಲ್ಲಿರುವ ಈ ಆರು ಮಂದಿ ಸಹೋದರರು ನನ್ನೊಂದಿಗೆ ಬಂದರು. ನಾವು ಕೊರ್ನೇಲಿಯನ ಮನೆಗೆ ಹೋದೆವು.
[13] ತನ್ನ ಮನೆಯಲ್ಲಿ ದೇವದೂತನೊಬ್ಬನು ನಿಂತಿರುವುದನ್ನು ತಾನು ಕಂಡದ್ದರ ಬಗ್ಗೆ ಕೊರ್ನೇಲಿಯನು ನನಗೆ ಹೇಳಿದನು. ಆ ದೇವದೂತನು ಕೊರ್ನೇಲಿಯನಿಗೆ, ‘ಕೆಲವು ಜನರನ್ನು ಜೊಪ್ಪಕ್ಕೆ ಕಳುಹಿಸು. ಸೀಮೋನ್ ಪೇತ್ರನನ್ನು ಆಹ್ವಾನಿಸಿ ನಿಮ್ಮ ಬಳಿಗೆ ಬರಮಾಡಿಕೊ.
[14] ಅವನು ನಿಮ್ಮೊಂದಿಗೆ ಮಾತಾಡುವನು. ಅವನು ಹೇಳುವ ಸಂಗತಿಗಳು ನಿನ್ನನ್ನೂ ನಿನ್ನ ಕುಟಂಬದವರನ್ನೂ ರಕ್ಷಿಸುತ್ತವೆ’ ಎಂದು ಹೇಳಿದನು.
[15] “ನಾನು ನನ್ನ ಉಪದೇಶವನ್ನು ಆರಂಭಿಸಿದ ಮೇಲೆ, ಪ್ರಾರಂಭದಲ್ಲಿ ಪವಿತ್ರಾತ್ಮನು ನಮ್ಮ ಮೇಲೆ ಬಂದಂತೆ ಅವರ ಮೇಲೆಯೂ ಬಂದನು.
[16] ಆಗ ನಾನು ಪ್ರಭುವಿನ ಮಾತುಗಳನ್ನು ಜ್ಞಾಪಿಸಿಕೊಂಡೆನು. ‘ಯೋಹಾನನು ಜನರಿಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸಿದನು, ಆದರೆ ನೀವು ಪವಿತ್ರಾತ್ಮನಲ್ಲಿ ದೀಕ್ಷಾಸ್ನಾನ ಪಡೆಯುವಿರಿ!’ ಎಂದು ಪ್ರಭುವು ಹೇಳಿದ್ದನು.
[17] ಪ್ರಭುವಾದ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟ ನಮಗೆ ಕೊಟ್ಟ ವರವನ್ನೇ ದೇವರು ಈ ಜನರಿಗೆ ಕೊಟ್ಟನು. ಹೀಗಿರಲು ನಾನು ದೇವರ ಕೆಲಸವನ್ನು ನಿಲ್ಲಿಸಲು ಸಾಧ್ಯವಿರಲಿಲ್ಲ” ಎಂದು ಹೇಳಿದನು.
[18] ಯೆಹೂದ್ಯವಿಶ್ವಾಸಿಗಳು ಈ ಸಂಗತಿಗಳನ್ನು ಕೇಳಿದಾಗ ವಾದವನ್ನು ನಿಲ್ಲಿಸಿ, ದೇವರನ್ನು ಸ್ತುತಿಸುತ್ತಾ, “ಹಾಗಾದರೆ ನಮ್ಮಂತೆಯೇ ತಮ್ಮ ಹೃದಯಗಳನ್ನು ಮಾರ್ಪಡಿಸಿಕೊಂಡು ಜೀವವನ್ನು ಹೊಂದಿಕೊಳ್ಳಲು ದೇವರು ಯೆಹೂದ್ಯರಲ್ಲದವರಿಗೂ ಅವಕಾಶ ಕೊಟ್ಟಿದ್ದಾನೆ!” ಎಂದು ಹೇಳಿದರು.
[19] ಸ್ತೆಫನನು ಕೊಲ್ಲಲ್ಪಟ್ಟ ನಂತರ ಉಂಟಾದ ಹಿಂಸೆಯಿಂದಾಗಿ ವಿಶ್ವಾಸಿಗಳು ಚದರಿಹೋದರು. ವಿಶ್ವಾಸಿಗಳಲ್ಲಿ ಕೆಲವರು ಬಹು ದೂರದ ಸ್ಥಳಗಳಾದ ಫೆನಿಷ್ಯ, ಸೈಪ್ರಸ್ ಮತ್ತು ಅಂತಿಯೋಕ್ಯಗಳಿಗೆ ಹೋದರು. ವಿಶ್ವಾಸಿಗಳು ಈ ಸ್ಥಳಗಳಲ್ಲಿ ಸುವಾರ್ತೆಯನ್ನು ತಿಳಿಸಿದರು. ಆದರೆ ಅವರು ಯೆಹೂದ್ಯರಿಗೆ ಮಾತ್ರ ತಿಳಿಸಿದರು.
[20] ಈ ವಿಶ್ವಾಸಿಗಳಲ್ಲಿ ಕೆಲವರು ಸೈಪ್ರಸ್ ಮತ್ತು ಸಿರೇನ್ ಸ್ಥಳಗಳವರಾಗಿದ್ದರು. ಈ ಜನರು ಅಂತಿಯೋಕ್ಯಕ್ಕೆ ಬಂದಾಗ ಅವರು, ಪ್ರಭುವಾದ ಯೇಸುವಿನ ವಿಷಯವಾದ ಸುವಾರ್ತೆಯನ್ನು ಅಲ್ಲಿಯ ಗ್ರೀಕ್ ಜನರಿಗೆ ತಿಳಿಸಿದರು.
[21] ಪ್ರಭುವು ವಿಶ್ವಾಸಿಗಳಿಗೆ ಸಹಾಯ ಮಾಡುತ್ತಿದ್ದನು. ಜನರು ಬಹು ಸಂಖ್ಯೆಯಲ್ಲಿ ಪ್ರಭುವನ್ನು ನಂಬಿಕೊಂಡು ಅನುಸರಿಸತೊಡಗಿದರು.
[22] ಅಂತಿಯೋಕ್ಯದಲ್ಲಿದ್ದ ಈ ಹೊಸ ವಿಶ್ವಾಸಿಗಳ ಬಗ್ಗೆ ಜೆರುಸಲೇಮಿನ ಸಭೆಯವರಿಗೆ ತಿಳಿಯಿತು. ಆದ್ದರಿಂದ ಜೆರುಸಲೇಮಿನ ವಿಶ್ವಾಸಿಗಳು ಬಾರ್ನಬನನ್ನು ಅಂತಿಯೋಕ್ಯಕ್ಕೆ ಕಳುಹಿಸಿದರು.
[23] ಬಾರ್ನಬನು ಒಳ್ಳೆಯ ಮನುಷ್ಯನಾಗಿದ್ದನು. ಅವನು ಪವಿತ್ರಾತ್ಮಭರಿತನಾಗಿದ್ದನು ಮತ್ತು ಪೂರ್ಣನಂಬಿಕೆಯುಳ್ಳವನಾಗಿದ್ದನು. ಬಾರ್ನಬನು ಅಂತಿಯೋಕ್ಯಕ್ಕೆ ಹೋದಾಗ, ದೇವರು ಆ ಜನರನ್ನು ಅಧಿಕವಾಗಿ ಆಶೀರ್ವದಿಸಿರುವುದನ್ನು ಕಂಡನು. ಇದರಿಂದ ಬಾರ್ನಬನಿಗೆ ತುಂಬಾ ಸಂತೋಷವಾಯಿತು. ಅಂತಿಯೋಕ್ಯದಲ್ಲಿದ್ದ ವಿಶ್ವಾಸಿಗಳನ್ನೆಲ್ಲ ಅವನು ಪ್ರೋತ್ಸಾಹಿಸಿದನು. ಅವನು ಅವರಿಗೆ, “ನಿಮ್ಮ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬೇಡಿ. ಪ್ರಭುವಿಗೆ ನಿಮ್ಮ ಪೂರ್ಣಹೃದಯಗಳಿಂದ ಯಾವಾಗಲೂ ವಿಧೇಯರಾಗಿರಿ” ಎಂದು ಹೇಳಿದನು. ಅನೇಕ ಜನರು ಪ್ರಭುವಾದ ಯೇಸುವಿನ ಹಿಂಬಾಲಕರಾದರು.
[25] ಬಳಿಕ ಬಾರ್ನಬನು ಸೌಲನನ್ನು ಹುಡುಕಿಕೊಂಡು ತಾರ್ಸಸ್ ಪಟ್ಟಣಕ್ಕೆ ಹೋದನು.
[26] ಬಾರ್ನಬನು ಅಲ್ಲಿ ಸೌಲನನ್ನು ಕಂಡುಕೊಂಡು ಅವನನ್ನು ಅಂತಿಯೋಕ್ಯಕ್ಕೆ ಕರೆದುಕೊಂಡು ಬಂದನು. ಸೌಲನು ಮತ್ತು ಬಾರ್ನಬನು ಅಂತಿಯೋಕ್ಯದಲ್ಲಿ ಒಂದು ವರ್ಷ ಪೂರ್ತಿ ಸಭೆಯ ಅನ್ಯೋನ್ಯತೆಯಲ್ಲಿ ಇದ್ದುಕೊಂಡು ಅನೇಕ ಜನರಿಗೆ ಬೋಧಿಸಿದರು. ಯೇಸುವಿನ ಹಿಂಬಾಲಕರಿಗೆ “ಕ್ರೈಸ್ತರು” ಎಂಬ ಹೆಸರು ಬಂದದ್ದು ಅಂತಿಯೋಕ್ಯದಲ್ಲೇ.
[27] ಆ ಕಾಲದಲ್ಲಿ ಕೆಲವು ಪ್ರವಾದಿಗಳು ಜೆರುಸಲೇಮಿನಿಂದ ಅಂತಿಯೋಕ್ಯಕ್ಕೆ ಹೋದರು.
[28] ಈ ಪ್ರವಾದಿಗಳಲ್ಲಿ “ಅಗಬ” ಎಂಬ ಒಬ್ಬನಿದ್ದನು. ಅಗಬನು ಅಂತಿಯೋಕ್ಯದಲ್ಲಿ ಪವಿತ್ರಾತ್ಮನ ಪ್ರೇರಣೆಯಿಂದ, “ಇಡೀ ಪ್ರಪಂಚಕ್ಕೆ ಭೀಕರ ಕ್ಷಾಮ ಬರಲಿದೆ” ಎಂದು ಹೇಳಿದನು. (ಈ ಬರಗಾಲವು ಕ್ಲಾಡಿಯಸ್ ಚಕ್ರವರ್ತಿಯ ಕಾಲದಲ್ಲಿ ಬಂದಿತು.)
[29] ಜುದೇಯದಲ್ಲಿರುವ ಸಹೋದರ ಸಹೋದರಿಯರಿಗೆ ಸಹಾಯಮಾಡಲು ವಿಶ್ವಾಸಿಗಳು ನಿರ್ಧರಿಸಿದರು. ವಿಶ್ವಾಸಿಗಳಲ್ಲಿ ಪ್ರತಿಯೊಬ್ಬರೂ ತಮ್ಮಿಂದಾದಷ್ಟನ್ನು ಅವರಿಗೆ ಕಳುಹಿಸಿಕೊಡಲು ಯೋಜನೆ ಮಾಡಿದರು.
[30] ಅವರು ಹಣವನ್ನು ಕೂಡಿಸಿ ಬಾರ್ನಬ ಮತ್ತು ಸೌಲರಿಗೆ ಕೊಟ್ಟರು. ಬಳಿಕ ಬಾರ್ನಬ ಮತ್ತು ಸೌಲರು ಅದನ್ನು ತಂದು ಜುದೇಯದಲ್ಲಿದ್ದ ಸಭಾಹಿರಿಯರಿಗೆ ಕೊಟ್ಟರು.