Skip to content
Opens in a new window
Listen to this chapter • 12:11

[1] ಸಹೋದರ ಸಹೋದರಿಯರೇ, ನಾನು ನಿಮಗೆ ತಿಳಿಸಿದ ಸುವಾರ್ತೆಯನ್ನು ನೀವು ಜ್ಞಾಪಿಸಿಕೊಳ್ಳಿರಿ. ನೀವು ಅದನ್ನು ಸ್ವೀಕರಿಸಿಕೊಂಡಿರಿ ಮತ್ತು ಅದರಲ್ಲಿ ದೃಢವಾಗಿದ್ದೀರಿ.

[2] ನೀವು ಆ ಸಂದೇಶದ ಮೂಲಕ ರಕ್ಷಣೆ ಹೊಂದಿದ್ದೀರಿ. ನಾನು ನಿಮಗೆ ತಿಳಿಸಿದ ಸಂದೇಶದಲ್ಲಿ ನಿಮಗೆ ದೃಢವಾದ ನಂಬಿಕೆ ಇರಲೇಬೇಕು. ನೀವು ಹೀಗೆ ಮಾಡದಿದ್ದರೆ, ನಿಮ್ಮ ನಂಬಿಕೆಯು ನಿರರ್ಥಕವಾಗುವುದು.

[3] ನಾನು ಸ್ವೀಕರಿಸಿಕೊಂಡ ಸಂದೇಶವನ್ನು ನಾನು ನಿಮಗೆ ತಿಳಿಸಿದೆನು. ಆ ಸಂಗತಿಗಳು ಬಹಳ ಮುಖ್ಯವಾದುವುಗಳಾಗಿವೆ. ಪವಿತ್ರ ಗ್ರಂಥವು ಹೇಳುವಂತೆ, ಕ್ರಿಸ್ತನು ನಮ್ಮ ಪಾಪಗಳಿಗೋಸ್ಕರವಾಗಿ ಸತ್ತು

[4] ಹೂಳಲ್ಪಟ್ಟು ಮೂರನೆಯ ದಿನದಲ್ಲಿ ಜೀವಂತವಾಗಿ ಎದ್ದುಬಂದನು.

[5] ಬಳಿಕ ಕ್ರಿಸ್ತನು ಪೇತ್ರನಿಗೆ ಕಾಣಿಸಿಕೊಂಡನು. ಅನಂತರ ಹನ್ನೆರಡು ಮಂದಿ ಅಪೊಸ್ತಲರಿಗೆ ಕಾಣಿಸಿಕೊಂಡನು.

[6] ತರುವಾಯ, ಒಂದೇ ಸಮಯದಲ್ಲಿ ಐನೂರಕ್ಕಿಂತಲೂ ಹೆಚ್ಚು ಮಂದಿ ಸಹೋದರರಿಗೆ ಕಾಣಿಸಿಕೊಂಡನು. ಈ ಸಹೋದರರಲ್ಲಿ ಬಹುಮಂದಿ ಇಂದಿನವರೆಗೂ ಬದುಕಿದ್ದಾರೆ. ಆದರೆ ಕೆಲವರು ಸತ್ತುಹೋದರು.

[7] ಬಳಿಕ ಕ್ರಿಸ್ತನು ಯಾಕೋಬನಿಗೆ ಕಾಣಿಸಿಕೊಂಡನು. ಅನಂತರ ಮತ್ತೊಮ್ಮೆ ಎಲ್ಲಾ ಅಪೊಸ್ತಲರಿಗೆ ಕಾಣಿಸಿಕೊಂಡನು.

[8] ಕಟ್ಟಕಡೆಗೆ, ಕ್ರಿಸ್ತನು, ದಿನ ತುಂಬುವ ಮೊದಲೇ ಹುಟ್ಟಿದಂತಿದ್ದ ನನಗೆ ಕಾಣಿಸಿಕೊಂಡನು.

[9] ಉಳಿದೆಲ್ಲಾ ಅಪೊಸ್ತಲರು ನನಗಿಂತಲೂ ಶ್ರೇಷ್ಠರಾಗಿದ್ದಾರೆ. ಇದಕ್ಕೆ ಕಾರಣವೇನೆಂದರೆ, ನಾನು ದೇವರ ಸಭೆಯನ್ನು ಹಿಂಸಿಸಿದೆನು. ಆದ್ದರಿಂದ ಅಪೊಸ್ತಲನೆಂದು ಕರೆಸಿಕೊಳ್ಳುವುದಕ್ಕೂ ನಾನು ಯೋಗ್ಯನಲ್ಲ.

[10] ಆದರೆ, ದೇವರ ಕೃಪೆಯಿಂದ ನಾನು ಅಪೊಸ್ತಲನಾಗಿದ್ದೇನೆ. ಆತನು ನನಗೆ ತೋರಿದ ಕೃಪೆಯು ನಿಷ್ಛಲವಾಗಲಿಲ್ಲ. ಉಳಿದೆಲ್ಲ ಅಪೊಸ್ತಲರಿಗಿಂತ ನಾನು ಹೆಚ್ಚು ಕಷ್ಟಪಟ್ಟು ಸೇವೆ ಮಾಡಿದ್ದೇನೆ. (ಆದರೆ ಸೇವೆ ಮಾಡುತ್ತಿದ್ದವನು ನಿಜವಾಗಿಯೂ ನಾನಲ್ಲ ದೇವರ ಕೃಪೆಯೇ ನನ್ನೊಂದಿಗಿತ್ತು.)

[11] ಆದ್ದರಿಂದ ನಾನು ಬೋಧನೆ ಮಾಡಿದೆನೊ ಅಥವಾ ಇತರ ಅಪೊಸ್ತಲರು ಬೋಧನೆ ಮಾಡಿದರೊ ಎಂಬುದು ಮುಖ್ಯವಲ್ಲ. ನಾವೆಲ್ಲರೂ ಒಂದೇ ಸಂದೇಶವನ್ನು ಬೋಧಿಸುತ್ತೇವೆ ಮತ್ತು ನೀವು ನಂಬಿರುವುದೂ ಅದನ್ನೇ.

[12] ಕ್ರಿಸ್ತನು ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದನೆಂದು ನಾವು ಬೋಧಿಸಿದ್ದೇವೆ. ಹೀಗಿರಲಾಗಿ, ಜನರಿಗೆ ಪುನರುತ್ಥಾನವಿಲ್ಲವೆಂದು ನಿಮ್ಮಲ್ಲಿ ಕೆಲವರು ಹೇಳುತ್ತಿರುವುದೇಕೆ?

[13] ಜನರಿಗೆ ಪುನರುತ್ಥಾನವಿಲ್ಲದಿದ್ದರೆ ಕ್ರಿಸ್ತನು ಸಹ ಸತ್ತವರೊಳಗಿಂದ ಎದ್ದೇಬಂದಿಲ್ಲ.

[14] ಕ್ರಿಸ್ತನು ಎದ್ದೇಬಂದಿಲ್ಲವಾದರೆ ನಮ್ಮ ಬೋಧನೆಗೂ ನಿಮ್ಮ ನಂಬಿಕೆಗೂ ಯಾವ ಬೆಲೆಯೂ ಇಲ್ಲ.

[15] ಅಲ್ಲದೆ, ದೇವರ ಬಗ್ಗೆ ನಾವು ಸುಳ್ಳುಸಾಕ್ಷಿ ಹೇಳಿದಂತಾಗುವುದು. ಏಕೆಂದರೆ, ದೇವರು ಕ್ರಿಸ್ತನನ್ನು ಜೀವಂತವಾಗಿ ಎಬ್ಬಿಸಿದನೆಂದು ನಾವು ದೇವರ ಬಗ್ಗೆ ಬೋಧಿಸಿದೆವು. ಜನರು ಜೀವಂತವಾಗಿ ಎದ್ದುಬರದಿದ್ದರೆ, ದೇವರು ಕ್ರಿಸ್ತನನ್ನು ಜೀವಂತವಾಗಿ ಎಬ್ಬಿಸಲೇ ಇಲ್ಲ.

[16] ಸತ್ತುಹೋದ ಜನರು ಎಬ್ಬಿಸಲ್ಪಡದಿದ್ದರೆ, ಕ್ರಿಸ್ತನು ಸಹ ಎಬ್ಬಿಸಲ್ಪಡಲೇ ಇಲ್ಲ.

[17] ಕ್ರಿಸ್ತನು ಜೀವಂತವಾಗಿ ಎಬ್ಬಿಸಲ್ಪಟ್ಟಿಲ್ಲದಿದ್ದರೆ, ನಿಮ್ಮ ನಂಬಿಕೆಯು ನಿಷ್ಪ್ರಯೋಜಕವಾಗಿದೆ ಮತ್ತು ನೀವು ನಿಮ್ಮ ಪಾಪಗಳಿಂದ ಇನ್ನೂ ಅಪರಾಧಿಗಳಾಗಿದ್ದೀರಿ.

[18] ಇದಲ್ಲದೆ ಕ್ರಿಸ್ತನಲ್ಲಿದ್ದು ಸತ್ತುಹೋದವರು ನಾಶವಾಗಿದ್ದಾರೆ.

[19] ನಮಗೆ ಕ್ರಿಸ್ತನಲ್ಲಿರುವ ನಿರೀಕ್ಷೆಯು ಈ ಲೋಕಕ್ಕೆ ಮಾತ್ರ ಸೀಮಿತವಾಗಿದ್ದರೆ, ನಾವು ಬೇರೆಲ್ಲ ಜನರಿಗಿಂತಲೂ ದುಃಖಕ್ಕೆ ಪಾತ್ರರಾಗಿದ್ದೇವೆ.

[20] ಆದರೆ ಕ್ರಿಸ್ತನು ನಿಜವಾಗಿಯೂ ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದಿದ್ದಾನೆ. ನಿದ್ರೆಹೋದವರಲ್ಲಿ ಅಂದರೆ ಸತ್ತುಹೋದ ಎಲ್ಲಾ ವಿಶ್ವಾಸಿಗಳಲ್ಲಿ ಆತನೇ ಪ್ರಥಮ ಫಲವಾದನು.

[21] ಒಬ್ಬ ಮನುಷ್ಯನು (ಆದಾಮನು) ಮಾಡಿದ ಕಾರ್ಯದಿಂದಾಗಿ ಜನರು ಮರಣ ಹೊಂದುವಂತೆಯೇ ಒಬ್ಬ ಮನುಷ್ಯನ (ಕ್ರಿಸ್ತನ) ಮೂಲಕವಾಗಿಯೇ ಜನರು ಜೀವಂತವಾಗಿ ಎದ್ದುಬರುವರು.

[22] ಆದಾಮನ ಸಂಬಂಧದಿಂದ ಎಲ್ಲರೂ ಸಾಯುತ್ತಾರೆ. ಇದೇರೀತಿ ಕ್ರಿಸ್ತನ ಸಂಬಂಧದಿಂದ ನಾವೆಲ್ಲರೂ ಮತ್ತೆ ಜೀವಂತರಾಗುತ್ತೇವೆ.

[23] ಆದರೆ ಪ್ರತಿಯೊಬ್ಬನು ಕ್ರಮಬದ್ಧ ರೀತಿಯಲ್ಲಿ ಜೀವಂತವಾಗಿ ಎದ್ದುಬರುವನು. ಮೊಟ್ಟಮೊದಲನೆಯದಾಗಿ ಕ್ರಿಸ್ತನೇ ಎದ್ದುಬಂದನು. ಕ್ರಿಸ್ತನು ಮತ್ತೆ ಬರುವಾಗ ಕ್ರಿಸ್ತನಿಗೆ ಸೇರಿದ ಜನರು ಜೀವಂತವಾಗಿ ಎದ್ದುಬರುವರು.

[24] ಅನಂತರ ಅಂತ್ಯ ಬರುವುದು. ಕ್ರಿಸ್ತನು ಎಲ್ಲಾ ಅಧಿಪತಿಗಳನ್ನು, ಅಧಿಕಾರಗಳನ್ನು ಮತ್ತು ಶಕ್ತಿಗಳನ್ನು ನಾಶಮಾಡುವನು. ಬಳಿಕ ಕ್ರಿಸ್ತನು ತಂದೆಯಾದ ದೇವರಿಗೆ ರಾಜ್ಯವನ್ನು ಕೊಡುವನು.

[25] ದೇವರು ಎಲ್ಲಾ ಶತ್ರುಗಳನ್ನು ಕ್ರಿಸ್ತನಿಗೆ ಅಧೀನಗೊಳಿಸುವ ತನಕ ಕ್ರಿಸ್ತನು ಆಳಲೇಬೇಕು.

[26] ನಾಶವಾಗುವ ಕಡೆಯ ಶತ್ರುವೆಂದರೆ ಮರಣವೇ.

[27] “ದೇವರು ಸಮಸ್ತವನ್ನು ಆತನಿಗೆ ಅಧೀನಗೊಳಿಸುತ್ತಾನೆ” ಎಂದು ಪವಿತ್ರಗ್ರಂಥವು ಹೇಳುತ್ತದೆ. “ಸಮಸ್ತವನ್ನು” ಕ್ರಿಸ್ತನಿಗೆ ಅಧೀನಗೊಳಿಸುತ್ತಾನೆಂದು ಹೇಳುವಾಗ, ಅದು ದೇವರನ್ನು ಒಳಗೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ. ಸಮಸ್ತವನ್ನು ಕ್ರಿಸ್ತನಿಗೆ ಅಧೀನಗೊಳಿಸಿದಾತನು ದೇವರೇ.

[28] ಸಮಸ್ತವು ತನ್ನ ಅಧೀನಕ್ಕೆ ಬಂದ ಮೇಲೆ, ಕ್ರಿಸ್ತನು ತನ್ನನ್ನೇ ದೇವರಿಗೆ ಅಧೀನಪಡಿಸಿಕೊಳ್ಳುವನು. ಸಮಸ್ತವನ್ನು ಕ್ರಿಸ್ತನಿಗೆ ಅಧೀನಪಡಿಸಿದಾತನು ದೇವರೇ. ಹೀಗೆ ದೇವರು ಸಮಸ್ತಕ್ಕೂ ಸರ್ವಾಧಿಪತಿಯಾಗುವನು.

[29] ಸತ್ತವರಿಗೆ ಪುನರುತ್ಥಾನವಿಲ್ಲವಾದರೆ ಸತ್ತುಹೋದವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಂಡ ಜನರು ಏನು ಮಾಡುವರು? ಸತ್ತವರಿಗೆ ಪುನರುತ್ಥಾನವಿಲ್ಲವಾದರೆ, ಜನರು ಅವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದೇಕೆ?

[30] ನಮ್ಮ ವಿಷಯವೇನು? ನಾವು ನಮ್ಮನ್ನು ಪ್ರತಿ ತಾಸಿನಲ್ಲಿಯೂ ಅಪಾಯಕ್ಕೆ ಒಡ್ಡುವುದು ಏಕೆ?

[31] ನಾನು ಪ್ರತಿದಿನವೂ ಸಾಯುತ್ತೇನೆ. ಸಹೋದರರೇ ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನಲ್ಲಿ ನಾನು ನಿಮ್ಮ ಬಗ್ಗೆ ಹೆಮ್ಮೆಪಡುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಅದಾಗಿದೆ.

[32] ಕೇವಲ ನನ್ನ ಮಾನುಷ ಸ್ವಭಾವದಿಂದ ನಾನು ಎಫೆಸದಲ್ಲಿ ದುಷ್ಟಮೃಗಗಳೊಂದಿಗೆ ಹೋರಾಡಿದ್ದರೆ, ಅದರಿಂದ ನನಗೇನು ಪ್ರಯೋಜನ? ಸತ್ತವರಿಗೆ ಪುನರುತ್ಥಾನವಿಲ್ಲದಿದ್ದರೆ, “ತಿನ್ನೋಣ, ಕುಡಿಯೋಣ, ಏಕೆಂದರೆ ನಾವು ನಾಳೆ ಸಾಯುತ್ತೇವೆ.”

[33] ಮೋಸ ಹೋಗಬೇಡಿರಿ. “ದುರ್ಜನರ ಸಹವಾಸ ಸದಾಚಾರದ ಭಂಗ.”

[34] ಸ್ವಸ್ಥಚಿತ್ತರಾಗಿರಿ ಮತ್ತು ಪಾಪಮಾಡುವುದನ್ನು ನಿಲ್ಲಿಸಿರಿ. ನಿಮ್ಮಲ್ಲಿ ಕೆಲವರು ದೇವರನ್ನು ಅರಿತುಕೊಂಡಿಲ್ಲ. ನಿಮಗೆ ನಾಚಿಕೆ ಆಗಲೆಂದು ಇದನ್ನು ಹೇಳುತ್ತಿದ್ದೇನೆ.

[35] “ಸತ್ತವರು ಹೇಗೆ ಎದ್ದುಬರುವರು? ಅವರಿಗೆ ಯಾವ ಬಗೆಯ ದೇಹವಿರುತ್ತದೆ?” ಎಂದು ಕೆಲವರು ಕೇಳಬಹುದು.

[36] ಅವು ಮೂಢ ಪ್ರಶ್ನೆಗಳು. ನೀವು ಬೀಜವನ್ನು ಬಿತ್ತಿದಾಗ, ಆ ಬೀಜವು ಜೀವ ಹೊಂದಿಕೊಂಡು ಬೆಳೆಯುವುದಕ್ಕಿಂತ ಮುಂಚೆ ಸಾಯಲೇಬೇಕು.

[37] ನೀವು ಬೀಜವನ್ನು ಬಿತ್ತುವಾಗ, ಆ ಬೀಜವು ಕೇವಲ ಕಾಳಾಗಿರುತ್ತದೆಯೇ ಹೊರತು ಮುಂದೆ ಹುಟ್ಟಿ ಬರಲಿರುವ ಗಿಡವಾಗಿರುವುದಿಲ್ಲ. ನೀವು ಬಿತ್ತುವ ಬೀಜವು ಕೇವಲ ಕಾಳಷ್ಟೆ. ಅದು ಗೋಧಿಯಾಗಿರಬಹುದು ಅಥವಾ ಬೇರೆ ಕಾಳಾಗಿರಬಹುದು.

[38] ಅದರೆ ದೇವರು ತನ್ನ ಯೋಜನೆಗನುಸಾರವಾಗಿ ಅದಕ್ಕೆ ದೇಹವನ್ನು ಕೊಡುತ್ತಾನೆ ಮತ್ತು ದೇವರು ಪ್ರತಿಯೊಂದು ಬಗೆಯ ಬೀಜಕ್ಕೆ ಅದರದೇ ಆದ ದೇಹವನ್ನು ಕೊಡುತ್ತಾನೆ.

[39] ಎಲ್ಲಾ ಶರೀರಗಳು ಒಂದೇ ರೀತಿಯ ಮಾಂಸವನ್ನು ಹೊಂದಿರುವುದಿಲ್ಲ. ಜನರಿಗೆ ಒಂದು ಬಗೆಯ ಮಾಂಸವಿರುತ್ತದೆ; ಪ್ರಾಣಿಗಳಿಗೆ ಮತ್ತೊಂದು ಬಗೆಯ ಮಾಂಸವಿರುತ್ತದೆ; ಪಕ್ಷಿಗಳಿಗೆ ಇನ್ನೊಂದು ಬಗೆಯ ಮಾಂಸವಿರುತ್ತದೆ. ಮೀನುಗಳು ಬೇರೊಂದು ರೀತಿಯ ಮಾಂಸವನ್ನು ಹೊಂದಿರುತ್ತವೆ.

[40] ಇದಲ್ಲದೆ ಪರಲೋಕದ ಶರೀರಗಳಿವೆ ಮತ್ತು ಭೂಲೋಕದ ಶರೀರಗಳಿವೆ. ಪರಲೋಕದ ಶರೀರಗಳಿಗೆ ಒಂದು ಬಗೆಯ ಸೌಂದರ್ಯವಿರುತ್ತದೆ. ಭೂಲೋಕದ ಶರೀರಗಳಿಗೆ ಮತ್ತೊಂದು ಬಗೆಯ ಸೌಂದರ್ಯವಿರುತ್ತದೆ.

[41] ಸೂರ್ಯನಿಗೆ ಒಂದು ಬಗೆಯ ಸೌಂದರ್ಯವಿದೆ; ಚಂದ್ರನಿಗೆ ಮತ್ತೊಂದು ಬಗೆಯ ಸೌಂದರ್ಯವಿದೆ. ನಕ್ಷತ್ರಗಳಿಗೆ ಇನ್ನೊಂದು ಬಗೆಯ ಸೌಂದರ್ಯವಿದೆ. ಪ್ರತಿಯೊಂದು ನಕ್ಷತ್ರವು ತನ್ನದೇ ಆದ ಸೌಂದರ್ಯವನ್ನು ಹೊಂದಿದೆ.

[42] ಸತ್ತವರಿಗಾಗುವ ಪುನರುತ್ಥಾನವು ಅದೇ ರೀತಿಯಾಗಿರುವುದು. ಬಿತ್ತಲ್ಪಟ್ಟ ದೇಹವು ಹಾಳಾಗುವುದು ಮತ್ತು ಕೊಳೆತು ಹೋಗುವುದು. ಆದರೆ ಜೀವಂತವಾಗಿ ಎದ್ದುಬರುವ ಆ ದೇಹವನ್ನು ನಾಶಮಾಡಲು ಸಾಧ್ಯವೇ ಇಲ್ಲ.

[43] ದೇಹವು ಹೀನಾವಸ್ಥೆಯಲ್ಲಿ ಬಿತ್ತಲ್ಪಡುವುದು, ಆದರೆ ಮಹಿಮೆಯೊಡನೆ ಎದ್ದುಬರುವುದು. ದೇಹವು ಬಿತ್ತಲ್ಪಟ್ಟಾಗ, ಅದು ಬಲಹೀನವಾಗಿರುತ್ತದೆ. ಆದರೆ ಅದು ಎದ್ದುಬಂದಾಗ ಅದಕ್ಕೆ ಶಕ್ತಿಯಿರುತ್ತದೆ.

[44] ಬಿತ್ತಲ್ಪಟ್ಟ ದೇಹವು ಭೌತಿಕವಾದದ್ದು. ಆದರೆ ಅದು ಎದ್ದುಬಂದಾಗ, ಆತ್ಮಿಕ ದೇಹವಾಗಿರುತ್ತದೆ. ಭೌತಿಕ ದೇಹವಿದೆ. ಆದ್ದರಿಂದ ಆತ್ಮಿಕ ದೇಹವೂ ಇದೆ.

[45] “ಮೊದಲನೆ ಮನುಷ್ಯನಾದ ಆದಾಮನು ಜೀವಿಸುವ ವ್ಯಕ್ತಿಯಾದನು” ಎಂದು ಪವಿತ್ರ ಗ್ರಂಥದಲ್ಲಿ ಬರೆಯಲಾಗಿದೆ. ಆದರೆ ಕೊನೆಯ ಆದಾಮನು (ಕ್ರಿಸ್ತನು) ಜೀವಕೊಡುವ ಜೀವಾತ್ಮನಾದನು.

[46] ಮೊದಲು ಬಂದವನು ಆತ್ಮಿಕ ಮನುಷ್ಯನಲ್ಲ, ಅವನು ಪ್ರಾಕೃತ ಮನುಷ್ಯ. ಅನಂತರ ಆತ್ಮಿಕ ಮನುಷ್ಯನು ಬಂದನು.

[47] ಮೊದಲನೆಯ ಮನುಷ್ಯನು ಭೂಮಿಯ ಧೂಳಿನಿಂದ ಬಂದನು. ಆದರೆ ಎರಡನೆಯ ಮನುಷ್ಯನು (ಕ್ರಿಸ್ತನು) ಪರಲೋಕದಿಂದ ಬಂದನು.

[48] ಜನರು ಭೂಮಿಗೆ ಸಂಬಂಧಪಟ್ಟವರು. ಅವರು ಭೂಮಿಯ ಮೊದಲನೆ ಮನುಷ್ಯನಂತಿದ್ದಾರೆ. ಆದರೆ ಪರಲೋಕಕ್ಕೆ ಸಂಬಂಧಪಟ್ಟವರು ಪರಲೋಕದ ಮನುಷ್ಯನಂತಿದ್ದಾರೆ.

[49] ಭೂಮಿಯ ಆ ಮನುಷ್ಯನಂತೆಯೇ ನಾವು ನಿರ್ಮಾಣಗೊಂಡೆವು. ಆದ್ದರಿಂದ ಪರಲೋಕದ ಆ ಮನುಷ್ಯನಂತೆಯೇ ನಾವು ನಿರ್ಮಾಣಗೊಳ್ಳುವೆವು.

[50] ಸಹೋದರ ಸಹೋದರಿಯರೇ, ನಾನು ಹೇಳುವುದೇನೆಂದರೆ, ಮಾಂಸ ಮತ್ತು ರಕ್ತ (ಭೌತಿಕ ದೇಹ) ಪರಲೋಕ ರಾಜ್ಯದಲ್ಲಿ ಪಾಲುಹೊಂದಲು ಸಾಧ್ಯವಿಲ್ಲ. ನಾಶವಾಗುವಂಥದ್ದು ಎಂದಿಗೂ ನಾಶವಾಗದ ಒಂದರಲ್ಲಿ ಪಾಲುಹೊಂದಲು ಸಾಧ್ಯವಿಲ್ಲ.

[51] ಆದರೆ ಕೇಳಿರಿ, ನಾನು ನಿಮಗೆ ಈ ರಹಸ್ಯವೊಂದನ್ನು ತಿಳಿಸುತ್ತೇನೆ. ನಾವೆಲ್ಲರೂ ಸಾಯುವುದಿಲ್ಲ. ಆದರೆ ನಾವೆಲ್ಲರೂ ಮಾರ್ಪಾಟಾಗುವೆವು.

[52] ಇದಕ್ಕೆ ಕೇವಲ ಒಂದು ಕ್ಷಣಕಾಲ ಸಾಕು. ರೆಪ್ಪೆಬಡಿಯುವಷ್ಟು ವೇಗವಾಗಿ ನಾವು ಮಾರ್ಪಾಟಾಗುವೆವು. ಕಡೇ ತುತ್ತೂರಿಯನ್ನು ಊದಿದಾಗ ಇದು ಸಂಭವಿಸುವುದು. ತುತ್ತೂರಿಯನ್ನು ಊದಲಾಗುವುದು; ಆಗ ಸತ್ತುಹೋಗಿದ್ದ ವಿಶ್ವಾಸಿಗಳು ಸದಾಕಾಲ ಜೀವಿಸುವುದಕ್ಕಾಗಿ ಎಬ್ಬಿಸಲ್ಪಡುವರು ಮತ್ತು ನಾವು ಮಾರ್ಪಾಟಾಗುವೆವು.

[53] ಅಳಿದುಹೋಗುವ ಈ ದೇಹವು ಅಳಿದುಹೋಗದ್ದನ್ನು ಧರಿಸಿಕೊಳ್ಳುವುದು. ಮರಣಾಧೀನವಾದ ಈ ದೇಹವು ಅಮರತ್ವವನ್ನು ಧರಿಸಿಕೊಳ್ಳುವುದು.

[54] ಅಳಿದುಹೋಗುವ ಈ ದೇಹ ಅಮರತ್ವವನ್ನು ಧರಿಸಿಕೊಂಡಾಗ ಪವಿತ್ರಗ್ರಂಥದ ಈ ಮಾತುಗಳು ನೆರವೇರುತ್ತವೆ: “ಮರಣವು ಜಯದಲ್ಲಿ ನುಂಗಿಯೇಹೋಯಿತು.” ಯೆಶಾಯ 25:8

[55] “ಮರಣವೇ, ನಿನ್ನ ಜಯವೆಲ್ಲಿ? ಮರಣವೇ, ಕೇಡುಮಾಡುವ ನಿನ್ನ ಶಕ್ತಿ ಎಲ್ಲಿ?” ಹೋಶೇಯ 13:14

[56] ಕೇಡುಮಾಡಲು ಮರಣಕ್ಕಿರುವ ಶಕ್ತಿಯು ಪಾಪವೇ. ಪಾಪದ ಶಕ್ತಿಯು ಧರ್ಮಶಾಸ್ತ್ರವೇ.

[57] ಆದರೆ ನಾವು ದೇವರಿಗೆ ಕೃತಜ್ಞತಾಸ್ತುತಿ ಮಾಡುತ್ತೇವೆ. ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಮೂಲಕ ಆತನು ನಮಗೆ ಜಯವನ್ನು ಕೊಡುತ್ತಾನೆ.

[58] ಆದ್ದರಿಂದ, ನನ್ನ ಪ್ರಿಯ ಸಹೋದರ ಸಹೋದರಿಯರೇ, ದೃಢವಾಗಿರಿ, ನಿಶ್ಚಲರಾಗಿರಿ. ಪ್ರಭುವಿನ ಸೇವೆಗಾಗಿ ನಿಮ್ಮನ್ನು ಯಾವಾಗಲೂ ಸಂಪೂರ್ಣವಾಗಿ ಪ್ರತಿಷ್ಠಿಸಿಕೊಳ್ಳಿರಿ. ನೀವು ಪ್ರಭುವಿಗಾಗಿ ಪಡುವ ಪ್ರಯಾಸವು ಎಂದಿಗೂ ವ್ಯರ್ಥವಾಗುವುದಿಲ್ಲ.

ಕೊರಿಂಥದವರಿಗೆ ಬರೆದ ಮೊದಲನೆ ಪತ್ರ — Chapters