[1] ದೇವಜನರಿಗೋಸ್ಕರ ಹಣ ಸಂಗ್ರಹಿಸುವುದರ ವಿಷಯವಾಗಿ ಈಗ ನಾನು ಬರೆಯುತ್ತೇನೆ. ನಾನು ಗಲಾತ್ಯ ಸಭೆಗಳಿಗೆ ಹೇಳಿಕೊಟ್ಟಂತೆ ನೀವೂ ಮಾಡಿರಿ.
[2] ನಿಮ್ಮಲ್ಲಿ ಪ್ರತಿಯೊಬ್ಬನು ತನಗಾದ ಅಭಿವೃದ್ಧಿಗೆ ತಕ್ಕಂತೆ ನಿಮ್ಮಿಂದ ಸಾಧ್ಯವಾದಷ್ಟು ಹಣವನ್ನು ಪ್ರತಿವಾರದ ಮೊದಲನೆಯ ದಿನವೇ ಪ್ರತ್ಯೇಕಿಸಿ, ವಿಶೇಷವಾದ ಸ್ಥಳವೊಂದರಲ್ಲಿ ಇಟ್ಟಿರಬೇಕು. ಆಗ ನಾನು ನಿಮ್ಮಲ್ಲಿಗೆ ಬಂದ ನಂತರ ಹಣವನ್ನು ಸಂಗ್ರಹಿಸುವ ಅವಶ್ಯಕತೆಯಿರುವುದಿಲ್ಲ.
[3] ನಾನು ಬಂದಾಗ, ನಿಮ್ಮ ಕೊಡುಗೆಯನ್ನು ಕೆಲವರ ಮೂಲಕ ಜೆರುಸಲೇಮಿಗೆ ಕಳುಹಿಸುವೆನು. ನೀವೆಲ್ಲರೂ ಯಾರನ್ನು ಇಷ್ಟಪಡುತ್ತೀರೋ ಅವರಿಗೆ ನಾನು ಪರಿಚಯದ ಪತ್ರಗಳನ್ನು ಕೊಟ್ಟು ಕಳುಹಿಸುವೆನು.
[4] ಒಂದುವೇಳೆ, ನಾನು ಸಹ ಹೋಗುವುದು ಒಳ್ಳೆಯದೆನಿಸಿದರೆ, ಆ ಜನರು ನನ್ನೊಂದಿಗೆ ಬರಲಿ.
[5] ನಾನು ಮಕೆದೋನಿಯದ ಮೂಲಕ ಹೋಗಬೇಕೆಂದಿರುವೆ. ಆದ್ದರಿಂದ ಮಕೆದೋನಿಯದ ಪ್ರವಾಸವನ್ನು ಮುಗಿಸಿಕೊಂಡು ನಿಮ್ಮಲ್ಲಿಗೆ ಬರುವೆನು.
[6] ನಾನು ನಿಮ್ಮೊಂದಿಗೆ ಸ್ವಲ್ಪಕಾಲ ಇಳಿದುಕೊಳ್ಳಬಹುದು. ಒಂದುವೇಳೆ ಚಳಿಗಾಲವನ್ನು ಪೂರ್ತಿಯಾಗಿ ನಿಮ್ಮಲ್ಲಿ ಕಳೆಯಬೇಕಾಗಬಹುದು. ಬಳಿಕ ನಾನು ಹೋಗಬೇಕಾದ ಸ್ಥಳಕ್ಕೆ ನೀವು ನನ್ನನ್ನು ಕಳುಹಿಸಿಕೊಡಬೇಕು.
[7] ಈಗ ನಿಮ್ಮ ಬಳಿಗೆ ಬರಲು ನನಗೆ ಇಷ್ಟವಿಲ್ಲ. ಏಕೆಂದರೆ ನಾನು ಬೇರೆ ಸ್ಥಳಗಳಿಗೆ ಹೋಗಬೇಕಾಗಿರುವುದರಿಂದ ನಿಮ್ಮೊಂದಿಗೆ ಬಹಳ ಕಾಲವಿರಲು ಸಾಧ್ಯವಿಲ್ಲ. ಪ್ರಭುವು ಅವಕಾಶಕೊಡುವುದಾದರೆ, ನಾನು ನಿಮ್ಮೊಂದಿಗೆ ದೀರ್ಘಕಾಲ ತಂಗುವ ನಿರೀಕ್ಷೆಯಿಂದಿದ್ದೇನೆ.
[8] ಆದರೆ ನಾನು ಪಂಚಾಶತ್ತಮ ಹಬ್ಬದವರೆಗೆ ಎಫೆಸದಲ್ಲಿ ಇರುತ್ತೇನೆ.
[9] ಯಾಕೆಂದರೆ ಮಹತ್ವವಾದ ಮತ್ತು ಫಲಭರಿತವಾದ ಸೇವೆಯನ್ನು ಮಾಡಲು ಇಲ್ಲಿ ನನಗೆ ಒಳ್ಳೆಯ ಅವಕಾಶಗಳಿವೆ. ಆದರೂ ಇಲ್ಲಿ ನನಗೆ ಅನೇಕ ವಿರೋಧಿಗಳಿದ್ದಾರೆ.
[10] ತಿಮೊಥೆಯನು ನಿಮ್ಮ ಬಳಿಗೆ ಬರಬಹುದು. ಅವನು ನಿಮ್ಮೊಂದಿಗಿರುವಾಗ ಅವನಿಗೆ ಚಿಂತೆಯಾಗದಂತೆ ನೋಡಿಕೊಳ್ಳಿರಿ. ನಾನು ಪ್ರಭುವಿಗೋಸ್ಕರ ಕೆಲಸ ಮಾಡುತ್ತಿರುವಂತೆ ಅವನು ಸಹ ಮಾಡುತ್ತಿದ್ದಾನೆ.
[11] ಆದ್ದರಿಂದ ನಿಮ್ಮಲ್ಲಿ ಯಾರೂ ಅವನನ್ನು ತಿರಸ್ಕರಿಸಬಾರದು. ಅವನನ್ನು ನನ್ನ ಬಳಿಗೆ ಸಮಾಧಾನದಿಂದ ಕಳುಹಿಸಿಕೊಡಿರಿ. ಅವನು ಸಹೋದರರೊಂದಿಗೆ ಬರುವುದನ್ನು ನಾನು ಎದುರು ನೋಡುತ್ತಿದ್ದೇನೆ.
[12] ನಮ್ಮ ಸಹೋದರನಾದ ಅಪೊಲ್ಲೋಸನ ಬಗ್ಗೆ ನಾನು ಹೇಳುವುದೇನೆಂದರೆ, ಇತರ ಸಹೋದರರೊಂದಿಗೆ ನಿಮ್ಮನ್ನು ಸಂದರ್ಶಿಸಲು ನಾನು ಅವನನ್ನು ಬಹಳವಾಗಿ ಪ್ರೋತ್ಸಾಹಿಸಿದ್ದೇನೆ. ಆದರೆ ಈಗ ಬರುವುದಕ್ಕೆ ಅವನಿಗೆ ನಿಶ್ಚಯವಾಗಿ ಇಷ್ಟವಿರಲಿಲ್ಲ. ಆದರೆ ಅವಕಾಶ ಸಿಕ್ಕಿದಾಗ ಅವನು ನಿಮ್ಮ ಬಳಿಗೆ ಬರುವನು.
[13] ಜಾಗರೂಕರಾಗಿರಿ, ನಂಬಿಕೆಯಲ್ಲಿ ದೃಢವಾಗಿರಿ. ಧೈರ್ಯದಿಂದಿರಿ ಮತ್ತು ಬಲಿಷ್ಠರಾಗಿರಿ.
[14] ಪ್ರತಿಯೊಂದನ್ನು ಪ್ರೀತಿಯಿಂದ ಮಾಡಿರಿ.
[15] ಅಖಾಯದಲ್ಲಿ ಪ್ರಥಮ ವಿಶ್ವಾಸಿಗಳಾದ ಸ್ತೆಫನನನ್ನು ಮತ್ತು ಅವನ ಕುಟುಂಬದವರನ್ನು ನೀವು ಬಲ್ಲಿರಿ. ಅವರು ದೇವರ ಸೇವೆಗಾಗಿ ತಮ್ಮನ್ನು ಒಪ್ಪಿಸಿಕೊಂಡಿದ್ದಾರೆ. ಸಹೋದರ ಸಹೋದರಿಯರೇ, ನಾನು ನಿಮ್ಮನ್ನು ಕೇಳಿಕೊಳ್ಳುವುದೇನೆಂದರೆ,
[16] ಈ ರೀತಿಯ ಮುಂದಾಳುಗಳನ್ನು ಮತ್ತು ಅವರೊಂದಿಗೆ ಕೆಲಸ ಮಾಡುವವರನ್ನು ಹಾಗೂ ಸೇವೆ ಮಾಡುವವರನ್ನು ಹಿಂಬಾಲಿಸಿರಿ.
[17] ಸ್ತೆಫನನು, ಪೊರ್ತುನಾತನು ಮತ್ತು ಅಖಾಯಿಕನು ಬಂದುದರಿಂದ ನನಗೆ ಸಂತೋಷವಾಯಿತು. ನೀವು ಇಲ್ಲದ್ದರಿಂದ ನನಗುಂಟಾದ ಕೊರತೆಯನ್ನು ಅವರು ನೀಗಿಸಿದ್ದಾರೆ.
[18] ಅವರು ನನ್ನ ಆತ್ಮಕ್ಕೂ ನಿಮ್ಮ ಆತ್ಮಗಳಿಗೂ ವಿಶ್ರಾಂತಿಯನ್ನು ಕೊಟ್ಟಿದ್ದಾರೆ. ಇಂಥ ಜನರ ಮೌಲ್ಯವನ್ನು ನೀವು ಗುರುತಿಸಬೇಕು.
[19] ಏಷ್ಯಾದ ಸಭೆಗಳವರು ನಿಮಗೆ ವಂದನೆಗಳನ್ನು ತಿಳಿಸಿದ್ದಾರೆ. ಅಕ್ವಿಲನು ಮತ್ತು ಪ್ರಿಸ್ಕಿಲ್ಲಳು ಪ್ರಭುವಿನ ಹೆಸರಿನಲ್ಲಿ ನಿಮಗೆ ಬಹಳ ವಂದನೆಗಳನ್ನು ತಿಳಿಸಿದ್ದಾರೆ. ಅವರ ಮನೆಯಲ್ಲಿ ಸೇರಿಬರುವ ಸಭೆಯವರು ಸಹ ನಿಮಗೆ ವಂದನೆ ತಿಳಿಸಿದ್ದಾರೆ.
[20] ಇಲ್ಲಿರುವ ಎಲ್ಲಾ ಸಹೋದರ ಸಹೋದರಿಯರು ನಿಮಗೆ ವಂದನೆ ತಿಳಿಸಿದ್ದಾರೆ. ನೀವು ಒಬ್ಬರನ್ನೊಬ್ಬರು ಭೇಟಿಯಾಗುವಾಗ ಪವಿತ್ರವಾದ ಮುದ್ದಿಟ್ಟು ವಂದಿಸಿರಿ.
[21] ಪೌಲನಾದ ನಾನು ನನ್ನ ಕೈಯಾರೆ ಈ ವಂದನೆಗಳನ್ನು ಬರೆಯುತ್ತಿದ್ದೇನೆ.
[22] ಯಾವನಾದರೂ ಪ್ರಭುವನ್ನು ಪ್ರೀತಿಸದಿದ್ದರೆ, ಅವನು ಜೀವದಿಂದ ಬೇರ್ಪಟ್ಟು ನಿತ್ಯನಾಶನ ಹೊಂದಲಿ! ಪ್ರಭುವೇ ಬಾ!
[23] ಪ್ರಭುವಾದ ಯೇಸುವಿನ ಕೃಪೆಯು ನಿಮ್ಮೊಂದಿಗಿರಲಿ.
[24] ಕ್ರಿಸ್ತ ಯೇಸುವಿನಲ್ಲಿ ನಿಮ್ಮೆಲ್ಲರೊಂದಿಗೆ ನನ್ನ ಪ್ರೀತಿಯಿರಲಿ!