[1] ಸಹೋದರ ಸಹೋದರಿಯರೇ, ನಾನು ಆತ್ಮಿಕ ಜನರೊಂದಿಗೆ ಮಾತಾಡುವಂತೆ ಮೊದಲು ನಿಮ್ಮೊಂದಿಗೆ ಮಾತಾಡಲಾಗಲಿಲ್ಲ. ಪ್ರಾಪಂಚಿಕರೂ ಕ್ರಿಸ್ತನಲ್ಲಿ ಎಳೆಕೂಸುಗಳೂ ಆಗಿರುವಂಥವರೊಂದಿಗೆ ಮಾತಾಡುವಂತೆ ನಾನು ನಿಮ್ಮೊಂದಿಗೆ ಮಾತಾಡಬೇಕಾಯಿತು.
[2] ನಾನು ನಿಮಗೆ ಮಾಡಿದ ಉಪದೇಶವು ಗಟ್ಟಿಯಾದ ಆಹಾರದಂತಿರದೆ ಹಾಲಿನಂತಿತ್ತು; ಏಕೆಂದರೆ ಗಟ್ಟಿಯಾದ ಆಹಾರವನ್ನು ತೆಗೆದುಕೊಳ್ಳಲು ನೀವಿನ್ನೂ ಸಿದ್ಧರಾಗಿರಲಿಲ್ಲ. ಈಗಲೂ ಸಹ ಗಟ್ಟಿಯಾದ ಆಹಾರವನ್ನು ತೆಗೆದುಕೊಳ್ಳಲು ನೀವು ಸಿದ್ಧರಾಗಿಲ್ಲ.
[3] ನೀವಿನ್ನೂ ಆತ್ಮಿಕರಾಗಿಲ್ಲ. ನಿಮ್ಮ ನಡುವೆ ಹೊಟ್ಟೆಕಿಚ್ಚಿದೆ; ವಾಗ್ವಾದಗಳಿವೆ; ಜಗಳಗಳಿವೆ. ನೀವು ಆತ್ಮಿಕರಲ್ಲವೆಂಬುದನ್ನು ಇವು ಸೂಚಿಸುತ್ತವೆ. ನೀವು ಲೋಕದ ಜನರಂತೆಯೇ ವರ್ತಿಸುತ್ತಿದ್ದೀರಿ.
[4] ನಿಮ್ಮಲ್ಲಿ ಒಬ್ಬನು, “ನಾನು ಪೌಲನನ್ನು ಹಿಂಬಾಲಿಸುತ್ತೇನೆ” ಎನ್ನುತ್ತಾನೆ. ಮತ್ತೊಬ್ಬನು “ನಾನು ಅಪೊಲ್ಲೋಸನನ್ನು ಹಿಂಬಾಲಿಸುತ್ತೇನೆ” ಎನ್ನುತ್ತಾನೆ. ನೀವು ಹೀಗೆ ವಾಗ್ವಾದ ಮಾಡುವಾಗ ಲೋಕದ ಜನರಂತೆಯೇ ವರ್ತಿಸುವವರಾಗಿದ್ದೀರಿ.
[5] ಅಪೊಲ್ಲೋಸನು ಮುಖ್ಯವಾದವನೇ? ಇಲ್ಲ! ಪೌಲನು ಮುಖ್ಯವಾದವನೇ? ಇಲ್ಲ! ನೀವು ನಂಬಿಕೊಳ್ಳಲು ಸಹಾಯ ಮಾಡುವ ನಾವು ಕೇವಲ ದೇವರ ಸೇವಕರಾಗಿದ್ದೇವೆ. ದೇವರು ನಮಗೆ ಕೊಟ್ಟ ಕೆಲಸವನ್ನು ನಮ್ಮಲ್ಲಿ ಪ್ರತಿಯೊಬ್ಬರೂ ಮಾಡಿದೆವು.
[6] ನಾನು ಬೀಜವನ್ನು ಬಿತ್ತಿದೆನು; ಅಪೊಲ್ಲೋಸನು ನೀರನ್ನು ಹಾಕಿದನು. ಆದರೆ ಬೀಜವನ್ನು ಬೆಳೆಯಿಸಿದವನು ದೇವರೇ.
[7] ಆದ್ದರಿಂದ ಬೀಜ ಬಿತ್ತುವವನಾಗಲಿ ನೀರು ಹಾಕುವವನಾಗಲಿ ಮುಖ್ಯನಲ್ಲ. ದೇವರೊಬ್ಬನು ಮಾತ್ರ ಮುಖ್ಯವಾದವನು, ಏಕೆಂದರೆ ಬೀಜಗಳನ್ನು ಬೆಳೆಯಿಸುವವನು ಆತನೊಬ್ಬನೇ.
[8] ಬೀಜ ಬಿತ್ತುವವನ ಮತ್ತು ನೀರನ್ನು ಹಾಕುವವನ ಉದ್ದೇಶವು ಒಂದೇ ಆಗಿದೆ. ಮತ್ತು ಪ್ರತಿಯೊಬ್ಬನಿಗೂ ಅವನವನ ಕೆಲಸಕ್ಕೆ ತಕ್ಕ ಪ್ರತಿಫಲ ದೊರೆಯುವುದು.
[9] ನಾವು ದೇವರ ಜೊತೆಕೆಲಸದವರಾಗಿದ್ದೇವೆ. ನೀವು ದೇವರ ಹೊಲವಾಗಿದ್ದೀರಿ. ಇದಲ್ಲದೆ ನೀವು ದೇವರ ಕಟ್ಟಡವಾಗಿದ್ದೀರಿ.
[10] ದೇವರು ನನಗೆ ಕೊಟ್ಟ ವರದಾನಗಳನ್ನು ಉಪಯೋಗಿಸಿ ಚತುರ ಶಿಲ್ಪಿಯಂತೆ ನಾನು ಆ ಮನೆಗೆ ಅಸ್ತಿವಾರವನ್ನು ಹಾಕಿದೆನು. ಇತರ ಜನರು ಆ ಅಸ್ತಿವಾರದ ಮೇಲೆ ಕಟ್ಟುತ್ತಿದ್ದಾರೆ. ಆದರೆ ಪ್ರತಿಯೊಬ್ಬ ವ್ಯಕ್ತಿಯು ತಾನು ಹೇಗೆ ಕಟ್ಟುತ್ತಿದ್ದಾನೆ ಎಂಬುದರ ಬಗ್ಗೆ ಎಚ್ಚರದಿಂದಿರಬೇಕು.
[11] ಅಸ್ತಿವಾರವನ್ನು ಆಗಲೇ ಹಾಕಲಾಗಿದೆ. ಆ ಅಸ್ತಿವಾರವು ಯೇಸು ಕ್ರಿಸ್ತನೇ. ಆ ಅಸ್ತಿವಾರವನ್ನಲ್ಲದೆ ಬೇರೊಂದು ಅಸ್ತಿವಾರವನ್ನು ಬೇರೆ ಯಾರೂ ಹಾಕಲಾರರು.
[12] ಒಬ್ಬ ವ್ಯಕ್ತಿಯು ಆ ಅಸ್ತಿವಾರದ ಮೇಲೆ ಚಿನ್ನ, ಬೆಳ್ಳಿ, ರತ್ನ, ಮರ, ಹುಲ್ಲು ಮತ್ತು ಜೊಂಡುಗಳಿಂದ ಕಟ್ಟಬಹುದು.
[13] ಆದರೆ ಪ್ರತಿಯೊಬ್ಬನ ಕೆಲಸವು ಸ್ಪಷ್ಟವಾಗಿ ಕಾಣುವುದು; ಏಕೆಂದರೆ, ಕ್ರಿಸ್ತನು ಬರುವ ದಿನವು ಅದನ್ನು ಸ್ಪಷ್ಟಪಡಿಸುವುದು. ಆ ದಿನವು ಬೆಂಕಿಯೊಂದಿಗೆ ಉದಯಿಸುವುದು. ಆ ಬೆಂಕಿಯು ಪ್ರತಿಯೊಬ್ಬ ವ್ಯಕ್ತಿಯ ಕೆಲಸವನ್ನು ಪರೀಕ್ಷಿಸುವುದು.
[14] ಅಸ್ತಿವಾರದ ಮೇಲೆ ಕಟ್ಟಿದ ಕಟ್ಟಡವು ಸ್ಥಿರವಾಗಿದ್ದರೆ, ಕಟ್ಟಿದವನು ಪ್ರತಿಫಲವನ್ನು ಹೊಂದಿಕೊಳ್ಳುವನು.
[15] ಆದರೆ ಕಟ್ಟಡವು ಸುಟ್ಟುಹೋದರೆ, ಕಟ್ಟಿದವನಿಗೆ ನಷ್ಟವಾಗುವುದು. ಅವನು ರಕ್ಷಣೆ ಹೊಂದುವನು, ಆದರೆ ಅವನು ಬೆಂಕಿಯಿಂದ ತಪ್ಪಿಸಿಕೊಂಡವನಂತಿರುವನು.
[16] ನೀವೇ ದೇವರ ಆಲಯವಾಗಿದ್ದೀರಿ. ಇದು ನಿಮಗೆ ಚೆನ್ನಾಗಿ ತಿಳಿದಿದೆ. ದೇವರಾತ್ಮನು ನಿಮ್ಮೊಳಗೆ ವಾಸವಾಗಿದ್ದಾನೆ.
[17] ಯಾವನಾದರೂ ದೇವರ ಆಲಯವನ್ನು ನಾಶಮಾಡಿದರೆ ದೇವರು ಅವನನ್ನು ನಾಶಮಾಡುವನು. ಏಕೆಂದರೆ ದೇವರ ಆಲಯವು ಪರಿಶುದ್ಧವಾದದ್ದು. ನೀವೇ ದೇವರ ಆಲಯವಾಗಿದ್ದೀರಿ.
[18] ನಿಮಗೆ ನೀವೇ ಮೋಸಮಾಡಿಕೊಳ್ಳಬೇಡಿ. ನಿಮ್ಮಲ್ಲಿರುವ ಯಾವನಾದರೂ ತಾನು ಈ ಲೋಕದಲ್ಲಿ ಜ್ಞಾನಿಯೆಂದು ಆಲೋಚಿಸಿಕೊಂಡರೆ ಅವನು ಮೂಢನಾಗಲೇಬೇಕು. ಆಗ ಆ ವ್ಯಕ್ತಿಯು ನಿಜವಾಗಿಯೂ ಜ್ಞಾನಿಯಾಗಬಲ್ಲನು.
[19] ಏಕೆಂದರೆ ಈ ಲೋಕದ ಜ್ಞಾನವು ದೇವರಿಗೆ ಮೂರ್ಖತನವಾಗಿದೆ. “ದೇವರು ಜಾಣರನ್ನು ಅವರ ಕುತಂತ್ರದ ಮಾರ್ಗಗಳಲ್ಲೇ ಹಿಡಿದುಕೊಳ್ಳುವನು” ಎಂದು ಪವಿತ್ರ ಗ್ರಂಥದಲ್ಲಿ ಬರೆಯಲಾಗಿದೆ.
[20] “ಪ್ರಭುವು ಜ್ಞಾನಿಗಳ ಆಲೋಚನೆಗಳನ್ನು ತಿಳಿದಿದ್ದಾನೆ. ಅವರ ಆಲೋಚನೆಗಳು ನಿಷ್ಪ್ರಯೋಜಕವೆಂದು ಆತನಿಗೆ ಗೊತ್ತಿದೆ” ಎಂದು ಸಹ ಪವಿತ್ರ ಗ್ರಂಥದಲ್ಲಿ ಬರೆಯಲ್ಪಟ್ಟಿದೆ.
[21] ಆದ್ದರಿಂದ ನೀವು ಜನರ ಬಗ್ಗೆ ಹೆಚ್ಚಳಪಡಬಾರದು. ಸಮಸ್ತವೂ ನಿಮ್ಮದೇ.
[22] ಪೌಲ, ಅಪೊಲ್ಲೋಸ್ ಮತ್ತು ಕೇಫ ನಿಮ್ಮವರಾಗಿದ್ದಾರೆ. ಜಗತ್ತು, ಜೀವ, ಮರಣ ಮತ್ತು ವರ್ತಮಾನ ಹಾಗೂ ಭವಿಷ್ಯತ್ ಕಾಲಗಳ ಸಂಗತಿಗಳು ನಿಮ್ಮವೇ.
[23] ನೀವು ಕ್ರಿಸ್ತನಿಗೆ ಸೇರಿದವರಾಗಿದ್ದೀರಿ. ಕ್ರಿಸ್ತನು ದೇವರಿಗೆ ಸೇರಿದವನಾಗಿದ್ದಾನೆ.